Home Crime ಏಕಾಂತ ಬಯಸಿ ಬಂದಿದ್ದರು ಅಲ್ಲಿಗೆ ಪ್ರೇಮಿಗಳು..! ಪ್ರೇಮಿಯ ಎದುರೇ ನಡೆಯಿತು ಸರಣಿ ಅತ್ಯಾಚಾರ..! ಒಬ್ಬಂಟಿ ಯುವತಿಯ...

ಏಕಾಂತ ಬಯಸಿ ಬಂದಿದ್ದರು ಅಲ್ಲಿಗೆ ಪ್ರೇಮಿಗಳು..! ಪ್ರೇಮಿಯ ಎದುರೇ ನಡೆಯಿತು ಸರಣಿ ಅತ್ಯಾಚಾರ..! ಒಬ್ಬಂಟಿ ಯುವತಿಯ ಕನ್ಯತ್ವ ಕಡಲಲ್ಲಿ ಕಳೆದು ಹೋಗಿತ್ತು ..!

3113
0
SHARE

ಕರಾವಳಿಯ ಕಡಲ ತೀರಗಳಂದ್ರೆ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣ. ಮಂಗಳೂರಿಗೆ ದೇಶ- ವಿದೇಶಗಳಿಂದ ಯಾರೇ ಬರಲಿ, ಸಮುದ್ರ ತೀರಕ್ಕೆ ಕಣ್ಣಾಡಿಸದೆ ತಿರುಗಿ ಹೋಗುವುದಿಲ್ಲ. ಯಾಕಂದ್ರೆ, ಮಂಗಳೂರಿನ ಬೀಚ್ ಗಳಷ್ಟೇ ಪ್ರವಾಸಿಗರಿಗೆ ಕಿಚ್ಚು ಹಚ್ಚಿಸೋದು ಅಲ್ಲಿನ ಮರಳ ರಾಶಿಯ ಸಮುದ್ರ ದಂಡೆ..

ಆದರೆ, ಇಂಥ ಸುಂದರ ತೀರದಲ್ಲಿ ಆಗಬಾರದ ಅನಾಚಾರ ನಡೆದುಹೋಗಿದ್ದು, ಕರಾವಳಿಯ ಕಡಲ ನಗರಿಗೇ ಕೆಟ್ಟ ಹೆಸರು ಅಂಟಿಕೊಳ್ಳುವಂತಾಗಿದೆ. ಮೊನ್ನೆಯ ಗ್ಯಾಂಗ್ ರೇಪ್ ಪ್ರಕರಣವಂತೂ ಪ್ರವಾಸಿಗರನ್ನು ಮಾತ್ರವಲ್ಲ, ಇಡೀ ಕರಾವಳಿ ಜನರೇ ತಲೆತಗ್ಗಿಸುವಂತೆ ಮಾಡಿದೆ. ಪ್ರಶಾಂತ ಸಾಗರದ ಅಲೆಗಳ ಮಧ್ಯೆ ಯುವತಿಯ ಆಕ್ರಂದನ ಅರಣ್ಯ ರೋದನವಾಗಿ ಪರಿಣಮಿಸಿದೆ. ಆದರೆ, ವದಂತಿಯ ಬೆನ್ನು ಬಿದ್ದ ಪೊಲೀಸರೇ ಮುಚ್ಚಿ ಹೋಗುತ್ತಿದ್ದ ಪ್ರಕರಣವನ್ನು ಭೇದಿಸಿದ್ದು ನಿಜಕ್ಕೂ ಅಚ್ಚರಿಯ ಸಂಗತಿ…

