Home District ಉಪಚುನಾವಣೆಯ ಬಳಿಕ ರಾಜ್ಯ ನಾಯಕರಿಗೆ ನಿಂತ ನೆಲವೇ ಕುಸಿಯುವ ಭೀತಿ…!! ಮೈತ್ರಿ ಪಕ್ಷಗಳಲ್ಲಿ ಬದಲಾಗಿ ಹೋಗಲಿದೆ...

ಉಪಚುನಾವಣೆಯ ಬಳಿಕ ರಾಜ್ಯ ನಾಯಕರಿಗೆ ನಿಂತ ನೆಲವೇ ಕುಸಿಯುವ ಭೀತಿ…!! ಮೈತ್ರಿ ಪಕ್ಷಗಳಲ್ಲಿ ಬದಲಾಗಿ ಹೋಗಲಿದೆ ಮುಂದಿನ ಚುನಾವಣೆಯ ರಣನೀತಿ…

713
0
SHARE

ತೀವ್ರ ಕುತೂಹಲ ಕೆರಳಿಸಿರುವ ಐದು ಕ್ಷೇತ್ರಗಳ ಉಪ ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಮತ್ತೂಂದು ಸುತ್ತಿನ “ಧ್ರುವೀಕರಣ’ ನಡೆಯಲಿದೆಯಾ? ಇಂಥದ್ದೊಂದು ಚರ್ಚೆ ಮೂರೂ ಪಕ್ಷದ ಆಂತರಿಕ ವಲಯದಲ್ಲಿ ನಡೆಯುತ್ತಿದೆ. ಉಪ ಚುನಾವಣೆ ಫ‌ಲಿತಾಂಶದ ಮೇಲೆ ಇದು ನಿರ್ಧಾರವಾಗಲಿದೆ. ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭೆ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಫ‌ಲಿತಾಂಶ ಈ ಅಚ್ಚರಿಯ ಬೆಳವಣಿಗೆಗೆ ಕಾರಣವಾಗಲಿದೆ. ಸಮ್ಮಿಶ್ರ ಸರ್ಕಾರದ ಭವಿಷ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.ಮಂಡ್ಯ ಹಾಗೂ ರಾಮನಗರ ಕ್ಷೇತ್ರದ ಚುನಾವಣೆ ಫ‌ಲಿತಾಂಶದ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ.

ಒಂದೊಮ್ಮೆ ಬಳ್ಳಾರಿ, ಶಿವಮೊಗ್ಗ, ಜಮಖಂಡಿ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟಕ್ಕೆ ಮತದಾರರ ಒಪ್ಪಿಗೆಯಿಲ್ಲ ಎಂಬ ಸಂದೇಶ ರವಾನೆಯಾಗಲಿದೆ.. ಮಾತ್ರವಲ್ಲ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಿಗೆ ಹೋಗುವ “ಕನಸು’ಭಗ್ನವಾಗಿ ಪ್ರತ್ಯೇಕವಾಗಿ ಸ್ಪರ್ಧೆಗಿಳಿಯಲಿದೆ. ಮತ್ತೂಂದೆಡೆ ಸ್ಥಗಿತಗೊಂಡಿರುವ ಆಪರೇಷನ್‌ ಕಮಲ ಮತ್ತೆ ಪ್ರಾರಂಭವಾಗಿ ಸರ್ಕಾರದ ಅಸ್ತಿತ್ವಕ್ಕೆ ಸಂಚಕಾರ ತಂದೊಡ್ಡಬಹುದು ಎಂದು ಹೇಳಲಾಗುತ್ತಿದೆ. ಮೂರೂ ಕ್ಷೇತ್ರಗಳು ಕಾಂಗ್ರೆಸ್‌-ಜೆಡಿಎಸ್‌ ಪಾಲಾದರೆ ಬಿಜೆಪಿಯ ರಾಜ್ಯ ನಾಯಕತ್ವಕ್ಕೆ ಸಂಚಕಾರ ಒದಗುವ ಸಾಧ್ಯತೆ ಇದೆ. ಹೊಸ ನಾಯಕತ್ವದಡಿ ಲೋಕಸಭಾ ಚುನಾವಣೆ ಎದುರಿಸುವ ಲೆಕ್ಕಾಚಾರ ಬಿಜೆಪಿ ದೆಹಲಿ ನಾಯಕರ ಮಟ್ಟದಲ್ಲಿ ನಡೆಯುತ್ತಿದೆ.

