Home Crime ಆ ಊರೇ ಅಪ್ಪ ಮಗನಿಗೆ ಭದ್ರ ಕೋಟೆ..! ಗಂಧದ ಮರ ಕಳ್ಳತನವೇ ಅವರ ಇನ್ ಕಮ್...

ಆ ಊರೇ ಅಪ್ಪ ಮಗನಿಗೆ ಭದ್ರ ಕೋಟೆ..! ಗಂಧದ ಮರ ಕಳ್ಳತನವೇ ಅವರ ಇನ್ ಕಮ್ ಸೋರ್ಸ್..! ಅವರಿಬ್ಬರ ರಕ್ಷಣೆಗಿತ್ತು ಊರಿನ ಲೇಡಿ ಫೋರ್ಸ್..! ಮಿಡ್ ನೈಟ್ ಆಪರೇಷನ್ ಗೆ ಊರಿಗೆ ಊರೇ ಶೇಕ್..!

2089
0
SHARE

ಮೊನ್ನೆ ಶನಿವಾರ ಬೆಳಗ್ಗೆ 2.30ಕ್ಕೆ ಬೆಂಗಳೂರಿನ ಹೊರವಲಯದ ಹೊಸಕೋಟೆಯ ಕಟ್ಟಿಗೇನಹಳ್ಳಿಯಲ್ಲಿ ಊರಿಗೆ ಊರೇ ಗಾಢ ನಿದ್ದೆಗೆ ಜಾರಿತ್ತು. ಆ ಊರಲ್ಲಿ ಚಳಿಗೆ ಬೀದಿನಾಯಿಗಳು ಕೂಡಾ ಸದ್ದು ಮಾಡದೆ ಮುರುಟಿ ಮಲಗಿದ್ಲು. ಇದೇ ಸಮಯಕ್ಕೆ ಅಲ್ಲಿಗೆ ಒಂದು ಇಡೀ ಸೈನ್ಯವೇ ಊರನ್ನ ಸುತ್ತುವರೆದಿತ್ತು. ಭಯಂಕರ ಚಳಿಗೆ ಜನರೆಲ್ಲ ಎರಡೆರಡು ಬೆಡ್ ಶೀಟ್ ಹೊದ್ದು ಮಲಗಿದ್ರು. ಆದ್ರೆ ಆ ಟೈಂಗೆ ಪೊಲೀಸ್ರ ಒಂದು ಸೈನ್ಯ ಅಲ್ಲಿ ನೆರೆದಿತ್ತು. ಅದು ಅಂತಿಂಥ ಸೈನ್ಯವಲ್ಲ ಬೆಂಗಳೂರಿನ ಸೆಂಟ್ರಲ್ ಮತ್ತು ವೈಟ್ ಫಿಲ್ಡ್ ಡಿವಿಷನ್ ನ 200ಕ್ಕೂ ಹೆಚ್ಚು ಸಿಬ್ಬಂದಿ ಅಲ್ಲಿ ಸೇರಿದ್ರು. ಅಲ್ಲಿ ಪೊಲೀಸ್ರು ಬಂದು ಅಸೆಂಬಲ್ ಆಗ್ತಿದ್ದ ಹಾಗೆ ಆ ಊರಿನ ಮನೆಗಳ ಮೇಲೆ ಡ್ರೋಣ್ ಹಾರಾಡೋದಕ್ಕೆ ಶುರುವಾಗಿತ್ತು.

