Home Cinema ಕೃತಿ ಕರಬಂಧ ಹಾದಿ ಹಿಡಿದರು ಶ್ರದ್ಧಾ ಶ್ರೀನಾಥ್, ರಶ್ಮಿಕಾ ಮಂದಣ್ಣ..!? ಎಲ್ಲಿ ಹೋಗುವಿರಿ ನಿಲ್ಲಿ ಹುಡುಗಿಯರೇ...

ಕೃತಿ ಕರಬಂಧ ಹಾದಿ ಹಿಡಿದರು ಶ್ರದ್ಧಾ ಶ್ರೀನಾಥ್, ರಶ್ಮಿಕಾ ಮಂದಣ್ಣ..!? ಎಲ್ಲಿ ಹೋಗುವಿರಿ ನಿಲ್ಲಿ ಹುಡುಗಿಯರೇ ಅಂತಿದೆ ಚಿತ್ರರಂಗ, ಇದು ಕನ್ನಡದ ಹುಡುಗಿಯರ ವಲಸೆ ಹೋಗುವ ಅಂತರಂಗ…

3195
0
SHARE

ಅಂದೊಂದಿತ್ತು ಕಾಲ ಆ ಸುಂದರಿಯರ ಮೇಳ ಎನ್ನುವಂತೆ ಕಳೆದ ಕೆಲವು ದಶಕಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಪರಭಾಷಾ ನಾಯಕಿಯರ ಹಾವಳಿ, ಆರ್ಭಟ ಜೋರಾಗಿತ್ತು. ಹೀರೋಯಿನ್ ಬಾಂಬೆಯವರು ಅನ್ನೋ ಮಾತು ಸಿನಿಮಾ ಮಂದಿಯ ಬಾಯಲ್ಲಿ ಕಾಮನ್ ಆಗಿತ್ತು. ಆಮೇಲೆ ದಕ್ಷಿಣ ಭಾರತದ ಇತರ ಭಾಷೆಗಳಿಂದಲೂ ನಾಯಕಿಯರು ಆಮದಾಗುತ್ತಿದ್ದರು. ಹಾಗಾಗಿ ಆಗ ಭಾಷೆ ಬರದೇ ಕೇವಲ ಅಭಿನಯವನ್ನಷ್ಟೇ ಮಾಡುತ್ತಿದ್ದ ಈ ನಾಯಕಿಯರಿಗೆ ಕಂಠದಾನ ಮಾಡುವ ಇಲ್ಲಿನ ಕಲಾವಿದೆಯರಿಗೆ ಭರ್ಜರಿ ಅವಕಾಶಗಳು ದೊರೆಯುತ್ತಿದ್ದವು.ನಟಿಯರನ್ನು ಪರಭಾಷೆಯಿಂದ ಆಮದು ಮಾ3ಡಿಕೊಳ್ಳುವ ಪರಿಪಾಠ ಹೇಗೆ ಹುಟ್ಟಿದ್ದೋ ಗೊತ್ತಿಲ್ಲ.

