ಅಭಿಮಾನಿಗಳಲ್ಲಿ ದಿ ವಿಲನ್ ಮನವಿ.:ದಿ ವಿಲನ್, ಇದು ಕೇವಲ ಶಿವಣ್ಣ, ಸುದೀಪ್, ಪ್ರೇಮ್ ಅಭಿಮಾನಿಗಳ ಸಿನಿಮಾವಲ್ಲ. ಇದು ಸಮಸ್ತ ಕನ್ನಡಿಗರ ಸಿನಿಮಾ. ಮನೋರಂಜನೆಯ ದೃಷ್ಟಿಯಲ್ಲಿ ಪರಭಾಷಾ ಚಿತ್ರಗಳಿಗೆ ಸೆಡ್ಡು ಹೊಡೆಯಲೆಂದೇ ಮೂಡಿಬಂದ ಚಿತ್ರ . ಸತತ ಎರಡು ವರ್ಷಗಳ ಕಾಲ ಪ್ರೇಮ್ ಕಲಾ ಕುಸುರಿಯಲ್ಲಿ ಜೋಪಾನ ಮಾಡಿದ ಕೂಸು.
ನಾಳೆಯಿಂದ ಅಭಿಮಾನಿಗಳ ಮಡಿಲು ಸೇರುತ್ತಿದೆ. ಇನ್ಮುಂದೆ ಸಿನಿಮಾದ ಜವಾಬ್ದಾರಿ ಸಮಸ್ತ ಕನ್ನಡಿಗರದ್ದು. ಇದರ ಲಾಲನೆ ಪಾಲನೆ ಮಾಡಿ ಪ್ರೀತಿಯಿಂದ ಕೈ ಹಿಡಿದು ಮುನ್ನಡೆಸಬೇಕಾಗಿ ನಿಮ್ಮೆಲ್ಲರಲ್ಲಿ ವಿನಂತಿ.ಈ ನಡುವೆ ಕೆಲವು ಕಿಡಿಗೇಡಿಗಳು ಶಿವಣ್ಣ ಮತ್ತು ಸುದೀಪ್ ಅಭಿಮಾನಿಗಳ ನಡುವೆ ವೈಮನಸ್ಸು ಮೂಡಿಸಿ ಚಿತ್ರದ ಕುರಿತು ಅಪಪ್ರಚಾರ ಮಾಡುತ್ತಿರುವುದು ಮತ್ತು ಮುಂದೆ ಮಾಡಲೆತ್ನಿಸುವುದು ಖಂಡನಾರ್ಹ. ಕನ್ನಡ ಚಿತ್ರರಂಗದ ಬೆಳವಣಿಗೆಯ ದೃಷ್ಟಿಯಿಂದ ಇದು ಮಾರಕ. ಆದ ಕಾರಣ ಸಮಸ್ತ ಅಭಿಮಾನಿಗಳು ಒಗ್ಗೂಡಿ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಪ್ರೀತಿಯಿಂದ ಸಹಕರಿಸಿ, ಈ ಚಿತ್ರವನ್ನು ಸ್ವೀಕರಿಬೇಕಾಗಿ ವಿನಂತಿ.
ವಿಶೇಷ ಸೂಚನೆ: ದಯಮಾಡಿ ಯಾರು ಕೂಡ ಈ ಸಿನಿಮಾ ದೃಶ್ಯಗಳನ್ನು ಸೆರೆ ಹಿಡಿದು ಯೂಟ್ಯೂಬ್ ಅಥವಾ ಇನ್ಯಾವುದೇ ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದು, ಮಾಡಿದಲ್ಲಿ ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದ ಕಾರಣ ಅಭಿಮಾನಿಗಳು ಪೈರಸಿ ತಡೆಗೆ ಸಹಕರಿಸಬೇಕಾಗಿ ವಿನಂತಿ. ವಿಲನ್ ಚಿತ್ರತಂಡ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ಬೆನ್ನಲ್ಲೇ, ಪ್ರೇಮ್ ಕೂಡಾ.. ಕನ್ನಡಾಭಿಮಾನಿಗಳಿಗೆ ಪತ್ರ ಬರೆದಿದ್ದಾರೆ. ಚಿತ್ರ ಖಂಡಿತ ನಿರಾಸೆ ಮಾಡಲ್ಲ ಅನ್ನುವ ಭರವಸೆಯನ್ನ ನೀಡಿದ್ದಾರೆ
