Home Cinema ಆಪದ್ಭಾಂಧವ, ಅವತಾರ ಪುರುಷ ಆಗುತ್ತಾರೆ ಎಂದು ನಂಬಿದ ಮಂಡ್ಯದ ಜನತೆಗೆ ಅವರು ಆಗಿದ್ದು “ಪುಗ್ಸಟ್ಟೆ ಗಂಡ...

ಆಪದ್ಭಾಂಧವ, ಅವತಾರ ಪುರುಷ ಆಗುತ್ತಾರೆ ಎಂದು ನಂಬಿದ ಮಂಡ್ಯದ ಜನತೆಗೆ ಅವರು ಆಗಿದ್ದು “ಪುಗ್ಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡ”..!? ಕಿಕ್ಕೇರಿದ ರೆಬೆಲ್ ಸ್ಟಾರ್ ಕಣ್ಣಿಗೆ ಬೀಳಲೇ ಇಲ್ವಾ ಕಿಕ್ಕೇರಿ.?

2745
0
SHARE

ಮಂಡ್ಯದ ಗಂಡು ಅಂದ್ರೆ ಯಾರು ಅಂತ ಮಂಡ್ಯದ ಸಣ್ಣ ಮಗುವನ್ನು ಕೇಳಿದರೂ ಅದು ತಡಬಡಾಯಿಸದೇ ಅಂಬರೀಷ್ ಎಂದು ಹೇಳಿಬಿಡುತ್ತದೆ. ಆದರೆ ಅದೇ ಮಂಡ್ಯದ ಗಂಡು ಅಂಬರೀಷ್, ಮಂಡ್ಯಕ್ಕಾಗಿ ಏನು ಮಾಡಿದ್ದಾರೆ ಅಂತ ಎಷ್ಟೇ ದೊಡ್ಡ ಮನುಷ್ಯರನ್ನು ಕೇಳಿದರೂ ಅವರು ಉತ್ತರಿಸೋಕೆ ಒದ್ದಾಡುತ್ತಾರೆ. ಇದು ಮಂಡ್ಯದ ರಾಜಕಾರಣದಲ್ಲಿ ಅಂಬರೀಷ್ ಎಂಬ ನಾಯಕ ಸೃಷ್ಠಿ ಮಾಡಿರೋ ದುರಂತ. ತಮ್ಮ ಪಾಲಿಗೆ ಆಪದ್ಭಾಂಧವ, ಅವತಾರ ಪುರುಷ ಆಗುತ್ತಾರೆ ಎಂದು ನಂಬಿದ ಮಂಡ್ಯದ ಜನತೆಗೆ ಅವರು ಆಗಿದ್ದು ಪುಗ್ಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡ.ಹೌದು. ರೆಬೆಲ್ ಸ್ಟಾರ್ ಅಂಬರೀಷ್ ಅಂದ್ರೆ ಸಿನಿಮಾರಂಗದಲ್ಲಿ ದೊಡ್ಡ ಹೆಸರು…

