Home Cinema “ಕ್ಷಮೆ ಕೇಳೋ ಮಾತೇ ಇಲ್ಲ” ಜೋಗಿ ಪ್ರೇಮ್ ಹಾಕೇ ಬಿಟ್ರು ಸವಾಲ್..!? ಪ್ರೇಮ್‌ಗೆ ಕನಕಪುರ ಶ್ರೀನಿವಾಸ್...

“ಕ್ಷಮೆ ಕೇಳೋ ಮಾತೇ ಇಲ್ಲ” ಜೋಗಿ ಪ್ರೇಮ್ ಹಾಕೇ ಬಿಟ್ರು ಸವಾಲ್..!? ಪ್ರೇಮ್‌ಗೆ ಕನಕಪುರ ಶ್ರೀನಿವಾಸ್ ಹಾಕಿದ್ದೇಕೆ ಅವಾಜು..!

2313
0
SHARE

ಪ್ರೇಮ್.. ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಡೈರೆಕ್ಟರ್. ಇತ್ತೀಚಿಗಷ್ಟೇ ದಿ ವಿಲನ್ ಚಿತ್ರವನ್ನ ಕನ್ನಡಿಗರ ಮಡಿಲಿಗೆ ಹಾಕಿದ್ದ ಪ್ರೇಮ್, ತಮ್ಮ ಕೂಸನ್ನ ತಮ್ಮ ಕೈಯಾರೆ ಕೊಂದಿದ್ದು, ಸುದೀಪ ಮುನಿಸಿಕೊಂಡಿದ್ದು, ಅಭಿಮಾನಿಗಳು ಪ್ರೇಮ್ ಜೊತೆ ಗುದ್ದಾಡಿದ್ದು ಎಲ್ಲವೂ ಇದೀಗ ಇತಿಹಾಸ. ನಡೆದು ಹೋದ ಇತಿಹಾಸವನ್ನ ಕೆಟ್ಟ ಕನಸು ಅನ್ನುವಂತೆ ಭಾವಿಸಿ, ಪ್ರೇಮ್ ಎಲ್ಲವನ್ನೂ ಮರೆತು.. ಇನ್ನೇನೂ ಮೈ ಕೊಡವಿ ಎದ್ದು ನಿಲ್ಲಬೇಕೆನ್ನುವಷ್ಟರಲ್ಲಿ ಪ್ರೇಮ್‌ಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವಾಜ್ ಹಾಕಿದ್ದಾರೆ.

ಹೌದು, ನಿಮಗೆ ಗೊತ್ತಿರಲಿ.. ಪ್ರೇಮ್ ಮಾಮೂಲಿ ವ್ಯಕ್ತಿಯಲ್ಲ. ಬದ್ಲಿಗೆ ಪಕ್ಕಾ ೪೨೦ ಅಂತೆ. ಹೀಗೊಂದು ಬಾಂಬನ್ನ ಈಗ್ಗೆ ಒಂದು ತಿಂಗಳು ಹಿಂದೆ ಕನಕಪುರ ಶ್ರೀನಿವಾಸ್ ಎಂಬ ನಿರ್ಮಾಪಕ ಸಿಡಿಸಿದ್ದರು. ಯಸ್, ಅಸಲಿಗೆ ದಿ ವಿಲನ್ ಬಿಡುಗಡೆಯಾಯ್ತಲ್ಲ.. ಪ್ರೇಮ್, ಮೇಲಿನ ಸೇಡು ತಿರಿಸಿಕೊಳ್ಳುವ ಸುವರ್ಣಾವಕಾಶ ಇನ್ನೆಲ್ಲಿಂದ ಬರುತ್ತೆ. ಹಾಗಾಗೇ ಏನೋ.. ಯಾವದೋ ಕಾರ್ಯಕ್ರಮಕ್ಕೆ ಬಂದು, ಇನ್ನೇನೋ ಮಾತನಾಡಲು ಹೋಗಿ.. ಇನ್ನೇನೋ ಅಂದು ಮಾತನಾಡಿದ್ದ ಶ್ರೀನಿವಾಸ್, ನಿರ್ಮಾಪಕರಿಗೆ ಟೋಪಿ ಹಾಕೋದು ಪ್ರೇಮ್‌ಗೆ ಮಾಮೂಲಿಯಾಗ್ ಬಿಟ್ಟಿದೆ ಅಣ್ಣ ಅಂದಿದ್ದರು.

