Home Crime ಆಸ್ತಿಗಾಗಿ ಹೆತ್ತ ತಂದೆಯನ್ನೇ ಕೊಂದು, ಹಾಕಿದ್ದ ರಣಕೇಕೆ..! ಕೇವಲ ಶೋಕಿ ಮಾಡಲು ತಂದೆಯನ್ನ ಕೊಂದು ಸೇರಿದ...

ಆಸ್ತಿಗಾಗಿ ಹೆತ್ತ ತಂದೆಯನ್ನೇ ಕೊಂದು, ಹಾಕಿದ್ದ ರಣಕೇಕೆ..! ಕೇವಲ ಶೋಕಿ ಮಾಡಲು ತಂದೆಯನ್ನ ಕೊಂದು ಸೇರಿದ ಜೈಲು..!

491
0
SHARE

ಇವನು ಹೀಗೆ ಖಲ್ಲಾಸ್ ಪೀಸ್ ಪೀಸ್ ಅನ್ನೋ ಮಾತು ಹೇಳ್ತಿರೋದನ್ನ ಅಲ್ಲಿ ಸುವರ್ಣಮ್ಮ ಅನ್ನೋರು ಕೇಳಿಸಿಕೊಂಡಿದ್ರು. ಅವರಿಗೆ ಇವನ್ಯಾಕೆ ಹಾಗೆ ಹೇಳ್ತಿದ್ದಾನೆ ಅನ್ನೋದು ಗೊತ್ತಿರಲಿಲ್ಲ. ಹಾಗೆ ಫೋನ್ ನಲ್ಲಿ ಕೂಗಾಡ್ತಿದ್ದವನು ಶರಣಪ್ಪ ಅಂತ. ಅದೇ ತೋಟದ ಮನೆಯ ಮಾಲೀಕನ ಮಗ. ಸ್ವಲ್ಪ ಹೊತ್ತಿನ ಮೊದಲು ಇದೇ ಶರಣಪ್ಪ ಹಸುವಿನ ಹಾಲನ್ನ ಕರೆದು ಅದನ್ನ ಡೈರಿಗೆ ಹಾಕೋದಕ್ಕೆ ಅಂತ ಹೊರಟಿದ್ದ. ಅದಕ್ಕಾಗಿ ಕ್ಯಾನ್ ಅನ್ನ ಬೈಕ್ ಗೆ ತಗುಲಿಹಾಕ್ಕೊಂಡು ಸ್ವಲ್ಪ ದೂರ ಬೈಕ್ ನಲ್ಲಿ ಹೋಗಿದ್ದನ್ನ ಇವ್ರು ನೋಡಿದ್ದಾರೆ. ಆದ್ರೆ ಅದಾದ ಕೆಲವೇ ನಿಮಿಷಗಳಲ್ಲಿ ಆತ ವಾಪಸ್ ಅಲ್ಲಿಗೆ ಬಂದು ಈ ರೀತಿಯಾಗಿ ಕಿರುಚಾಡುತ್ತಿದ್ದಾನೆ ಅಂದ್ರೆ ಅವರಿಗೆ ಯಾಕೆ ಅನ್ನೋದು ಅರ್ಥವೇ ಆಗಲಿಲ್ಲ. ಹೀಗಾಗಿ ಇಲ್ಲೇನೋ ಅನಾಹುತ ಆಗಿದೆ ಅಂತ ಆಕೆಗೆ ಗೊತ್ತಾಗಿತ್ತು.

