Home Crime ಜನ್ಮದಾತನಿಗೆ ಬೇಡವಾಗಿದ್ಲು ರೋಗಗ್ರಸ್ಥ ಮಗಳು..! ಪತ್ನಿಯ ಮೇಲಿನ ಸಿಟ್ಟಿಗೆ ಮಗಳಿಗೆ ಹಾಕಿದ್ದ ವಿಷ..! ತಂದೆಯ ಎದುರಿಗೆ...

ಜನ್ಮದಾತನಿಗೆ ಬೇಡವಾಗಿದ್ಲು ರೋಗಗ್ರಸ್ಥ ಮಗಳು..! ಪತ್ನಿಯ ಮೇಲಿನ ಸಿಟ್ಟಿಗೆ ಮಗಳಿಗೆ ಹಾಕಿದ್ದ ವಿಷ..! ತಂದೆಯ ಎದುರಿಗೆ ಒದ್ದಾಡಿ ಜೀವಬಿಟ್ಟಿತ್ತು ಕೂಸು..!

2372
0
SHARE

ಇವನ ಮುಖ ನೋಡಿದ್ರೆ ಕೊಲೆ ಮಾಡೋ ಆಸಾಮಿ ತರಹ ಕಾಣಲ್ಲ ಅಲ್ಲ. ಆದ್ರೆ ಇವನ ಮನಸ್ಸಿದೆಯಲ್ಲ ಅದು ಅವನ ಹತ್ತಿರ ಆ ಕೆಲಸವನ್ನ ಮಾಡಿಸಿತ್ತು. ಅವನು ಮಾಡಿರೋ ಕೊಲೆ ಯಾವುದು ಯಾತಕ್ಕಾಗಿ ಅನ್ನೋದನ್ನ ಹೇಳೋದಕ್ಕಿಂತ ಮೊದಲು ಅವನ ಪರಿಚಯ ಹೇಳ್ತೀವಿ ಕೇಳಿ. ಇವನು ನಾಗರಾಜ್ ಅಂತ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಹೆಮ್ಮಾಡಿ ಕುಂಬ್ರಿಯವನು. ಹೆಮ್ಮಾಡಿ ಕುಂಬ್ರಿ ಅನ್ನೋದು ಕಗ್ಗತ್ತಲ ಕಾಡಿನ ಮಧ್ಯೆ ಇರೋ ಊರು. ಅಲ್ಲಲ್ಲಿ ಒಂದೊಂದು ಮನೆಗಳು ಕಾಣಿಸುತ್ತೆ. ಆ ಊರಿನ ಒಂದು ಭಾಗದಲ್ಲಿ ಈ ನಾಗರಾಜ್ ವಾಸವಿದ್ದಾನೆ. ತನ್ನ ಪತ್ನಿ ಮಂಗಳ ಮತ್ತು ಮೂವರು ಹೆಣ್ಣು ಮಕ್ಕಳ ಜೊತೆ ನಾಗರಾಜ್ ಅಲ್ಲಿ ವಾಸವಿದ್ದಾನೆ.

ಅಲ್ಲಿ ಇಲ್ಲಿ ಅಂತ ತೋಟದಲ್ಲಿ ಕೂಲಿ ಕೆಲಸ ಮಾಡ್ತಾನೆ.ಇದ್ದಕ್ಕಿದ್ದ ಹಾಗೆ ನಾಗರಾಜ್ ಬದಲಾಗಿ ಹೋಗಿದ್ದ. ಪತ್ನಿಗೆ ಸರಿಯಾದ ಪತಿಯಾಗಿರಲಿಲ್ಲ. ಆ ಪುಟ್ಟ ಮಕ್ಕಳ ಪಾಲಿಗೆ ಪ್ರೀತಿಯ ಅಪ್ಪನು ಆಗಲಿಲ್ಲ. ಅವರೆಲ್ಲರ ಪಾಲಿಗೆ ಇವನು ವಿಲನ್ ಆಗಿದ್ದ. ಇಲ್ಲಿವರೆಗು ನಮಗೆ ಪ್ರೀತಿಯನ್ನ ತೋರಿಸಿದ್ದ ವ್ಯಕ್ತಿ ಇವನೇನ ಅನ್ನೋ ಅಷ್ಟು ಅನುಮಾನ ಮೂಡುವ ಹಾಗೆ ಮಾಡಿದ್ದ. ಕೂಲಿ ಮಾಡಿದ್ರು ಹೆಂಡತಿ ಮಕ್ಕಳನ್ನ ಚೆನ್ನಾಗಿ ನೋಡ್ತಿದ್ದ ನಾಗರಾಜ್ ಈಗ  ತನ್ನ ವರಸೆ ಬದಲಾಯಿಸಿಕೊಂಡಿದ್ದ. ನಿಧಾನವಾಗಿ ಆತ ಕುಡಿಯೋದನ್ನ ಕಲಿತ್ತಿದ್ದ. ಅಲ್ಲದೆ ಕುಡಿದ ಮತ್ತಿನಲ್ಲಿ ಮನೆಗೆ ಬಂದು ರಾಕ್ಷಸನಂತೆ ಆಡೋದಕ್ಕೆ ಶುರುಮಾಡಿದ್ದ.

