ಕೆ.ಜಿ.ಎಫ್.. ಕನ್ನಡದ ಕೀರ್ತಿ ಪತಾಕೆ ಹಾರಿಸಿದ ಸಿನಿಮಾ. ದೇಶವ್ಯಾಪಿಯಲ್ಲದೇ ವಿದೇಶದಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಥಕಥಕ ಕುಣಿದಾಡಿದ್ದ ಕೆ.ಜಿ.ಎಫ್, ಯಶ್ ತಲೆಯನ್ನೂ ತಿರುಗಿಸಿತಾ.. ಹೀಗೊಂದು ಚರ್ಚೆ ಮತ್ತೊಮ್ಮೆ ಗಾಂಧಿನಗರದ ಗಲ್ಲಿಗಳಲ್ಲಿ ನಡೆಯುತ್ತಿದೆ.
ಹೌದು, ಕೆಜಿಎಫ್ ಚಿತ್ರದ ಅಗಾಧ ಯಶಸ್ಸು ಕನ್ನಡ ಚಿತ್ರರಂಗದ ದಿಕ್ಕುದೆಸೆಯನ್ನೇ ಬದಲಾಯಿಸಿದೆ. ಇದರ ಜೊತೆ ಜೊತೆಗೇ ಯಶ್ ಅಲಿಯಾಸ್ ಅಣ್ತಮ್ಮನ ವರಸೆ, ಟೈಂಟೇಬಲ್ಲು, ಪ್ಲ್ಯಾನುಗಳೆಲ್ಲವೂ ಬದಲಾಗಿ ಹೋಗಿದೆ.ಯಸ್, ಕೆಜಿಎಫ್ ಚಿತ್ರದ ಜೊತೆಜೊತೆಗೇ ಸದ್ದು ಮಾಡಿದ್ದ ಯಶ್ ಅಭಿನಯದ ಹೊಸಾ ಸಿನಿಮಾಗಳೆಲ್ಲವೂ ಒಂದೊಂದಾಗಿ ಉಸಿರು ಚೆಲ್ಲುತ್ತಿವೆ. ಮೈ ನೇಮ್ ಈಸ್ ಕಿರಾತಕ ಕೆಜಿಎಫ್ ಯಶಸ್ಸಿಗೆ ಬಲಿಯಾದ ಮೊದಲ ಸಿನಿಮಾ.
ಇದೀಗ ರಾಣಾ ಸರದಿ. ರಾಣಾ.. ಹರ್ಷ ನಿರ್ದೇಶನದಲ್ಲಿ ಮೂಡಿ ಬರಬೇಕಿದ್ದ ಸಿನಿಮಾ. ನಿಮಗೆ ಗೊತ್ತಿರಲಿ ಈ ರಾಣಾ, ಕಳೆದೆ ವರ್ಷ ಯಶ್ ಬರ್ತಡೇ ಹೊತ್ತಿಗೆಲ್ಲ ಸಿಕ್ಕಾಪಟ್ಟೆ ಸದ್ದು ಮಾಡಿದ್ದ. ಖದರ್ ಹೊಂದಿರೋ ಈ ಟೈಟಲ್ಲಿನಲ್ಲಿ ಯಶ್ ಮತ್ತೊಂದು ಗೆಲುವಿನ ರೂವಾರಿಯಾಗಲಿದ್ದಾರೆ ಅನ್ನೋ ಮಾತೂ ಅಂದೇ ಕೇಳಿ ಬಂದಿತ್ತು. ಆದರೆ ಆ ಬಳಿಕ ಕೆಜಿಎಫ್ ಬಿಡುಗಡೆಯಾಗಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದೇ ಮಾಡಿದ್ದು ಅಣ್ತಮ್ಮನ ವರಸೆ ಖುಲ್ಲಂಖುಲ್ಲ ಬದಲಾಗಿ ಬಿಟ್ಟಿದೆ.
ಯಸ್, ಯಶ್.. ಮೊದಲಿನಂತಿಲ್ಲ. ಯಶ್ ಲೆಕ್ಕಾಚಾರಗಳು ಬದಲಾಗಿವೆ. ಮೈ ನೇಮ್ ಈಸ್ ಕಿರಾತ ಚಿತ್ರದಲ್ಲಿ ಯಶ್ ನಟಿಸೋದಿಲ್ಲ ಅನ್ನೋದು ಖಾತರಿಯಾದ ಬೆನ್ನಿಗೇ ರಾಣ ಚಿತ್ರದಿಂದಲೂ ಅವರು ದೂರ ಸರಿದಿರೋ ಸುದ್ದಿ ಹರಿದಾಡುತ್ತಿದೆ.ಇನ್ನೂ ಹೀಗೆ ಹರಿದಾಡ್ತಿರುವ ಸುದ್ದಿಗಳಿಗೆ, ತಕ್ಕಂತೆ ಇನ್ನೊಂದಷ್ಟು ಮಾತುಗಳೂ ಗಾಂಧಿನಗರದ ಗಲ್ಲಿಗಳಿಂದ ಹಿಡ್ದು.. ಯಶ್ ಅವರ ಹೊಸಕೇರೆಹಳ್ಳಿ ನಿವಾಸದವರೆಗೂ ಕೇಳಿ ಬರ್ತಿದೆ. ಅದುವೇ.. ಯಶ್ ಬದಲು ಡಾ.ಶಿವರಾಜ್ ಕುಮಾರ್ ರಾಣಾ ಆಗಲಿದ್ದಾರೆ ಅನ್ನೋದು.
