Home Crime ಅಜ್ಜಿ ಆಗುವ ವಯಸ್ಸಲ್ಲಿ ಕುರುಡು ಕಾಮಕ್ಕೆ ಗಂಡನನ್ನೇ ಮೂಟೆ ಕಟ್ಟಿದ ಕಾಮ ಪಿಚಾಚಿ..?! “ಈ ಅಜ್ಜಿಗೆ...

ಅಜ್ಜಿ ಆಗುವ ವಯಸ್ಸಲ್ಲಿ ಕುರುಡು ಕಾಮಕ್ಕೆ ಗಂಡನನ್ನೇ ಮೂಟೆ ಕಟ್ಟಿದ ಕಾಮ ಪಿಚಾಚಿ..?! “ಈ ಅಜ್ಜಿಗೆ ರೋಮಿಯೋ ಬೇಕಂತೆ…”

2828
0
SHARE

ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಮೀರಸಾಬಿಹಳ್ಳಿ ಎಂಬ ಪುಟ್ಟ ಹಳ್ಳಿ ಇದೆ. ಮೀಸಸಾಬಿಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದ ಐವರು ಅಣ್ಣತಮ್ಮಂದಿರ ಪೈಕಿ ಈ ಕೃಷ್ಣಪ್ಪ ಕೂಡ ಒಬ್ಬ. ಕೃಷ್ಣಪ್ಪನ ಧರ್ಮ ಪತ್ನಿಯೇ ಈ ಪಾರ್ವತಮ್ಮ. ಅವಿದ್ಯಾವಂತನಾದ ಕೃಷ್ಣಪ್ಪ ವ್ಯವಸಾಯ ಮಾಡ್ಕೊಂಡು ಜೀವನ ಮಾಡ್ಕೊಂಡಿದ್ದ. ಈಗ್ಗೆ ಸುಮಾರು 25 ವರ್ಷಗಳ ಹಿಂದೆ ಪಾರ್ವತಮ್ಮಳನ್ನ ಮದುವೆಯಾದ ಕೃಷ್ಣಪ್ಪ ಸುಂದರ ಸಂಸಾರ ಕಟ್ಟೊಂಡು ಸ್ವರ್ಗಕ್ಕೆ ಕಿಚ್ಚು ಹಚ್ಚುವ ಹಾಗೆ ದೇವರು ಕೊಟ್ಟಿದ್ರಲ್ಲಿ ನೆಮ್ಮದಿಯಾಗಿ ಜೀವನ ಮಾಡ್ತಿದ್ದ.ಆದ್ರೆ ಕೆಲ ದಿನಗಳಿಂದ ಅದ್ಯಾಕೋ ತುಂಬಾ ಬೇಸರದಲ್ಲಿರುತ್ತಿದ್ದನಂತೆ.

ಏನನ್ನೋ ಮನಸ್ಸಿಗೆ ಹಚ್ಕೊಂಡು ಕೊರಗುತ್ತಿರೋ ಹಾಗೆ ಕಾಣ್ತಿದ್ದ. ಮನಸ್ಸಿಗೊಳಗೆ ಅದೇನ್ ನೋವು ಇಟ್ಕೊಂಡಿದ್ದನೋ ಏನೋ ಕುಡಿಯೋದನ್ನ ಕಲಿತುಬಿಟ್ಟಿದ್ದನಂತೆ. ಕೃಷ್ಣಪ್ಪನ ಪರಿಸ್ಥಿತಿ ನೋಡಿದವರು, ಪಾಪ ಮಕ್ಕಳು ಬೆಳೆದು ನಿಂತಿದ್ದಾರಲ್ಲಾ.. ಅದರಲ್ಲೂ ಹೆಣ್ಮಗಳ ಮದುವೆ ಮಾಡ್ಬೇಕು ಅಂತ ತಲೆಗೆ ಹಾಕೊಂಡಿರ್ಬೇಕು ಅಂತ ಅಂದ್ಕೊಂಡು ಸುಮ್ಮನಾಗ್ತಿದ್ರು. ಹೀಗಿರಬೇಕಾದ್ರೆ.. ಅವೊತ್ತೊಂದು ರಾತ್ರಿಯಿಂದ ಕೃಷ್ಣಪ್ಪ ಇದ್ದಕ್ಕಿದಂತೆ ನಾಪತ್ತೆಯಾಗಿಬಿಟ್ಟಿದ್ದ. ಆದ್ರೆ ಕಳೆದ ಎರಡು ತಿಂಗಳ ಹಿಂದೆ ಕೃಷ್ಣಪ್ಪ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ.ಕೃಷ್ಣಪ್ಪ ಕಾಣೆಯಾದ ದಿನ ತಡರಾತ್ರಿ ಮನೆಗೆ ಬಂದ ಪಾರ್ವತಮ್ಮ ನಿಮ್ಮ ಅಪ್ಪ ಮನೆ ಬಿಟ್ಟು ಹೋಗಿದ್ದಾನೆ ಅಂತ ಮಲಗಿದ್ದ ಮಗನನ್ನ ಎಬ್ಬಿಸಿ ಹೇಳಿದ್ಳಂತೆ.