ಮನೆಯಲ್ಲಿದ್ದವರಿಗೆ ಅಪ್ಪ ಹಿಂಗ್ಯಾಕೆ ಆಡ್ತಿದ್ದಾನೆ ಅನ್ನೋದು ಗೊತ್ತೇ ಆಗಲಿಲ್ಲ. ಹೊರಗಡೆ ಎಲ್ಲರ ಜೊತೆ ಆರಾಮಾಗಿ ಇರ್ತಿದ್ದ. ಆದ್ರೆ ಮನೆಗೆ ಬಂದ್ರೆ ಮಾತ್ರ ರಾಕ್ಷಸನಂತೆ ಆಡೋದಕ್ಕೆ ಶುರುಮಾಡಿದ್ದ.ಅವನು ಹೀಗೆ ಆಡೋದಕ್ಕೆ ಒಂದು ಕಾರಣವು ಇತ್ತ. ಅವನ ತಲೆಗೆ ತನ್ನ ಹೆಂಡತಿಯ ಬಗ್ಗೆ ಅನುಮಾನ ಶುರುವಾಗಿತ್ತು. ನನ್ನ ಹೆಂಡ್ತಿ ಸರಿಯಿಲ್ಲ ಅನ್ನೋ ಹುಳ ತಲೆಗೆ ಹೊಕ್ಕಿ ಕೊರಿಯೋದಕ್ಕೆ ಶುರುಮಾಡಿತ್ತು. ಅಲ್ಲಿಂದ ನೋಡಿ ಅವನು ಫುಲ್ ಬದಲಾಗಿ ಹೋಗಿದ್ದ. ಇಷ್ಟು ವರ್ಷ ಜೊತೆಗೆ ಸಂಸಾರ ಮಾಡಿದ ಪತ್ನಿ ಮೇಲೆ ಅನುಮಾನ ಬಂದ ಮೇಲೆ ಅದ್ಯಾಗೆ ಆ ಸಂಸಾರ ಚೆನ್ನಾಗಿ ನಡೆಯುತ್ತೆ ಹೇಳಿ.

ಅವನಿಗೆ ಅನುಮಾನದ ರೋಗ ಶುರುವಾಗ್ತಿದ್ದ ಹಾಗೆ ಆ ಸಂಸಾರ ಹಳಿ ತಪ್ಪೋದಕ್ಕೆ ಶುರುವಾಯ್ತು. ಆಕೆ ಕಳಕಳಿಯಾಗಿ ನಾನು ಹಾಗಲ್ಲ ಅಂತ ಹೇಳಿದ್ರು ಕುಡುಕ ನಾಗರಾಜನ ಮನಸ್ಸು ಕೇಳೋದಕ್ಕೆ ಒಪ್ಪಲಿಲ್ಲ. ಒಂದು ಹೆಣ್ಣು ತನ್ನ ಗಂಡನಿಗೆ ಇನ್ನು ಹ್ಯಾಗೆ ತಾನೆ ಹೇಳೋದಕ್ಕೆ ಆಗುತ್ತೆ ಅಲ್ವಾ. ಹಾಗೆ ಆತನಿಗೆ ಕನ್ವಿನ್ಸ್ ಮಾಡೋದಕ್ಕೆ ಆಕೆಗೆ ಆಗಲೇ ಇಲ್ಲ. ಆ ವಿಷಯದಲ್ಲಿ ಆಕೆ ಸೋತು ಹೋಗಿದ್ಲು. ನಾಗರಾಜ್ ಇತ್ತೀಚಿನ ದಿನಗಳಲ್ಲಿ ತಾನು ನೆಮ್ಮದಿಯಿಂದ ಇರಲಿಲ್ಲ. ಮನೆಯವರನ್ನ ಕೂಡಾ ನೆಮ್ಮದಿಯಿಂದ ಇರೋದಕ್ಕೆ ಬಿಡಲಿಲ್ಲ. ಯಾಕಂದ್ರೆ ಅವನು ತನ್ನ ಮಗಳ ಆರೋಗ್ಯ ವಿಷಯದಲ್ಲು ಕೂಡಾ ಸೋತು ಹೋಗಿದ್ದ.