ಅಲ್ಲಿ ಹೋಗಿ ಹೆಸರು ಮಾಡುತ್ತಿರೋ ನಮ್ಮ ಹುಡುಗಿಯರನ್ನು ನೋಡಿ, ಕೊಟ್ಟ ಮನೆಗೂ, ಹುಟ್ಟಿದ ಮನೆಗೂ ಹೆಸರು ತಾರಮ್ಮ ಅಂತ ಆಶೀರ್ವಾದ ಮಾಡಬೇಕೋ ಅಥವಾ ತವರಿಗೆ ಬಾ ತಂಗಿ ಅಂತ ವಾಪಸ್ ಇಲ್ಲಿಗೇ ಕರೆಯಬೇಕೋ ಎನ್ನುವ ಗೊಂದಲ ನಮ್ಮ ಚಿತ್ರರಂಗದ್ದು. ಆ ಗೊಂದಲದಲ್ಲೇ, ಇಲ್ಲಿದ್ದೆ ಇಲ್ಲಿತಂಕಾ, ಅಲ್ಲಿಗ್ಯಾಕ್ ಹೋದ್ಯವ್ವ ಅಂತ ಚಿತ್ರರಂಗ ಅಲವತ್ತುಕೊಳ್ಳುತ್ತಿದೆ.ಒಟ್ಟಿನಲ್ಲಿ ಪರಭಾಷೆಯ ಚಿತ್ರರಂಗಗಳು ಕನ್ನಡದಾ ಹೆಣ್ಣು ಮಕ್ಕಳೆಲ್ಲಾ ಒಂದಾಗಿ ಬನ್ನಿ ಅಂತ ಕೈ ಬೀಸಿ ಕರೆಯುತ್ತಿದೆ. ನಮ್ಮ ಹುಡುಗಿಯರು ಅದಕ್ಕೆ ಸ್ಪಂದಿಸಿ ಅಲ್ಲಿ ತಮ್ಮ ಪಾರಮ್ಯ ಮೆರೆಯುತ್ತಿದ್ದಾರೆ. ಅನೇಕ ಕನ್ನಡ ಚಿತ್ರಗಳು ಹಿಟ್ ಆದಾಗ, ಇಲ್ಲಿ ಕನ್ನಡ ಚಿತ್ರದಲ್ಲಿ ಅಭಿನಯಿಸಿದ ನಾಯಕಿಯನ್ನೇ ಹಾಕಿಕೊಂಡು ಪರಭಾಷೆಗಳಲ್ಲಿ ಅದನ್ನು ರಿಮೇಕ್ ಮಾಡುವ ಉದಾಹರಣೆಗಳು ಕೂಡ ಹೆಚ್ಚಾಗುತ್ತಿವೆ.

ಹಾಗಾಗಿ ಕನ್ನಡದ ಹೆಣ್ಣುಮಕ್ಕಳು ಹಿಂದಿ ಚಿತ್ರರಂಗ ಸೇರಿದಂತೆ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗಗಳಲ್ಲಿ ಹೆಸರು ಮಾಡುತ್ತಿದ್ದಾರೆ.ಹಾಗಂತ ಇವರ್ಯಾರೂ ಕನ್ನಡ ಚಿತ್ರರಂಗದಲ್ಲಿ ಅವಕಾಶ ಸಿಗದೆ ಅವಕಾಶವನ್ನರಸಿ ಪರಭಾಷೆಗೆ ಹೋದವರಲ್ಲ. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಇದ್ದು ಸಾಕಷ್ಟು ಅವಕಾಶಗಳು ಸಿಗುತ್ತಿರುವಾಗಲೇ ಇವರನ್ನು ಪರಭಾಷೆಯ ಅವಕಾಶಗಳು ಅರಸಿ ಬಂದವು. ಹಾಗಾಗಿ ಇವರೆಲ್ಲ ಅಲ್ಲೂ ಒಂದು ಕೈ ನೋಡೇಬಿಡೋಣ ಎಂದು ಅಲ್ಲಿಗೆ ಕಾಲಿಟ್ಟವರಷ್ಟೇ. ಈ ಹಿಂದೆ ಕೂಡ ನಮ್ಮ ಕನ್ನಡದ ಕಣ್ಣೀರ ಕಲಾವಿದೆ ಶ್ರುತಿ ಪರಭಾಷೆಗೆ ಹೋಗಿದ್ದುಂಟು. ಅದೂ ಬಾಲಚಂದರ್ ಅವರಂಥ ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶ ಶ್ರುತಿ ಅವರಿಗೆ ಸಿಕ್ಕಿತ್ತು. ಇತ್ತೀಚೆಗೆ ನಂದ ಲವ್ಸ್ ನಂದಿತಾ ಚಿತ್ರದ ನಾಯಕಿ ಶ್ವೇತಾ ಕೂಡ ಪರಭಾಷೆಯಲ್ಲಿ ತಮ್ಮ ಅದೃಷ್ಠ ಪರೀಕ್ಷೆ ಮಾಡಿಕೊಂಡಿದ್ದರು.