ಹೀಗಾಗಿ ತಾಯಿಯ ಮಾತನ್ನ ನಂಬಿದ ಕೃಷ್ಣಪ್ಪನ ಮೊದಲನೇ ಮಗ ಪ್ರದೀಪ್, ಟಾರ್ಚ್ ಇಡ್ಕೊಂಡು ರಾತ್ರಿಯೆಲ್ಲಾ ಅಪ್ಪನಿಗಾಗಿ ಊರು ಕೇರಿ ಕೆರೆ ಕಟ್ಟೆ ಅಂತೆಲ್ಲಾ ಕಡೆ ಹುಡುಕಾಡಿದ್ದಾನೆ. ಆದ್ರೆ ಎಲ್ಲೂ ತಂದೆಯ ಸುಳಿವೇ ಇರಲಿಲ್ಲ. ಏನೋ ಅಪ್ಪ ಅಮ್ಮ ಗಲಾಟೆ ಮಾಡ್ಕೊಂಡಿರಬೇಕು. ಬರ್ತಾರೆ ಬಿಡು ಅಂತ ಮನೆಗೆ ವಾಪಸ್ಸಾಗಿದ್ದ ಪ್ರದೀಪ.  ಮಾರನೆ ದಿನ ತಮ್ಮ ಸಂಬಂಧಿಕರ ಊರುಗಳಲ್ಲೆಲ್ಲಾ ತಂದೆ ಬಗ್ಗೆ ವಿಚಾರಿಸಿದ್ದಾನೆ. ಸಿಕ್ಕ ಸಿಕ್ಕವರ ಬಳಿ ನಮ್ಮಪ್ಪ ಎಲ್ಲಾದ್ರು ಕಾಣಿಸಿದ್ನಾ ಕೇಳಿದ್ದ. ಅಷ್ಟೊತ್ತಿಗಾಗಲೇ ಕೃಷ್ಣಪ್ಪ ಮನೆಬಿಟ್ಟೋಗಿ ತಿಂಗಳೇ ಕಳೆದೋಗಿತ್ತು. ಆದ್ರೆ ಅಪ್ಪ ಮನೆ ಬಿಟ್ಟುಹೋಗಿ ಎರಡು ತಿಂಗಳಾದರೂ ಮನೆಗೆ ಬರದೇ ಇದ್ದಾಗ ತಾಯಿ ಪಾರ್ವತಮ್ಮಳ ಬಳಿ ಅಪ್ಪನ ಬಗ್ಗೆ ಚರ್ಚೆ ಮಾಡಿದ್ದಾನೆ. ತನ್ನ ದೊಡ್ಡಪ್ಪಂದಿರಿಗೆ ವಿಚಾರ ಹೇಳಿದ್ದ.