ಅಸಲಿಗೆ, ಅಂದು ಹಾಗೂ ಇಂದು ಶ್ರೀನಿವಾಸ್ ಮಾಡ್ತಿರುವ ಆರೋಪದ ಬುಡ ಇರೋದು ಜೋಗಿ ಜೋಳಿಗೆಯಲ್ಲಿ. ಹೌದು, ಜೋಗಿ ಹಿಟ್ ಆಗಿತ್ತಲ್ಲ. ಅಂದಿನ ದಿನಗಳಲ್ಲಿ ನಡೆದ ಚೀಟಿಂಗ್ ಕೇಸಿದು. ನಿಮಗೆ ಗೊತ್ತಿರಲಿ, ಜೋಗಿ ಅಂಥ ಅದ್ಭುತ ಸಿನಿಮಾ ಪ್ರೇಮ್ ಕೊಟ್ಟಾಗ, ಇವತ್ತು ಬಯ್ಯುತ್ತಿರುವ ಅನೇಕರು ಪ್ರೇಮ್ ಮನೆ ಮುಂದೆ ಸೂಟ್‌ಕೇಸ್ ಇಡ್ಕೊಂಡು ನಿಂತಿದ್ದರು. ಭೈರೇಗೌಡರೇ ನಮಗೂ ಒಂದು ಸಿನಿಮಾ ಮಾಡಿಕೊಡಿ, ನಾವು ನಾಲ್ಕು ಕಾಸು ನೋಡ್ತೀವಿ ಅಂದಿದ್ದರು. ಹೀಗೆ.. ಅವತ್ತು, ಸೂಟ್‌ಕೇಸ್ ಇಡ್ಕೊಂಡು ಹೋದವ್ರ ಪೈಕಿ, ಕನಕಪುರ ಶ್ರೀನಿವಾಸ್ ಕೂಡಾ ಒಬ್ಬರು.

ಅಂದಿನ ದಿನಗಳಲ್ಲಿ ಗಗನಕ್ಕೇರಿದ್ದ ಪ್ರೇಮ್ ಸಂಭಾವನೆ ಕಂಡು, ತಲೆ ಕೆರೆದುಕೊಂಡಿದ್ದ ಶ್ರೀನಿವಾಸ್ ಯಾವದಕ್ಕೂ ಇರ‍್ಲಿ ಅಂಥ ಒಂಭತ್ತು ಲಕ್ಷದ ಚೆಕ್ ಕೊಟ್ಟಿದ್ದರಂತೆ. ಅದು, ಒಂದು ಲೈನ್ ಕಥೆಯನ್ನೂ ಕೇಳದೇ. ಆದ್ರೆ ನಂತರ ಅದೇನಾಯ್ತೋ.. ಸಿನಿಮಾ ಶುರುವಾಗ್ಲೇ ಇಲ್ಲ. ಹೋಗಲಿ ಪ್ರೇಮ್ ಪೂರ್ತಿ ದುಡ್ಡಾದ್ರೂ ವಾಪಸು ಕೊಟ್ಟರಾ ಅಂದ್ರೆ ಅದು ಇಲ್ಲ. ಕೊಟ್ಟಿದ್ದು ೫ ಲಕ್ಷವನ್ನಷ್ಟೇ. ಇನ್ನೂ ನಾಲ್ಕು ಲಕ್ಷವನ್ನ ಪ್ರೇಮ್ ಹಾಗೇ ಉಳಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಕಣ್ಣು ಕೆಂಪು ಮಾಡಿಕೊಂಡು.. ಅಂದಿನ ದಿನಗಳನ್ನ ಮೆಲುಕು ಹಾಕುವ ಶ್ರೀನಿವಾಸ್ ಪ್ರೇಮ್ ಜೋಗಿ ಪ್ರೇಮ್ ಅಲ್ಲ ಟೋಪಿ ಪ್ರೇಮ್ ಅಂದಿದ್ದರು.