ಚಿತ್ರರಂಗದಲ್ಲಿ ಏನೇ ಸಮಸ್ಯೆ ಆದರೂ ಅದಕ್ಕೆ ಪರಿಹಾರ ಕೊಡೋಕೆ ಅಂಬರೀಶ್ ಬೇಕೇ ಬೇಕು. ಸಿನಿಮಾರಂಗದಲ್ಲೇನೋ ರೆಬೆಲ್ ಸ್ಟಾರ್ ಅಂತ ಹೆಸರು ಮಾಡಿದ ಅಂಬಿ ರಾಜಕೀಯಕ್ಕೂ ಧುಮುಕಿದರು. ಆದರೆ ರಾಜಕೀಯದಲ್ಲಿ ಅವರು ಸಾಧಿಸಿದ್ದೇನು ಅನ್ನೋದು ಇಂದಿಗೂ ಪ್ರಶ್ನೆಯಾಗಿ ಉಳಿದಿದೆ. ಯಾರೋ ಬಾಲಿವುಡ್ ಹೀರೋಯಿನ್ ಒಬ್ಬಳು ತನ್ನ ಬಟ್ಟೆ ಮಾರಿ ಈ ಮಂಡ್ಯದ ಕಿಕ್ಕೇರಿ ಗ್ರಾಮದ ಜನಗಳಿಗೆ ವಿದ್ಯುತ್ ಒದಗಿಸುವಂಥ ಪರಿಸ್ಥಿತಿ ನಿರ್ಮಾಣ ಆಗಿದ್ದು ಅಂಬರೀಷ್ ಅವರಂಥ ನಾಯಕರ ವೈಫಲ್ಯವಲ್ಲದೆ ಇನ್ನೇನೂ ಅಲ್ಲ.ಅಂಬರೀಷ್ ಗೆ ಮಂಡ್ಯದಲ್ಲಿ ಒಳ್ಳೆಯ ಹೆಸರಿದೆ. ಮಂಡ್ಯದ ಮಕ್ಕಳೆಲ್ಲ ಒಂದಾಗಿ ಬನ್ನಿ ಅಂತ ಒಮ್ಮೆ ಕರೆದರೆ ಬರುವ ಜನಬಲವೂ ಇದೆ. ಆದರೆ ಅಂಬರೀಶ್ ಕೇವಲ ರಾಜಕಾರಣ ಮಾಡುವುದರಲ್ಲೇ ಬ್ಯುಸಿ…

ತನ್ನ ಸಚಿವ ಸ್ಥಾನ ಕಿತ್ತುಕೊಂಡರು, ನನಗೆ ಟಿಕೆಟ್ ಕೊಡಲಿಲ್ಲ, ನನ್ನ ಬೆಂಬಲಿಗರಿಗೆ ಟಿಕೆಟ್ ಕೊಡಲಿಲ್ಲ, ನನ್ನ ವಿರೋಧಿಗಳಿಗೆ ಮಣೆ ಹಾಕುತ್ತಿದ್ದಾರೆ ಅಂತ ಮುನಿಸಿಕೊಂಡು ಕಿರಿಕ್ ಮಾಡುವುದರಲ್ಲೇ ಬ್ಯುಸಿ ಆಗಿರುವ ಅಂಬರೀಷ್ ಅರಿಗೆ ಕಿಕ್ಕೇರಿಯ ಸಮಸ್ಯೆ ಕಣ್ಣಿಗೆ ಬೀಳೋದಾದರೂ ಹೇಗೆ ಅಲ್ಲವೇ.ಅಲ್ಲದೆ, ಅಂಬರೀಷ್ ಅಂದ್ರೆ ಮೊದಲಿನಿಂದಲೂ ಉಡಾಫೆಯ ವ್ಯಕ್ತಿ. ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಸ್ಟೈಲಾಗಿ ಬಾಯಿಗೆ ಸಿಗರೇಟು ಹಾಕಿಕೊಂಡು, ಗುಂಡು ಹಾಕಿಕೊಂಡು ಕಿಕ್ಕೇರಿದ ಕಣ್ಣುಗಳಿಂದಲೇ ಮಾತನಾಡುವ ಅಂಬರೀಷ್ ಅವರಿಗೆ ಕಿಕ್ಕೇರಿ ಕಾಣಿಸಲಿಲ್ಲ. ಹಾಗಾಗಿ ಅಲ್ಲಿನ ಜನರ ಕತ್ತಲನ್ನು ನೀಗಿಸಲು ಆಲಿಯಾ ಎಂಬ ಎಳೆಯ ಹುಡುಗಿ ಬರಬೇಕಾಯ್ತು…

