Home District ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಡೆ ಕಣ್ಣು ಹಾಕಿರುವ ಮಾಜಿ ಪ್ರಧಾನಿ ದೇವೇಗೌಡರು..!! JDSನಿಂದ ಮಾಜಿ ಪ್ರಧಾನಿ...

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಡೆ ಕಣ್ಣು ಹಾಕಿರುವ ಮಾಜಿ ಪ್ರಧಾನಿ ದೇವೇಗೌಡರು..!! JDSನಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಣಕ್ಕೆ..ಶತಾಯಗತಾಯ ಈ ಬಾರಿ ನಮ್ಮದೇ ಕ್ಷೇತ್ರ ಅಂತಿದಾರೆ ದೊಡ್ಡ ಗೌಡರು..!

1931
0
SHARE

ಶತಾಯ ಗತಾಯ ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರನ್ನ ಹಣಿಯಲೇಬೇಕೆಂದು ಮಹಾ ಘಟಬಂಧನ್ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯವ್ರನ್ನ ಏಕಾಂಗಿಯಾಗಿ ಮಾಡಹೊರಟಿದೆ ಘಟಬಂಧನ್ ಟೀಮ್.

ಹೀಗಾಗಿ ಪ್ರತಿಯೊಂದು ಲೋಕಸಭಾ ಕ್ಷೇತ್ರಗಳನ್ನ ಅಳೆದು ತೂಗಿ, ಯೋಗ್ಯ ಅಭ್ಯರ್ಥಿಯ ಆಯ್ಕೆಯಲ್ಲಿ ಎರಡೂ ಪಕ್ಷಗಳ ನಾಯಕರು ತಲ್ಲೀನರಾಗಿದ್ದಾರೆ. ಅಂತಹ ಲೋಕಸಭಾ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರ ಕೂಡ ಒಂದು…  ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಲೋಕಸಭಾ ಚುಣಾವಣಾ ಕಾವು ಜೋರಾಗಿದ್ದು ಈಗಿನಿಂದಲೇ ಅಭ್ಯರ್ಥಿಗಳ ತಲಾಶ್ ನಡೆದಿದೆ.ಹಾಗಾದ್ರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 2014 ರ ಚುನಾವಣೆಯ ಮೇಲೆ ನೋಟ ಬೀರೋದಾದ್ರೆ, ತಮ್ಮ ಸಮೀಪದ ಸ್ಪರ್ಧಿ ಬಿಜೆಪಿಯ ಬಿ.ಎನ್.ಬಚ್ಚೇಗೌಡರನ್ನ ಪರಾಭವಗೊಳಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಎಂ.ವೀರಪ್ಪ ಮೊಯ್ಲಿ 9.520 ಮತಗಳ ಅಂತರದಲ್ಲಿ ಜಯಗಳಿಸಿದ್ದರು.. ಕಳೆದ ಬಾರಿ ಕಡಿಮೆ ಮತಗಳ ಅಂತರದಿಂದಪರಾಜಿತರಾಗಿದ್ದ ಬಚ್ಚೇಗೌಡರೇ ಆ ಬಾರಿಯೂ ಬಿಜೆಪಿ ಅಭ್ಯರ್ಥಿ..