ಪಣಂಬೂರು, ತಣ್ಣೀರುಬಾವಿ ಕಡಲ ಕಿನಾರೆಗಳಂತೂ ಪ್ರವಾಸಿ ಭೂಪಟದಲ್ಲಿ ಖ್ಯಾತಿ ಪಡೆದಿರೋ ಬೀಚ್ ಗಳು.. ಆದರೆ, ಇಂಥ ಒಂದೆರಡು ಜಾಗ ಬಿಟ್ಟರೆ ಮಂಗಳೂರಿನ ಬಹಳಷ್ಟು ಕಡೆ ಜಿಲ್ಲಾಡಳಿತದಿಂದ ಯಾವುದೇ ಭದ್ರತಾ ವ್ಯವಸ್ಥೆ ಇಲ್ಲ. ತೀರಕ್ಕೆ ಬರುವ ಯುವ ಜೋಡಿಗಳು ವಿಹರಿಸುತ್ತಾ ಹೋದರೆ, ಇದಕ್ಕಾಗೇ ಕಾದಿರುವ ಬೀದಿ ಕಾಮಣ್ಣರು ಇಲ್ಲಿನ ಬೀಚ್ ಗಳಲ್ಲಿದ್ದಾರೆ. ಮಂಗಳೂರಿನ ತೋಟಬೆಂಗ್ರೆ ಎನ್ನುವ ನಿರ್ಜನ ಪ್ರದೇಶ ಬೀಚ್ ಎಂಡ್ ಪಾಯಿಂಟ್ ನಲ್ಲಿ ನಡೆದಿರುವುದೇ ಈ ಗ್ಯಾಂಗ್ ರೇಪ್…

ಮಂಗಳೂರಿನ ತೋಟಬೆಂಗ್ರೆ ಅನ್ನುವ ಪ್ರದೇಶವೇ ನಿಗೂಢತೆಯನ್ನು ಕಟ್ಟಿಕೊಂಡ ಜಾಗ. ಒಂದ್ಕಡೆ ಸಮುದ್ರ, ಇನ್ನೊಂದ್ಕಡೆ ಫಲ್ಗುಣಿ ನದಿ.. ಮತ್ತೊಂದ್ಕಡೆ ಫಲ್ಗುಣಿ ಮತ್ತು ನೇತ್ರಾವತಿ ಜೊತೆಯಾಗಿ ಸಮುದ್ರ ಸೇರುತ್ತವೆ. ಇದೇ ಜಾಗದಲ್ಲಿ ಮಂಗಳೂರಿನ ಮೀನುಗಾರಿಕಾ ಧಕ್ಕೆಯ ಬೋಟ್ಗಳು ಸಮುದ್ರ ಸೇರುತ್ತವೆ. ಇಂಥದ್ದೇ ಜಾಗಕ್ಕೆ ಮೊನ್ನೆ ಬಿಹಾರ ಮೂಲದ ಯುವಕ ಮತ್ತು ಬಂಟ್ವಾಳದ ಹುಡುಗಿ ವಿಹಾರಕ್ಕಾಗಿ ಬಂದಿದ್ದರು. ಅಲ್ಲಿಗೆ ನೇರ ಬಸ್ ಸಂಪರ್ಕ ಇಲ್ಲದಿರುವುದರಿಂದ ಮೀನುಗಾರಿಕಾ ಬಂದರಿನಿಂದ ಪ್ರಯಾಣಿಕ ಬೋಟ್ ಮೂಲಕ ಈ ಎಂಡ್ ಪಾಯಿಂಟ್ ಗೆ ಬಂದಿದ್ದಾರೆ. ಹಾಡುಹಗಲೇ ಆಗಿದ್ದರಿಂದ ಸುಡು ಬಿಸಿಲ ಬೇಗೆಯನ್ನು ತಾಳಲಾರದೆ ಇಬ್ಬರೂ, ತಿರುಗಾಡುತ್ತಾ ನಿರ್ಜನ ಕಾಡಿನ ಪ್ರದೇಶಕ್ಕೆ ತೆರಳಿದ್ದರು.