ಒಂದು ತಿಂಗಳಿನ ಹಿಂದೆ ಪ್ರೇಮ್ ಬಗ್ಗೆ ನಾನಾ ಮಾತುಗಳನ್ನಾಡಿ, ಪ್ರೇಮ್‌ಗೆ ಟೋಪಿವಾಲಾ ಪಟ್ಟ ಕಟ್ಟಿದ್ದ ಕನಕಪುರ ಶ್ರೀನಿವಾಸ್, ನಿನ್ನೆ.. ಇದ್ದಕ್ಕಿದ್ದಂತೆ ಜಂಗಲ್ ಮೇ ಸಿಂಗಲ್ ಶೇರ್ ಅನ್ನುವಂತೆ ಚಂದ್ರಲೇಔಟ್‌ನಲ್ಲಿ ಪ್ರತ್ಯಕ್ಷರಾಗಿದ್ದರು. ಪ್ರೇಮ್ ವಿರುದ್ಧ ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ರು. ಬೆಳ್ಳಿಗ್ಗೆನಿಂದನೇ ಪ್ರೇಮ್ ಕಛೇರಿ ಮುಂದೆ ಕುಂತಿದ್ದರು. ಬಾಕಿ ಇರುವ ನಾಲ್ಕು ಲಕ್ಷ ಕೊಟ್ಟು ಕೊಟ್ಟು ಬಿಡಿ ಭೈರೇಗೌಡ್ರೇ ಎಂದು ಕೂಗಿದ್ರು.

ಅದ್ಯಾವಾಗ ಕನಕಪುರ ಶ್ರೀನಿವಾಸ್ ಪ್ರೇಮ್ ಕಛೇರಿ ಮುಂದೆ ಧರಣಿ ಕುಂತ್ರೋ, ಅಷ್ಟೊತ್ತಿಗೆ.. ವಿವಾದ, ತಾರಕಕ್ಕೇರಿಯಾಗಿತ್ತು. ಇದೇ ವೇಳೆ ಪ್ರೇಮ್ ನಿವಾಸದೊಳಗೆ ಹಣ ಕೇಳಲು ಹೋದ ಕನಕಪುರ ಶ್ರೀನಿವಾಸ್ ಡ್ರೈವರ್‌ನ್ನ ಪ್ರೇಮ್ ನಿಂದಿಸಿದರು ಅನ್ನುವ ಸುದ್ದಿ, ಚಂದ್ರಲೇಔಟ್ ಅಂಗಳದಲ್ಲೆಲ್ಲಾ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇದು, ರಾತ್ರಿಯಾಗೋವಷ್ಟರಲ್ಲಿ ಮತ್ತಷ್ಟು ಜೋರಾಗಿ ಹರಡಿಕೊಂಡಿತ್ತು. ಹಾಗಾಗೇ, ಕನಕಪುರ ಶ್ರೀನಿವಾಸ್ ಮಾಡ್ತಿದ್ದ ಧರಣಿ ನಡೆಯುವ ಸ್ಥಳಕ್ಕೆ ಹೋದ ನಿರ್ಮಾಪಕ ಕೆ.ಮಂಜು, ಹಾಗೂ ಸೂರಪ್ಪ ಬಾಬು ಹಣ ಕಳೆದುಕೊಂಡು ಕಂಗಾಲಾಗಿರುವ ನಿರ್ಮಾಪಕ ಕನಕಪುರ ಶ್ರೀನಿವಾಸ್ ಮನ ಒಲಿಸುವ ಯತ್ನಕ್ಕೂ ಮುಂದಾದ್ರು.

ಯಸ್, ಇದು.. ನಿನ್ನೆ ರಾತ್ರಿ ಪ್ರೇಮ್ ಕಛೇರಿ ಮುಂದೆ ನಡೆದ ಗಲಾಟೆಯ ಚಿಕ್ಕ ಸ್ಯಾಂಪಲ್. ಹೀಗೆ ನಿನ್ನೆ.. ಬೀದಿಯಲ್ಲಿ ನಿಂತು ಕಿತ್ತಾಡಿಕೊಂಡ ಇವರೆಲ್ಲರೂ ಕನ್ನಡ ಚಿತ್ರರಂಗದ ಮಾನ ಮರ್ಯಾದೆ ಬೀದಿಯಲ್ಲಿ ಹರಾಜು ಆಗುವಂತೆ ನೋಡಿಕೊಂಡಿದ್ದು ಇಲ್ಲಿನ ವಿಪರ್ಯಾಸ. ಅಂದ ಹಾಗೇ ನಿನ್ನೆ.. ಇದೇ ಬೀದಿ ರಂಪಾಟ ನಡೆದ ಬೆನ್ನಲ್ಲೇ ಮಾತನಾಡಿರುವ ಪ್ರೇಮ್, ದುಡ್ಡು ತೆಗೆದುಕೊಂಡಿದ್ದು ನಿಜ, ಸಿನಿಮಾಗಾಗಿ ನಾನು ಒಂದು ವರ್ಷ ತಂಡ ಕಟ್ಟಿಕೊಂಡು ಬೆವರು ಸುರಿಸಿದ್ದು ನಿಜ ಅಂದಿದ್ದಾರೆ. ದುಡ್ಡು ಕೊಡುವ ಪ್ರಸಂಗವೇ ಇಲ್ಲ ಅನ್ನುವ ಮಾತುಗಳನ್ನಾಡ್ತಾನೇ ಕನಕಪುರ ಶ್ರೀನಿವಾಸ್ ಮೇಲೆ ಹರಿಹಾಯ್ದಿದ್ದಾರೆ ಪ್ರೇಮ್..