ಇದು ಅಂಬರೀಶ್ ಅವರಂಥ ಹಿರಿಯ ರಾಜಕಾರಣಿಗೆ ನಿಜಕ್ಕೂ ಅವಮಾನಕರ ಸಂಗತಿಅಂಬರೀಷ್ ಬೇಜವಾಬ್ದಾರಿ ಮನುಷ್ಯ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಕಾವೇರಿ ನೀರಿನ ವಿಷಯದಲ್ಲೂ ಒಮ್ಮೆ ಸುಮ್ಮನೆ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದು ಬಿಟ್ಟರೆ ಅವರು ನಿಜವಾದ ಬದ್ಧತೆಯಿಂದ ಹೋರಾಡಲಿಲ್ಲ. ತನಗೆ ಮಿಕ್ಸಿಂಗಿಗೆ ನೀರಿದ್ರೆ ಸಾಕು, ಕಾವೇರಿ ನೀರು ಯಾರಿಗೆ ಬೇಕು ಎನ್ನುವಂತೆ ತಮ್ಮ ದಿವ್ಯ ನಿರ್ಲಕ್ಷ್ಯ ತೋರಿಸಿದ್ದರು ಅಂಬರೀಷ್.ಮಂಡ್ಯದ ಗಂಡು ಎಂದು ಕರೆಸಿಕೊಳ್ಳುವ ಅಂಬರೀಷ್ ಅವರಿಗೆ ತಮ್ಮ ಜಿಲ್ಲೆಯ ಕಿಕ್ಕೇರಿಯಲ್ಲಿರೋ ಈ ಸಮಸ್ಯೆ ಯಾಕೆ ದೊಡ್ಡದಾಗಿ ಕಾಣಲಿಲ್ಲ ಅಥವಾ ಈ ಸಮಸ್ಯೆ ಇದೆ ಅಂತ ಅಂಬರೀಷ್ ಗೆ ಗೊತ್ತೇ ಇರಲಿಲ್ಲವಾ…

ಹಾಗಿದ್ದರೆ ಕಿಕ್ಕೇರಿ ಗ್ರಾಮಕ್ಕೆ ಅಂಬರೀಷ್ ಯಾವತ್ತೂ ಭೇಟಿ ನೀಡಿಲ್ಲವೇ. ಎಂಬೆಲ್ಲಾ ಪ್ರಶ್ನೆಗಳು ಈಗ ಮೂಡುತ್ತವೆ. ಆದರೆ ಅದನ್ನು ನೋಡಿಯೂ ಅಂಬರೀಶ್ ಅವರಿಗೆ ಸಮಸ್ಯೆ ಬಗೆಹರಿಸುವ ಬದ್ಧತೆ ಇರಲಿಲ್ಲ ಅನ್ನೋದು ಅವರನ್ನು ಹತ್ತಿರದಿಂದ ಬಲ್ಲವರ ಮಾತು.ರಾಜಕೀಯವಾಗಿ ಅಂಬಿ ಸಾಕಷ್ಟು ಸಮರ್ಥರು. ತಮಗೆ ಆಗದವರಿಗೆ ಟಿಕೆಟ್ ಅನ್ನು ತಪ್ಪಿಸಬಲ್ಲ ತಾಕತ್ತು ಅವರಿಗಿದೆ. ತಮ್ಮನ್ನು ನಿರ್ಲಕ್ಷ್ಯ ಮಾಡಿದ ಪಕ್ಷವನ್ನೇ ಧಿಕ್ಕರಿಸಿ, ಇನ್ನೊಂದು ಪಾರ್ಟಿಗೆ ಸಪೋರ್ಟ್ ಮಾಡಿ ಆ ಪಕ್ಷದ ಪರವಾಗಿ ಪ್ರಚಾರ ಮಾಡಿ, ತಮ್ಮ ಪಕ್ಷವನ್ನೇ ಸೋಲಿಸಿ ಕರೆಂಟ್ ಶಾಕ್ ಕೊಡುವ ತಾಕತ್ತಿದೆ. ಆದರೆ ಒಂದು ಸಣ್ಣ ಹಳ್ಳಿಗೆ ಕರೆಂಟ್ ಕೊಡಿಸುವ ಒಳ್ಳೆಯ ಕೆಲಸ ಮಾಡಲು ಮಾತ್ರ ಅಂಬಿಗೆ ಪುರುಸೊತ್ತಿಲ್ಲ…