ಹೀಗೆ ತೆರಳುತ್ತಿದ್ದಂತೇ ಅಲ್ಲಿಯೇ ಇದ್ದ ಸ್ಥಳೀಯ ಯುವಕರು ಇವರನ್ನು ಗಮನಿಸಿದ್ದಾರೆ. ಯುವಜೋಡಿ ನಿರ್ಜನ ಪ್ರದೇಶಕ್ಕೆ ತೆರಳಿದೊಡನೆ ಈ ಯುವಕರೂ ಅಲ್ಲಿಗೆ ತೆರಳಿದ್ದು, ಜೊತೆಗಿದ್ದ ಯುವಕನಿಗೆ ಎರಡೇಟು ಬಿಗಿದು ಮರಕ್ಕೆ ಕಟ್ಟಿ ಹಾಕಿದ್ದಾರೆ. ಆ ಬಳಿಕ ಸರಣಿಯಾಗಿ ಯುವತಿಯ ಮೇಲೆರಗಿದ್ದಾರೆ. ಯುವತಿಯ ಚೀರಾಟ, ಆಕ್ರಂದನಕ್ಕೆ ಅಲ್ಲಿ ಕಿವಿಯಾಗೋರು ಯಾರೂ ಇರಲಿಲ್ಲ. ಈ ಬಗ್ಗೆ ಯಾರಲ್ಲಾದರೂ ಬಾಯಿ ಬಿಟ್ಟರೆ, ಜೀವ ತೆಗೀತೇವೆ ಅಂತಾ ಬೆದರಿಕೆಯನ್ನೂ ಹಾಕಿದ್ದಾರೆ. ಅಚ್ಚರಿಯ ಸಂಗತಿ ಅಂದ್ರೆ, ಹೀಗೆ ಮುಗಿಬಿದ್ದವರಲ್ಲಿ ಮೂವರು ಅಪ್ರಾಪ್ತ ಕಾಲೇಜು ಹುಡುಗರು. ನವೆಂಬರ್ 18ರಂದು ನಡೆದುಹೋಗಿದ್ದ ಈ ಅಮಾನವೀಯ ಕೃತ್ಯ ಅಲ್ಲಿನ ಮರಳಿನ ದಂಡೆಯಲ್ಲೇ ಮುಚ್ಚಿಹೋಗುವುದರಲ್ಲಿತ್ತು.

ಆದರೆ, ಒಂದು ವಾರದ ನಂತ್ರ ಮಂಗಳೂರಿನ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ಯುವತಿ ಕೇಸ್ ದಾಖಲಿಸುವುದರೊಂದಿಗೆ ಮಂಗಳೂರಿನ ಕಡಲ ತೀರದಲ್ಲಿ ನಿರ್ಭಯಾ ಪ್ರಕರಣ ನಡೆದಿದ್ದು ಬಯಲಾಗಿತ್ತು.ಇಷ್ಟಕ್ಕೂ ಈ ತೋಟಬೆಂಗ್ರೆಗೆ ವೀಕೆಂಡ್, ಸಂಡೇಗಳಲ್ಲಿ ಬಹಳಷ್ಟು ಜನ ಬರುತ್ತಾರಂತೆ. ಕಾರು, ಬೈಕ್ ಗಳಲ್ಲಿ ಯುವ ಜೋಡಿಗಳು ಬಂದು ವಿಹರಿಸ್ಕೊಂಡು ಹೋಗ್ತಾರೆ. ಆದರೆ, ಈವರೆಗೆ ಇಂಥ ಅಮಾನವೀಯ ಕೃತ್ಯ ನಡೆದಿರಲಿಲ್ಲ ಎನ್ನುತ್ತಾರೆ ಅಲ್ಲಿನ ಸ್ಥಳೀಯರು. ಸಮುದ್ರ ದಂಡೆಯ ಮರಳ ರಾಶಿಯ ನಡುವೆ ಹುದುಗಿ ಹೋಗುತ್ತಿದ್ದ ನಿರ್ಭಯಾ ಪ್ರಕರಣ ಬಯಲಿಗೆ ಬಂದಿದ್ದೇ ರೋಚಕ ಸಂಗತಿ. ಯಾಕಂದ್ರೆ, ದುರುಳರ ಬೆದರಿಕೆಗೆ ಅಂಜಿದ್ದ ಯುವತಿ ಪೊಲೀಸ್ ದೂರು ಕೊಡೋಕು ಬಂದಿರಲಿಲ್ಲ. ಆದರೆ, ದುರುಳರ ದೌರ್ಭಾಗ್ಯವೋ ಏನೋ, ಯುವತಿಯ ಗ್ಯಾಂಗ್ ರೇಪ್ ವಿಷ್ಯ ಎರಡೇ ದಿನದಲ್ಲಿ ಗುಸು ಗುಸು ಆಗಿ ಪೊಲೀಸರ ಕಿವಿ ಮುಟ್ಟಿತ್ತು.