ಆತನ ಎರಡನೇ ಮಗಳು ನಯನಳಿಗೆ ಹೃದಯ ಸಂಬಂಧಿ ಖಾಯಿಲೆಯಿತ್ತು. ದಿನ ಕೂಲಿ ಮಾಡಿ ಹೊಟ್ಟೆ ಹೊರೆದುಕೊಳ್ಳೋನಿಗೆ ಮಗಳ ಈ ಖಾಯಿಲೆ ದೊಡ್ಡ ಭಾರವಾಗಿತ್ತು. ಆದ್ರೆ ಮಗಳನ್ನ ಹಾಗೆ ಬಿಡೋದಕ್ಕೆ ಆಗೋದಿಲ್ಲ ಅಲ್ವಾ. ಹಾಗಾಗಿ ಆತನಿಗೆ ಎಷ್ಟು ಸಾಧ್ಯವೋ ಅಷ್ಟು ಆಕೆಗೆ ಚಿಕಿತ್ಸೆಯನ್ನ ಕೊಡಿಸಿದ್ದಾನೆ. ಮಗಳು ಸರಿಯಾಗಲಿ ಅಂತ ಬೆಂಗಳೂರಿನವರೆಗೆ ಬಂದು ಚಿಕಿತ್ಸೆ ಕೊಡಿಸಿ ಕರೆದುಕೊಂಡು ಹೋಗಿದ್ದ. ಆದ್ರೆ ಆಕೆ ಮಾತ್ರ ಗುಣಮುಖವಾಗಲಿಲ್ಲ. ನಂತ್ರ ಊರಿನ ಹಿರಿಯರು ಅವರು ಇವರು ಅಂತ ಕೈಕಾಲು ಹಿಡಿದುಕೊಂಡು ಹಣ ಪಡೆದು ಚಿಕಿತ್ಸೆ ಕೊಡಿಸಿದ್ದ. ಆದ್ರೆ ಶನಿ ಖಾಯಿಲೆ ಮಾತ್ರ ಆ ಕಂದಮ್ಮನಿಂದ ದೂರ ಹೋಗಲಿಲ್ಲ. ಹೀಗಾಗಿ ಆತ ಸಾಕಷ್ಟು ತಲೆಕೆಡಿಸಿಕೊಂಡಿದ್ದ.

ಮಗಳಿಗೆ ಖಾಯಿಲೆ ಗುಣವಾಗಿಲ್ಲ ಅಂತ ತುಂಬಾ ತಲೆಕೆಡಿಸಿಕೊಂಡಿದ್ದ. ಅಲ್ಲದೆ ಹೆಚ್ಚು ಕುಡಿಯೋದಕ್ಕು ಶುರುಮಾಡಿದ್ದ. ಆದ್ರೆ ಇದೇ ಸಮಯದಲ್ಲಿ ಆತನಿಗೆ ಅದ್ಯಾರೋ ಹೆಂಡತಿಯ ಶೀಲದ ಬಗ್ಗೆ ಹುಳ ಬಿಟ್ಟಿದ್ರು. ತುಂಬಾ ಡಿಸ್ಟರ್ಬ್ ಆಗಿದ್ದ ಮನಸ್ಸಿಗೆ ಇದನ್ನ ತಡೆದುಕೊಳ್ಳೋದಕ್ಕೆ ಆಗಲಿಲ್ಲ. ಹೀಗಾಗಿ ಆತ ಇದನ್ನ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದ್ದ. ಇಷ್ಟು ವರ್ಷ ತನ್ನ ಜೊತೆ ಸಂಸಾರ ನಡೆಸಿದ್ದು ಇವಳು ಅಲ್ವೇ ಅಲ್ಲ ಅನ್ನೋ ರೀತಿಯಾಗಿ ಆತ ಆಡೋದಕ್ಕೆ ಶುರುಮಾಡಿದ್ದ. ಪಾಪ ಆಕೆಗೆ ಮಾತ್ರ ಏನಾಗಿದೆ ಅನ್ನೋದೆ ಗೊತ್ತಾಗಲಿಲ್ಲ. ಅಲ್ಲದೆ ಮೂರು ಹೆಣ್ಣು ಮಕ್ಕಳು ಆಗಿರೋದಕ್ಕೆ ಆತ ಸಾಕಷ್ಟು ನೊಂದುಕೊಂಡಿದ್ದ.