ಅಷ್ಟೊಂದು ಪವರ್ ಇದ್ದರೂ ಈ ಊರಿನ ಪವರ್ ಸಮಸ್ಯೆಯ ಬಗ್ಗೆ ಅಂಬರೀಷ್ ತಲೆ ಕೆಡಿಸಿಕೊಳ್ಳಲೇ ಇಲ್ಲ.ಅಂಬರೀಷ್ ಅಂದ್ರೆ ಹಾಗೇನೇ. ಸುಖಾ ಸುಮ್ಮನೇ ಮೀಡಿಯಾದವರ ಮುಂದೆ ತಲೆಗೊಂದು ಮಾತು ಅಂತ ಆಡಿ, ಅವರಿವರನ್ನು ಆಡಿಕೊಂಡು, ಕುಡಿದ ಮತ್ತಿನಲ್ಲೇ ವಾಲಾಡಿಕೊಂಡು ಮಾತನಾಡಿಕೊಂಡು ಓಡಾಡುವ ಅಂಬರೀಷ್ ಅಭಿವೃದ್ಧಿಯ ವಿಷಯದಲ್ಲಿ ಮಾಡಿದ್ದು ಅಷ್ಟಕ್ಕಷ್ಟೇ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಇದು ಅಲ್ಲಿನ ಜನರಿಗೂ ಗೊತ್ತು. ಹಾಗಾಗಿ ಬಾಲಿವುಡ್ ನ ಆಲಿಯಾ ಅವರಿಂದ ಆದ ಕೆಲಸ ಅಂಬರೀಷ್ ಅವರಿಂದ ಆಗುತ್ತಿರಲಿಲ್ಲವೇ ಅಂತ ಕೇಳಿದರೆ, ಮತ್ತದೇ ಮಂಡ್ಯದ ಪೋರರು ಪಕ್ಕಾ ರೆಬೆಲ್ ಸ್ಟಾರ್ ಅಂಬರೀಷ್ ಸ್ಟೈಲಲ್ಲೇ “ನೋ ಛಾನ್ಸ್” ಅಂತ ಹೇಳ್ತಾರೆ…

ಇದು ಮಂಡ್ಯ ಜನರ ದೌರ್ಭಾಗ್ಯವಲ್ಲದೆ ಮತ್ತಿನ್ನೇನು ಅಲ್ಲ. ಅಲ್ಲವೇ?ಆಲಿಯಾ ಭಟ್ ಏನೋ, ಕೇವಲ ಸಿನಿಮಾ ನಟಿ ಅಲ್ಲದೆ ತನಗೆ ಸಾಮಾಜಿಕ ಜವಾಬ್ದಾರಿ ಕೂಡ ಇದೆ ಅನ್ನೋದನ್ನ ಕಿಕ್ಕೇರಿಯ ಗ್ರಾಮಕ್ಕೆ ಪವರ್ ಕೊಡೋದರ ಮೂಲಕ ನಿರೂಪಿಸಿದ್ದಾಳೆ. ಇದು ಚಿತ್ರರಂಗದ ಎಲ್ಲರಿಗೂ ಖುಷಿ ಕೊಡೋ ವಿಷಯ. ಅಲ್ಲದೆ ಅದರ ಜೊತೆ ಸ್ಪೂರ್ತಿ ಕೊಡೋ ವಿಷಯ. ಬಾಲಿವುಡ್ ನಲ್ಲಿ ಈಗ ಎಲ್ಲೆಡೆ ಆಲಿಯಾ ಭಟ್ ಬಗ್ಗೆಯೇ ಚರ್ಚೆ. ಮಹೇಶ್ ಭಟ್ಟರ ಮಗಳು ನೋಡ್ರಪ್ಪಾ, ಎಷ್ಟ್ ಒಳ್ಳೇ ಕೆಲ್ಸ ಮಾಡವ್ಳೆ ಅಂತ ಎಲ್ಲರೂ ಈಕೆಗೆ ಬಹುಪರಾಕ್ ಹೇಳುತ್ತಿದ್ದಾರೆ. ಆದರೆ ಆಲಿಯಾ ಮಾಡಿದ ಒಳ್ಳೆಯ ಕೆಲಸ ನಮ್ಮ ಮಂಡ್ಯದ ಮಣ್ಣಿನ ಮಗಳು ಅಂತ ಹೇಳಿಕೊಳ್ಳುವ ನಟಿಯರ ಮೇಲೆ ಏನಾದರೂ ಪ್ರಭಾವ ಬೀರಿದೆಯೇ ಎಂದರೆ ಅದಕ್ಕೆ, ಇಲ್ಲ ಅನ್ನೋದೇ ಉತ್ತರ…