ಆವತ್ತು ದುರುಳರ ಕಬಂಧ ಬಾಹುಗಳಲ್ಲಿ ನಲುಗಿ ಹೋಗಿದ್ದ ಹೆಣ್ಮಗಳನ್ನು ಆವತ್ತೇ ಕೊಲ್ಲುವ ಬೆದರಿಕೆ ಹಾಕಿದ್ದರು. ಆದರೆ, ಕಾಡಿ ಬೇಡಿ ಪ್ರಾಣ ಉಳಿಸಿಕೊಂಡಿದ್ದ ಯುವತಿಯಲ್ಲಿ ಯಾರಲ್ಲೂ ಬಾಯಿ ಬಿಡಬೇಡ. ಪೊಲೀಸ್ ದೂರು ಏನಾದ್ರೂ ಕೊಡಲು ಹೋದ್ರೆ ಇಬ್ಬರನ್ನೂ ಮುಗಿಸಿ ಬಿಡ್ತೀವಿ ಅಂತಾ ಜೀವ ಬೆದರಿಕೆ ಹಾಕಿದ್ದರು. ಹೀಗಾಗಿ ಬಂದ ದಾರಿಯಲ್ಲೇ ಸೀದಾ ಹಿಂತಿರುಗಿದ್ದ ಹುಡುಗಿ ಮತ್ತು ಬಿಹಾರ ಮೂಲದ ಯುವಕ ನೇರವಾಗಿ ತಮ್ಮ ಗೂಡು ಸೇರಿದ್ದರು. ಆದರೆ, ಆರೋಪಿಗಳ ಪೈಕಿ ಒಂದಿಬ್ಬರು ಮರುದಿನವೂ ಯುವತಿಗೆ ಫೋನಾಯಿಸಿದ್ದಾರೆ. ಫೋನ್ ಮಾಡಿದ್ದಲ್ಲದೆ, ಮಾನಸಿಕ ಕಿರುಕುಳವನ್ನೂ ನೀಡಿದ್ದಾರೆ. ಇದರಿಂದ ಬೇಸತ್ತ ಹುಡುಗಿ ಬಂಟ್ವಾಳ ಠಾಣೆಯಲ್ಲಿ ದೂರು ಕೊಡಲು ಹೋಗಿದ್ದಳು.

ಆದರೆ, ಅಲ್ಲಿನ ಎಎಸ್ಐ ಒಬ್ಬರು ಯುವತಿಯ ದೂರನ್ನು ಆಲಿಸಿ, ಇದು ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ. ತೋಟಬೆಂಗ್ರೆ ಪಣಂಬೂರು ಠಾಣೆ ವ್ಯಾಪ್ತಿ ಆಗಿರೋದ್ರಿಂದ ಅಲ್ಲಿಯೇ ಹೋಗಿ ದೂರು ಕೊಡಿ ಎಂದು ಸಾಗಹಾಕಿದ್ದರು. ಇನ್ನು ಪಣಂಬೂರಿಗೆ ಯಾರು ಹೋಗುವುದು, ಸಾಯಲಿ ಬಿಡಿ ಎಂದು ಅಷ್ಟಕ್ಕೇ ಸುಮ್ಮನಾಗಿದ್ದಳು ಹೆಣ್ಮಗಳು. ಅಷ್ಟಕ್ಕೆ ಮರಳ ದಂಡೆಯ ಭಯಾನಕ ಸತ್ಯ ಅಲ್ಲಿಯೇ ಮುಚ್ಚಿ ಹೋಗುವ ಎಲ್ಲ ಲಕ್ಷಣಗಳಿದ್ದುವು. ಅತ್ತ ಬಿಹಾರದ ಯುವಕನಿಗೂ ಇಲ್ಲಿನ ಭಾಷೆಯೂ ಬರದಿದ್ದ ಕಾರಣ, ಏನನ್ನೂ ಮಾಡುವಂತಿರಲಿಲ್ಲ.ಇದೇ ವೇಳೆ, ತೋಟಬೆಂಗ್ರೆಯಲ್ಲೇ ಯುವಕರ ನಡುವೆ ಸಾಮೂಹಿಕ ಅತ್ಯಾಚಾರದ ಸುದ್ದಿ ವದಂತಿಯಾಗಿ ಹಬ್ಬಲು ತೊಡಗಿತ್ತು. ತೋಟಬೆಂಗ್ರೆ ಅನ್ನುವುದು ಹಿಂದು – ಮುಸ್ಲಿಮರು ಸಮಾನ ಸಂಖ್ಯೆಯಲ್ಲಿರುವ ಜಾಗ ಆಗಿದ್ದರಿಂದ ಈ ಸುದ್ದಿಗೆ ರೆಕ್ಕ ಪುಕ್ಕ ಬಂದು ಸಹಜವಾಗೇ ಪೊಲೀಸರಿಗೆ ತಲುಪಿತ್ತು. ತೋಟಬೆಂಗ್ರೆಯಿಂದ 15 ಕಿಮೀ ದೂರದ ಪಣಂಬೂರು ಠಾಣೆಗೆ ವದಂತಿಯ ಸುದ್ದಿ ತಲುಪಲು ಹೆಚ್ಚು ಹೊತ್ತು ಬೇಕಾಗಲಿಲ್ಲ.