ಕೃಷ್ಣಪ್ಪನ ಅಣ್ಣ ತಮ್ಮಂದಿರು ಸಂಬಂಧಿಕರೆಲ್ಲಾ ಕೂಡಿ ಪಾರ್ವತಮ್ಮಳ ಬಳಿ ಮಾತನಾಡಿ ಪೊಲೀಸರಿಗೆ ದೂರು ಕೊಡುವಂತೆ ಹೇಳಿದಾಗ, ಹಿರಿಯರ ಮಾತಿಗೆ ಸಮ್ಮತಿಸಿದ ಪಾರ್ವತಮ್ಮ ಚಳ್ಳಕೆರೆ ಪೊಲೀಸ್ ಠಾಣೆಗೆ ಹೋಗಿ ನನ್ನ ಗಂಡ ಕೃಷ್ಣಪ್ಪ ಎರಡು ತಿಂಗಳಾಯ್ತು ಮನೆಬಿಟ್ಟು ಹೋಗಿ. ದಯವಿಟ್ಟು ಹುಡುಕಿಕೊಡಿ ಅಂತ ಸೆಪ್ಟೆಂಬರ್ 30 ನೇ ತಾರೀಖು ಮಿಸ್ಸಿಂಗ್ ಕೇಸ್ ಕೊಟಿದ್ದಳು. ಸೋ.. ಅವೊತ್ತು ರಾತ್ರಿ ಮನೆಬಿಟ್ಟು ಹೋಗಿದ್ದ ಎನ್ನಲಾಗಿರೋ ಕೃಷ್ಣಪ್ಪನ ನಾಪತ್ತೆ ನಿಗೂಢವಾಗಿ ಉಳಿದಿತ್ತು.ಪೊಲೀಸರಿಗೆ ದೂರು ಕೊಟ್ಟ ಮೂರನೇ ದಿನ ಗಾಂಧೀ ಜಯಂತಿಯಂದು ಮೀರಸಾಬೀಹಳ್ಳಿ ಸಮೀಪದಲ್ಲಿರೋ ಐತಿಹಾಸಿಕ ರಾಣಿ ಕೆರೆ ತೂಬಿನಿಂದ ಏನೋ ಕೆಟ್ಟ ವಾಸನೆ ಬರ್ತಿದೆ ಅಂತ ದನ ಕಾಯೋಕೆ ಹೋಗಿದ್ದವರು ಊರ ಜನರಿಗೆ ವಿಷಯ ತಿಳಿಸಿದ್ದಾರೆ.

ಕೂಡಲೇ ರಾಣಿ ಕೆರೆ ಬಳಿ ತೆರಳಿದ ಗ್ರಾಮಸ್ಥರು ತೂಬಿನ ಒಳಭಾಗದಲ್ಲಿ ಚೀಲದಲ್ಲಿ ತುಂಬಿರೋ ವಸ್ತುವಿನಿಂದಲೇ ವಾಸನೆ ಬರ್ತಿದೆ ಅನ್ನೋದನ್ನ ಧೃಡಪಡಿಸಿಕೊಂಡು, ಚಳ್ಳಕೆರೆ ಪೊಲೀಸರಿಗೆ ಮಾಹಿತಿ ಕೊಡ್ತಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ತೂಬಿನ ಕೆಳಗೆ ಗಬ್ಬು ನಾರುತ್ತಿದ್ದ ಚೀಲದಲ್ಲಿ ಕಟ್ಟಿ ಎಸೆದಿದ್ದ ವಸ್ತುವನ್ನು ಹೊರತೆಗೆಸಿ ನೋಡಿದಾಗ, ಅಲ್ಲಿ ಸುಮಾರು 50ರಿಂದ 55 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗತ್ತೆ. ಆಗ ಪಕ್ಕದಲ್ಲೇ ಇದ್ದ ಕೃಷ್ಣಪ್ಪನ ಮೊದಲನೇ ಮಗ ಪ್ರದೀಪ್, ಹೆಣದ ಮೇಲಿದ್ದ ಬಟ್ಟೆ ಆಧಾರದ ಮೇಲೆ ಇದು ನಮ್ಮ ಅಪ್ಪ ಕೃಷ್ಣಪ್ಪನದೇ ಮೃತದೇಹ ಅಂತ ಗುರುತು ಹಿಡಿಯುತ್ತಾನೆ.

ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು, ಮಹಜರು ಮಾಡಿಸಿದ ನಂತರ ಸ್ಥಳದಲ್ಲೇ ಶವ ಪರೀಕ್ಷೆ ನಡೆಸಿ ಕಳೇಬರವನ್ನ ವಾರಸುದಾರರಿಗೆ ಒಪ್ಪಿಸುತ್ತಾರೆ. ಶವ ಸಂಪೂರ್ಣ ಕೊಳೆತು ವಾಸನೆ ಬರ್ತಿದ್ದರಿಂದ ಮೀರಸಾಬಿಹಳ್ಳಿ ಗ್ರಾಮಸ್ಥರು, ಕೃಷ್ಣಪ್ಪನ ಸಂಬಂಧಿಕರೆಲ್ಲಾ ಸೇರಿ ಆತನ ಪತ್ನಿ ಮತ್ತು ಮಕ್ಕಳ ಸಮ್ಮುಖದಲ್ಲಿ ಶವ ಸಂಸ್ಕಾರ ಮಾಡಿ ಊರಿಗೆ ತೆರಳುತ್ತಾರೆ..ಇತ್ತಾ ಕೃಷ್ಣಪ್ಪನ ಶವ ಸಿಕ್ಕ ಸ್ಥಳದಲ್ಲಿ ಮಹಜರು ನಡೆಸಿ ಠಾಣೆಗೆ ಹಿಂದಿರುಗಿದ ಪೊಲೀಸರಿಗೆ, ಹೆಣ ಪತ್ತೆಯಾದ ರೀತಿಯನ್ನ ನೋಡಿ ಯಾರೋ ಇವನ್ನ ಕೊಲೆ ಮಾಡಿ, ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ, ಮೃತದೇಹವನ್ನ ಚೀಲದಲ್ಲಿ ತುಂಬಿ, ತೂಬಿನ ಒಳಭಾಗದಲ್ಲಿ ಬಚ್ಚಿಟ್ಟಿದ್ದಾರೆ ಅಂತ ಅನುಮಾನ ಶುರುವಾಗತ್ತೆ.

ಹೀಗಾಗಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಸಿಪಿಐ ತಿಮ್ಮಣ್ಣ ನಾಯಕ್ ಮತ್ತು ಪಿಐ ಸತೀಶ್ ನಾಯಕ್ ನೇತೃತ್ವದಲ್ಲಿ ತಂಡ ರಚಿಸಿಕೊಂಡು ಕಾರ್ಯಾಚರಣೆಗಿಳಿದಿದ್ದಾರೆ. ಕೊಲೆ ಪ್ರಕರಣದ ಜಾಡು ಹುಡುಕುತ್ತಾ ಹೊರಟ ಪೊಲೀಸರಿಗೆ, ಕೃಷ್ಣಪ್ಪ ಕಾಣೆಯಾದ ಎರಡು ತಿಂಗಳ ನಂತರ ಆತನ ಪತ್ನಿ ಪಾರ್ವತಮ್ಮ ಗಂಡ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದನ್ನ ನೋಡಿ, ಎಲ್ಲೋ ಒಂದು ಕಡೆ ಅನುಮಾನ ಕಾಡೋಕೆ ಶುರುವಾಗತ್ತೆ. ಆದ್ರೆ 25 ವರ್ಷ ಗಂಡನ ಜೊತೆ ಸಂಸಾರ ಮಾಡಿ, ಮೂರು ಮಕ್ಕಳ ತಾಯಿಯಾಗಿರೋ ಪಾರ್ವತಮ್ಮ, ಗಂಡನನ್ನ ಯಾಕೆ ಕೊಲೆ ಮಾಡಿಸುತ್ತಾಳೆ? ಆಕೆಯೇ ಕೊಲೆ ಮಾಡಿಸಿರಬಹುದಾ?