ಯಾವ ಮನೆಯಿಂದ ಯಾರಾದ್ರು ಹೊರಗೆ ಬರ್ತಾರಾ ಅಂತ ಡ್ರೋನ್ ನೈಟ್ ವಿಷನ್ ಕ್ಯಾಮರಾ ಸೆರೆಹಿಡಿಯೋದಕ್ಕೆ ಶುರುಮಾಡಿತ್ತು. ಅಷ್ಟು ಜನ ಪೊಲೀಸ್ರು ಅಲ್ಲಿ ಸೇರಿದ್ರು ಪಿನ್ ಡ್ರಾಪ್ ಸೈಲೆನ್ಸ್ ಅಲ್ಲಿತ್ತು.ಅವತ್ತು ರಾತ್ರಿ ಇಬ್ಬರು ಡಿಸಿಪಿ, 8ಎಸಿಪಿಗಳು, 23 ಇನ್ಸ್ ಪೆಕ್ಟರ್ ಗಳು, 40 ಸಬ್ ಇನ್ಸ್ ಪೆಕ್ಟರ್ ಗಳು, 25 ಮಹಿಳಾ ಸಿಬ್ಬಂದಿಗಳು ಸೇರಿದಂತೆ 200ಕ್ಕೂ ಹೆಚ್ಚು ಪೊಲೀಸ್ರು ಅಲ್ಲಿ ನೆರೆದಿದ್ರು. ಅಲ್ಲಿಗೆ ಪೊಲೀಸ್ರು ಹೋಗಿದ್ದು ಯಾವುದೋ ಕಾರ್ಯಕ್ರಮದ ಬಂದೋಬಸ್ತ್ ಗಾಗಿ ಆಗಿರಲಿಲ್ಲ. ಅದೊಂದು ಬೆಂಗಳೂರೇ ಕೇಳರಿಯದ ಆಪರೇಷನ್ ಗಾಗಿ. ಹೀಗಾಗಿ ಪ್ರತಿಯೊಬ್ಬ ಪೊಲೀಸ್ರು ರಕ್ಷಾಕವಚವನ್ನ ಧರಿಸಿದ್ರು. ಅಲ್ಲದೆ ಪ್ರತಿಯೊಬ್ಬರು ಎಕೆ 47 ಮೆಷಿನ್ ಗನ್ ಮತ್ತು ಬಂದೂಕನ್ನ ಹಿಡ್ಕೊಂಡು ಅಲ್ಲಿಗೆ ಹೋಗಿದ್ರು. ಹೀಗೆ ಹೋದ ಪೊಲೀಸ್ರು ಆ ಊರಿನ ಪ್ರತಿಯೊಂದು ಚಲನವಲನವನ್ನ ಡ್ರೋಣ ಕ್ಯಾಮರಾದಲ್ಲಿ ಸೆರೆಹಿಡಿಯೋದಕ್ಕೆ ಶುರುಮಾಡಿದ್ರು.

ನಂತ್ರ ಆ ಊರಿನ ಮನೆಯೊಂದರ ಕಡೆಗೆ ಇಡೀ ಪೊಲೀಸ್ ಟೀಂ ಹೋಗತೊಡಗಿತು.ಅದೊಂದು ಕೋಟೆಯಂತೆ ಇರೋ ಮನೆ ಆ ಮನೆ ಪೊಲೀಸ್ರಿಗೆ ಗುರುತು ಸಿಕ್ತಿದ್ದ ಹಾಗೆ ಇಡೀ ಮನೆಯನ್ನ ಸರೌಂಡ್ ಮಾಡಿದ್ರು. ಆ ಮನೆಯಿಂದ ಒಂದೇ ಒಂದು ಸೊಳ್ಳೆ ಕೂಡಾ ಹೊರಗೆ ಬಂದ್ರು ಗೊತ್ತಾಗಬೇಕು ಹಾಗೆ ಪೊಲೀಸ್ರು ಮನೆಯನ್ನ ಸುತ್ತುವರೆದಿದ್ರು. ಇಡೀ ಮನೆಯನ್ನ ಪೊಲೀಸ್ರು ಗನ್ ಪಾಯಿಂಟ್ ನಲ್ಲಿ ಇಟ್ಕೊಂಡು ಕಾಯ್ತಿದ್ರು. ಆ ಮನೆಯಿಂದ ಅದ್ಯಾವಾಗ ಬೇಕಾದ್ರು ಪ್ರತಿದಾಳಿಯಾಗೋ ಸಂಭವವಿತ್ತು. ಹೀಗಾಗಿ ಪೊಲೀಸ್ರು ಬಹಳ ಎಚ್ಚರಿಕೆಯಿಂದ ಮೊದಲು ಆ ಮನೆಯನ್ನ ಸುತ್ತುವರೆದಿದ್ರು. ಅದ್ಯಾವಾಗ ಆ ಮನೆಯಿಂದ ಯಾರು ಆಚೆಗೆ ಹೋಗೋದಕ್ಕೆ ಸಾಧ್ಯವಿಲ್ಲ ಅನ್ನೋದು ಗೊತ್ತಾಯ್ತೋ ಆಗ ಡಿಸಿಪಿ ದೇವರಾಜ್ ಮತ್ತು ಡಿಸಿಪಿ ಅಬ್ದುಲ್ ಅಹದ್ ತಮ್ಮ ಟೀಂ ಜೊತೆ ಆ ಮನೆಯ ಕಾಲಿಂಗ್ ಬೆಲ್ ಅನ್ನ ಒತ್ತಿದ್ರು.