ಅದೇ ವದಂತಿಯ ಬೆನ್ನು ಬಿದ್ದ ಪೊಲೀಸರು ತೋಟಬೆಂಗ್ರೆಯ ತಮ್ಮ ಇನ್ಫಾರ್ಮರ್ ಗಳನ್ನು ಮುಂದಿಟ್ಟು ಮಾಹಿತಿ ಕಲೆಹಾಕತೊಡಗಿದ್ದರು. ಹದಿಹರೆಯದ ಯುವಕರೇ ಸೇರಿ ಈ ಕೃತ್ಯ ನಡೆಸಿದ್ದಾರೆ ಅನ್ನುವುದು ಗೊತ್ತಾಗುತ್ತಿದ್ದಂತೆ ಖಚಿತ ಮಾಹಿತಿ ಪಡೆದು ಏಳು ಮಂದಿಯನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರ ಟ್ರೀಟ್ಮೆಂಟ್ ಸಿಗುತ್ತಿದ್ದಂತೆ ಯುವಕರು ತಮ್ಮ ಕೃತ್ಯವನ್ನು ಎಳೆ ಎಳೆಯಾಗಿ ಬಾಯಿ ಬಿಟ್ಟಿದ್ದಾರೆ. ಆದರೆ, ಯುವತಿಯ ಬಗ್ಗೆ ಮಾಹಿತಿ ಇಲ್ಲದೇ ಇದ್ದುದರಿಂದ ಪೊಲೀಸರು ಆಕೆಯನ್ನು ಬೆನ್ನತ್ತುವ ಕೆಲಸ ಮಾಡಿದ್ರು. ಯುವಕರಿಬ್ಬರು ಆಕೆಗೆ ಫೋನ್ ಕರೆ ಮಾಡಿದ್ದರಿಂದ ಅದೇ ನಂಬರ್ ಆಧರಿಸಿ, ಪೊಲೀಸರು ಟ್ರೇಸ್ ಮಾಡಲಾರಂಭಿಸಿದ್ರು. ಕೊನೆಗೆ ಬಂಟ್ವಾಳ ತಾಲೂಕಿನ ಕುಗ್ರಾಮದಲ್ಲಿದ್ದ ಯುವತಿಯನ್ನು ಮನವೊಲಿಸಿ, ಮಂಗಳೂರಿನ ಮಹಿಳಾ ಠಾಣೆಯಲ್ಲಿ ಕೇಸು ದಾಖಲಾಗುವಂತೆ ಮಾಡಿದ್ದಾರೆ.