ಹಾಗಾಗಿ ಈ ಬಾರಿಯೂ ಹಾಲಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಮತ್ತು ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರ ನಡುವೆ ನೇರ ಹಣಾಹಣಿ ನಡೆಯಲಿದೆ.. ಇದರ ಮದ್ಯೆ ಕಳೆದ ಬಾರಿ 3,46,339 ಮತಗಳನ್ನ ಪಡೆದಿದ್ದ ಜೆಡಿಎಸ್ ಕೂಡ ಪ್ರಭಲವಾಗಿದ್ದು ಈ ಬಾರಿ ಮೈತ್ರಿ ಧರ್ಮದ ಪ್ರಕಾರ ನಮಗೆ ಕ್ಷೇತ್ರವನ್ನ ಬಿಟ್ಟುಕೊಟ್ಟು ಸಪೋರ್ಟ್ ಮಾಡಿ ಅಂತ ಮಾಜಿ ಪ್ರಧಾನಿ ದೇವೇಗೌಡರೂ ಈ ಕ್ಷೇತ್ರದ ಮೇಲೆ ಈ ಬಾರಿ ಕಣ್ಣಿಟ್ಟಿದ್ದಾರೆನ್ನಲಾಗುತ್ತಿದೆ. ಹಾಗಾದ್ರೆ ಈ ಹಿಂದೆ ಯಾವ್ಯಾವ ಪಕ್ಷದ ಅಭ್ಯರ್ಥಿಗಳು ಎಷ್ಟೆಷ್ಟು ಮತಗಳನ್ನ ಪಡೆದಿದ್ದರು ಅನ್ನೋದನ್ನ ನೋಡೋದಾದ್ರೆ, 1) ಕಾಂಗ್ರೆಸ್- ಡಾ.ಎಂ.ವೀರಪ್ಪ ಮೊಯ್ಲಿ – 4,24,800. 2 ) ಬಿಜೆಪಿ- ಬಿ.ಎನ್.ಬಚ್ಚೇಗೌಡ-  4,15,280. 3) ಜೆಡಿಎಸ್- ಹೆಚ್.ಡಿ.ಕುಮಾರಸ್ವಾಮಿ -3,46,339. 4) ಸಿಪಿಐಎಂ ಪಕ್ಷ – 26,671.5) ಎಎಪಿ -6,182. 6) ನೋಟಾ – 7,682. 7) ಇತರೆ – 40,514. ಒಟ್ಟು – 12,63,911.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈ ಬಾರಿ ಯಾರಿಗೆ ಪ್ಲಸ್ ಯಾರಿಗೆ ಮೈನಸ್..? ಮೊದಲಿಗೆ ಕಾಂಗ್ರೆಸ್ ನ ಹಾಲಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿಯವರಿಗೆ ಅಪಾರ ರಾಜಕೀಯ ಅನುಭವವಿದೆ.ಹಲವಾರು ವರ್ಷಗಳಿಂದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ತಮ್ಮದೇ ಹಿಡಿತ ಹೊಂದಿರುವ ಮೊಯ್ಲಿ ಯವರಿಗೆ ಈ ಬಾರಿ ಮೈತ್ರಿ ಬೆಂಬಲವೂ ದೊರೆತ್ರೆ ಖಂಡಿತ ಪ್ಲಸ್ ಪಾಯಿಂಟ್ ಆಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಉಳಿದುಕೊಳ್ಳಲಿದೆ ಎಂಬ ನಿರೀಕ್ಷೆ ಇದ್ದರೂ, ಜೆಡಿಎಸ್ ಕೂಡ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲೆತ್ನಿಸುತ್ತಿರುವುದು ಸುಳ್ಳಲ್ಲ. ಅದಲ್ಲದೇ ನಿರಂತರವಾಗಿ 10 ವರ್ಷಗಳಿಂದ ಮೊಯ್ಲಿ ವಿರುದ್ಧ ನೇರವಾಗಿಯೇ ಹಲವಾರು ಆರೋಪಗಳನ್ನು ಮಾಡಿಕೊಂಡು ಬರುತ್ತಿರುವ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮೊಯ್ಲಿ ಅವರನ್ನು ಆಯ್ಕೆ ಮಾಡಿದ್ರೆ, ಅದೇ ವ್ಯಕ್ತಿ ಪರ ಮತ ಕೇಳುವುದು ಹೇಗೆ ಎಂಬ ಗೊಂದಲದಲ್ಲಿದ್ದಾರೆ. ಇದು ಮೊಯ್ಲಿಯವರಿಗೆ ಮೈನಸ್ ಅಂಕಗಳಾಗಿ ಪರಿವರ್ತನೆಯಾದ್ರೂ ಅಚ್ಚರಿಯಿಲ್ಲ.