ಅವರ ಭವಿಷ್ಯ ಓದು, ಮದುವೆ ಅಂತ ಮುಂದಾಗೋ ಖರ್ಚಿನ ಬಗ್ಗೆ ತುಂಬಾನೇ ತಲೆ ಕೆಡಿಸಿಕೊಂಡಿದ್ದ. ಹೀಗಾಗಿ ಆತ ದಿನೇ ದಿನೇ ಮನೆಗೆ ಬಂದು ಹೆಂಡತಿ ಮಕ್ಕಳಿಗೆ ಟಾರ್ಚರ್ ಮಾಡೋದಕ್ಕೆ ಶುರುಮಾಡಿದ್ದ.ಬರ್ತಾ ಬರ್ತಾ ಇವನ ಟಾರ್ಚರ್ ಹೇಗಿತ್ತು ಅಂದ್ರೆ ತನ್ನ ಮಕ್ಕಳಿಗೆ ತಾನೇ ವಿಚಿತ್ರವಾಗಿ ಹಿಂಸೆ ನೀಡೋದಕ್ಕೆ ಶುರುಮಾಡಿದ್ದ. ಅಪ್ಪ ಸಂಜೆಯಾದ್ರೆ ಮನೆಗೆ ಯಾಕೆ ಬರ್ತಾನೆ ಅನ್ನುವಷ್ಟರ ಮಟ್ಟಿಗೆ ಆತ ಹಿಂಸೆ ನೀಡೋದಕ್ಕೆ ಶುರುಮಾಡಿದ್ದ. ಅದು ಯಾವಗಲೂ ಅಪರೂಪಕ್ಕೊಮ್ಮೆ ಇವನು ಹಾಗೆ ಆಡಿದ್ರೆ ಅವರಿಗೆ ಏನು ಅನಿಸುತ್ತಿರಲಿಲ್ವೇನೋ. ಆದ್ರೆ ಪ್ರತಿದಿನ ಇದೇ ಕಥೆಯಾದಾಗ ಮನೆ ನರಕವಾಗುತ್ತಾ ಹೋಯ್ತು.

ಅಲ್ಲದೆ ಪ್ರತಿದಿನ ಬೆಳಗ್ಗೆ ಕೆಲಸಕ್ಕೆ ಅಂತ ಹೊರಟವನು ಕೆಲಸಕ್ಕೆ ಮಾತ್ರ ಹೋಗ್ತಾ ಇರಲಿಲ್ಲ. ಹೆಂಡತಿ ಮೇಲೆ ಅನುಮಾನವಿದ್ದ ಕಾರಣ ಆತ ಮನೆಯ ಮುಂದಿನ ಮರವೇರಿ ಕುಳಿತುಕೊಳ್ತಿದ್ದ. ಸಂಜೆಯವರೆಗೂ ಮರದ ಮೇಲೆ ಕೂತ್ಕೊಂಡು ಮನೆಯಲ್ಲಿ ಹೆಂಡ್ತಿ ಏನು ಮಾಡ್ತಾಳೆ ಅಂತ ನೋಡ್ತಿದ್ದ. ಆದ್ರೆ ಅವನಿಗೆ ಅದ್ರಿಂದ ಏನು ಪ್ರಯೋಜನವಾಗಿಲ್ಲ. ಆದ್ರೆ ಪತ್ನಿ ಮೇಲಿನ ಅನುಮಾನವು ಕಡಿಮೆಯಾಗಿಲ್ಲ.ಇನ್ನು ಇವನ ಜೊತೆ ಸಂಸಾರ ನಡೆಸೋದಕ್ಕೆ ಸಾಧ್ಯವಾಗೋದಿಲ್ಲ ಅನ್ನೋದು ಗೊತ್ತಾಗ್ತಿದ್ದ ಹಾಗೆ ಮಂಗಳ ಗಂಡನ ಮನೆಯನ್ನ ಬಿಟ್ಟು ತವರು ಮನೆಗೆ ಸೇರಿದ್ಲು. ಅಲ್ಲಿ ಹೋಗಿ ನಡೆದ ವಿಚಾರವನ್ನೆಲ್ಲಾ ಹೇಳಿದ್ಲು. ಅಲ್ಲದೆ ಈ ಹಿಂದೆ ಊರಿನ ಹಿರಿಯರೆಲ್ಲ ಸೇರಿ ಸಂಧಾನ ಮಾಡಿದ್ರು. ಆದ್ರು ಆತ ಬದಲಾಗಿರಲಿಲ್ಲ.