ಮೊದಲೇ ದಿ ವಿಲನ್‌ನಲ್ಲಿ ಎದುರಿಸಿದ ವ್ಯಯಕ್ತಿಕ ನಿಂದನೆ, ಸಾಲದಕ್ಕೆ.. ಕನಕಪುರ ಶ್ರೀನಿವಾಸ್ ವರ್ತನೆ.. ಇದು, ಸಹಜವಾಗಿ ಪ್ರೇಮ್ ನೆಮ್ಮದಿಗೆ ಕೊಳ್ಳಿ ಇಟ್ಟಿದೆ. ಹಾಗಾಗೇ, ಏನೋ.. ಇಂದು, ಶ್ರೀನಿವಾಸ್ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಕೆಲ ಹುಡುಗರನ್ನು ಆಫೀಸ್ ಮುಂದೆ ಕರೆತಂದು ಗಲಾಟೆ ನಡೆಸಿದ್ದಾರೆ. ಇದ್ರಿಂದ, ಅಕ್ಕ- ಪಕ್ಕದ ನಿವಾಸಿಗಳಿಗೂ ತೊಂದರೆಯಾಗ್ತಿದೆ. ಇದರಿಂದ ನನಗೆ ಮಾನಸಿಕ ಹಿಂಸೆಯಾಗಿದೆ ಅಂತಾ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೇ ಶ್ರೀನಿವಾಸರಿಂದ ತಮಗೆ ನ್ಯಾಯ ಕೊಡಿಸಿ. ಜೊತೆಗೆ ಒಂದು ವರ್ಷದ ಪರಿಶ್ರಮಕ್ಕೆ ಪರಿಹಾರವನ್ನು ಕೊಡಿಸಿ ಅಂತಾ ಮನವಿ ಮಾಡಿದ್ದಾರೆ.

ಇನ್ನೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪ್ರೇಮ್ ದೂರು ಕೊಟ್ಟ ಬೆನ್ನಲ್ಲೇ, ಪ್ರೇಮ್ ಗೂಂಡಾಗಿರಿಗೆ ನಾನು ಹೆದರಲ್ಲ ಅಂದಿದ್ದಾರೆ. ನಿರ್ಮಾಪಕ ಸಂಘ ನನಗೆ ನ್ಯಾಯ ಕೊಡಿಸುತ್ತೆ ಅನ್ನುವ ವಿಶ್ವಾಸವಿದೆ ಅಂದಿದ್ದಾರೆ. ನನ್ನ ಡ್ರೈವರ್‌ಗೆ ಪ್ರೇಮ್ ಕ್ಷಮೆ ಕೇಳಬೇಕು, ಕೊಡಬೇಕಿರುವ ದುಡ್ಡು ಕೊಡಬೇಕು ಅಂದಿದ್ದಾರೆ. ಇಷ್ಟೇ ಅಲ್ಲ ಪ್ರೇಮ್ ವಿರುದ್ಧ ನನ್ನ ಹೋರಾಟ ನಿಲ್ಲುವ ಮಾತೇ ಇಲ್ಲ ಅಂದಿದ್ದಾರೆ.ಅದೇನೆ ಇರ‍್ಲಿ, ಸದ್ಯ ಪ್ರೇಮ್ ಹಾಗೂ ಕನಕಪುರ ಶ್ರೀನಿವಾಸ್ ವಿವಾದ ದಿನಗಳು ಉರುಳಿದಂತೆ, ತಾರಕಕ್ಕೇರುತ್ತಿದೆ. ಸದ್ಯ, ಇದೇ ವಿವಾದ ವಾಣಿಜ್ಯ ಮಂಡಳಿ ಅಂಗಳನೂ ತಲುಪಿದೆ. ಸೀನಣ್ಣ ಹೇಳುತ್ತಿರುವ ಇದೇ ಟೋಪಿ ಕಥೆ.. ಮುಂದೆ ಇನ್ಯಾವ ವಿವಾದಕ್ಕೆ ಮುನ್ನುಡಿ ಬರೆಯುತ್ತೋ ಕಾದು ನೋಡಬೇಕು..

LEAVE A REPLY

Please enter your comment!
Please enter your name here