ಅಲ್ಲದೆ ನಾನು ಅವನನ್ನ ನೋಡಿದ್ದೇನೆ ಅನ್ನೋದು ಗೊತ್ತಾದ್ರೆ ಎಲ್ಲಿ ನನಗೂ ಏನಾದ್ರೂ ಮಾಡ್ತಾನೋ ಅಂತ ಆಕೆ ಅಲ್ಲಿಂದ ಬಾಯಿ ಉಸಿರು ಕೂಡಾ ಹೊರಗೆ ಬಾರದ ರೀತಿ ಅಲ್ಲಿಂದ ಓಡಿ ಹೋಗಿದ್ಲು. ಅಲ್ಲದೆ ಅಲ್ಲೇ ಹತ್ತಿರದಲ್ಲಿದ್ದ ಕೆಲವರನ್ನ ಅದೇ ಏದುಸಿರಿನಲ್ಲಿ ಅಲ್ಲಿ ಏನೋ ಆಗಿದೆ ಎಲ್ಲಾ ಬನ್ನಿ ಅಂತ ಹೇಳಿದ್ದಾಳೆ. ಆಗ ಅವಳ ಆತಂಕವನ್ನ ನೋಡಿದ ಜನ ನಡೆ ಏನಾಗಿದೆ ಅಂತ ನೋಡೋಣ ಅಂತ ಹೋದ್ರು. ಆದ್ರೆ ಅವರೆಲ್ಲಾ ಅಲ್ಲಿಗೆ ಹೋಗಿ ನೋಡಿದ್ರೆ ಫೋನ್ ನಲ್ಲಿ ಮಾತನಾಡ್ತಿದ್ದ ವ್ಯಕ್ತಿ ಅಲ್ಲಿ ಕಾಣಿಸಲೇ ಇಲ್ಲ. ಇವನು ಡೈರಿಗೆ ಹೋಗಿರಬೇಕು ಅವನ ಅಪ್ಪ ಆದ್ರು ಮನೆಯಲ್ಲಿರಬೇಕಲ್ಲ ಅಂತ ಮನೆ ಹತ್ತಿರ ಹೋದ್ರೆ ಅಲ್ಲಿ ಹೊರಗಿನಿಂದ ಲಾಕ್ ಮಾಡಲಾಗಿತ್ತು.

ಬಾಗಿಲು ಲಾಕ್ ಆಗಿದೆ ಅಂದ್ರೆ ಮನೆಯಲ್ಲಿ ಯಾರು ಇಲ್ಲ ಅಂತ ಅಂದುಕೊಂಡು ಅವ್ರು ಮನೆ ಯಜಮಾನ ಮಲ್ಲಿಕಾರ್ಜುನ್ ಗಾಗಿ ಹುಡುಕಾಡತೊಡಗಿದ್ರು. ಆದ್ರೆ ಎಷ್ಟು ಕರೆದ್ರು ಅಲ್ಲಿ ಮಲ್ಲಿಕಾರ್ಜುನ್ ಮಾತ್ರ ಕಾಣಿಸಲೇ ಇಲ್ಲ. ಹೀಗಾಗಿ ಅವರಿಗೂ ಯಾಕೋ ಅನುಮಾನ ಬಂದಿತ್ತು. ಅಲ್ಲದೆ ಅವನು ಅಷ್ಟು ಜೋರಾಗಿ ಖಲ್ಲಾಸ್ ಅಂತ ಬೇರೆ ಹೇಳ್ತಿದ್ದ ಹೀಗಾಗಿ ಏನೋ ಅನಾಹುತ ಆಗಿರಬೇಕು ಅಂತ ಅವ್ರು ಮನೆಯನ್ನ ಬಾಗಿಲನ್ನ ನಿಧಾನವಾಗಿ ಓಪನ್ ಮಾಡಿದ್ರು. ಬಾಗಿಲು ಓಪನ್ ಆಗ್ತಿದ್ದ ಹಾಗೆ ಅಲ್ಲಿದ್ದವರ ಜೀವ ಹಾರಿ ಹೋಗೋದು ಒಂದೇ ಬಾಕಿಯಿತ್ತು.