ಬಿಜೆಪಿ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಾವ ಗೊಂದಲವೂ ಇಲ್ಲ.. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ.ವೀರಪ್ಪ ಮೊಯ್ಲಿ ಅವರಿಗಿಂದ ಕೇವಲ ಒಂಬತ್ತೂವರೆ ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದ ಬಚ್ಚೇಗೌಡರೇ ಈ ಬಾರಿಯೂ ಅಭ್ಯರ್ಥಿಯಾಗಿದ್ದು, ಈಗಾಗಲೇ ಚುನಾವಣೆ ಸಮೀಪಿಸುತ್ತಿರೋದ್ರಿಂದ ಬಚ್ಚೇಗೌಡರು ಕ್ಷೇತ್ರದಾದ್ಯಂತ ಪಾದರಸದಂತೆ ಓಡಾಡುತ್ತಿದ್ದಾರೆ.ಸಾಮಾನ್ಯವಾಗಿ ಒಂದು ಕ್ಷೇತ್ರದಲ್ಲಿ ನಡೆಯುವ ಯಾವುದೇ ಚುನಾವಣೆಗಳಾಗಿರಲಿ ಅಲ್ಲಿ ಆಡಳಿತ ವಿರೋಧಿ ಅಲೆ ಇದ್ದೇ ಇರುತ್ತೆ. ಅದರಂತೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈ ಹಿಂದಿನಂತೆ ಈ ಬಾರಿಯೂ ಆಡಳಿತ ವಿರೋಧಿ ಅಲೆ ಇದ್ದು, ಅದು ಬಚ್ಚೇಗೌಡರಿಗೆ ವರದಾನವಾಗಲಿದೆ..ಇನ್ನು ಈ ಕ್ಷೇತ್ರದಲ್ಲಿ 2.10 ಲಕ್ಷ ಜನ ಒಕ್ಕಲಿಗ ಮತದಾರರಿದ್ದಾರೆ. ಮೂಲತ: ಬಚ್ಚೇಗೌಡರೂ ಒಕ್ಕಲಿಗರಾಗಿರೋದ್ರಿಂದ ಜಾತಿ ಲೆಕ್ಕಾಚಾರ ಇವರ ಕೈ ಹಿಡೆಯಲಿದೆ.. ಅದರ ಜೊತೆಗೆ ಕ್ಷೇತ್ರದಾದ್ಯಂತ ಇರುವ ಮೋದಿ ಹವಾ ಬಚ್ಚೇಗೌಡರಿಗೆ ಶ್ರೀರಕ್ಷೆಯಾಗಿದೆಯ ಕಳೆದ ಬಾರಿ ಕಾಂಗ್ರೆಸ್ ಗೆ ಸಮನಾಂತರವಾಗಿ ಮತಗಳನ್ನ ಪಡೆಯುವಲ್ಲಿ ಸಾದ್ಯವಾದದ್ದು ಇದೇ ಕಾರಣಕ್ಕೆ.. ಹಾಗಾಗಿ ಮೋದಿಯವರ ಜನಪ್ರೀಯತೆ ಈ ಬಾರಿಯೂ ಬಚ್ಚೇಗೌಡರಿಗುವ ದೊಡ್ಡ ಪ್ಲಸ್  ಪಾಯಿಂಟ್…

ಈ ಬಾರಿ ಕ್ಷೇತ್ರದಲ್ಲಿ ಬಚ್ಚೇಗೌಡರಿಗೆ ಇರೋ ಮೈನಸ್ ಪಾಯಿಂಟ್ ಗಳನ್ನ ನೋಡೋದಾದ್ರೆ, ಯಾವುದೇ ಚುನಾವಣೆಯಲ್ಲಿ ಕೇವಲ ಜಾತಿ ಲೆಕ್ಕಾಚಾರವೊಂದೇ ಕೈ ಹಿಡಿಯೋದಿಲ್ಲ.. ಅಲ್ಲಿ ಮತ್ತೊಬ್ಬ ಅದೇ ಜಾತಿಯ ವ್ಯಕ್ತಿ ಮತ್ತಕೊಂದು ಪ್ರಭಲ ಪಕ್ಷದಿಂದ ನಿಂತರೆ, ಅಲ್ಲಿ ಮತಗಳು ಡಿವೈಡ್ ಆಗುವ ಸಾಧ್ಯತೆಗಳಿರುತ್ತವೆ.. ಹಾಗಾಗಿಯೇ ಬಚ್ಚೇಗೌಡರನ್ನ ಸೋಲಿಸಲೆಂದಾ ಕಳೆದ ಬಾರಿ ಇಲ್ಲಿ ಹಾಲಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ ಸ್ಪರ್ಧಿಸಿದ್ದರು.. ಇದೇ ಬಚ್ಚೇಗೌಡರ ಸೋಲಿಗೆ ಕಾರಣವಾಗಿತ್ತು.. ಇನ್ನು ಈ ಬಾರಿಯೂ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದೆ. ಹಾಗಾಗಿ ಒಂದು ವೇಳೆ ಲೋಕಸಭೆಯಲ್ಲೂ ಇದೇ ಮೈತ್ರಿ ಮುಂದುವರೆದು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಎರಡೂ ಪಕ್ಷಗಳ ನಡುವೆ ಒಬ್ಬ ಅಭ್ಯರ್ಥಿ ಏನಾದ್ರೂ ನಿಂತರೆ ಬಚ್ಚೇಗೌಡರ ಗೆಲುವು ಕಷ್ಟ..