ಕೆಲವು ಹೊತ್ತಿನ ನಂತ್ರ ಆ ಮನೆಯಿಂದ ಒಬ್ಬ ಬಂದು ಬಾಗಿಲನ್ನ ಓಪನ್ ಮಾಡಿದ್ದ. ನಿದ್ದೆಗಣ್ಣಿನಲ್ಲಿ ಕಣ್ಣುಜ್ಜಿಕೊಳ್ಳುತ್ತ ಡೋರ್ ಓಪನ್ ಮಾಡ್ತಿದ್ದ ಹಾಗೆ ಅವತ್ತು ಆ ಭಯಂಕರ ಚಳಿಯಲ್ಲೂ ಬೆವತು ಒದ್ದೆಯಾಗಿ ಬಿಟ್ಟಿತ್ತ. ತನ್ನ ಮುಂದೆ ಹೀಗೆ ಪೊಲೀಸ್ರು ಬಂದು ನಿಲ್ತಾರೆ ಅಂತ ಅವನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಆದ್ರೆ ಅವನ ಮುಂದೆ ಬೇರೆ ದಾರಿಯೇ ಇರಲಿಲ್ಲ. ಹೀಗಾಗಿ ಮರುಮಾತನಾಡದೆ ಪೊಲೀಸ್ರಿಗೆ ಶರಣಾಗಿ ಬಿಟ್ಟಿದ್ದ. ಆದ್ರೆ ಅಲ್ಲಿ ಪೊಲೀಸ್ರಿಗೆ ಬೇಕಾಗಿದ್ದು ಅವನೊಬ್ಬನೇ ಅಲ್ಲ, ಇನ್ನೊಬ್ಬ ಕೂಡಾ ಬೇಕಾಗಿತ್ತು. ಆತನ ಬಗ್ಗೆ ಕೇಳಿದ್ರೆ ಅವನು ಮನೆಯಲ್ಲಿ ಇಲ್ಲ ಊರಿಗೆ ಹೋಗಿದ್ದಾನೆ ಅಂತ ಹೇಳಿದ್ದ. ಆದ್ರೆ ಅವನ ಮಾತನ್ನ ಕೇಳೋದಕ್ಕೆ ಪೊಲೀಸ್ರು ಕಿವಿಯ ಮೇಲೆ ದಾಸವಾಳ ಹೂವನ್ನ ಇಟ್ಕೊಂಡು ಹೋಗಿರಲಿಲ್ಲ.

ಅದ್ಯಾವಾಗ ಇವನು ಸಿಕ್ಕಿದ್ನೋ ಆಗ ಪೊಲೀಸ್ರು ಅವನನ್ನ ಕರ್ಕೊಂಡೆ ಮನೆಯೊಳಗೆ ಹೋಗಿದ್ರು. ಅಲ್ಲಿ ಇನ್ನೊಬ್ಬನಿಗಾಗಿ ಹುಡುಕಾಟ ನಡೆಸಿದ್ರು. ಆದ್ರೆ ಮನೆಯ ಯಾವ ರೂಮ್ ನಲ್ಲೂ ಅವನು ಕಾಣಿಸಲೇ ಇಲ್ಲ. ಯಾವುದಕ್ಕೂ ಇರಲಿ ಅಂತ ಪೊಲೀಸ್ರು ಮನೆಯ ಎಲ್ಲಾ ರೂಂನಲ್ಲಿನ ಮಂಚದ ಕೆಳಗೆ ಹುಡುಕಿದ್ರು. ಆಗ ಆತ ಇಲಿಯ ರೀತಿ ಮಂಚದ ಕೆಳಗೆ ಅವಿತುಕೊಂಡಿರೋದು ಗೊತ್ತಾಗಿತ್ತು. ಆತನನ್ನ ಹಾಗೆ ಕಾಲು ಹಿಡಿದು ಹೊರಗೆ ಎಳ್ಕೊಂಡು ಕೈಗೆ ಬೇಡಿ ಹಾಕಿದ್ರು. ಅಲ್ಲಿಗೆ ಪೊಲೀಸ್ರು ಬಂದಿದ್ದ ಕೆಲಸ ಮುಗಿದಿತ್ತು. ಆದ್ರೆ ಪೊಲೀಸ್ರಿಗೆ ಅಲ್ಲಿವರೆಗೆ ಏನು ಸಮಸ್ಯೆಯಾಗಿರಲಿಲ್ಲ. ಶಸ್ತ್ರ ಸಜ್ಜಿತವಾಗಿದ್ದ ಪೊಲೀಸ್ರಿಗೆ ಇನ್ನು ಮುಂದೆ ನಿಜವಾದ ಸಮಸ್ಯೆ ಮತ್ತು ಸವಾಲು ಶುರುವಾಗೋದಿತ್ತು.