ಆದರೆ ಇತ್ತೀಚಿನ ನಟಿಯರು ಪರಭಾಷೆಯ ಚಿತ್ರಗಳಲ್ಲಿ ಕೇವಲ ನಾಮ್ ಕೇ ವಾಸ್ತೇ ನಟಿಸಿ ಬರುತ್ತಿಲ್ಲ. ಬದಲಾಗಿ ಅಲ್ಲಿನ ಚಿತ್ರರಂಗದವರನ್ನು, ಚಿತ್ರರಸಿಕರನ್ನು ಮೆಚ್ಚಿಸುವಂಥ ನಟನೆ ಮಾಡಿ ತಮಗೊಂದು ಹೆಸರು ಸೃಷ್ಠಿ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ.ಕನ್ನಡದ ನಟಿಯರು ಗಡಿ ದಾಟಿ ತಮ್ಮ ಪ್ರತಿಭೆ ತೋರಿಸುತ್ತಿರೋದು ಸಂತಸದ ವಿಷಯವೇ. ಹೀಗೆ ಹೊರನಾಡಿನಲ್ಲೂ ನಮ್ಮ ಕನ್ನಡದ ಕೀರ್ತಿ ಪತಾಕೆ ಹಾರಿಸುತ್ತಿರೋ ನಟಿಯರ ಪಟ್ಟಿಯಲ್ಲಿ ಹಲವರಿದ್ದಾರೆ. ನಮ್ಮ ನಾಯಕಿಯರಲ್ಲಿ ಕೆಲವರು ಆಗಾಗ ತಮ್ಮ ಮಾರ್ಕೆಟ್ ಕಡಿಮೆ ಆದಾಗ, ನನಗೆ ಬೇರೆ ಭಾಷೆಯಲ್ಲಿ ಅವಕಾಶಗಳಿವೆ. ಸದ್ಯ ಅಲ್ಲಿ ಬ್ಯುಸಿ ಆಗಿದ್ದೇನೆ ಅಂತ ಬೂಸಿ ಬಿಡುವುದು ಉಂಟು. ಆದರೆ ಇವರೆಲ್ಲ ಬರೀ ಮಾತಿಗೆ ಸೀಮಿತವಾದ ಉದಾಹರಣೆಗಳನ್ನು ಚಿತ್ರರಂಗ ನೋಡಿದೆ.