ಅತ್ತ ಕೇಸು ದಾಖಲಾಗುತ್ತಿದ್ದಂತೆ, ಅಲರ್ಟ್ ಆದ ಮಂಗಳೂರು ಪೊಲೀಸರು ಜೊತೆಗೇ ಆರು ಮಂದಿಯನ್ನು ವಶಕ್ಕೆ ಪಡೆದಿರುವ ಮಾಹಿತಿಯನ್ನೂ ಮಾಧ್ಯಮಕ್ಕೆ ನೀಡಿದ್ದರು. ಇದರಿಂದ ಈ ಸುದ್ದಿ ದೊಡ್ಡ ಅವಾಂತರ ಸೃಷ್ಟಿಸುವ ಮುನ್ನ ಪೊಲೀಸರು ತಮ್ಮ ಕೆಲಸ ಮುಗಿಸಿದ್ದು ಪ್ರಶಂಸೆಗೂ ಕಾರಣವಾಗಿತ್ತು. ತೋಟಬೆಂಗ್ರೆಯ ನಿವಾಸಿಗಳಾದ ಪ್ರಜ್ವಲ್ ಸುವರ್ಣ, ಅರುಣ್ ಅಮೀನ್, ಆದಿತ್ಯ ಸಾಲಿಯಾನ್, ಅಬ್ದುಲ್ ರಿಯಾಜ್ ಯಾನೆ ಪಿಟ್ಟೆ ರಿಯಾಜ್ ಸೇರಿದಂತೆ ಮೂವರು ಕಾಲೇಜು ಅಪ್ರಾಪ್ತ ಕಾಲೇಜು ವಿದ್ಯಾರ್ಥಿಗಳನ್ನೂ ಪೊಲೀಸರು ಹೆಡೆಮುರಿ ಕಟ್ಟಿದ್ದರು. ಈ ನಡುವೆ, ಪೊಲೀಸರ ಮಿಂಚಿನ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತವಾಗಿದ್ದು, ಪೊಲೀಸರ ತಂಡಕ್ಕೆ ದ.ಕ. ಉಸ್ತುವಾರಿ ಸಚಿವ ಯು.ಟಿ.ಖಾದರ್ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಇದೇ ವೇಳೆ, ಬಂಟ್ವಾಳ ಠಾಣೆಗೆ ದೂರು ನೀಡಲು ಬಂದಿದ್ದ ಯುವತಿಯನ್ನು ನಿರ್ಲಕ್ಷಿಸಿದ ತಪ್ಪಿಗೆ ಬಂಟ್ವಾಳ ನಗರ ಠಾಣೆ ಎಎಸ್ಐ ರಘುರಾಮ ಹೆಗ್ಡೆ ಎಂಬವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ಇಷ್ಟಕ್ಕೂ ಆರೇಳು ಮಂದಿ ಒಂದೇ ಹೆಣ್ಣಿನ ಮೇಲೆ ಬೀಳೋದಂದ್ರೆ ವಿಕೃತ ಮನಸ್ಥಿತಿಯ ಪರಮಾವಧಿ. ಇಂಥ ವಿಕೃತಿ ಮೆರೆಯಲು ಹದಿಹರೆಯದ ಯುವಕರಿಗೆ ಪ್ರೇರಣೆಯಾಗಿದ್ದು ಗಾಂಜಾ ಅಮಲು ಅನ್ನುವುದು ಗುಟ್ಟಾಗಿ ಉಳಿದಿಲ್ಲ. ಬೆಂಗ್ರೆ ಪ್ರದೇಶದಲ್ಲಿ ಬೀಡು ಬಿಟ್ಟ ಗಾಂಜಾ ಮಾಫಿಯಾದಿಂದಲೇ ಇಂಥ ಕುಕೃತ್ಯ ಎದುರಾಗಿದೆ ಅನ್ನುವ ಮಾತು ಈಗ ಕೇಳಿಬರುತ್ತಿದೆ.ಒಟ್ಟಿನಲ್ಲಿ ಕಡಲ ತೀರಕ್ಕೆ ಬಂದಿದ್ದ ಪ್ರೇಮಿಗಳನ್ನು ಅಡ್ಡಗಟ್ಟಿ ಗ್ಯಾಂಗ್ ರೇಪ್ ನಡೆಸಿರುವುದು ನಿಜಕ್ಕೂ ಬುದ್ಧಿವಂತರ ಜಿಲ್ಲೆಯ ಜನತೆ ತಲೆತಗ್ಗಿಸುವಂತಾಗಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಜೊತೆಗೆ ರಾಷ್ಟ್ರ ಮಟ್ಟದಲ್ಲಿ ಹೋಮ್ ಸ್ಟೇ ಅಟ್ಯಾಕ್, ಪಬ್ ಅಟ್ಯಾಕ್ ನಿಂದಾಗಿ ಕುಖ್ಯಾತಿ ಪಡೆದಿರುವ ಮಂಗಳೂರಿಗೆ ಮತ್ತೊಂದು ಅನಾಚಾರ ಅಂಟಿಕೊಳ್ಳುವಂತಾಗಿದ್ದು ಮಾತ್ರ ದುರಂತ.

LEAVE A REPLY

Please enter your comment!
Please enter your name here