ಶಿವಮೊಗ್ಗದಲ್ಲಿ ಈಡಿಗ, ಮುಸ್ಲಿಂ, ದಲಿತ ಮತಗಳ ಕ್ರೊಢೀಕರಣ, ಬಳ್ಳಾರಿಯಲ್ಲಿ ಪರಿಶಿಷ್ಟ ಜಾತಿ, ಮುಸ್ಲಿಂ ಮತ ಹಾಗೂ ಜಮಖಂಡಿಯಲ್ಲಿ ಲಿಂಗಾಯಿತ ಹಾಗೂ ಕುರುಬ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತಿದೆ.. ಈ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಮಚ ಸಾರಾಸಗಟಾಗಿ ಬಂದರೆ ಮಾತ್ರ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವು ಸಾಧ್ಯ ಎಂಬ ಲೆಕ್ಕಾಚಾರದವಿದೆ. ಇದೇ ಕಾರಣಕ್ಕೆ ಕ್ಷೇತ್ರಕ್ಕೊಬ್ಬ ಸಚಿವರು, ಸಮುದಾಯವಾರು ಮುಖಂಡರಿಗೆ ಹೊಣೆಗಾರಿಕೆ ನೀಡಲಾಗಿದೆ. ಆದರೂ ಮೂರೂ ಕ್ಷೇತ್ರದಲ್ಲಿ ಮೈತ್ರಿಕೂಟದ ಪರ “ಹವಾ’ ಇಲ್ಲ ಅನ್ನೋದಂತು ಮಾತ್ರ ಸ್ಪಷ್ಟವಾಗಿದೆ..

ಕಾಂಗ್ರೆಸ್‌ ಗೆದ್ದಿದ್ದ ಕ್ಷೇತ್ರದಲ್ಲಿ ಹಿನ್ನಡೆಯಾದರೆ ಕಷ್ಟ ಎಂಬ ಕಾರಣಕ್ಕೆ ಸ್ಥಳೀಯ ನಾಯಕರ ಜತೆ ಮಾತುಕತೆ ನಡೆಸಿ ಹೋಗಿದ್ದಾರೆ. ಇದರ ನಡುವೆ ಬಳ್ಳಾರಿ ಉಸ್ತುವಾರಿ ವಹಿಸಿಕೊಂಡಿರುವ ಡಿ.ಕೆ.ಶಿವಕುಮಾರ್‌ಗೆ ಯಶಸ್ಸು ಸಿಗಬಾರದೆಂದು ಕೆಲ ಕಾಂಗ್ರೆಸ್‌ ನಾಯಕರೇ “ಕೈ’ಕೊಡುವ ತಂತ್ರ ರೂಪಿಸಿದ್ದಾರೆ ಎನ್ನಲಾಗಿದ್ದು, ಇದರಿಂದ ಎಚ್ಚೆತ್ತು ಮತ್ತೂಬ್ಬ ಶಾಸಕರಿಗೂ ಕೂಡ್ಲಿಗಿ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ.ಈಗ ಕರ್ನಾಟಕದ ಪ್ರಬುದ್ಧ ಮತದಾರರ ಮುಂದಿರುವ ಬಹುದೊಡ್ಡ ಪ್ರಶ್ನೆ ಅಂದರೆ ಸದ್ಯ ರಾಜಕೀಯ ವಲಯದಲ್ಲಿನ ಈ ಎಲ್ಲ ಸೋಲು-ಗೆಲುವಿನ ಲೆಕ್ಕಾಚಾರಗಳು ಮುಂದಿನ 2019ರ ಮಹಾ ಸಮರಕ್ಕೆ ಮುನ್ನುಡಿ ಬರೆಯಬಹುದಾ ಎನ್ನುವುದು. ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಈ ಬಾರಿಯ ಉಪ ಚುನಾವಣೆ ಫ‌ಲಿತಾಂಶ ಪ್ರಭಾವ ಬೀರುತ್ತದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಆ ಕಾರಣಕ್ಕೆ ಎಲ್ಲರ ಕಣ್ಣು ಮುಂದೆ ಬರಲಿರೋ ಉಪ ಚುನಾವಣೆಯ ಫಲಿತಾಂಶದ ಮೇಲೆ ನೆಟ್ಟಿದೆ. ಮಾತ್ರವಲ್ಲ ಮುಂದಿನ 5 ವರ್ಷದ ಭವಿಷ್ಯಕೂಡ ಇದ್ರಲ್ಲೇ  ಅಡಗಿದೆ.