ಮಾಡಿಸಿದ್ದರೂ ಯಾವ ಕಾರಣಕ್ಕಿರಬಹುದು ಅಂತೆಲ್ಲಾ ಯೋಚಿಸಿದ ಪೊಲೀಸರು ಪಾರ್ವತಮ್ಮಳನ್ನ ವಿಚಾರಣೆಗೆ ಅಂತ ಠಾಣೆಗೆ ಕರೆಸಿ ತಮ್ಮ ಭಾಷೆಯಲ್ಲಿ ಅವಾಜ್ ಬಿಡ್ತಿದ್ದಂಗೇ ಬೆಚ್ಚಿಬಿದ್ದ ಆಕೆ ಹೇಳಿದ್ದೇ ಈ ಭಯಾನಕ ಸ್ಟೋರಿ..ಸುಮಾರು 50ರಿಂದ 55ವರ್ಷ ವಯಸ್ಸಿನ ಕೃಷ್ಣಪ್ಪನ ಹೆಂಡತಿ ಪಾರ್ವತಮ್ಮಳಿಗೆ ಈಗ ಸುಮಾರು 42ವರ್ಷ. ಬೆಳೆದು ನಿಂತ ಮೂರು ಮಕ್ಕಳ ತಾಯಿ. ನೋಡೋಕೆ ಅಷ್ಟೇನು ಸುಂದರ ಅಲ್ಲದಿದ್ದರೂ ಆಕೆಗೆ ಒಬ್ಬ ಪ್ರೇಮಿ ಇದ್ದಾನೆ. ಕೃಷ್ಣಪ್ಪನ ಮನೆಗೆ ಕೂಲಿ ಕೆಲಸಕ್ಕೆ ಬರುತ್ತಿದ್ದ ಸುಮಾರು ೨೮ವರ್ಷದ ಮೋಹನ್ ನಾಯ್ಕ ಕೃಷ್ಣಪ್ಪನ ಮನೆಯಲ್ಲೆ ತಿಂದುಂಡು ಬೆಳೆದಿದ್ದಾನೆ.

ಹೀಗಿರುವಾಗ ಮೋಹನ್ ನಾಯ್ಕ ಹಾಗೂ ಪಾರ್ವತಮ್ಮಳ ನಡುವೆ ಇದ್ದ ಸಲುಗೆ ಮೋಹಕ್ಕೆ ತಿರುಗಿ ಇಬ್ಬರ ನಡುವೆ ಅಕ್ರಮ ಸಂಬಂಧ ಮೊಳಕೆ ಒಡೆದಿದಿದೆ. ಯಾವುದೋ  ಊರಿನಿಂದ ಬಂದು ಮೀರಸಾಬಿಹಳ್ಳಿ ಗ್ರಾಮದಲ್ಲಿ ಬದುಕು ಕಟ್ಟಿಕೊಂಡಿರೋ ಮೋಹನ್ ನಾಯ್ಕನಿಗೆ ಈಗಾಗಲೇ ಮದುವೆಯಾಗಿದ್ರೂ, ಕಳೆದ ಕೆಲವು ವರ್ಷಗಳಿಂದಲೂ ಪಾರ್ವತಮ್ಮನೊಂದಿಗಿನ ಅಕ್ರಮ ಸಂಬಂಧವನ್ನ ಮುಂದುವರೆಸಿಕೊಂಡು ಬಂದಿದ್ದಾನೆ. ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದ್ರೆ ಪ್ರಪಂಚಕ್ಕೆ ಕಾಣ್ಸೋದಿಲ್ವಾ ಎಂಬಂತೆ, ಇವರಿಬ್ಬರ ಅಕ್ರಮ ಸಂಬಂಧದ ವಾಸನೆ ಕೃಷ್ಣಪ್ಪನ ಮೂಗಿಗೆ ಬಡಿದಿದೆ.

ತನ್ನ ಹೆಂಡತಿ ಮೋಹನ್ ನಾಯ್ಕನ ಜೊತೆ ದೇಹ ಹಂಚ್ಕೊಳ್ತಿದ್ದಾಳೆ ಅನ್ನೋ ವಿಷಯ ತಿಳಿದ ಕೃಷ್ಣಪ್ಪನಿಗೆ ದಿಕ್ಕೇ ತೋಚದಂತಾಗಿದೆ.ಯಾವಾಗ ತನ್ನ ಹೆಂಡತಿ ಈ ವಯಸ್ಸಿನ್ನೂ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇಟೊಂಡಿದ್ದಾಳೆ ಅಂತ ಗೊತ್ತಾಯ್ತೋ, ಅದಾಗಲೇ ಹೆಂಡತಿಗೆ ಬುದ್ದಿ ಹೇಳಿದ್ದಾನೆ. ಮನೆಯಲ್ಲಿ ಬೆಳೆದು ನಿಂತ ಮೂರು ಮಕ್ಕಳಿದ್ದಾರೆ. ಇನ್ನೇನೋ ಮೂವರಿಗೂ ಮದುವೆ ಮಾಡಬೇಕಿದೆ. ಈ ಸಮಯದಲ್ಲಿ ಇದೆಲ್ಲಾ ಬೇಕಾ? ದಯವಿಟ್ಟು ಅಡ್ಡದಾರಿಯನ್ನ ಬಿಟ್ಟು ಒಳ್ಳೆಯವಳಾಗಿ ಸಂಸಾರ ಮಾಡ್ಕೊಂಡೋಗು ಅಂತ ತಾಯಿಗಿರಬೇಕಾದ ಜವಬ್ದಾರಿಯನ್ನ ತಿಳಿ ಹೇಳಿದ್ದಾರೆ.