ಅವರ ಬುದ್ದಿ ಮಾತುಗಳ್ಯಾವುದು ಇವನ ತಲೆಗೆ ಹೋಗಿರಲಿಲ್ಲ. ಹೀಗಾಗಿ ಆತ ಬದಲಾಗೋದಿಲ್ಲ ಅನ್ನೋ ಕಾರಣಕ್ಕೆ ಆಕೆ ತವರು ಮನೆಗೆ ಹೋಗಿದ್ಲು. ಅಲ್ಲದೆ ನಿನ್ನ ಗಂಡ ಅಷ್ಟೆಲ್ಲಾ ನವರಂಗಿ ಆಟ ಆಡ್ತಾನೆ ಅಂದ್ರೆ ನೀನು ಮಕ್ಕಳನ್ನ ನೋಡ್ಕೊಂಡು ಇಲ್ಲೇ ಇರು. ಹುಟ್ಟಿಸಿದ ದೇವರು ಹುಲ್ಲು ಮೇಯಿಸೋದಿಲ್ಲ ಅಂತ ಹೇಳಿದ್ರು. ಅಲ್ಲಿಗೆ ಆಕೆ ಎಲ್ಲವನ್ನ ಮರೆತು ತವರಿನಲ್ಲಿ ದಿನ ದೂಡೋದಕ್ಕೆ ಶುರುಮಾಡಿದ್ಲು. ಆದ್ರೆ ಮಧ್ಯದ ಮಗಳು ನಯನ ಮಾತ್ರ ಅಪ್ಪನನ್ನ ಬಿಟ್ಟು ಬರೋದಕ್ಕೆ ಮನಸ್ಸು ಮಾಡಲೇ ಇಲ್ಲ.ಈ ಮಧ್ಯೆ ಗಂಡ ಹೆಂಡತಿ ಜಗಳ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿತ್ತು. ಆಗ ಕಾರವಾರಕ್ಕೆ ಇಬ್ಬರನ್ನ ಕರೆಸಿ ಕೌನ್ಸೆಲಿಂಗ್ ಮಾಡಿದ್ರು.

ಅವತ್ತು ಕೌನ್ಸೆಲಿಂಗ್ ಗೆ ಅಂತ ಹೋದಾಗ ಅವಳು ಅಮ್ಮನ ಜೊತೆ ಹೋಗ್ತೀನಿ ಅಂತ ಹೇಳಿದ್ಲು. ಆದ್ರೆ ಆಕೆಗೆ ಚಿಕಿತ್ಸೆ ಕೊಡಿಸಬೇಕಿದ್ದ ಕಾರಣ ಅಪ್ಪನ ಜೊತೆ ಕಳುಹಿಸಿದ್ರು. ಇತ್ತ ನಾಗರಾಜ್ ಮಾತ್ರ ಏನಂದ್ರು ಬದಲಾಗೋ ಹಾಗೆ ಕಾಣಲೇ ಇಲ್ಲ. ಅತ್ತ ಪತ್ನಿ ಮಂಗಳ ಕೂಡಾ ಇನ್ನು ಇವನ ಜೊತೆ ನಾನು ಜೀವನ ನಡೆಸೋದಿಲ್ಲ ಅನ್ನೋ ತೀರ್ಮಾನಕ್ಕೆ ಬಂದು ಬಿಟ್ಟಿದ್ಲು. ಸತ್ರ ಅದು ನಾನು ನನ್ನ ತವರಿನಲ್ಲೇ ಸಾಯ್ತಿನಿ. ನನ್ನ ಮಕ್ಕಳಿಗೆ ಆ ದೇವರಿದ್ದಾನೆ ಅಂತ ಯೋಚಿಸಿದ್ಲು. ಹೀಗಾಗಿ ಈ ಸಂಬಂಧ ಮತ್ತೆ ಸುಧಾರಿಸೋ ಹಂತಕ್ಕೆ ಹೋಗಲೇ ಇಲ್ಲ.ಅತ್ತ ಹೆಂಡ್ತಿ ಮನೆಗೆ ಬರೋದಕ್ಕೆ ಒಪ್ಪಲಿಲ್ಲ. ಇತ್ತ ಮಗಳಿಗೆ ಖಾಯಿಲೆ ವಾಸವಾಗ್ತಿಲ್ಲ. ಇನ್ನು ಏನು ಮಾಡೋದು ಅಂತ ಇವನು ಯೋಚನೆ ಮಾಡೋದಕ್ಕೆ ಶುರುಮಾಡಿದ್ದ.