ಕರ್ನಾಟಕದಲ್ಲಿ ನಡೆಯಲಿರುವ ಉಪ ಚುನಾವಣೆಯ ಅಂಕಿ ಸಂಖ್ಯೆಗಳ ಫ‌ಲಿತಾಂಶ ಕೇಂದ್ರ ಸರಕಾರದ ಮೇಲಾಗಲಿ; ರಾಜ್ಯ ಸರಕಾರದ ಮೇಲಾಗಲಿ ನೇರವಾಗಿ ಯಾವ ಪರಿಣಾಮವೂ ಬೀರದು. ಆದರೂ ಇಂದಿನ-ಮುಂದಿನ ಭವಿಷ್ಯದ ದೃಷ್ಟಿಯಿಂದ ಪಕ್ಷಗಳು ಮಿನಿ ಸಮರ ಎಂದು ಭಾವಿಸಿಕೊಂಡು ಕಣಕ್ಕೆ ಇಳಿದಿವೆ. ಕರ್ನಾಟಕವನ್ನೇ ಸೀಮಿತವಾಗಿಟ್ಟುಕೊಂಡು ಹೇಳುವುದಾದರೆ; ಈ ಉಪ ಚುನಾವಣೆಯ ಫ‌ಲಿತಾಂಶ ಆಡಳಿತರೂಢ  ಮೈತ್ರಿ ಸರಕಾರದ ಪವಿತ್ರ ಅಥವಾ ಅಪವಿತ್ರ ಮೈತ್ರಿಯ ಅಗ್ನಿ ಪರೀಕ್ಷೆಯಂತೆ ಆಗಿದೆ.

ಅದೇ ರೀತಿ ಕೇಂದ್ರದ ಮೋದಿ ಸರಕಾರ 2019ರಲ್ಲಿ ಮಹಾ ಚುನಾವಣೆ ಎದುರಿಸಬೇಕಾದ ಹೊಸ್ತಿಲಲ್ಲಿರುವ ಕಾರಣ ಈ ಉಪಚುನಾವಣೆಯ ಫ‌ಲಿತಾಂಶ ಮುಂದೆ ಕರ್ನಾಟಕ ಹಾಗೂ ರಾಷ್ಟ್ರ ವ್ಯಾಪಿಯಾಗಿ ಯಾವ ರೀತಿಯಲ್ಲಿ ತಂತ್ರಗಾರಿಕೆಯನ್ನು ಹೆಣೆಯಬೇಕಾಗುತ್ತದೆ ಅನ್ನುವುದಕ್ಕೆ ಮೊದಲ ಪಾಠವೂ ಆಗಬಹುದು, ಮಾತ್ರವಲ್ಲ ನೈತಿಕ ಸ್ಥೈರ್ಯ-ಧೈರ್ಯ ಹೆಚ್ಚಿಸಬಲ್ಲ ಅರ್ಥಾತ್‌ ಕುಂದಿಸಬಲ್ಲ ಸೋಲು ಗೆಲುವಿನ ಲೆಕ್ಕಚಾರವೂ ಆಗುವುದರಲ್ಲಿ ಸಂದೇಹವಿಲ್ಲ.ಅಧಿಕಾರರೂಢ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳಿಗೆ ಗೌರವದ ಪ್ರಶ್ನೆ; ಅದಕ್ಕಿಂತ ಮುಖ್ಯವಾಗಿ ಅಧಿಕಾರ ಉಳಿಸಿಕೊಳ್ಳುವ ಅಭಿಲಾಷೆಯೂ ಹೌದು. ಹಾಗೂ ಹೀಗೂ ಮನಸ್ಸಿಲ್ಲದ ಮನಸ್ಸಿನಲ್ಲಿ ಸೀಟು ಹಂಚಿಕೊಳ್ಳುವ ನೆಂಟಸ್ಥಿಕೆ ಏರ್ಪಾಡು ಮೂಡಿಬಂದಿದೆ. ಆದರೂ ಒಂದತೂ ಸತ್ಯ.