ಆದ್ರೆ ಕುರುಡು ಕಾಮದ ಅಮಲಿನಲ್ಲಿದ್ದ ಪಾರ್ವತಮ್ಮ ಮಾತ್ರ ಗಂಡನ ಬುದ್ದಿ ಮಾತಿಗೆ ಕಿವಿಗೊಡದೆ ತನ್ನ ಚಾಳಿಯನ್ನ ಮುಂದುವರೆಸಿದ್ದಾಳೆ. ಇದನ್ನೆಲ್ಲಾ ನೋಡಿದ ಕೃಷ್ಣಪ್ಪ ಕಳೆದ ನಾಲ್ಕೈದು ತಿಂಗಳಿನಿಂದ ಮಧ್ಯಪಾನ ಮಾಡಿ ನೋವು ಮರೆಯೋ ಪ್ರಯತ್ನ ಮಾಡಿದ್ದಾರೆ. ಮತ್ತೆ ಮತ್ತೆ ಹೆಂಡತಿಗೆ ಬುದ್ದಿ ಹೇಳೋ ಪ್ರಯತ್ನ ಕೂಡ ಮಾಡಿದ್ದಾರೆ. ಆದ್ರೆ ಗಂಡನ ಮಾತು ಋಚಿಸದ ಹೆಂಡತಿಗೆ ಬೇರೇನೋ ಪ್ಲಾನ್ ಹೊಳೆದಿದೆ. ಅವಳು ಹೂಡಿದ ಪ್ಲ್ಯಾನ್‌ನಂತೆ ಎರಡು ತಿಂಗಳ ಹಿಂದೆ ಸಂಜೆ ವೇಳೆ ಜಮೀನಿಗೆ ನೀರು ಕಟ್ಟೋಣ ಅಂತ ಹೇಳಿ ಗಂಡನ್ನ ಜೊತೆಯಲ್ಲಿ ಕರೆದುಕೊಂಡು ಹೋದ ಪಾರ್ವತಮ್ಮ, ಅಲ್ಲಿ ಕೃಷ್ಣಪ್ಪನಿಗೆ ಕುಡಿಯಲು ಮಧ್ಯದ ಬಾಟಲ್ ಕೊಟ್ಟು ತಾನು ಜಮೀನಿನ ಕೆಲಸದಲ್ಲಿ ನಿರತಳಾಗಿದ್ದಾಳೆ.

ಮೊದಲೇ ಹೆಂಡತಿಯ ಅಕ್ರಮ ಸಂಬಂಧದಿಂದ ಬೇಸತ್ತಿದ್ದ ಕೃಷ್ಣಪ್ಪ, ಜಮೀನಿಗೆ ತೆರಳುವ ಮೊದಲೇ ಸ್ವಲ್ಪ ಮಧ್ಯಪಾನ ಮಾಡಿದ್ರಂತೆ. ಜಮೀನಿಗೆ ಬಂದ ನಂತರ ಹೆಂಡತಿ ಕೊಟ್ಟ ಮಧ್ಯವನ್ನೂ ಸೇವಿಸಿದ ಕೃಷ್ಣಪ್ಪನಿಗೆ ಮತ್ತೇರುತ್ತಿದ್ದಂತೇ, ಮೊದಲೇ ಸ್ಕೆಚ್ ಹಾಕಿದ್ದ ಪಾರ್ವತಮ್ಮ, ತನ್ನ ಪ್ರೇಮಿ ಮೋಹನ್ ನಾಯ್ಕ ಮತ್ತವನ ಸ್ನೇಹಿತ ಲಕ್ಷ್ಮಣ್ ಜೊತೆ ಸೇರಿ ಕೃಷ್ಣಪ್ಪನ ತಲೆಗೆ ದೊಣ್ಣೆಯಿಂ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಗೊಬ್ಬರದ ಪ್ಲಾಸ್ಟಿಕ್ ಚೀಲದಲ್ಲಿ ಶವವನ್ನ ತುಂಬಿ, ಸಮೀಪದಲ್ಲೇ ಇದ್ದ ರಾಣಿಕೆರೆ ತೂಬಿನ 25 ಅಡಿಗಳಷ್ಟು ಒಳಭಾಗಕ್ಕೆ ಎಸೆದು, ತಡರಾತ್ರಿ ತನಕ ಜಮೀನಿನಲ್ಲೇ ಕಾಲ ಕಳೆದಿದ್ದಾರೆ. ನಂತರ ರಾತ್ರಿ 1:30ರ ಸುಮಾರಿಗೆ ಮನೆಗೆ ಬಂದ ಪಾರ್ವತಮ್ಮ, ನಿಮ್ಮ ಅಪ್ಪ ಜಗಳ ಮಾಡ್ಕೊಂಡು ಮನೆ ಬಿಟ್ಟು ಹೋಗಿದ್ದಾರೆ ಅಂತ ಸುಳ್ಳು ಹೇಳಿ, ಏನೂ ನಡೆದೇ ಇಲ್ಲ ಅನ್ನೋಹಾಗೆ ನಟಿಸಿದ್ದಾಳೆ.