ಹೆಂಡ್ತಿಯನ್ನ ಮತ್ತೆ ಮನೆಗೆ ಕರೆಸಿಕೊಳ್ಳಬೇಕು ಅಂತ ಅಂದ್ರೆ ಏನಾದ್ರು ಮಾಡಲೇಬೇಕು ಅಂತ ಪ್ಲಾನ್ ಮಾಡ್ತಿದ್ದ. ಆಗ ಅವನ ತಲೆಗೆ ಬಂದಿದ್ದು ಖಾಯಿಲೆ ಬಿದ್ದ ಮಗಳನ್ನ ಕೊಂದ್ರೆ ಹೇಗೆ ಅಂತ. ಯಾವ ತಂದೆಗೆ ಯಾವ ಯೋಚನೆ ಬರಬಾರದಿತ್ತೋ ಆ ಯೋಚನೆ ಇವನಿಗೆ ಬಂದಿತ್ತು. ಆ ಮಗುವಿಗೆ ಖಾಯಿಲೆ ತರದೇ ಇರೋ ಸಾವನ್ನ ತಂದೆ ತರೋದಕ್ಕೆ ಕಾದಿದ್ದ.ನಾಗರಾಜ್ ಗೆ ಕುಡಿದು ಕುಡಿದು ಬುದ್ಧಿ ಕೆಟ್ಟು ಹೋಗಿತ್ತು. ಆತನಿಗೆ ತಾನು ಏನು ಮಾಡ್ತಿದ್ದೀನಿ ಅನ್ನೋದರ ಅರಿವೆ ಇಲ್ಲದಂತಾಗಿತ್ತು. ತಾನು ಮಾಡ್ತಿರೋದು ಸರಿನೋ ತಪ್ಪೋ ಅನ್ನೋ ವಿವೇಚನೆ ಕೂಡಾ ಅವನು ಕಳೆದುಕೊಂಡಿದ್ದ.ಆತ ಎಲ್ಲಾ ಮಮಕಾರಗಳನ್ನ ಮರೆತು ಆಕೆಯನ್ನ ಕೊಲ್ಲೋದಕ್ಕೆ ರೆಡಿಯಾಗಿದ್ದ.

ಅವತ್ತು ಆತನ ಮಗಳು ನಯನ ಶಾಲೆಯಿಂದ ಮನೆಗೆ ಬಂದು ಪಕ್ಕದ ಮನೆಯ ಮಕ್ಕಳೊಂದಿಗೆ ಆಟವಾಡೋದಕ್ಕೆ ಹೋಗಿತ್ತು. ಸಂಜೆ ಕಳೆದು ಕತ್ತಲಾಗ್ತಿದ್ದ ಹಾಗೆ ಆಟವಾಡಿ ಸುಸ್ತಾಗಿದ್ದ ಮಗು ಮನೆಗೆ ವಾಪಸ್ ಬಂದಿತ್ತು. ಆದ್ರೆ ಮನೆಗೆ ಬಂದು ನೋಡಿದ್ರೆ ಅಪ್ಪ ಇನ್ನು ಬಂದಿರಲಿಲ್ಲ. ಹೀಗಾಗಿ ಮನೆಯಲ್ಲಿ ಆಕೆಯೊಬ್ಬಳೆ ಸ್ವಲ್ಪ ಹೊತ್ತು ಕಳೆದಿದ್ದಾಳೆ. ನಂತ್ರ ಕೆಲ ಹೊತ್ತಿನ ನಂತ್ರ ಅಪ್ಪ ಮನೆಗೆ ಬಂದಿದ್ದಾನೆ. ಮನೆಗೆ ಬಂದ ಅಪ್ಪ ಸ್ವಲ್ಪ ಹೊತ್ತು ಮಲಗಿಕೊಂಡಿರು ಅಡಿಗೆ ಮಾಡಿ ಕೊಡ್ತೀನಿ ಅಂತ ಹೇಳಿದ್ದ. ನಂತ್ರ ರಾತ್ರಿ ಆಕೆಗೆ ಅಡಿಗೆ ಮಾಡಿ ಊಟವನ್ನ ಹಾಕಿದ್ದಾನೆ. ಆದ್ರೆ ಪರಮಪಾಪಿ ಆಕೆಗೆ ಊಟ ಮಾತ್ರ ಹಾಕಿರಲಿಲ್ಲ.

