Home Crime ಗೀಸರ್‌ಗೆ ಅಳವಡಿಸಿದ್ದ ಸಿಲಿಂಡರ್ ಸ್ಫೋಟ; ಕುಟುಂಬದ ಐವರಿಗೆ ಗಂಭೀರ ಗಾಯ, ಹಾಸನ ಜಿಲ್ಲಾಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ...

ಗೀಸರ್‌ಗೆ ಅಳವಡಿಸಿದ್ದ ಸಿಲಿಂಡರ್ ಸ್ಫೋಟ; ಕುಟುಂಬದ ಐವರಿಗೆ ಗಂಭೀರ ಗಾಯ, ಹಾಸನ ಜಿಲ್ಲಾಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ..

2832
0
SHARE

ಗೀಸರ್‌ಗೆ ಅಳವಡಿಸಿದ್ದ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ಐವರು ಸದಸ್ಯರಿಗೆ ಗಂಭೀರ ಗಾಯಗಳಾಗಿವೆ. ಹಾಸನದ ಹೊಳೆನರಸಿಪುರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕುಟುಂಬಸ್ಥರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಮನೆಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ.

ಅವರೆಲ್ಲರೂ ಇನ್ನೂ ಮುಂಜಾನೆಯ ನಿದ್ರೆ ಮಂಪರಿನಿಂದ ಹೊರ ಬಂದಿರಲಿಲ್ಲ. ಇಂದು ರಜಾ ದಿನವಾದ್ದರಿಂದ ಒಂದಿಬ್ಬರು ಹೊರತು ಪಡಿಸಿ ಬಹುತೇಕ ಮಂದಿ ಬೆಳಗಾದರೂ ಮಲಗೇ ಇದ್ದರು. ಈ ವೇಳೆ ಗೀಸರ್ ಗೆ ಅಳವಡಿಸಿದ್ದ ಅನಿಲ ಸೋರಿಕೆಯಾಗಿ ಒಮ್ಮಿಂದೊಮ್ಮೆಗೇ ಸಿಲಿಂಡರ್ ಸ್ಫೋಟಿಸಿದೆ.ಹೊಳೆನರಸೀಪುರ ಪಟ್ಟಣ ಏಕಾಂತ ರಾಮೇಶ್ವರ ರಸ್ತೆಯಲ್ಲಿರುವ ಪುರುಷೋತ್ತಂ ಎಂಬುವರ ಮನೆಯಲ್ಲಿ ಬೆಳಗ್ಗೆ 6 ರಿಂದ 6.15 ರ ಸುಮಾರಿನಲ್ಲಿ ಈ ಅವಘಡ ನಡೆದಿದೆ.

ಮನೆಯಲ್ಲಿ ಬಾಡಿಗೆಗಿದ್ದ ಅರಕಲಗೂಡು ತಾಲೂಕು ಗಂಗೂರು ಗ್ರಾಮದ ಭಾಸ್ಕರಚಾರಿ, ಅವರ ಸಹೋದರಿ ದ್ರಾಕ್ಷಾಯಿಣಿ, ಮಕ್ಕಳಾದ ಪಲ್ಲವಿ, ಪೂಜಾ, ಮೊಮ್ಮಕ್ಕಳಾದ ಯೋಗೇಶ್ ಹಾಗೂ ಪ್ರಣತಿ ಗಾಯಗೊಂಡಿದ್ದಾರೆ. ಈ ಪೈಕಿ ಪ್ರಣತಿ ಹೊರತುಪಡಿಸಿ ಉಳಿದೆಲ್ಲರಿಗೂ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿದ್ದು, ಹಾಸನ ಜಿಲ್ಲಾಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಎಲ್ಲರೂ ಚೀರಾಡಿಕೊಂಡು ಹೊರ ಬರಲು ಯತ್ನಿಸಿದ್ದಾರೆ. ಆದರೆ ಭಯದ ಗಡಿಬಿಡಿಯಲ್ಲಿ ಬಾಗಿಲು ತೆಗೆಯಲು ಸಾಧ್ಯವಾಗದ ಕಾರಣ, ಗಾಯದ ಪ್ರಮಾಣ ಹೆಚ್ಚಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಬೆಂಕಿ ಅವಘಡಕ್ಕೆ ಮನೆಯ ಕಿಟಕಿ ಗಾಜು ಪುಡಿಪುಡಿಯಾಗಿದ್ದು, ಗೃಹಬಳಕೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಈ ವೇಳೆ ಮನೆಯವರು ಬೆಂಕಿಯ ಕೆನ್ನಾಲಿಗೆಯಿಂದ ಹೊರಬಂದು ಸಂಬಂಧಿಕರ ಮನೆಗೆ ಹೋಗಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಅದೃಷ್ಟವಶಾತ್ ಬೆಂಕಿ ಅವಘಡದಿಂದ ಸಾವು ಸಂಭವಿಸಿಲ್ಲವಾದ್ರೂ, ಮುಂದೆ ಏನಾಗುವುದೋ ಎಂಬ ಆತಂಕದಿಂದ ಮನೆ ಮಂದಿ ಕಣ್ಣೀರಿಡುತ್ತಿದ್ದಾರೆ.4 ವರ್ಷಗಳ ಹಿಂದೆ ಇದೇ ಹೊಳೆನರಸೀಪುರ ಪಟ್ಟಣದ ಅಂಬೇಡ್ಕರ್ ಜನತಾ ಕಾಲೋನಿಯಲ್ಲಿ ಸಿಲಿಂಡರ್ ಸ್ಫೋಟಿಸಿ ಒಂದೇ ಕುಟುಂಬದ ನಾಲ್ವರು ಗಾಯಗೊಂಡು, ಮೂವರು ಮೃತಪಟ್ಟಿದ್ದರು. ಉಳಿದ ಒಬ್ಬನೇ ಸದಸ್ಯ ಈವರೆಗೂ ಯಾವುದೇ ಪರಿಹಾರ ಸಿಗದೇ ಕೂಲಿ ನಂಬಿ ಜೀವನ ಸಾಗಿಸುತ್ತಿದ್ದಾರೆ. ಇದೀಗ ಮತ್ತೊಂದು ದುರಂತ ಮರುಕಳಿಸಿರುವುದು ಆತಂಕ ಹೆಚ್ಚಿಸಿದೆ.

LEAVE A REPLY

Please enter your comment!
Please enter your name here