ಅಷ್ಟೊತ್ತಿಗೆ ಆ ಮನೆಯಲ್ಲಿದ್ದ ಹೆಂಗಸರಿಗೆಲ್ಲಾ ಎಚ್ಚರವಾಗಿತ್ತು. ಅದ್ಯಾವಾಗ ಮನೆಯಲ್ಲಿ ಪೊಲೀಸ್ರನ್ನ ನೋಡಿದ್ರೋ ಮನೆಯಲ್ಲಿನ ಹೆಂಗಸರೆಲ್ಲಾ ಲಬೋ ಲಬೋ ಅಂತ ಬಾಯಿ ಬಡಿದುಕೊಳ್ಳೋದಕ್ಕೆ ಶುರುಮಾಡಿದ್ರು. ಅದೊಂಥರ ಇಡೀ ಊರಿನ ಕಾಲಿಂಗ್ ಬೆಲ್ ಆಗಿತ್ತು. ಆ ಹೆಂಗಸರ ಚೀರಾಟ ಒಂದೊಂದೆ ಮನೆಯ ಜನರನ್ನ ಎಬ್ಬಿಸೋದಕ್ಕೆ ಶುರುಮಾಡಿತ್ತು. ಅಂದ್ರೆ ಆ ಹೆಂಗಸರು ಬೇಕು ಅಂತಾನೆ ಅಷ್ಟು ಜೋರಾಗಿ ಪೊಲೀಸ್ರ ವಿರುದ್ಧ ಕೂಗಾಡೋದಕ್ಕೆ ಶುರುಮಾಡಿದ್ರು. ನಿಮಗೆ ಗೊತ್ತಲ್ವಾ ಹೆಂಗಸರ ಬಾಯಿ ಎಷ್ಟು ದೊಡ್ಡದು ಅಂತ ಅವ್ರು ಕಿರುಚಾಡಿದ ಅಬ್ಬರಕ್ಕೆ ಇಡೀ ಊರಿಗೆ ಊರೇ ಯಾವುದೋ ಕೆಟ್ಟ ಕನಸಿನಿಂದ ಎಚ್ಚೆತ್ತ ಹಾಗೆ ಧಿಡೀರನೇ ಎದ್ದು ಕುಳಿತಿದ್ರು.

ಪೊಲೀಸ್ರು ಆ ಬೆಳ್ಳಂಬೆಳಗ್ಗೆ ಆ ಊರಿಗೆ ನುಗ್ಗಿ ಹಿಡ್ಕೊಂಡು ಬಂದಿದ್ದ ಇಬ್ಬರು ಮತ್ಯಾರು ಅಲ್ಲ ಸೈಯ್ಯದ್ ರಿಯಾಜ್ ಮತ್ತು ಆತನ ಮಗ ಸೈಯ್ಯದ್ ಶೇರ್ ಅಲಿ. ಇವರಿಬ್ಬರನ್ನ ಹಿಡಿಯೋದಕ್ಕೆ ಪೊಲೀಸ್ರು ಸೈನ್ಯ ಕಟ್ಟಿಕೊಂಡು ಕಟ್ಟಿಗೇನಹಳ್ಳಿ ಹೋಗಿದ್ದು. ಇವರಿಬ್ಬರು ಬೆಂಗಳೂರಿನ ಗಂಧದ ಮರ ಕಳ್ಳತನದ ಪ್ರಮುಖ ಆರೋಪಿಗಳು. ಗಂಧದ ಮರವನ್ನ ಕದ್ದು ಮಾರಾಟ ಮಾಡಿಯೇ ತಮ್ಮದೇ ಆದ ಬೃಹತ್ ಸಾಮ್ರಾಜ್ಯವನ್ನ ಕಟ್ಟಿಕೊಂಡಿದ್ರು. ಇವರಿಬ್ಬರು ಮನೆಯನ್ನ ಬಿಟ್ಟು ಹೊರಗೆ ಬರ್ತಾನೆ ಇರಲಿಲ್ಲ. ತಮ್ಮ ಇಡೀ ದಂಧೆಯನ್ನ ಇದೇ ಮನೆಯಲ್ಲಿಯೇ ನಡೆಸ್ತಾ ಇದ್ರು. ಹೀಗಾಗಿ ಪೊಲೀಸ್ರಿಗೆ ಅವರನ್ನ ಹಿಡಿಯೋದಕ್ಕೆ ಕಷ್ಟವಾಗಿತ್ತು. ಇಡೀ ಸೌತ್ ಇಂಡಿಯಾದಲ್ಲಿ ಗಂಧದ ಮರ ಮತ್ತು ರಕ್ತ ಚಂದನ ದಂಧೆಯನ್ನ ಇವರಿಬ್ಬರೇ ನಿಯಂತ್ರಿಸ್ತಿದ್ರು. ಮನೆಯಿಂದ ಹೊರಗೆ ಹೋದ್ರೆ ಪೊಲೀಸ್ರಿಗೆ ಸಿಕ್ಕಿಬೀಳೋ ಛಾನ್ಸ್ ಇರ್ತಾ ಇದ್ದಿದ್ರಿಂದ ಇವರಿಬ್ಬರು ಮನೆಯಿಂದ ಆಚೆ ಕಾಲಿಡ್ತಿರಲಿಲ್ಲ.