ಊಟದ ಜೊತೆಗೆ ಆಕೆಗೆ ವಿಷವನ್ನು ಹಾಕಿದ್ದ. ಆ ಪುಟ್ಟ ಮಗುವಿಗೆ ಅಪ್ಪ ಹಾಕಿದ ಊಟ ಅಮೃತ ಅಂತ ಅಂದುಕೊಂಡಿದ್ಲು. ಯಾವುದೇ ಅನುಮಾನ ಆತಂಕವಿಲ್ಲದೆ ಆಕೆ ಊಟ ಮಾಡಿದ್ಲು. ಮೊದಲೇ ರೋಗಗ್ರಸ್ಥ ಮಗು ಕೆಲವೇ ಕೆಲವು ತುತ್ತು ಹೊಟ್ಟೆಗೆ ಸೇರ್ತಿದ್ದ ಹಾಗೆ ಮಗು ನೆಲದ ಮೇಲೆ ಬಿದ್ದು ಹೊರಳಾಡೋದಕ್ಕೆ ಶುರುಮಾಡಿತ್ತು. ಆದ್ರು ತನ್ನಪ್ಪ ನನಗೆ ವಿಷ ಹಾಕಿದ್ದಾನೆ ಅನ್ನೋದು ಮಾತ್ರ ಆಕೆಗೆ ಗೊತ್ತೇ ಇರಲಿಲ್ಲ.ಊಟ ಹಾಕಿ ಕೊಟ್ಟ ತಂದೆ ಅಲ್ಲಿಂದ ಹೊರಗೆ ಹೋಗಿ ಬಿಟ್ಟಿದ್ದ. ಯಾರಿಗಾದ್ರು ವಿಷಯ ತಿಳಿಯುತ್ತೆ ಅನ್ನೋ ಕಾರಣಕ್ಕೆ ಅಲ್ಲಿಂದ ಸ್ವಲ್ಪ ದೂರಕ್ಕೆ ಹೋಗಿ ಕೂತ್ಕೊಂಡು ನೋಡ್ತಿದ್ದ. ಕೆಲವು ಹೊತ್ತಿನ ನಂತ್ರ ಮಗಳ ಕಿರುಚಾಟದ ಶಬ್ದ ನಿಲ್ತಿದ್ದ ಹಾಗೆ ವಾಪಸ್ ಮನೆಗೆ ಬಂದಿದ್ದ.

ಅಷ್ಟರಲ್ಲಿ ಆ ಮಗು ವಿಷ ತಿಂದು ಒದ್ದಾಡಿ ಒದ್ದಾಡಿ ನೆಲದ ಮೇಲೆ ಪ್ರಾಣ ಬಿಟ್ಟಿತ್ತು. ಅಪ್ಪ ಹಾಕಿದ್ದ ವಿಷಕ್ಕೆ ಆ ಮಗು ಜೀವ ಕಳೆದುಕೊಂಡಿತ್ತು. ನಂತ್ರ ಆತ ಆತುರಾತುರವಾಗಿ ಬಂದು ಅಲ್ಲಿ ಬಿದ್ದಿದ್ದ ಅನ್ನ ಮತ್ತು ವಿಷದ ವಾಂತಿಯನ್ನ ಕ್ಲೀನ್ ಮಾಡಿದ್ದ. ಅಲ್ಲದೆ ಸೀಮೆಎಣ್ಣೆ ಮತ್ತು ಪರ್ಫ್ಯೂಮ್ ಹಾಕಿ ವಾಸನೆ ಗೊತ್ತಾಗದ ಹಾಗೆ ಮಾಡಿದ್ದ. ಯಾಕಂದ್ರೆ ವಿಷದ ವಾಸನೆ ಬಂದ್ರೆ ಕೊಲೆ ಮಾಡಿರೋದು ಗೊತ್ತಾಗುತ್ತೆ ಅಂತ ಹಾಗೆ ಮಾಡಿದ್ದ. ನಂತ್ರ ಯಾಕೋ ಈ ಮನೆಯಲ್ಲಿ ಮಗು ಕೂಗ್ತಿರೋ ಸದ್ದು ಕೇಳ್ತಿತ್ತು ಅಂತ ಪಕ್ಕದ ಮನೆಯವರು ಮನೆಯ ಹತ್ತಿರ ಬಂದಿದ್ದಾರೆ. ಯಾಕಂದ್ರೆ ಕುಡಿದ ಮತ್ತಿನಲ್ಲಿ ಅವನೇನಾದ್ರು ಮಾಡಿದ್ನ ಅನ್ನೋ ಅನುಮಾನ ಬಂದಿತ್ತು.ಅವ್ರು ಮನೆಯ ಹತ್ತಿರ ಬರ್ತಿದ್ದ ಹಾಗೆ ನಾಗರಾಜ್ ಅಲ್ಲಿಂದ ಓಡಿ ಹೋಗಿದ್ದ. ಅವರೆಲ್ಲ ಮನೆಗೆ ಬಂದು ನೋಡಿದ್ರೆ ಮಗು ಸತ್ತು ಮಲಗಿತ್ತು. ಕೊನೆಗೆ ಒಂದು ದಿನ ಆತ ಯಲ್ಲಾಪುರದ ಸ್ವಲ್ಪ ದೂರದಲ್ಲಿ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿರೋದು ಗೊತ್ತಾಗಿತ್ತು.