ಮೈತ್ರಿ ವಿಚಾರದಿಂದ ಸಾಕಷ್ಟು ಕುತೂಹಲ ಕೆರಳಿಸಿರೋ ಚಿಕ್ಕಬಲ್ಳಾಪುರ ಲೋಕಸಭಾ ಕ್ಷೇತ್ರದ ಮೇಲೆ ಈ ಬಾರಿ ದೊಡ್ಡ ಗೌಡರ ಕಣ್ಣು ಬಿದ್ದಿದೆ.. ಕಳೆದ ಬಾರಿ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಎಚ್.ಡಿ.ಕುಮಾರಸ್ವಾಮಿಯವರು ಸ್ಪರ್ಧಿಸಿ ಪರಾಭವಗೊಂಡಿದ್ದ ಕಾರಣ ಪ್ರಸ್ತುತ ಚುನಾವಣೆಯಲ್ಲಿ ಪಕ್ಷದ ವರಿಷ್ಠ ನಾಯಕ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನೇ ಕರೆತಂದು ಜೆಡಿಎಸ್ ಅಭ್ಯರ್ಥಿ ಮಾಡಬೇಕೆಂದು ಜೆಡಿಎಸ್ ಮೊಗಸಾಲಿಯಲ್ಲಿ ಜೋರಾದ ಮಾತು ಕೇಳಿಬರುತ್ತಿದೆ. ದೇವೇಗೌಡರನ್ನ ಕಣಕ್ಕಿಳಿಸಿದ್ರೆ ತಾವು ಗೆಲ್ಲಿಸಿಕೊಂಡು ಬಂದೇ ಬರುತ್ತೇವೆ ಅಂತ ಜೆಡಿಎಸ್ ಮುಖಂಡರು ಒತ್ತಡ ಹಾಕುತ್ತಿದ್ದಾರೆ. ಮೈತ್ರಿ ಇನ್ನೂ ಮಾತುಕತೆ ಹಂತದಲ್ಲಿರೋದ್ರಿಂದ ಉಭಯ ಪಕ್ಷಗಳಲ್ಲಿ ಪರಿಹಾರ ಕಾಣುವ ಲಕ್ಷಣಗಳು ಕಾಣಿಸುತ್ತಿಲ್ಲ.. ಇದೆಲ್ಲದರ ನಡುವೆ ಒಂದು ವೇಳೆ ದೊಡ್ಡ ಗೌಡರು ಇಲ್ಲಿ ಸ್ಪರ್ಧೆ ಮಾಡೋದು ಖಚಿತವಾದ್ರೆ, ಹಾಲಿ ಸಂಸದ ವೀರಪ್ಪ ಮೊಯ್ಲಿ ಉಡುಪಿ-ಚಿಕ್ಕಮಂಗಳೂರು ಕ್ಷೇತ್ರಕ್ಕೆ ಶಿಪ್ಟ್ ಆಗಲಿದ್ದಾರೆ ಅನ್ನೋ ಮಾತುಗಳೂ ಕೇಳಿ ಬರುತ್ತಿವೆ…

ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವೂ ಸಹ ಮೂರು ಲಕ್ಷಕ್ಕೂ ಅಧಿಕ ಮತ ಪಡೆದಿರೋದು ಇಲ್ಲಿ ಜೆಡಿಎಸ್ ಗಿರೋ ವರ್ಚಸ್ಸನ್ನ ತೋರಿಸಿಕೊಡುತ್ತೆ.. ಇತಿಹಾಸವನ್ನ ತೆಗೆದುಕೊಂಡರೂ ಸಹ ಇಲ್ಲಿ ಜೆಡಿಎಸ್ ನ್ನ ಈ ಹಿಂದೆಯೂ ಇಲ್ಲಿಯ ಜನ ಬೆಂಬಲಿಸಿದ್ದಾರೆ..1996 ರ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಮಾಜಿ ಕೇಂದ್ರ ಸಚಿವ ಆರ್.ಎಲ್ ಜಾಲಪ್ಪ ಅಂದಿನ ಪ್ರಧಾನಿಯಾಗಿದ್ದ ಇದೇ ದೇವೇಗೌಡರ ಸಂಪುಟದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.  ಆಗಿನಿಂದಲೇ ಇಲ್ಲಿ ಜೆಡಿಎಸ್ ಪ್ರಭಾವವಿದೆ. ಅಲ್ಲದೇ ಹಾಲಿ ಸಂಸದ ಎಂ. ವೀರಪ್ಪ ಮೊಯ್ಲಿಯವರ ವಿರುದ್ಧ ಕ್ಷೇತ್ರದಲ್ಲಿರೋ ಆಡಳಿತ ವಿರೋಧಿ ಅಲೆಯನ್ನ ಬಳಸಿಕೊಂಡು ಈ ಬಾರಿ ಕಾಂಗ್ರೆಸ್ ಮುಖಂಡರ ಮೇಲೆ ಒತ್ತಡ ಹೇರಿ ಅಭ್ಯರ್ಥಿಯಾದ್ರೆ ಪ್ಲಸ್ ಪಾಯಿಂಟ್ ಗಲಿದೆ..

ಇನ್ನು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡರಿಗಿರೋ ಮೈನಸ್ ಪಾಯಿಂಟ್ ಗಳನ್ನ ನೋಡಿದ್ರೆ, ಈ ಹಿಂದೆ ನಿರಾಯಾಸವಾಗಿ ಗೆಲ್ಲುತ್ತಿದ್ದ ತಮ್ಮದೇ ಜನಾಂಗದ ನಾಯಕ ಬಚ್ಚೇಗೌಡರ ಗೆಲುವಿಗೆ ಇವರ ಮಗ ಹಾಲಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರೇ ಅಡ್ಡಗಾಲು ಹಾಕಿದ್ದು ಒಕ್ಕಲಿಗ ಸಮುದಾಯವನ್ನ ಕೆರಳಿಸಿದೆ.ಅಲ್ಲದೇ ಮೋದಿ ಪ್ರಭಾವನದ ಮುಂದೆ ದೊಡ್ಡ ಗೌಡರ ಪ್ರಭಾವ ಅಷ್ಟೋಂದು ವರ್ಕೌಟ್ ಆಗೋದಿಲ್ಲ ಎನ್ನುತ್ತಿವೆ ಅಲ್ಲಿನ ರಾಜಕೀಯ ಮೂಲಗಳು.. ಸ್ವತಂತ್ರವಾಗಿ ಕಾಂಗ್ರೆಸ್ ಪಕ್ಷ ಸ್ಪರ್ಧಿಸಿದ್ರೂ ಇವರೇನಾದ್ರೂ ಸ್ಪರ್ಧಿಸಿದ್ರೆ ಅದು ಇವರಿಗೆ ಮೈನಸ್ ಪಾಯಿಂಟ್ ಆಗಲಿದೆ..