ಈ ಸೀಟು ಹಂಚಿಕೊಳ್ಳುವ ನೆಂಟಸ್ಥಿಕೆಯಲ್ಲಿ ದೊಡ್ಡ ಮಟ್ಟದ ನಷ್ಟ ಅನುಭವಿಸಿದ್ದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಅನ್ನುವುದರಲ್ಲಿ ಎರಡು ಮಾತಿಲ್ಲ. 2014ರ ಲೋಕಸಭಾ ಚುನಾವಣಾ ಫ‌ಲಿತಾಂಶದ ಅಂಕಿಸಂಖ್ಯೆ ನೋಡಿದಾಗ ಶಿವಮೊಗ್ಗ ಕ್ಷೇತ್ರವನ್ನು ಕಾಂಗ್ರೆಸ್‌ ಉಳಿಸಿಕೊಳ್ಳಬೇಕಾಗಿತ್ತು . ಆದರು ಸಹ ಉದಾರ ಮನಸ್ಸಿನಿಂದ ತಮ್ಮ ಗೆಳೆಯರಿಗೆ ದಾನ ಮಾಡಿದ್ದಾರೆ. ಸೋ ಇದು ಕಾಂಗ್ರೆಸ್ ಅಸಾಹಯಕತೆಯು ಹೋದು ಅನಿವಾರ್ಯತೆಯೂ ಹೌದು. ಒಟ್ಟಿನಲ್ಲಿ ಬಿಜೆಪಿಯನ್ನ ಸೋಲಿಸಲು ಕಾಂಗ್ರೆಸ್ ಯಾವ ಮಟ್ಟಕ್ಕಾದ್ರು ಸೈ, ಯಾರ ಮೈತ್ರಿಯಾದ್ರು ಜೈ ಅನ್ನೋದು ಇಲ್ಲಿ ಕಾಣುತ್ತಿರೋ ಸ್ಪಷ್ಟ ಸಂದೇಶ.ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಕೈಹಿಡಿದ ಕ್ಷೇತ್ರ ಜಮಖಂಡಿ.

ಶಾಸಕರ ಅಕಾಲಿಕ ನಿಧನದಿಂದ ಉಪ ಚುನಾವಣೆ ನಡೆಯಬೇಕಾದ ಅನಿವಾರ್ಯತೆ ಇದೆ ಅಲ್ಲದೆ ಅನುಕಂಪದ ಅಲೆ ನಮ್ಮ ಪರವಾಗಿದೆ ಅನ್ನುವ ಬಲವಾದ ನಂಬಿಕೆ ಕಾಂಗ್ರೆಸ್‌ ಪಕ್ಷದವರದ್ದು. ಆದರೆ ಬಿಜೆಪಿಯ ಲೆಕ್ಕಾಚಾರವೇ ಬೇರೆ. ಕಳೆದ ಬಾರಿ ತಾವು ಸೋತಿದ್ದು ಕೇವಲ ಹತ್ತಿರ 2 ಸಾವಿರ ಮತಗಳ ಅಂತರದಿಂದ ಮಾತ್ರವಲ್ಲ ತಮ್ಮ ಪಕ್ಷದ ಇನ್ನೊಬ್ಬ ಅಭ್ಯರ್ಥಿ ಭಿನ್ನಮತದಿಂದ ಸ್ಪರ್ಧಿಸಿದ ಕಾರಣ ಅವರು ಸರಿಸುಮಾರು 20 ಸಾವಿರ ಮತಗಳಿಸಿದ ಕಾರಣ ಸೋಲು ಕಾಣಬೇಕಾಯಿತು. ಆದರೆ ಈ ಬಾರಿ ಆ ಮತಗಳು ನಮ್ಮ ಪಾಲಿಗೆ ಒಲಿದು ಬಂದರೆ ಸುಲಭದ ಜಯ ನಮ್ಮದು ಎಂಬ ಲೆಕ್ಕಾಚಾರ ಬಿಜೆಪಿಗರದ್ದು. ಹಾಗಾಗಿ ಜಮಖಂಡಿ ಸಾಕಷ್ಟು ಕುತೂಹಲ ಮೂಡಿಸಿದೆ.