ಡೋರ್ ಓಪನ್ ಆಗ್ತಿದ್ದ ಹಾಗೆ ಅವರಿಗೆ ಕಾಣಿಸಿದ್ದು ಮನೆಯ ಯಜಮಾನ ಮಲ್ಲಿಕಾರ್ಜುನ್ ನ ಹೆಣ. ಆತ ರಕ್ತ ಮಡುವಿನಲ್ಲಿ ನಿಶ್ಚಲವಾಗಿ ಮಲಗಿಬಿಟ್ಟಿದ್ದ. ಈ ದೃಶ್ಯವನ್ನ ನೋಡ್ತಿದ್ದ ಹಾಗೆ ಅಲ್ಲಿದ್ದವರಿಗೆ ಏನು ಮಾಡಬೇಕು ಅನ್ನೋದು ಒಂದು ಕ್ಷಣ ಗೊತ್ತೇ ಆಗಲಿಲ್ಲ. ಅಷ್ಟರ ಮಟ್ಟಿಗೆ ಆ ದೃಶ್ಯ ಅವರನ್ನ ಘಾಸಿಗೊಳಿಸಿಬಿಟ್ಟಿತ್ತು. ಆತಂಕ, ಭಯ ಎಲ್ಲವೂ ಅವರ ಮುಖದಲ್ಲಿ ಒಮ್ಮೆಲೆ ಕಾಣಿಸಿತ್ತು. ಹೀಗಾಗಿ ಅವ್ರು ಕೆಲವು ಕ್ಷಣ ಸುಧಾರಿಸಿಕೊಂಡು ಥೂ ಕಳ್ ನನ್ಮಗ ಎಂಥ ಕೆಲಸ ಮಾಡಿ ಹೋಗಿದ್ದಾನೆ ಅಂತ ಅವನಿಗೆ ಬಯ್ಯೋದಕ್ಕೆ ಶುರುಮಾಡಿದ್ರು. ಅಲ್ಲದೆ ಅವನು ಖಲ್ಲಾಸ್ ಅಂತ ಫೋನ್ ನಲ್ಲಿ ಏನು ಹೇಳ್ತಿದ್ದ ಅನ್ನೋದು ಆಗ ಅವರಿಗೆ ಗೊತ್ತಾಗಿತ್ತು.

ಹೀಗೆ ಕೆಲಸವಿಲ್ಲದೆ ಖಾಲಿ ಕೂತಿದ್ದವನಿಗೆ ಸಾವಿರಾರು ಕೆಟ್ಟ ಯೋಚನೆಗಳು ಬರೋದಕ್ಕೆ ಶುರುವಾಗಿತ್ತು. ಅದೇನಪ್ಪ ಅಂದ್ರೆ ಅಪ್ಪನ ಹತ್ತಿರ ಇರೋ ಆಸ್ತಿಯನ್ನ ನನಗೆ ಕೊಟ್ರೆ ನಾನು ಅದನ್ನ ಮಾರಿ ಏನಾದ್ರು ಮಾಡಬಹುದು ಅಂತ ಅಂದುಕೊಂಡಿದ್ದ. ಅದಕ್ಕೆ ಅಪ್ಪನ ಹತ್ತಿರ ಹೋಗಿ ಗಲಾಟೆ ಶುರುಮಾಡಿದ್ದ. ದೊಡ್ಡ ಮಗ ಅದೇನೋ ಮಾಡ್ತಾನೆ ಅವನ ದಾರಿ ಅವ್ನು ಹುಡ್ಕೋತಾನೆ ಅಂತ ಆತ ಒಂದಿಷ್ಟು ದಿನದ ಬಳಿಕ 4ಎಕರೆ ಜಮೀನನ್ನ ತನ್ನ ದೊಡ್ಡ ಮಗ ಶರಣಪ್ಪನ ಹೆಸರಿಗೆ ಮಾಡಿದ್ದ. ಆದ್ರೆ ಅದ್ಯಾವಾಗ ಅವನಿಗ ಈ ಜಮೀನು ಅವನಿಗೆ ಸಿಕ್ತೋ ಅದು ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ ಆಗಿತ್ತು. ನಾಲ್ಕು ಎಕರೆ ಬಂಗಾರದಂತ ಭೂಮಿಯಲ್ಲಿ ಬೆಳೆ ತೆಗೆಯೋದನ್ನ ಬಿಟ್ಟು ಅದನ್ನ ಮಾರ್ಕೊಂಡು ತಿಂದಿದ್ದ. ಭೂಮಿ ಇವನ ಹತ್ತಿರವೇ ಇದ್ದಿದ್ರೆ ಮೂರು ಹೊತ್ತಿನ ಅನ್ನಕ್ಕಾದ್ರು ಏನು ಸಮಸ್ಯೆ ಇರ್ತಿರಲಿಲ್ಲ. ಆದ್ರೆ ಅದನ್ನ ಮಾರಾಟ ಮಾಡಿ ಒಂದಿಷ್ಟು ಹಣವನ್ನ ತೆಗೆದುಕೊಂಡಿದ್ದ.