ಹಾಗಾದ್ರೆ ಈ ಕ್ಷೇತ್ರದಲ್ಲಿನ ಜಾತಿವಾರು ಮತದಾರರನ್ನ ಸಂಖ್ಯಾವಾರು ನೋಡೋದಾದ್ರೆ, ಜಾತಿವಾರು ಅಂಕಿ ಅಂಶ.. ಒಕ್ಕಲಿಗರು: 2.80 ಲಕ್ಷ, ಬಲಜಿಗರು: 2.10 ಲಕ್ಷ, ಕುರುಬರು ಮತ್ತು ನಾಯಕರು: 3.20 ಲಕ್ಷ, ಹಿಂದುಳಿದ ವರ್ಗ/ ಪಂಗಡ: 1.8 ಲಕ್ಷ, ಲಿಂಗಾಯತರು ಮತ್ತು ನೇಕಾರರು: 1.6 ಲಕ್ಷ, ಗೊಲ್ಲರು: 80 ಸಾವಿರ, ಬೋವಿಗಳು: 70 ಸಾವಿರ, ಇತರೆ: 2 ಲಕ್ಷ. ಕ್ಷೇತ್ರದ ಜಾತಿ ಸಮೀಕರಣವನ್ನ ಗಮನಿಸಿದ್ರೆ ಈ ಕ್ಷೇತ್ರದಲ್ಲಿ ಬಹು ಸಂಖ್ಯಾತರಾಗಿರುವ ಒಕ್ಕಲಿಗರು ಮತ್ತು ಬಲಜಿಗರ ಪಾತ್ರವೇ ಬಹುಮುಖ್ಯವಾದದ್ದಾಗಿದೆ.. ನಂತರದಲ್ಲಿ ಕುರುಬರು, ಮತ್ತು ನಾಯಕ ಸಮುದಾಯದವರನ್ನ ಕಾಣಬಹುದಾಗಿದೆ.. ಹೀಗೆ ಸದ್ಯ ಕಾಂಗ್ರೆಸ್ ಭದ್ರಕೋಟೆಯಾಗಿರುವ ಈ ಕ್ಷೇತ್ರ ಈ ಬಾರಿ ಯಾರ ಪಾಲಾಗುತ್ತೆ ಅನ್ನೋದನ್ನ ಲೋಕ ಸಂಗ್ರಾಮವೇ ನಿರ್ಧರಿಸಲಿದೆ.. ಇದು ಈ ಕ್ಷೇತ್ರದ ಜಾತಿ ವಾರು ಅಂಶ.

ಈ ಎಲ್ಲ ಅಂಶಗಳನ್ನ ನೋಡಿದಾಗ ಇಲ್ಲಿ ಮೂರು ಪಕ್ಷಗಳಿಗೂ ಅಂಥದ್ದೇ ಪೈಪೋಟಿ ಇರುವುದು ಸ್ಪಷ್ಟವಾಗುತ್ತದೆಯಾದ್ರೂ ಕಾಂಗ್ರೆಸ್ ಗೆ ಪ್ರತಿಕೂಲ ವಾತಾವರಣವಿದೆ.. ಒಂದು ವೇಳೆ ಮೈತ್ರಿ ಏರ್ಪಟ್ಟು ಇಬ್ಬರಲ್ಲಿ ಒಬ್ಬರು ಯಾರೇ ಕಣಕ್ಕಿಳಿದ್ರೂ ಗೆಲುವು ಪಕ್ಕಾ.ಒಟ್ಟಾರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೆತ್ರದ ಚುನಾವಣೆ ಸಮೀಪಿಸುತ್ತಿದ್ದಂತೆ ಘಟಾನುಘಟಿಗಳೇ ರಾಜಕೀಯ ಅಖಾಡಕ್ಕೆ ದುಮುಕುತ್ತಿರೋದು ಈ ಬಾರಿ ಕ್ಷೇತ್ರದಲ್ಲಿ ಬಾರೀ ಕುತೂಹಲ ಮೂಡಿರೋದಂತೂ ಸತ್ಯ,, ಇನ್ನು ಚುನಾವಣಾ ಆಯೋಗದಿಂದ ಚುನಾವಣೆ ಘೋಷಣೆಯೊಂದಕ್ಕೆ ಅಭ್ಯರ್ಥಿಗಳು ಕಾಯುತ್ತಿದ್ದು, ತಮ್ಮ ತಮ್ಮ ರಾಜಕೀಯ ಅಖಾಡಗಳನ್ನು ಸಿದ್ದಪಡಿಸಿಕೊಳ್ಳೋದ್ರಲ್ಲಿ ಅಭ್ಯರ್ಥಿಗಳು ಭ್ಯುಜಿಯಾಗಿದ್ದಾರೆ.

 

LEAVE A REPLY

Please enter your comment!
Please enter your name here