ಈ ದಾಳಿಯನ್ನ ನಡೆಸೋದಕ್ಕೂ ಮೊದಲು ಪೊಲೀಸ್ರ ಒಂದು ತಂಡ ಮಾರುವೇಷದಲ್ಲಿ ಕಾರ್ಯಚರಣೆ ನಡೆಸಿತ್ತು. ಎಸ್ ಐಗಳಾದ ರಾಘವೇಂದ್ರ, ಸುರೇಶ್, ರಹೀಂ, ಬಾಲ್ ರಾಜ್ ಅವರ ತಂಡ ಇವರನ್ನ ಹಿಡಿಯೋದಕ್ಕೆ ಮುಸ್ಲಿಂರಂತೆ ವೇಷ ಬದಲಾಯಸಿಕೊಂಡು ಹೋಗಿದ್ರು. ಆ ಊರಿನಲ್ಲಿ ಇವರ ಚಲನವಲನಗಳನ್ನ ಅವ್ರು ಗಮನಿಸ್ತಿದ್ರು. ಈ ವೇಳೆ ಅವರಿಗೆ ಅಪ್ಪ ಮಗ ಮಾಲೂರಿಗೆ ಹೋಗ್ತಿರೋದರ ಬಗ್ಗೆ ಮಾಹಿತಿ ಸಿಕ್ಕಿತ್ತು.  ಇವರಿಬ್ಬರು ಮಾಲೂರಿಗೆ ಕಾರ್ ನಲ್ಲಿ ಹೋಗ್ತಿರುವಾಗ ಪೊಲೀಸ್ರು ಜೀಪ್ ನಲ್ಲಿ ಅವರನ್ನ ಫಾಲೋ ಮಾಡ್ಕೊಂಡು ಹೋಗಿದ್ರು. ಇದು ಗೊತ್ತಾಗ್ತಿದ್ದ ಹಾಗೆ ಅವರಿಬ್ಬರು ತಮ್ಮ ಸಹಚರರನ್ನ ಸ್ಥಳಕ್ಕೆ ಕರೆಸಿಕೊಂಡಿದ್ರು. ನೂರು ಕಿಲೋ ಮೀಟರ್ ವೇಗದಲ್ಲಿ ಹೋಗ್ತಿದ್ದಾಗ ಕಾರು ಜೀಪ್ ಗೆ ಡಿಕ್ಕಿ ಹೊಡೆದಿತ್ತು. ಆಗ ಪೊಲೀಸ್ರ ಜೀಪ್ ಗುಂಡಿಗೆ ಹೋಗಿ ಬಿದ್ದಿತ್ತು. ಅವತ್ತು ಅದೃಷ್ಟವಷಾತ್ ಪೊಲೀಸ್ರಿಗೆ ಏನು ಅಂತಹ ಅಪಾಯಗಳಾಗಿರಲಿಲ್ಲ. ಅಲ್ಲದೆ ಅಷ್ಟರಲ್ಲೇ ಅಲ್ಲಿಗೆ ಬಂದ ಅವರ ಸಹಚರರು ಪೊಲೀಸ್ರ ಮೇಲೆ ಕಲ್ಲುಗಳಿಂದ ದಾಳಿ ಮಾಡಿ ಕೊಲ್ಲೋದಕ್ಕೆ ಯತ್ನಿಸಿದ್ರು. ನಂತ್ರ ಸ್ಥಳೀಯ ಪೊಲೀಸ್ರ ನೆರವಿನಿಂದ ಅವ್ರು ತಪ್ಪಿಸಿಕೊಂಡು ಬಂದಿದ್ರು.

