ಕನ್ನಡದ ನಟ ಸಾರ್ವಭೌಮ, ವರನಟ, ಕನ್ನಡದ ಮೇರು ನಟ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿರುವ ಕನ್ನಡದ ಕಣ್ಮಣಿ ಡಾ.ರಾಜ್ ಕುಮಾರ್ ಅವರು ನಮ್ಮೆಲ್ಲರನ್ನು ಅಗಲಿ ಇಂದಿಗೆ 12 ವರ್ಷ ಕಳೆದಿದೆ. ಡಾ.ರಾಜ್ ಕುಮಾರ್ ಅವರ ಪವಿತ್ರ ಸಮಾಧಿ ಇರುವ ಸ್ಥಳ ಕಂಠೀರವ ಸ್ಟುಡಿಯೋದಲ್ಲಿ, ಅವರ ಸ್ಮಾರಕಕ್ಕೆ ಡಾ.ರಾಜ್ ಕುಟುಂಬದವರು ಹಾಗೂ ಲಕ್ಷಾಂತರ ಅಭಿಮಾನಿಗಳು ನಮನ ಸಲ್ಲಿಸಲಿದ್ದಾರೆ…
ಏಪ್ರಿಲ್ 12 ,2006
ಕನ್ನಡಿಗರ ಪಾಲಿಗೆ ಕರಾಳ ದಿನ. ಅಂದು ಕನ್ನಡಿಗರ ಕಣ್ಮಣಿ, ಪದ್ಮಭೂಷಣ ಡಾ.ರಾಜಕುಮಾರ್ ನಮ್ಮನ್ನು ಅಗಲಿದ ದಿನ. ಅಂದು ಮಧ್ಯಾಹ್ನ 1.30ರ ಸುಮಾರಿಗೆ ಮನೆಯಲ್ಲಿ ಅಣ್ಣಾವ್ರಿಗೆ ಹೃದಯಾಘಾತವಾಗಿತ್ತು. ತತಕ್ಷಣ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಟಸಾರ್ವಭೌಮನನ್ನು ತಪಾಸಣೆ ನಡೆಸಿದ ವೈದ್ಯರಿಗೆ ಶಾಕ್ ಕಾದಿತ್ತು.ಏಕೆಂದ್ರೆ, ಅಷ್ಟರಲ್ಲಾಗಲೇ ಮೇರು ನಟನ ಪ್ರಾಣ ಪಕ್ಷಿ ಹಾರಿಹೋಗಿತ್ತು…
ರಸಿಕರ ರಾಜನ ವಿಧಿವಶ ಸುದ್ದಿ ಕಾಳ್ಗಿಚ್ಚಿಂತೆ ಹರಡುತ್ತಿದ್ದಂತೆ ಇಡಿ ಬೆಂಗಳೂರಿಗೆ ಬೆಂಗಳೂರೇ ಸ್ತಬ್ಧ. ಡಾ.ರಾಜ್ ಅವರ ಸ್ವ-ಇಚ್ಛೆಯಂತೆ, ಮರಣೋತ್ತರವಾಗಿ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಯಿತು. ಮೃತರ ಪಾರ್ಥಿವ ಶರೀರವನ್ನು ಅಭಿಮಾನಿಗಳ, ಬಂಧುಮಿತ್ರರ ದರ್ಶನಕ್ಕಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಡಲಾಗಿತ್ತು. ಅಪಾರ ಸಂಖ್ಯಯ ಜನಸ್ತೋಮ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿತ್ತು. ಏಪ್ರಿಲ್ 13ರಂದು ಕಂಠೀರವ ಸ್ಟುಡಿಯೋ ಆವರಣದಲ್ಲಿ ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಅಣ್ಣಾವ್ರ ಅಂತ್ಯ ಸಂಸ್ಕಾರ ನೆರವೇರಿತು…
ಆ ಮರೆಯಲಾಗದ ಕರಾಳ ದಿನಗಳು ಘಟಿಸಿ ಈಗ 12 ವರ್ಷಗಳು ಗತಿಸಿವೆ. ಇಂದು ಕರ್ನಾಟಕ ರತ್ನನ ಪುಣ್ಯಸ್ಮರಣೆ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಠೀರವ ಸ್ಟುಡಿಯೋದಲ್ಲಿರೋ ಡಾ.ರಾಜ್ ಕುಮಾರ್ ಸ್ಮಾರಕದಲ್ಲಿ ಅಭಿಮಾನಿಗಳು ಪೂಜೆ-ಕೈಂಕರ್ಯಗಳು ನೆರವೇರುತ್ತವೆ. ರಾಜ್ ಕುಟುಂಬ ಸದಸ್ಯರು ಸಮಾಧಿಗೆ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ…
ರಾಜ್ಯದ ಮೂಲೆ ಮೂಲೆಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಕಂಠೀರವ ಸ್ಟೂಡಿಯೋ ಬಳಿ ಜಮಾಯಿಸಲಿದ್ದಾರೆ.. ಅದೇನೆ ಇದ್ದರೂ ಕನ್ನಡಿಗರ ಆರಾಧ್ಯ ದೈವ.. ಕನ್ನಡದ ಅಪ್ರತಿಮ ಈ ಕಲಾಸೇವಕ, ಬೌದ್ದಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವ್ರ ನೆನಪುಗಳು ಎಂದಿಗೂ ಅಜರಾಮರ…