ಹಾಗಾಗಿ ಮಾತಿಗಿಂತ ಕೃತಿ ಲೇಸು ಎನ್ನುವಂತೆ ಎಲ್ಲೂ ಏನೂ ಕೊಚ್ಚಿಕೊಳ್ಳದೆ, ಸದ್ದಿಲ್ಲದೆ ಪರಭಾಷೆಯ ಚಿತ್ರಗಳಲ್ಲಿ ಬ್ಯುಸಿ ಆಗಿರುವ ನಟಿ ಅಂದ್ರೆ ಕೃತಿ ಕರಬಂಧಾ.ಹೌದು ಕನ್ನಡದ ಚಿರು ಚಿತ್ರ ನೋಡಿದವರಿಗೆ ಕೃತಿ ಕರಬಂಧ ಗೊತ್ತೇ ಇರುತ್ತಾರೆ. ಅಂದು ಚಿರು ಚಿತ್ರದಲ್ಲಿ, ಇಲ್ಲೆ ಇಲ್ಲೆ ಎಲ್ಲೋ ನನ್ನ ಮನಸು ಕಾಣೆಯಾಗಿದೆ ಎಂದು ಹಾಡಿ ಕುಣಿದಿದ್ದ ಕೃತಿ ಈಗ ಕಳೆದು ಹೋದ ತಮ್ಮ ಮನಸ್ಸನ್ನು ಪರಭಾಷೆಯ ಚಿತ್ರರಂಗಗಳಲ್ಲಿ ಹುಡುಕುತ್ತಿದ್ದಾರೆ. ಹಾಗೆ ನೋಡಿದರೆ ಕನ್ನಡತಿಯಾಗಿದ್ದೂ ಕೃತಿ ಕರಬಂಧ ತಮ್ಮ ಚಿತ್ರರಂಗದ ಬೋಣಿ ಮಾಡಿದ್ದು ಬೋಣಿ ಎಂಬ ತೆಲುಗು ಚಿತ್ರದಿಂದ. ಆನಂತರ ಕನ್ನಡಕ್ಕೆ ಬಂದ ಕೃತಿ, ಶಿವರಾಜ್ ಕುಮಾರ್ ಅವರ ಜೊತೆ ಬೆಳ್ಳಿ, ಯಶ್ ಜೊತೆ ಗೂಗ್ಲಿ, ಕನ್ನಡದಲ್ಲಿ ಉಪೇಂದ್ರ ಅವರ ಜೊತೆ ಸೂಪರ್ ರಂಗ, ಪ್ರೇಮ ಜೊತೆ ಪ್ರೇಮ್ ಅಡ್ಡ, ಪ್ರೇಮ್ ಜೊತೆ ದಳಪತಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಆದರೆ ಕನ್ನಡ ಚಿತ್ರಗಳನ್ನು ಮಾಡುತ್ತಲೇ ಕೃತಿ ಪರಭಾಷೆಯಲ್ಲಿ ಮಿಂಚತೊಡಗಿದ್ದರು. ಅದೂ ಕೂಡ ಸಣ್ಣ ಪುಟ್ಟ ಸಿನಿಮಾಗಳಲ್ಲಿ ಅಲ್ಲ. ಹಿಂದಿಯಲ್ಲಿ ರಾಝ್ ದಿ ರೀಬೂಟ್ ಚಿತ್ರದಲ್ಲಿ ಇಮ್ರಾನ್ ಹಶ್ಮಿಯಂಥ ಸೀರಿಯಲ್ ಕಿಸ್ಸರ್ ನ ಚಿತ್ರದಲ್ಲೂ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು. ಆನಂತರ ಗೆಸ್ಟ್ ಇನ್ ಲಂಡನ್, ಶಾದಿ ಮೇ ಜರೂರ್ ಆನಾ, ಕಾರವಾನ್, ಯಮ್ಲಾ ಪಗ್ಲಾ ದೀವಾನಾ ಚಿತ್ರದ ಹೊಸ ಅವತರಣಿಕೆಯಲ್ಲೂ ಕೃತಿ ಕಾಣಿಸಿಕೊಂಡಿದ್ದರು. ಅದನ್ನು ಬಿಟ್ಟರೆ ತೆಲುಗು, ತಮಿಳು ಚಿತ್ರಗಳಲ್ಲೂ ಕೃತಿ ತಮ್ಮ ಕರಾಮತ್ತು ತೋರಿಸಿದ್ದಾರೆ. ಬ್ರೂಸ್ ಲೀ, ಒಂಗೊಳೆ ಗೀತಾ, ಓಂ 3ಡಿ ಮುಂತಾದ ದಕ್ಷಿಣ ಭಾರತದ ಚಿತ್ರಗಳು ಈಕೆಯ ಕ್ರೆಡಿಟ್ ಗೆ ಇವೆ. ಸದ್ಯಕ್ಕೆ ಕನ್ನಡದ ರಾಣಾ ಚಿತ್ರಕ್ಕೆ ಸಹಿ ಹಾಕಿದ್ದರೂ ಕೃತಿ, ಹಿಂದಿಯ ಹೌಸ್ಫುಲ್ 4 ಚಿತ್ರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನು ಕೃತಿ ಜೊತೆ ಅಂತಾರಾಜ್ಯ ಪ್ರಸಿದ್ಧಿ ಗಳಿಸಿರೋ ಇನ್ನೊಬ್ಬ ಕನ್ನಡದ ನಾಯಕಿ ಅಂದ್ರೆ ಅದು ಶ್ರುತಿ. ಇದು ನಮ್ಮ ಹಳೆಯ ಕಾಲದ ನಾಯಕಿ ಶ್ರುತಿ ಅಲ್ಲ. ಈಕೆ ಶ್ರುತಿ ಹರಿಹರನ್. ಹೌದು ಲೂಸಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ ಶ್ರುತಿ ಹರಿಹರನ್ ಕಡಿಮೆ ಸಮಯದಲ್ಲೇ ಎಲ್ಲರ ಗಮನ ಸೆಳೆದವರು. ಈಕೆ ಕೂಡ ಸಿನಿಮಾ ಕಂಪನಿ ಎಂಬ ಮಲಯಾಳಂ ಚಿತ್ರದಲ್ಲಿ ಒಂದು ಕೈ ನೋಡಿ ನಂತರ ಕನ್ನಡಕ್ಕೆ ಬಂದವರು.ಲೂಸಿಯಾ ಚಿತ್ರದ ನಂತರ ಶ್ರುತಿ ಹರಿಹರನ್, ದ್ಯಾವ್ರೇ, ಸವಾರಿ 2, ರಾಟೆ, ಜೈ ಮಾರುತಿ 800, ಪ್ಲಸ್, ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದು ಆಕೆಗೆ ಪ್ಲಸ್ ಪಾಯಿಂಟ್ ಆಯ್ತು.,