ಆ ಹೋಟೆಲ್ ನಲ್ಲಿ ಹೊತ್ತು ಹೊತ್ತಿಗೆ ಊಟ ಮತ್ತು ಮಲಗೋದಕ್ಕೆ ಜಾಗ ಸಿಕ್ಕಿದ ಕಾರಣ ಅಲ್ಲಿಂದ ಹೊರಗೆ ಬರ್ತಾನೆ ಇರಲಿಲ್ಲ. ಹಾಗೇನಾದ್ರು ಹೊರಗೆ ಬಂದ್ರೆ ಪೊಲೀಸ್ರಿಗೆ ತಗಲಾಕಿಕೊಳ್ತೀನಿ ಅನ್ನೋದು ಗೊತ್ತಿತ್ತು. ಹೀಗಾಗಿ ಆತ ಹೊರಗೆ ಬರ್ತಾನೆ ಇರಲಿಲ್ಲ. ಆದ್ರೆ ಪೊಲೀಸ್ರಿಗೆ ಆತ ಆ ಹೋಟೆಲ್ ನಲ್ಲಿ ಇರೋದು ಗೊತ್ತಾಗಿತ್ತು. ನಂತ್ರ ಅಲ್ಲಿಗೆ ಹೋಗಿ ಅವನನ್ನ ಎಳ್ಕೊಂಡು ಬಂದಿದ್ರು. ಯಾವಾಗ ಪೊಲೀಸ್ರು ನಾಲ್ಕು ಬಾರಿಸಿದ್ರೋ ಆಗ ಎಲ್ಲಾ ವಿಷಯವನ್ನ ಅವರ ಮುಂದೆ ಹೇಳಿದ್ದ. ಅವನು ತಾನು ಮಾಡಿದ ಕೃತ್ಯದ ಬಗ್ಗೆ ಹೇಳ್ತ ಇದ್ರೆ ಪೊಲೀಸ್ರಿಗೆ ಅವನನ್ನ ಅಲ್ಲೇ ಹೂತು ಹಾಕೋಣ ಅಂತ ಸಿಟ್ಟು ಬಂದಿತ್ತು. ಆದ್ರೆ ಅವ್ರು ಕೂಡಾ ಕಾನೂನನ್ನ ಮೀರಿ ಹೋಗೋದಕ್ಕೆ ಸಾಧ್ಯವಿಲ್ಲ ಅಲ್ವ.  ಆಯಸ್ಸು ತೀರೋವರೆಗಾದ್ರು ಆತ ಆ ಮಗುವನ್ನ ಚೆನ್ನಾಗಿ ನೋಡಿಕೊಂಡು ಸಾಕಬೇಕಿತ್ತು. ಆದ್ರೆ ತನ್ನ ಹಾಳು ಬುದ್ದಿಯನ್ನ ಕೇಳಿ ಕೊಲೆ ಮಾಡಿ ಜೈಲು ಸೇರಿದ್ದಾನೆ.

LEAVE A REPLY

Please enter your comment!
Please enter your name here