ಶವ ಸಿಕ್ಕ ನಂತರ ಯಾವಾಗ ಪೊಲೀಸರು ಪಾರ್ವತಮ್ಮಳನ್ನ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಶುರು ಹಚ್ಕೊಂಡ್ರೋ? ಅದಾಗ್ಲೇ ಬೆಚ್ಚಿಬಿದ್ದ ಪಾರ್ವತಮ್ಮ ನಡೆದ ಘಟನೆಯನ್ನೆಲ್ಲಾ ಪೊಲೀಸರ ಬಳಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.ಒಟ್ಟಾರೆ ಅಕ್ರಮ ಸಂಬಂಧ ಕಾನೂನು ಬಾಹಿರವಲ್ಲ ಎಂಬ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಗ್ಗೆ ದೇಶದಾದ್ಯಂತ ಆಗು ಹೋಗುಗಳ ಕುರಿತು ಪರ ವಿರೋಧದ ಚರ್ಚೆಗಳು ನಡೆಯುತ್ತಿರುವಾಗಲೇ, ಬೆಳೆದು ನಿಂತ ಮಕ್ಕಳಿರುವ ವಿವಾಹಿತ ಮಹಿಳೆ ತನ್ನ ಜವಬ್ದಾರಿಯನ್ನು ಮರೆತು ಅಕ್ರಮ ಸಂಬಂಧಕ್ಕಾಗಿ 25 ವರ್ಷ ಜೊತೆಯಲ್ಲಿ ಸಂಸಾರ ಮಾಡಿದ ಗಂಡನನ್ನೇ ಕೊಲೆ ಮಾಡಿಸಿ ಜೈಲು ಸೇರಿದ್ದಾಳೆ. ಹಳ್ಳಿಗಾಡಿನಲ್ಲಿ ಹುಟ್ಟಿದರೂ ನಗರ ಪ್ರದೇಶದ ಮಕ್ಕಳ ಜೊತೆ ಸರಿಸಮನಾಗಿ ನಿಂತು ಪದವಿ ಮುಗಿಸಿರುವ ಮಕ್ಕಳು ತಾಯಿ ಮಾಡಿದ ಕೃತ್ಯದಿಂದ ತಲೆ ತಗ್ಗಿಸುವಂತಾಗಿದೆ. ಇನ್ನಾದ್ರೂ ಗಂಡೇ ಆಗಲೀ, ಅಥವಾ ಹೆಣ್ಣೇ ಆಗಲೀ ಕ್ಷಣಿಕ ಸುಖಕ್ಕಾಗಿ ತಮ್ಮ ಸಂಸಾರವನ್ನೇ ಬಲಿಕೊಡದೇ, ಜವಬ್ದಾರಿಯಿಂದ ನಡೆದುಕೊಳ್ಳಲಿ ಎಂಬುದು ನಮ್ಮ ಆಶಯವಾಗಿದೆ..

LEAVE A REPLY

Please enter your comment!
Please enter your name here