ಆದ್ರೆ ಆ ಹಣ ಕೈಗೆ ಬರ್ತಿದ್ದ ಹಾಗೆ ಐಸ್ ಕರಗಿ ಹೋದಂತೆ ಕರಗಿ ಹೋಗಿತ್ತು. ಕೈಯಲ್ಲಿ ಕಾಸಿದ್ರೆ ಎಷ್ಟು ದಿನ ಅಂತ ತಾನೇ ಇರತ್ತೆ ಅಲ್ವಾ. ಇವನ ಹಣವೆಲ್ಲಾ ಎಷ್ಟು ಈಸಿಯಾಗಿ ಬಂದಿತ್ತೋ ಅಷ್ಟೇ ಈಸಿಯಾಗಿ ಖಾಲಿಯಾಗಿತ್ತು. ಹೀಗಾಗಿ ಮತ್ತೆ ಶರಣಪ್ಪ ಬೀದಿಗೆ ಬಿದ್ದಿದ್ದ. ಅತ್ತ ಮಾಡೋದಕ್ಕೆ ಕೆಲಸವು ಇಲ್ಲ ಇತ್ತ ದುಡಿಯೋದಕ್ಕೆ ಕೆಲಸವು ಇಲ್ಲದೆ ಸುಮ್ಮನೆ ಕೂತಿದ್ದ. ಇದು ಅವರಪ್ಪ ಮಲ್ಲಿಕಾರ್ಜುನ್ ಗೆ ಗೊತ್ತಾಗಿತ್ತು. ಹೀಗಾಗಿ ಆ ಇನ್ನು ಇವನನ್ನ ಸುಮ್ಮನೆ ಬಿಟ್ರ ಬೀದಿ ಪಾಲಾಗ್ತಾನೆ ಅಂತ ಅವನನ್ನ ಕರ್ಕೊಂಡು ಬಂದು ತನ್ನ ತೋಟದ ಮನೆಯಲ್ಲಿ ಇಟ್ಕೊಂಡಿದ್ದ. ಆಗ ಆತ ಸಣ್ಣಪುಟ್ಟ ಕೆಲಸವನ್ನ ಮಾಡ್ಕೊಂಡು ಅಲ್ಲೇ ಅಪ್ಪನ ಜೊತೆಗೆ ಇದ್ದ.