ಕಳೆದ ತಿಂಗಳು ಕಬ್ಬನ್ ಪಾರ್ಕ್ ಪೊಲೀಸ್ರು ಇಳಯರಾಜ ಅನ್ನೋ ಗಂಧದ ಮರ ಕಳ್ಳನ ಮೇಲೆ ಫೈರಿಂಗ್ ಮಾಡಿದ್ರು. ಈ ವೇಳೆ ಆತ ಈ ಜಾಲ ಹೇಗೆ ಕಾರ್ಯನಿರ್ವಹಿಸುತ್ತೆ ಮತ್ತು ಇದರ ಕಿಂಗ್ ಪಿನ್ ಗಳು ಯಾರು ಅನ್ನೋದನ್ನ ಹೇಳಿದ್ದ. ಅಲ್ಲದೆ ತಮ್ಮ ಜಾಲ ಎಲ್ಲಿಂದ ಎಲ್ಲಿಯವರೆಗೆ ಹಬ್ಬಿದೆ ಅನ್ನೋದನ್ನ ವಿಚಾರಣೆ ವೇಳೆ ಪೊಲೀಸ್ರಿಗೆ ತಿಳಿಸಿದ್ದ. ಹೀಗಾಗಿ ಪೊಲೀಸ್ರು ಆ ಗ್ಯಾಂಗ್ ನ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿತ್ತು. ಅಲ್ಲದೆ ಪೊಲೀಸ್ರ ಮೇಲೆ ಅಟ್ಯಾಕ್ ಮಾಡುವಷ್ಟು ಮುಂದುವರೆದಿರೋ ಆರೋಪಿಗಳನ್ನ ಮಟ್ಟಹಾಕೋದಕ್ಕೆ ಸಕಲ ತಯಾರಿ ಮಾಡ್ಕೊಂಡಿತ್ತು. ಫೈನಲಿ ಇಡಿ ಊರಿನ ಮೇಲೆ ದಾಳಿ ನಡೆಸಿ ಅವರಿಬ್ಬರನ್ನ ಎಳ್ಕೊಂಡು ಬಂದಿದ್ದಾರೆ. ಪೊಲೀಸ್ರು ಅಂದ್ರು ಭಯವಿರದೇ ಇದ್ದ ಇಬ್ಬರಿಗೆ ಈಗ ಖಾಕಿ ಪವರ್ ಏನು ಅನ್ನೋದನ್ನ ತೋರಿಸ್ತಿದ್ದಾರೆ. ಗಂಧದ ಮರವನ್ನ ರಾಜಾರೋಷವಾಗಿ ಕದಿಯುತ್ತಿದ್ದವರಿಗೆ ಈಗ ಭಯ ಭಕ್ತಿ ಅಂದ್ರೇನು ಅನ್ನೋದನ್ನ ಹೇಳಿಕೊಡ್ತಿದ್ದಾರೆ.