ಬ್ಯೂಟಿಫುಲ್ ಮನಸ್ಸುಗಳು, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರಗಳು ಈಕೆಗೆ ಅಸಾಧಾರಣ ಯಶಸ್ಸು ತಂದುಕೊಟ್ಟವು. ಮುಂದೆ ಕನ್ನಡದ ಉರ್ವಿ, ಉಪೇಂದ್ರ ಮತ್ತೆ ಬಾ ಮುಂತಾದ ಚಿತ್ರಗಳಲ್ಲಿ ಅಭಿನಯಿಸುತ್ತಾ ಶ್ರುತಿ ಪರಭಾಷೆಯ ಚಿತ್ರಗಳಲ್ಲೂ ಬ್ಯುಸಿಯಾದರು. ನಿರುಂಗಿ ವಾ ಮುತ್ತಮಿಡತೆ, ನಿಬುನನ್, ಸೋಲೋ, ರಾ ರಾ ರಾಜಶೇಖರ್ ಮುಂತಾದ ಪರಭಾಷಾ ಚಿತ್ರಗಳಲ್ಲೂ ಶ್ರುತಿ ಮಿಂಚಿದರು.ಶ್ರುತಿ ಹರಿಹರನ್ ಈಗ ಪರಭಾಷೆಯ ಚಿತ್ರಗಳಲ್ಲಿ ಮಿಂಚುತ್ತಿರೋಕೆ ಕಾರಣವೂ ಇದೆ. ಈಕೆ ತಾನು ಅಭಿನಯಿಸಿದ ಕೆಲವೇ ಚಿತ್ರಗಳಲ್ಲೇ ತಾನೆಂಥ ಕಲಾವಿದೆ ಎಂಬುದನ್ನು ಪ್ರೂವ್ ಮಾಡಿದವರು.

ಲೂಸಿಯ ಚಿತ್ರದ ವಿಭಿನ್ನ ಪಾತ್ರದಿಂದ ಹಿಡಿದು ಬ್ಯೂಟಿಫುಲ್ ಮನಸುಗಳು ಚಿತ್ರದ ಮುಗ್ಧ ಹುಡುಗಿಯ ಪಾತ್ರದವರೆಗೂ ಶ್ರುತಿ ತಮ್ಮ ಅಭಿನಯ ಸಾಮರ್ಥ್ಯವನ್ನು ತೋರಿಸಿ ಎಲ್ಲರನ್ನೂ ಮೋಡಿ ಮಾಡಿದವರು. ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡವರು. ಈಗ ಶ್ರುತಿ ಹರಿಹರನ್ ಇದ್ದಾರೆ ಅಂದ್ರೆ ಆ ಚಿತ್ರದ ತೂಕ ಸ್ವಲ್ಪ ಜಾಸ್ತಿಯೇ ಆಗುತ್ತೆ. ಇಂಥ ಇಮೇಜ್ ಮತ್ತು ಪ್ರಸಿದ್ಧಿ ಇರೋ ಕಾರಣಕ್ಕಾಗಿಯೇ ಶ್ರುತಿ ಪರಭಾಷೆಗಳ ಚಿತ್ರರಂಗವನ್ನು ಆಕರ್ಷಿಸಿದ್ದು. ಹಾಗಾಗಿ ಈಗ ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತಲೇ ಇತರ ಭಾಷೆಯ ಚಿತ್ರಗಳಲ್ಲೂ ಶ್ರುತಿ ತಮ್ಮದೇ ಆದ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಆದರೆ ಅದನ್ನು ಎಷ್ಟರ ಮಟ್ಟಿಗೆ ಉಳಿಸಿಕೊಳ್ಳುತ್ತಾರೆ ಅನ್ನೋದು ಮುಂದಿನ ಕುತೂಹಲ…

LEAVE A REPLY

Please enter your comment!
Please enter your name here