ಹೀಗೆ ಅಪ್ಪನ ಜೊತೆಗಿದ್ದ ಶರಣಪ್ಪನಿಗೆ ತಲೆಯಲ್ಲಿ ಇನ್ನೇನೋ ಯೋಚನೆ ಬರೋದಕ್ಕೆ ಶುರುವಾಗಿತ್ತು. ಅಪ್ಪನ ಹತ್ತಿರ ಇನ್ನು ಒಂಭತ್ತು ಎಕರೆ ಜಮೀನಿದೆ. ಆ ಜಮೀನಿನಲ್ಲಿ ನಾನು ಪಾಲು ಕೇಳಬೇಕು ಅಂತ ಅಂದುಕೊಂಡಿದ್ದ. ತಲೆಗೆ ಈ ಯೋಚನೆ ಬರ್ತಿದ್ದ ಹಾಗೆ ಅಪ್ಪನ ಹತ್ತಿರ ಅದರ ಪ್ರಸ್ತಾಪವನ್ನು ಮಾಡಿದ. ಆದ್ರೆ ಒಂದು ಸಾರಿ ಭೂಮಿ ಕೊಟ್ಟು ಮಗನ ಅವಾಂತರವನ್ನ ನೋಡಿದ್ದ ಮಲ್ಲಿಕಾರ್ಜುನ್ ಈ ಬಾರಿ ಅವನಿಗೆ ಹೊಲವನ್ನ ಕೊಡೋದಕ್ಕೆ ಒಪ್ಪಲಿಲ್ಲ. ಮನೆಯಲ್ಲಿ ಇನ್ನೊಬ್ಬ ಗಂಡು ಮಗನಿದ್ದಾನೆ. ಅಲ್ಲದೆ ಹೆಣ್ಣು ಮಕ್ಕಳಿಗು ಆಸ್ತಿ ಸೇರಬೇಕು. ಅಲ್ಲದೆ ನನ್ನ ಬದುಕು ಇದರಲ್ಲೇ ನಡಿಬೇಕು ಹೀಗಾಗಿ ನಾನು ಭೂಮಿಯನ್ನ ಕೊಡೋದಿಲ್ಲ ಅಂತ ಸಾರಸಗಟಾಗಿ ಹೇಳಿದ್ದ.

ಅಲ್ಲಿಂದ ಅಪ್ಪ ಮಗನಿಗೆ ಜಗಳ ಶುರುವಾಗಿತ್ತು. ಕೆಲವು ಸಾರಿ ಈ ಜಗಳ ವಿಕೋಪಕ್ಕೆ ಹೋಗ್ತಿತ್ತು. ಆಗ ಮಲ್ಲಿಕಾರ್ಜುನ್ ಇನ್ನು ಮಗನನ್ನ ಸುಮ್ಮನೆ ಬಿಟ್ರೆ ಇವನ ಕಾಟವನ್ನ ಸಹಿಸೋದಕ್ಕೆ ಆಗೋದಿಲ್ಲ. ಹೀಗಾಗಿ ಊರಿನ ಒಂದಿಷ್ಟು ಹಿರಿಯರನ್ನ ಕರೆದು ಒಂದು ಮಾತುಕತೆಯನ್ನ ನಡೆಸಿದ. ಆಗ ಊರಿನ ಹಿರಿಯರು ಶರಣಪ್ಪನಿಗೆ ಬುದ್ಧಿ ಹೇಳಿದ್ರು. ಅಲ್ಲದೆ  ಈ ಭೂಮಿಯನ್ನ ಅವನಿಗೆ ಕೊಡಬೇಡ ಅಂತ ಕೂಡಾ ಹೇಳಿದ್ರು. ಯಾಕಂದ್ರೆ ಇವನಿಗೆ ಭೂಮಿ ಕೊಟ್ರೆ ಇಡೀ ನಿಮ್ಮ ಕುಟುಂಬ ಆಮೇಲೆ ಭಿಕ್ಷೆ ಬೇಡಿ ತಿನ್ನಬೇಕಾಗುತ್ತೆ ಅಂತ ಹೇಳಿದ್ರು.ಹೀಗಾಗಿ ಆತನ ಪ್ಲಾನ್ ಯಶಸ್ವಿಯಾಗಿರಲಿಲ್ಲ. ಆದ್ರೆ ಅಪ್ಪನ ಜೊತೆ ಜಗಳ ಮಾಡೋದನ್ನು ಆತ ಬಿಡಲಿಲ್ಲ. ಆಗಾಗ ಅಪ್ಪನ ಜೊತೆ ಜಗಳ ಮಾಡ್ಕೊಂಡು ಗಲಾಟೆ ಮಾಡ್ತಾನೆ ಇದ್ದ. ಇತ್ತೀಚೆಗೆ ಅಂದ್ರೆ ಮೂರು ತಿಂಗಳ ಹಿಂದೆ ಮತ್ತೆ ಇಬ್ಬರು ಆಸ್ತಿಯ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಆಗ ಇಬ್ಬರು ಮಾತನ್ನ ಬಿಟ್ಟಿದ್ರು. ಇಲ್ಲಿಯವರೆಗೂ ಅವರಿಬ್ಬರು ಮುಖಕ್ಕೆ ಮುಖ ಕೊಟ್ಟು ಮಾತನಾಡ್ತಿರಲಿಲ್ಲ. ಮತ್ತೆ ಇದೇ ಜನವರಿ 3ನೇ ತಾರೀಖು ಬೆಳಗ್ಗೆ ಎದ್ದವನೇ ಅದೇ ಆಸ್ತಿಯ ವಿಚಾರವಾಗಿ ಶರಣಪ್ಪ ಅಪ್ಪನ ಜೊತೆ ಗಲಾಟೆ ಶುರುಮಾಡಿದ್ದ.