ಇವರಿಬ್ಬರು ಅಂತಿಂಥ ಕಳ್ಳರನ್ನ ಇವ್ರು ಗಂಧದ ಮರ ಮತ್ತು ರಕ್ತ ಚಂದನ ಕಳ್ಳತನದಲ್ಲೇ ವರ್ಷಕ್ಕೆ ನೂರಾರು ಕೋಟಿ ರೂಪಾಯಿ ವ್ಯವಹಾರ ನಡೆಸ್ತಿದ್ರು. ಈ ಮರಗಳನ್ನ ಕಳ್ಳತನ ಮಾಡೋದಕ್ಕೆ ಅಂತಾನೆ ತಮಿಳುನಾಡಿನಿಂದ ಇಳಯರಾಜ, ಮಾದ, ರಾಜೇಂದ್ರ, ಸತ್ಯರಾಜ್, ಗೋವಿಂದಸ್ವಾಮಿ, ಶಿವಲಿಂಗ ಅನ್ನೋರನ್ನ ಕರೆಸಿಕೊಳ್ತಿದ್ದ. ಮರ ಕಡಿಯೋ ಜವಾಬ್ದಾರಿಯನ್ನ ಇವರಿಗೆ ವಹಿಸ್ತಿದ್ದ. ಅಲ್ಲದೆ ಆ ಕೆಲಸ ಮುಗಿಯೋವರೆಗೂ ಇವರಿಗೆ ನಗರದ ಹೊರವಲಯದಲ್ಲಿ ಉಳಿದುಕೊಳ್ಳೋ ವ್ಯವಸ್ಥೆ ಮಾಡ್ತಿದ್ದ. ಅಲ್ಲದೆ ಮರವನ್ನ ಸಾಗಿಸೋದಕ್ಕೆ ಬೇಕಾದ ವಾಹನದ ವ್ಯವಸ್ಥೆಯನ್ನ ಕೂಡಾ ಇವನೇ ಮಾಡ್ತಿದ್ದ.ಬೆಂಗಳೂರಿನಲ್ಲಿ ಎಲ್ಲೆಲ್ಲಿ ಗಂಧದ ಮರಗಳಿವೆ ಅಂತ ಗುರುತಿಸಿ ಇವನಿಗೆ ಇನ್ಫರ್ಮೇಷನ್ ಅನ್ನ ಕೊಡೋದಕ್ಕೆ ಕೆಲವರನ್ನ ನೇಮಿಸಿಕೊಂಡಿದ್ದ.

ಬಿಬಿಎಂಪಿ ಮರ ಕಡಿಯುವ ಗುತ್ತಿಗೆ ತಂಡದಲ್ಲಿದ್ದ ಲಕ್ಷ್ಮಣ್ ಹಾಗೂ ರಂಗನಾಥ್ ನನ್ನ ಇವನು ಸಂಪರ್ಕಿಸ್ತಿದ್ದ. ಅವ್ರು ತಾವು ಎಲ್ಲೆಲ್ಲಿ ಮರವನ್ನ ಕಡಿಯೋದಕ್ಕೆ ಹೋಗ್ತಾರೋ ಅಲ್ಲಲ್ಲಿ ಗಂಧದ ಮರ ಇರೋ ಬಗ್ಗೆ ಮಾಹಿತಿ ನೀಡ್ತಿದ್ರು. ಅಲ್ಲದೆ ಅಲ್ಲಿರೋ ಸೆಕ್ಯೂರಿಟಿ ಬಗ್ಗೆಯು ಮಾಹಿತಿ ನೀಡ್ತಿದ್ರು. ಒಂದು ಮರವನ್ನ ಗುರುತಿಸೋದಕ್ಕೆ ಇವರಿಗೆ 10ಸಾವಿರ ರೂಪಾಯಿಯನ್ನ ಕೊಡ್ತಿದ್ದ. ಹೀಗೆ ಎಲ್ಲೆಲ್ಲಿ ಗಂಧದ ಮರ ಇದೆ ಅನ್ನೋದು ಅವರಿಗೆ ಈಸಿಯಾಗಿ ಗೊತ್ತಾಗ್ತಿತ್ತು. ಅಲ್ಲದೆ ತಾನು ಕಳ್ಳತನ ಮಾಡಿಸಿದ್ದ ಗಂಧದ ಮರಗಳನ್ನ ತುಮಕೂರು ಮತ್ತು ಚಿಕ್ಕಮಂಗಳೂರಿನ ಫ್ಯಾಕ್ಟರಿಗಳಿಗೆ ಮಾರಾಟ ಮಾಡ್ತಿದ್ದ. ಅಲ್ಲಿ ಸೌಂದರ್ಯವರ್ಧಕಗಳನ್ನ ತಯಾರಿಸೋದಕ್ಕೆ ಇದನ್ನ ಬಳಸಲಾಗ್ತಿತ್ತು. ಈ ಬಗ್ಗೆ ಆತನ ಮನೆಯಲ್ಲಿ ಸಿಕ್ಕಿರೋ ಡೈರಿಯಲ್ಲಿ ಮಾಹಿತಿ ಸಿಕ್ಕಿದೆ. ಈಗ ಪೊಲೀಸ್ರು ಅವರ ಮೇಲೆ ಒಂದು ಕಣ್ಣಿಟ್ಟಿದ್ದಾರೆ. ಅವರ ಜೊತೆ ಎಷ್ಟು ವ್ಯವಹಾರ ನಡೆಸಿದ್ದೇನೆ ಅನ್ನೋದನ್ನ ಆತ ಡೈರಿಯಲ್ಲಿ ಬರೆದಿಟ್ಟಿದ್ದಾನೆ. ಅಲ್ಲದೆ ಹೊರ ರಾಜ್ಯಗಳಿಗು ಇಲ್ಲಿಂದ ಗಂಧದ ಮರವನ್ನ ಕಳ್ಳಸಾಗಾಣಿಕೆ ಮಾಡ್ತಿದ್ರು.