ಪ್ರೇಮ್ ಮಾತು:‘ಸಮಸ್ತ ಕನ್ನಡ ಚಿತ್ರಾಭಿಮಾನಿಗಳೇ, ನಿಮ್ಮ ಅಭಿಮಾನಕ್ಕೆ, ಆದರಕ್ಕೆ, ಪ್ರೀತಿಗೆ ನಾನು ಮತ್ತು ನನ್ನ ತಂಡ ಧನ್ಯರಾಗಿದ್ದೇವೆ. ದಿ ವಿಲನ್ ಪ್ರಯತ್ನಕ್ಕೆ, ನಿಮ್ಮ ಬೆಂಬಲ ನಿರೀಕ್ಷೆಗೂ ಮೀರಿದೆ. ಪರಭಾಷಾ ಸಿನಿಮಾಗಳ ಆರ್ಭಟದ ಮುಂದೆ, ಕನ್ನಡ ಸಿನಿಮಾನೇ ಕಿಂಗ್ ಅಂತಾ ಅಬ್ಬರಿಸೋ ಹಾಗೇ ಮಾಡಿದ್ದೀರಿ. ವಾರದ ಮೊದ್ಲೇ ಟಿಕೆಟ್ಸ್ ಸೋಲ್ಡೌಟ್ ಆಗುವಂತೆ ಮಾಡಿದ್ದೀರಿ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದಿ ವಿಲನ್ ಮೂಲಕ ಅದ್ವೀತಿಯ ದಾಖಲೆ ಸೃಷ್ಟಿಸಿದ್ದೀರಿ. ನಾಳೆಯಿಂದ ದಿ ವಿಲನ್ ನಿಮ್ಮ ಮಡಿಲಿಗೆ ಅರ್ಪಿಸ್ತಿದ್ದೀವಿ. ದಯವಿಟ್ಟು ಕನ್ನಡ ಸಿನಿಮಾಭಿಮಾನಿಗಳಾಗಿ ಈ ಸಿನಿಮಾವನ್ನ ನೋಡಿ, ಆನಂದಿಸಿ ಹರಸಿ ದಿ ವಿಲನ್ ನಿಮ್ಮ ನಿರೀಕ್ಷೆಯನ್ನ ಹುಸಿಯಾಗಿಸೋದಿಲ್ಲ ಅನ್ನೋ ಭರವಸೆಯಲ್ಲಿ. ನಿಮ್ಮ ಪ್ರೇಮ್ಸ್
ಅಂದ ಹಾಗೇ, ದಿ ವಿಲನ್.. ದಾಖಲೆ ಮಟ್ಟದಲ್ಲಿ ಬಿಡುಗಡೆಯಾಗ್ತಿದೆ. ಬರೀ ಕರ್ನಾಟಕದಲ್ಲಷ್ಟೇ ಅಲ್ಲ, ದೇಶದ ನಾನಾ ಭಾಗಗಳಲ್ಲೂ ದಿ ವಿಲನ್ ಜಾತ್ರೆ ನಡೆಯಲಿದೆ. ದಿ ವಿಲನ್ ಕೀರ್ತಿ ಪತಾಕೆ ಹಾರಲಿದೆ. ನೋಯ್ಡಾ, ಚಂದಿಗಡ್, ದೆಹಲಿ, ಅಹಮದಾಬಾದ್, ಚೆನೈ, ಪುಣೆ, ಹೈದ್ರಾಬಾದ್, ಗೋವಾ, ಗೋರೆಗಾಂವ್ನಲ್ಲಿ ಎಲ್ಲಡೆ ದಿ ವಿಲನ್ ತೆರೆಗೆ ಬರಲಿದೆ.ದಿ ವಿಲನ್ ಕ್ರೇಝ್ ಎಷ್ಟರ ಮಟ್ಟಿಗೆ ಇದೆಯಂದ್ರೆ, ದಿ ವಿಲನ್ ಅಭಿಮಾನಿಗಳ ಶೋ ದಾಖಲೆ ಮಟ್ಟದಲ್ಲಿ ನಡೆಯಲಿದೆ.
ಹೌದು, ಬೆಂಗಳೂರು, ಶಿವಮೊಗ್ಗ, ದೊಡ್ಡ ಬಳ್ಳಾಪುರ, ದಾವಣಗೆರೆ, ಮೈಸೂರು, ಬಿಜಾಪುರ, ಕೊಳ್ಳೆಗಾಲ, ಚಿತ್ರದುರ್ಗ, ಮಂಡ್ಯ, ಚಾಮರಾಜನಗರ, ಬಳ್ಳಾರಿ, ಹುಬ್ಬಳ್ಳಿ, ಕೊಪ್ಪಳ ಇವೆಲ್ಲಡೆ ದಿ ವಿಲನ್ ಜಾತ್ರೆ ಹಾಗೂ ಭಜನೆ ಮಧ್ಯರಾತ್ರಿನಿಂದ ಹಾಗೂ ಬೆಳಗಿನಜಾವದಿಂದನೇ ಆರಂಭವಾಗಲಿದೆ. ಭರ್ತಿ ೪೦ಕ್ಕೂ ಹೆಚ್ಚಿನ ಪ್ರದರ್ಶನಗಳನ್ನ ಅಭಿಮಾನಿಗಳಿಗಾಗಿ ಹಮ್ಮಿಕೊಳ್ಳಲಾಗಿದೆ. ಇದು ಕೂಡಾ ಒಂದು ದಾಖಲೆ ಅನ್ನೋದು ನಿಮಗೆ ಗೊತ್ತಿರಲಿ.ಇನ್ನೂ ದಿ ವಿಲನ್ ವಿದೇಶಿ ನೆಲದಲ್ಲೂ ತನ್ನ ಅಬ್ಬರವನ್ನ ಸದ್ಯದಲ್ಲೇ ಶುರುಮಾಡಲಿದ್ದಾನೆ. ಇದೆಲ್ಲದ್ರ ನಡುವೆ ದಿ ವಿಲನ್ ಚಿತ್ರದ ತೆಲುಗು ಹಾಗೂ ತಮಿಳು ಡಬ್ ವರ್ಷನ್ ಚಿತ್ರವನ್ನ ನವೆಂಬರ್ ೧ಕ್ಕೆ ಬಿಡುಗಡೆ ಮಾಡುವ ತಯಾರಿಯನ್ನೂ ಚಿತ್ರತಂಡ ಮಾಡಿಕೊಳ್ಳುತ್ತಿದೆ.