ಅವತ್ತು ಬೆಳಗ್ಗೆ ನಿದ್ದೆಯಿಂದ ಎದ್ದವನೇ ಅಪ್ಪನ ಜೊತೆ ಜಮೀನು ಕೊಡ್ತಿಯೋ ಇಲ್ವೋ ಅಂತ ಜಗಳ ಮಾಡೋದಕ್ಕೆ ಶುರುಮಾಡಿದ್ದಾನೆ. ಆದ್ರೆ ಇವನು ಕೂಗಾಡ್ತ ಇದ್ರು ಕೂಡಾ ಅಪ್ಪ ಕ್ಯಾರೆ ಅನ್ನಲಿಲ್ಲ. ನಾನು ಜಮೀನು ಕೊಡೋದಿಲ್ಲ ಇವನು ಕೇಳೋದು ಬಿಡೋದಿಲ್ಲ ಅಂತ ಸುಮ್ಮನೆ ತನ್ನ ಪಾಡಿಗೆ ತಾನು ಕೆಲಸ ಮಾಡ್ತಿದ್ದ. ಆಗ ಇವನು ಇವತ್ತು ಅಪ್ಪ ನನಗೆ ಜಮೀನು ಬರೆದು ಕೊಡಲಿಲ್ಲ ಅಂದ್ರೆ ಇವತ್ತು ಅವನ ಕಥೆ ಮುಗಿಸ್ತೀನಿ ಅಂತ ತನ್ನ ಸೋಹದರಿಯರಿಗೆ ಫೋನ್ ಮಾಡಿ ಹೇಳಿದ್ದ. ಅಲ್ಲದೆ ತನ್ನ ಚಿಕ್ಕಪ್ಪಂದಿರು, ಭಾವಂದಿರಿಗೆಲ್ಲಾ ಅವನು ಅಪ್ಪನಿಗೆ ಜೀವ ಬೇಕಾದ್ರೆ ಜಮೀನು ಬರೆದು ಕೊಡೋದಕ್ಕೆ ಹೇಳಿ ಅಂತ ಹೇಳಿದ್ದ. ಆದ್ರೆ ಇವನ ಮಾತನ್ನ ಯಾರು ತಲೆಗೆ ಹಾಕಿಕೊಳ್ಳಲೇ ಇಲ್ಲ.