ಮಂಡ್ಯದಲ್ಲೇ ಮನೆ ಮಾಡಿಕೊಂಡು ನಾನು ಮಂಡ್ಯದ ಮಗಳು ಅಂತ ಆಗಾಗ ಅಣಿಮುತ್ತುಗಳನ್ನು ಉದುರಿಸುತ್ತಿರುತ್ತಾರೆ. ಸ್ವತಃ ತಾನೇ ಒಬ್ಬ ದೊಡ್ಡ ಸೆಲೆಬ್ರಿಟಿ ನಟಿ ಆಗಿದ್ದುಕೊಂಡು, ಅದರ ಜೊತೆಗೆ ರಾಜಕಾರಣದಲ್ಲೂ ತೊಡಗಿಸಿಕೊಂಡಿದ್ದಾರೆ ರಮ್ಯಾ.  ಆದರೆ, ಮುಂಬೈನ ಆಲಿಯಾ ಭಟ್ ಮಾಡಿದ ಕೆಲಸವನ್ನು ಮಾಡಲಿಲ್ಲ. ರಮ್ಯಾ ಯಾಕೆ ಕಿಕ್ಕೇರಿಯ ರಸ್ತೆಯ ಇಕ್ಕೆಲಗಳಲ್ಲಿ ತಿರುಗಾಡಲಿಲ್ಲ. ಆಲಿಯಾರಂತೆ ಅಲ್ಲಿನ ಜನರ ಸಮಸ್ಯೆ ಆಲಿಸಲಿಲ್ಲ ಅನ್ನೋದು ಎಲ್ಲರೂ ಕೇಳ್ತಾ ಇರೋ ಪ್ರಶ್ನೆ…

ಒಟ್ಟಿನಲ್ಲಿ, ಬಾಲಿವುಡ್ ನಟಿ ಆಲಿಯಾ ಭಟ್ ಕಂಡು ಹಿಡಿದ ಊರು ಎಂಬ ಮಾತಿಗೆ ಆಸ್ಪದ ಕೊಟ್ಟಿರುವ ಕಿಕ್ಕೇರಿ ಎಂಬ ಗ್ರಾಮ ಈಗ ಬೆಳಕಿನಿಂದ ಪ್ರಜ್ವಲಿಸುತ್ತಿದೆ. ಆದರೆ, ಇಲ್ಲೇ ಇದ್ದು ನಮ್ಮವರೇ ಆದ ನಟಿ ರಮ್ಯಾ ಮಾತ್ರ ಈ ಸಮಸ್ಯೆಯ ಬಗ್ಗೆ ಕತ್ತಲಲ್ಲೇ ಇದ್ದಾರೆ. ಹಾಗಾಗಿ, ಈಗ ಮಂಡ್ಯದ ಕಿಕ್ಕೇರಿಯಲ್ಲಿ, ಊರಿಗೊಬ್ಳೇ ಪದ್ಮಾವತಿ ಅಲ್ಲ, ಆಲಿಯಾ ಭಟ್ ಇದಾಳೆ ಅನ್ನೋ ಮಾತು ಚಾಲ್ತಿಗೆ ಬಂದಿದೆ. ರಮ್ಯಾ ಬರೀ ನಮ್ಮತ್ರನೂ ಕಡ್ಲೇಕಾಯಿ ಬೀಜ ಇದೆ ಅನ್ನೋದನ್ನ ಪ್ರೂವ್ ಮಾಡದ ರಮ್ಯಾ ಬಗ್ಗೆ ಬೇಸರದಿಂದ ಮಾತಾಡೋ ಕಿಕ್ಕೇರಿಯ ಜನತೆ, ಆಲಿಯಾ ಭಟ್ರನ್ನು ಹಾಡಿ ಹೊಗಳುತ್ತಿದ್ದಾರೆ…

LEAVE A REPLY

Please enter your comment!
Please enter your name here