ಅಪ್ಪ ಮಗನ ಬಂಧನದಿಂದಾಗಿ ಗಂಧದ ಮರ ಮತ್ತು ರಕ್ತಚಂದನ ಅಕ್ರಮ ಸಾಗಾಣಿಕೆಗೆ ಕೊಡಲಿಪೆಟ್ಟು ಬಿದ್ದಹಾಗೆ ಆಗಿದೆ. ಈ ಹಿಂದೆಯೂ ಸಿರಾ ಗೇಟ್ ಬಳಿ ರಿಯಾಜ್ ಪೊಲೀಸ್ರ ಬಲೆಗೆ ಬಿದ್ದಿದ್ದ. ಆದ್ರೆ ಜಾಮೀನು ಪಡೆದು ಹೊರಗೆ ಬಂದ ನಂತ್ರ ಮತ್ತೆ ತನ್ನ ಜಾಲವನ್ನ ವಿಸ್ತರಿಸಿದ್ದ. ಆದ್ರೆ ಈ ಸಾರಿ ಪೊಲೀಸ್ರು ಅಷ್ಟು ಈಸಿಯಾಗಿ ಇವನನ್ನ ಕಾನೂನಿನಿಂದ ನುಣುಚಿಕೊಂಡು ಹೋಗೋದಕ್ಕೆ ಬಿಡೋದಿಲ್ಲ. ಯಾಕಂದ್ರೆ ಇವರಿಬ್ಬರನ್ನ ಹೊರಗಡೆ ಇರೋದಕ್ಕೆ ಬಿಟ್ರೆ ವೀರಪ್ಪನ್ ನನ್ನ ಮೀರಿಸೋ ಅಂತಹ ಕ್ರೂರಿಯಾಗ್ತಾರೆ. ಹೀಗಾಗಿ ಪೊಲೀಸ್ರು ಇವರನ್ನ ಈಗಲೇ ಚಿವುಟಿ ಹಾಕೋದಕ್ಕೆ ರೆಡಿಯಾಗಿದ್ದಾರೆ.ಬೆಂಗಳೂರು ಪೊಲೀಸ್ರು ಕ್ರಿಮಿನಗಳ ಪಾಲಿಗೆ ಯಾವತ್ತಿದ್ರು ಸಿಂಹಸ್ವಪ್ನವೆ. ಕ್ರಿಮಿನಲ್ ಗಳು ಅದೆಷ್ಟೇ ಬುದ್ಧಿವಂತರಾದ್ರು ಪೊಲೀಸ್ರು ಒಂದಲ್ಲಾ ಒಂದು ದಿನ ಖಾಕಿ ಮುಂದೆ ಮಂಡಿಯೂರೋ ಹಾಗೆ ಮಾಡದೇ ಇದ್ರೆ ಅವ್ರು ಬೆಂಗಳೂರು ಕಾಪ್ ಗಳೇ ಅಲ್ಲ. ಇವರಿಬ್ಬರು ತಮ್ಮದೇ ಕೋಟೆ ಕಟ್ಕೊಂಡು ನಾವೇ ಈ ಊರಿಗೆ ರಾಜರು ಅಂತ ಮೆರಿತಾ ಇದ್ರು. ಆದ್ರೆ ಪೊಲೀಸ್ರು ಅವ್ರ ಹಗಲುಗನಸನ್ನ ನುಚ್ಚು ನೂರು ಮಾಡಿ ಜೈಲಿಗೆ ಮುದ್ದೆ ಮುರಿಯೋದಕ್ಕೆ ಕಳುಹಿಸಿದ್ದಾರೆ.

LEAVE A REPLY

Please enter your comment!
Please enter your name here