ಇವನು ಮೆಂಟಲ್ ಯಾವಾಗ ಏನು ಬೇಕಾದ್ರು ಮಾಡ್ತಾನೆ ಅಂತ ಅವರೆಲ್ಲಾ ಏನಾಯ್ತೋ ಅಂತ ಓಡೋಡಿ ಬಂದಿದ್ರು. ಬಂದು ನೋಡಿದ್ರೆ ಶರಣಪ್ಪ ಹೇಳಿದ ಹಾಗೆ ಮಾಡಿಬಿಟ್ಟಿದ್ದ. ಜನ್ಮಕೊಟ್ಟ ತಂದೆಯನ್ನ ಕೊಚ್ಚಿ ಕೊಂದಿದ್ದ. ಕೊಲೆ ಮಾಡಿದ ನಂತ್ರ ಅಲ್ಲಿಂದ ಪರಾರಿಯಾಗಿಬಿಟ್ಟಿದ್ದ. ಇನ್ನು ಅಪ್ಪನ ಆಸ್ತಿಯೆಲ್ಲ ನಂದೇ ಅನ್ನೋದು ಅವನಲ್ಲಿ ಖುಷಿ ಹೆಚ್ಚಿಸಿತ್ತು. ಆದ್ರೆ ಅವನ ಖುಷಿ ಪೊಲೀಸ್ರು ಅವನನ್ನ ಹುಡುಕೋವರೆಗೆ ಮಾತ್ರವಿತ್ತು. ಪೊಲೀಸ್ರು ಕೊಲೆಯಾದ ಕೆಲವೇ ಗಂಟೆಗಳಲ್ಲಿ ತಲೆ ಮರೆಸಿಕೊಂಡಿದ್ದ ಶರಣಪ್ಪನನ್ನ ಬಂಧಿಸಿದ್ರು. ಅಪ್ಪನನ್ನೇ ಕೊಂದು ನಿರ್ಭಾವುಕನಾಗಿ ನಿಂತಿದ್ದ ಶರಣಪ್ಪನನ್ನ ಪೊಲೀಸ್ರು ಬಂಧಿಸಿದ್ದಾರೆ. ಪೊಲೀಸ್ರು ಯಾಕಪ್ಪ ಅಂತ ಕೇಳಿದ್ರೆ ಸರ್ ಆಸ್ತಿಗಾಗಿ ನಾನು ಅಪ್ಪನನ್ನ ಕೊಲೆ ಮಾಡಿದ್ದೇನೆ ಅಂತ ಹೇಳಿದ್ದ.

ಅಪ್ಪನ ಆಸ್ತಿ ಅವನಿಗೆ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಅಪ್ಪನನ್ನ ಕೊಂದಿದ್ದಕ್ಕೆ ಆ ಪಾಪವನ್ನ ಕಳೆಯೋದಕ್ಕೆ ಪೊಲೀಸ್ರು ಆತನನ್ನ ಜೈಲಿಗಟ್ಟಿದ್ದಾರೆ. ಮಲ್ಲಿಕಾರ್ಜುನ್ ಸತ್ತ ಮೇಲೆ ಆ ಆಸ್ತಿ ಎಲ್ಲರಿಗೂ ಸಮಾನಾಗಿ ಹಂಚಿಕೆಯಾಗ್ತಿತ್ತು. ಆದ್ರೆ ಅವನಿಗೆ ಮೂರು ಹೊತ್ತು ಅನ್ನ ಹಾಕ್ತಿದ್ದ ಭೂಮಿಯನ್ನ ಮಾರಾಟ ಮಾಡಿ ಹಣವನ್ನ ಮಜಾ ಮಾಡ್ಬೇಕು ಅನ್ನೋ ಆತುರವಿತ್ತು. ಹೀಗಾಗಿ ತನ್ನ ನೀಚ ಬುದ್ಧಿಯಿಂದ ಅಪ್ಪನನ್ನೇ ಕೊಂದು ಮಲಗಿಸಿದ್ದ.

LEAVE A REPLY

Please enter your comment!
Please enter your name here