ಹೌದು, ಅಸಲಿಗೆ ಯಶ್.. ಅದ್ಯಾವಾಗ.. ಮೈ ನೇಮ್ ಇಸ್ ಕಿರಾತಕನ ಕತ್ತನ್ನೂ ಹಿಸುಕಿದ್ರೋ, ಹರ್ಷಗೆ.. ಯಶ್, ರಾಣಾಗೂ ಹೀಗೆ ಮಾಡುತ್ತಾರೆ ಅನ್ನುವ ಸುಳಿವೊಂದು ಸಿಕ್ಕಂತ್ತಾಗಿತ್ತು. ಇನ್ನೂ ಇದೇ ಸುಳಿವಿಗೆ ತಕ್ಕಂತೆ ಮಾತನಾಡಿದ್ದ ಯಶ್, ಮೊದಲು ಕೆ.ಜಿ.ಎಫ್ ಚಾಫ್ಟರ್ ೨ ಅಂದಿದ್ದರು. ಆ ನಂತರ.. ಮೈ ನೇಮ್ ಇಸ್ ಕಿರಾತಕ ಅನ್ನುವ ಮಾತುಗಳನ್ನಾಡಿದ್ದರು. ಕಿರಾತಕ ಮುಂದುವರೆಯಲ್ಲ ಅನ್ನೋದು ಬೇರೆ ವಿಷಯ.
ಅಲ್ಲಿಗೆ ೨೦೨೧ರವರೆಗೂ ಯಶ್ ಕಾಲ್ ಶೀಟ್ ಸಿಗೋದು ಬಹುತೇಕ ಅನುಮಾನ ಅನ್ನುವ ವಾತಾವರಣನೂ ನಿರ್ಮಾಣವಾಗಿತ್ತು. ಹಾಗಾಗೇ, ಒಂದು ಮೂಲದ ಪ್ರಕಾರ ಯಶ್ ನಡೆಯ ಸೂಚನೆ ಸಿಗುತ್ತಲೇ ನಿರ್ದೇಶಕ ಹರ್ಷ ಬೇರೆ ನೀಲನಕ್ಷೆ ರೆಡಿ ಮಾಡಿಕೊಂಡಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗಾಗಿ ರಾಣಾ ಚಿತ್ರವನ್ನ ಮಾಡಲು ತಯಾರಾದರು ಎಂಬ ಸುದ್ದಿಯಿದೆ. ಈ ಬಗ್ಗೆ ಈಗಿನ್ನೂ ಮಾತುಕತೆ ಚಾಲ್ತಿಯಲ್ಲಿದೆ.
ಅಧಿಕೃತ ಸುದ್ದಿ ಇನ್ನು ಕೆಲವೇ ದಿನಗಳಲ್ಲಿ ಹೊರ ಬೀಳಲಿದೆ. ಅದೇನೆ ಇರ್ಲಿ, ಒಂದು ಸಿನಿಮಾದ ಮಹಾ ಗೆಲುವಿನಿಂದ, ಯಶ್ ಇದೀಗ ದೊಡ್ಡ ಮಟ್ಟದ ನಾಯಕನಾಗಿದ್ದಾರೆ. ಇದು, ಯಶ್ ಅಭಿಮಾನಿಗಳೂ ಹಾಗೂ ಕನ್ನಡ ಕಲಾಭಿಮಾನಿಗಳೂ ಹೆಮ್ಮೆ ಪಡಲೇಬೇಕಾದ ಸಂಗತಿ. ಆದ್ರೆ ಕೆಜಿಎಫ್ ಗೆಲುವು ತಂದುಕೊಟ್ಟ ಜೋಶ್ ನಲ್ಲಿ ಹಳೇ ಕಮಿಟ್ಮೆಂಟುಗಳನ್ನ ಕ್ಯಾನ್ಸಲ್ ಮಾಡುತ್ತಿರೋ ಯಶ್ ಬಗ್ಗೆ ಅಸಮಾಧಾನ ಗಾಂಧಿನಗರದ ಒಳಗೊಳಗೇ ಹಬೆಯಾಡುತ್ತಿರೋದಂತೂ ಸತ್ಯ.