Home District ಚಾಮರಾಜನಗರದಿಂದ ವಿ.ಶ್ರೀನಿವಾಸ ಪ್ರಸಾದ್ ಕಣಕ್ಕೆ..! ಹಾಲಿ ಸಂಸದ ಧೃವನಾರಾಯಣ್ ವಿರುದ್ಧ ಅಖಾಡಕ್ಕೆ..!

ಚಾಮರಾಜನಗರದಿಂದ ವಿ.ಶ್ರೀನಿವಾಸ ಪ್ರಸಾದ್ ಕಣಕ್ಕೆ..! ಹಾಲಿ ಸಂಸದ ಧೃವನಾರಾಯಣ್ ವಿರುದ್ಧ ಅಖಾಡಕ್ಕೆ..!

1148
0
SHARE

ರಾಜ್ಯದಲ್ಲಿ ಕಾಂಗ್ರೆಸ್-ಬಿಜೆಪಿ ಸಂಸದರು ಇರುವ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿದೆ. ಅದರಲ್ಲು ಪ್ರಮುಖವಾಗಿ ಚಾಮರಾಜನಗರ, ಮಂಡ್ಯ, ಹಾಸನ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೂಕ್ತ ಅಭ್ಯರ್ಥಿಗಳೇ ಸಿಗುತ್ತಿಲ್ಲ.

ಹೀಗಾಗಿ ಗೆಲ್ಲುವ ಅಭ್ಯರ್ಥಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದು ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಬಂದಿರುವ ಪ್ರಭಾವಿಗಳನ್ನೇ ಮೂರೂ ಕ್ಷೇತ್ರಗಳಲ್ಲಿ ಕಣಕ್ಕಿಳಿಸಲು ಬಿಜೆಪಿ ಪ್ರಮುಖರು ನಿರ್ಧರಿಸಿದ್ದಾರೆ. ಚಾಮರಾಜನಗರದಿಂದ ಶ್ರೀನಿವಾಸ್ ಪ್ರಸಾದ್, ಹಾಸನದಿಂದ ಎ.ಮಂಜು ಅಖಾಡಕ್ಕಿಳಿಯಲಿದ್ದಾರೆ. ಲೋಕಸಭಾ ಚುನಾವಣಾ ಕಣ ದಿನ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸಂಸದರು ಇರುವ ಕ್ಷೇತ್ರಗಳಿಗೆ ಬಿಜೆಪಿ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದೆ.

ಕಾಂಗ್ರೆಸ್ ನ ಭದ್ರಕೋಟೆ ಎಂದೇ ಪರಿಗಣಿತವಾಗಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಬಿಜೆಪಿ ಹುರಿಯಾಳಾಗುವುದು ಬಹುತೇಕ ನಿಶ್ಚಿತವಾಗಿದೆ. ಚುನಾವಣಾ ರಾಜಕೀಯದಿಂದ ದೂರ ಸರಿದಿದ್ದ ಶ್ರೀನಿವಾಸ ಪ್ರಸಾದ್ ರನ್ನು ಚಾಮರಾಜನಗರದ ಬಿಜೆಪಿ ಕಾರ್ಯಕರ್ತರು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೇ ಮನವೊಲಿಸಿ, ಚುನಾವಣೆ ಸ್ಪರ್ಧೆಗೆ ಒಪ್ಪಿಸಿದ್ದಾರೆ.ವಿಶೇಷ ಅಂದ್ರೆ, ಚಾಮರಾಜನಗರದಿಂದ ಸ್ಪರ್ಧಿಸಲು ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮು ಸೇರಿದಂತೆ 16 ಆಕಾಂಕ್ಷಿಗಳಿದ್ದರು.

ಆದರೆ, ವಿ.ಶ್ರೀನಿವಾಸ ಪ್ರಸಾದ್ ಅವರ ಹೆಸರು ಮುಂಚೂಣಿಗೆ ಬರುತ್ತಿದ್ದಂತೆಯೇ ಹದಿನಾರೂ ಆಕಾಂಕ್ಷಿಗಳು ಹಿಂದೆ ಸರಿದು, ಶ್ರೀನಿವಾಸ ಪ್ರಸಾದ್ ರನ್ನು ಬೆಂಬಲಿಸುತ್ತಿದ್ದಾರೆ.ಒತ್ತಡಕ್ಕೆ ಮಣಿದಿರುವ ಶ್ರೀನಿವಾಸ ಪ್ರಸಾದ್ ತಮ್ಮ ಒಂದು ಕಾಲದ ಶಿಷ್ಯ ಆರ್.ಧೃವನಾರಾಯಣ್ ವಿರುದ್ದ ಸ್ಪರ್ಧೆಗೆ ಸಜ್ಜಾಗಿದ್ದಾರೆ. ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಪ್ರಮುಖವಾದುದು ಹಾಸನ. ಜೆಡಿಎಸ್ ಭದ್ರಕೋಟೆ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಇಲ್ಲಿ ಜೆಡಿಎಸ್ ಅಭ್ಯರ್ಥಿ.