ಈ ಚುನಾವಣೆ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಲೋಕಸಭಾ ಉಪ ಚುಣಾವಣೆ ಫ‌ಲಿತಾಂಶ ಪ್ರಭಾವ ಬೀರುತ್ತದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ಮಾತು ಸತ್ಯ, ಬಿಜೆಪಿಗೆ ಕನಿಷ್ಟ ಪಕ್ಷ ಮೂರರಲ್ಲಿ ಎರಡು ಲೋಕಸಭಾ ಸ್ಥಾನ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಬಹು ಮುಖ್ಯವಾಗಿ ಶಿವಮೊಗ್ಗ ಮತ್ತು ಬಳ್ಳಾರಿ ಕ್ಷೇತ್ರ. ಇದು ಮುಂದಿನ ಲೋಕಸಭಾ ಸಮರಕ್ಕೆ ಇನ್ನೂ ಹೆಚ್ಚಿನ ನೈತಿಕ ಬಲ ಮತ್ತು ಆತ್ಮಸ್ಥೈರ್ಯ ನೀಡುವುದರಲ್ಲಿ ಸಂಶಯವಿಲ್ಲ. ಒಂದು ವೇಳೆ ಇದನ್ನು ಕಳೆದುಕೊಂಡರೆ ಬಿಜೆಪಿಯ ಸಂಘಟನಾ ಶಕ್ತಿಗೆ ಕರ್ನಾಟಕದಲ್ಲಿ ಮೊದಲ ಸೋಲು ಎಂಬ ಸಂದೇಶ ಬಿಜೆಪಿಯ ಹೈಕಮಾಂಡಿಗೆ ರವಾನೆಯಾಗುತ್ತದೆ.

ಗಳಿಸಿಕೊಂಡ ಸ್ಥಾನ ಕಳೆದುಕೊಳ್ಳುವುದೆಂದರೆ ಯಡಿಯೂರಪ್ಪನವರ ಪಾಲಿಗೆ ಭಾರಿ ಹಿನ್ನೆಡೆಯೂ ಹೌದು, ಮಾತ್ರವಲ್ಲ ಕಾಂಗ್ರೆಸ್‌ ಜೆಡಿಎಸ್‌ ಪಕ್ಷಗಳಿಗೆ ಇನ್ನೊಂದು ಸಂದೇಶ ರವಾನೆಯಾಗುತ್ತದೆ ಅದೇನೆಂದರೆ “ಬಿಜೆಪಿ ಸೋಲಿಸಲು ಇರುವ ಏಕ ಮಾತ್ರ ಅಸ್ತ್ರವೆಂದರೆ ಮೈತ್ರಿಕೂಟ ಅದನ್ನೆ ಸಧ್ಯ ಪ್ರಬಲವಾಗಿ ಬಳಸುತ್ತಿದೆ. ಇದು ಎಷ್ಟರ ಮಟ್ಟಿಗೆ ಫಲಕೊಡುತ್ತೋ ಕಾದು ನೋಡಬೇಕಷ್ಟೆ.ಈ ಪ್ರಯೋಗ ಕರ್ನಾಟಕದಲ್ಲಿ ಯಶಸ್ಸು ಕಂಡಿದೆ ಹಾಗಾಗಿ ರಾಷ್ಟ್ರಮಟ್ಟಕ್ಕೂ ವಿಸ್ತರಿಸಬಹುದೆಂಬ ಸಂದೇಶ ದೇವೇಗೌಡರಿಂದಲೇ ರವಾನೆಯಾಗುವುದರಲ್ಲಿ ಸಂದೇಹವಿಲ್ಲ. ಕಾಂಗ್ರೆಸ್‌ ಮಟ್ಟಿಗೆ ಈ ಫ‌ಲಿತಾಂಶ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಅನ್ನುವುದು ಇನ್ನೊಂದು ಸೋಜಿಗ. ಒಂದು ವೇಳೆ ಕಾಂಗ್ರೆಸ್‌ ಸ್ಪರ್ಧಿಸಿದ ಬಳ್ಳಾರಿ, ಜಮಖಂಡಿ ಈ ಎರಡು ಕ್ಷೇತ್ರಗಳಲ್ಲಿ ಸೋಲು ಕಂಡರೆ ಪಕ್ಷದ ಒಳಗೆ ಭಿನ್ನಮತ ಇನ್ನಷ್ಟು ತಾರಕಕ್ಕೇರಬಹುದು. ಬಹುಮುಖ್ಯವಾಗಿ ಕಾರ್ಯಕರ್ತರನ್ನು ಸಮಾಧಾನಪಡಿಸಲು ನಾಯಕರು ಹರಸಾಹಸ ಪಡಬೇಕಾದೀತು. ಈ ಮೈತ್ರಿ ಸರಕಾರವೇ ಕಾಂಗ್ರೆಸ್‌ ಪಾಲಿಗೆ ಮುಳುವಾಗಿದೆ ಎಂಬ ಸಂದೇಶ ಪಕ್ಷದ ಒಳಗೇನೆ ಚರ್ಚೆಯಾಗಬಹುದು.

ಜೆಡಿಎಸ್‌ನ ಮಟ್ಟಿಗೆ ಈ ಚುನಾವಣೆ ಫ‌ಲಿತಾಂಶ ಅಷ್ಟೇನು ಪ್ರಭಾವ ಬೀರುವುದಿಲ್ಲ. ಅದಕ್ಕೆ ಮುಖ್ಯ ಕಾರಣ ಕರ್ನಾಟಕದಲ್ಲಿ ಅಧಿಕಾರ ಹಿಡಿದಿರುವುದೇ ಕೇವಲ 37 ಶಾಸಕರ ಬಲದಿಂದ ಅದು ಬಹುಮುಖ್ಯವಾಗಿ ಒಕ್ಕಲಿಗರ ಪ್ರಾಬಲ್ಯ ಕ್ಷೇತ್ರದಲ್ಲಿ; ಮಾತ್ರವಲ್ಲ; ಗೆಲುವಿನ ಲೆಕ್ಕಾಚಾರದಲ್ಲಿ ಒಂದು ಹೆಜ್ಜೆ ಮುಂದೆ ನಿಲ್ಲಬಹುದಾದ ಪಕ್ಷವೆಂದೇ ಇದಾಗಲೇ ಬಿಂಬಿತವಾಗಿದೆ. ಹಾಗಾಗಿ ಜೆಡಿಎಸ್‌ಗೆ ಗಳಿಸಿಕೊಳ್ಳುವುದು ಬಿಟ್ಟರೆ ಕಳೆದುಕೊಳ್ಳಲು ಏನೂ ಇಲ್ಲ. ಒಟ್ಟಿನಲ್ಲಿ ಈ ಬಾರಿಯ ಉಪ ಚುನಾವಣೆ ಯಾವುದೇ ಪ್ರಣಾಳಿಕೆ; ಘೋಷಣೆ; ತತ್ವ ಸಿದ್ಧಾಂತಗಳಿಲ್ಲದ; ಉಪಚುನಾವಣೆ ಅನ್ನುವುದನ್ನು ಎಲ್ಲರು ಒಪ್ಪಿಕೊಳ್ಳಬೇಕು.

ಇಲ್ಲಿ ನಡೆಯುವ ಪ್ರಮುಖ ಆಟವೆಂದರೆ ಜಾತಿ-ಹಣ, ವೈಯಕ್ತಿಕ ಟೀಕೆ, ಪ್ರಾದೇಶಿಕತೆಯ ವಿಚಾರ ಬಿಟ್ಟರೆ ರಾಷ್ಟ್ರೀಯ ವಿಚಾರಗಳಾಗಲಿ; ರಾಷ್ಟ್ರ ನಾಯಕರುಗಳ ಹೆಸರಾಗಲಿ ಅಷ್ಟೇನು ಪ್ರಚಾರಕ್ಕೆ ಬಾರೋದಿಲ್ಲ. ಈ ವಿಚಾರದಲ್ಲಿ ಯಾರು ಹೆಚ್ಚು ಸರ್ಕಸ್ ಮಾಡ್ತಾರೋ ಅವರದ್ದೇ ಜಯಭೇರಿ. ಈ ನಿಟ್ಟಿನಲ್ಲಿ ಎಲ್ಲಾ ನಾಯಕರು ಟೊಂಕ ಕಟ್ಟಿ ನಿಂತಿದ್ದಾರೆ. ಈ ಉಪ ಸಮರದಲ್ಲಿ ಯಾರು ಗೆಲ್ತಾರೆ. ವಿಜಯ ಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ, ಮುಂದಿನ ಲೋಕಸಭಾ ಚುನಾವಣೆಯ ಲೆಕ್ಕಾಚಾರ ಹೇಗೆ ಸಾಗುತ್ತೆ ಅನ್ನೋದಕ್ಕೆ ಇನ್ನೇನು ಜೆಸ್ಟ್ ಒಂದು ವಾರದಲ್ಲಿ ಉತ್ತರ ಸಿಗುತ್ತೆ ಅಲ್ಲಿವರಗೆ ವೇಯ್ಟ್ ಅಂಡ್ ವಾಚ್….

LEAVE A REPLY

Please enter your comment!
Please enter your name here