ಹಾಗಾಗಿ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಸ್ಪರ್ಧೆಗೆ ದೇವೇಗೌಡರ ಕುಟುಂಬದ ಕಟ್ಟಾ ವಿರೋಧಿ ಎಂದೇ ಬಿಂಬಿತವಾಗಿರುವ ಮಾಜಿ ಸಚಿವ ಎ.ಮಂಜುಗೆ ಬಿಜೆಪಿ ಮೊರೆ ಹೋಗಿದೆ. ಹಾಸನ ಜಿಲ್ಲಾ ಬಿಜೆಪಿ ಪ್ರಮುಖರ ತೀವ್ರ ವಿರೋಧದ ನಡುವೆಯೂ ಎ.ಮಂಜುವನ್ನು ವಾಪಸ್ ಬಿಜೆಪಿಗೆ ಕರೆತಂದು ಟಿಕೆಟ್ ಕೊಡುವ ಪ್ರಯತ್ನಗಳು ನಡೆದಿವೆ.ಕೋಲಾರದಲ್ಲಿ ಕೇಂದ್ರದ ಮಾಜಿ ಸಚಿವ ವಿ.ಮುನಿಯಪ್ಪ ವಿರುದ್ದ ಸ್ಪರ್ಧಿಸಲು ಬಿಜೆಪಿಯಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ರೆಡಿ ಇದೆ.

ಕಳೆದ ಎರಡು ಬಾರಿ ಮುನಿಯಪ್ಪ ವಿರುದ್ದ ಸ್ಪರ್ಧಿಸಿ ಸೋತಿದ್ದ ಮಾಜಿ ಎಂಎಲ್ ಸಿ ಡಿ.ಎಸ್.ವೀರಯ್ಯ, ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಬಂದಿರುವ ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ಪರಿಶಿಷ್ಟ ಜಾತಿ ಮತ್ತು ಪಂಗಡ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ಚಿ.ನಾ.ರಾಮು ಬಿಜೆಪಿ ಟಿಕೆಟ್ ಗೆ ತೀವ್ರ ಲಾಭಿ ನಡೆಸುತ್ತಿದ್ದಾರೆ. ಡಿ.ಎಸ್.ವೀರಯ್ಯ ಹಾಗೂ ಚಿ.ನಾ.ರಾಮು ಬೆಂಬಲಿಗರಂತೂ ಇಂದು ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿ, ಒತ್ತಡ ಹೇರುವ ಪ್ರಯತ್ನವನ್ನೂ ಮಾಡಿದ್ರು. ಯಡಿಯೂರಪ್ಪ ಅವರು ಎರಡೂ ಕಡೆಯ ಬೆಂಬಲಿಗರಿಂದ ಮನವಿ ಸ್ವೀಕರಿಸಿದ್ರೇ ಹೊರತು ಯಾರಿಗೂ ಸ್ಪಷ್ಟ ಭರವಸೆ ನೀಡಲಿಲ್ಲ.

ಯಡಿಯೂರಪ್ಪಗೆ ಮುತ್ತಿಗೆ ಹಾಕಿರುವ ವೀರಯ್ಯ, ಚಿ.ನಾ.ರಾಮು ಬೆಂಬಲಿಗರು.ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು ಎಂಬ ಗಾದೆ ಮಾತನ್ನು ಬಿಜೆಪಿ ಈಗ ಯಥಾವತ್ ಜಾರಿಗೆ ಮುಂದಾಗಿದೆ. ರಾಜ್ಯದ ಪ್ರಭಾವಿ ಕಾಂಗ್ರೆಸ್ ನಾಯಕರ ವಿರುದ್ದ ಬಿಜೆಪಿಯು, ಕಾಂಗ್ರೆಸ್ ನಿಂದ ವಲಸೆ ಬಂದಿರುವ ಪ್ರಭಾವಿಗಳನ್ನೇ ದಾಳವಾಗಿ ಬಳಕೆ ಮಾಡುತ್ತಿದೆ. ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಉಮೇಶ್ ಜಾದವ್, ಚಾಮರಾಜನಗರದಲ್ಲಿ ಧೃವನಾರಾಯಣ ವಿರುದ್ದ ವಿ.ಶ್ರೀನಿವಾಸ ಪ್ರಸಾದ್, ಕೋಲಾರದಲ್ಲಿ ವಿ.ಮುನಿಯಪ್ಪ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಅಥವಾ ಚಿ.ನಾ.ರಾಮು ಹಾಗೂ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಎ.ಮಂಜು ಅವರನ್ನು ಕಣಕ್ಕಿಳಿಸುತ್ತಿರುವುದೇ ಅದಕ್ಕೆ ಸಾಕ್ಷಿ.

LEAVE A REPLY

Please enter your comment!
Please enter your name here