Home Cinema ಡಬ್ಬಿಂಗ್ ಸಿನಿಮಾ ಕಮ್ಯಾಂಡೋಗೆ ಕಾನೂನಿನ ಪ್ರೊಟೆಕ್ಷನ್..!? ಸತ್ಯಮೇವ ಜಯತೇ ಎಂದು ಬೀದಿಗಿಳಿದಿದ್ದ ಕನ್ನಡ ಹೋರಾಟಗಾರರು ಎಲ್ಲಿ...

ಡಬ್ಬಿಂಗ್ ಸಿನಿಮಾ ಕಮ್ಯಾಂಡೋಗೆ ಕಾನೂನಿನ ಪ್ರೊಟೆಕ್ಷನ್..!? ಸತ್ಯಮೇವ ಜಯತೇ ಎಂದು ಬೀದಿಗಿಳಿದಿದ್ದ ಕನ್ನಡ ಹೋರಾಟಗಾರರು ಎಲ್ಲಿ ಹೋದರು.,??? “ಎಲ್ಲಿ ಓಡಿದಿರಿ, ನಿಲ್ಲಿ ಹೋರಾಟಗಾರರೇ..”

7266
0
SHARE

ಇಲ್ಲಿವರೆಗೂ ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶವಿಲ್ಲ ಅನ್ನೋ ಅಲಿಖಿತ ನಿಯಮ ಇತ್ತು. ಯಾವುದೇ ಪರಭಾಷೆಯ ಚಿತ್ರಗಳನ್ನ ಕನ್ನಡ ಭಾಷೆಗೆ ಡಬ್ ಮಾಡುವಂತಿಲ್ಲ ಅನ್ನೋ ನಿಯಮವನ್ನ 1960ರ ದಶಕದಲ್ಲಿ ಹಾಕಲಾಗಿತ್ತು. ಅಲ್ಲಿಂದ ಇಲ್ಲಿವರೆಗೂ ಡಬ್ಬಿಂಗ್ ಗೆ ಕನ್ನಡದಲ್ಲಿ ಅವಕಾಶ ಇರಲಿಲ್ಲ. ಇದಕ್ಕೆ ಚಿತ್ರರಂಗದ ಎಲ್ಲ ಘಟಾನುಘಟಿಗಳ ಬೆಂಬಲವೂ ಇತ್ತು. ಆದ್ರೆ ಕಳೆದ ಕೆಲವು ವರ್ಷಗಳಿಂದ ಕೆಲವರು ನಮಗೆ ಡಬ್ಬಿಂಗ್ ಬೇಕು ಅಂತ ಕೇಳೋದಕ್ಕೆ ಶುರುಮಾಡಿದ್ರು. ಮೊದಲು ಸಣ್ಣದಾಗಿದ್ದ  ಕೂಗು ನಂತರ ದೊಡ್ಡ ಸ್ವರೂಪ ಪಡೆದಿತ್ತು. ಆಮೇಲೆ ಅದು ತಣ್ಣಗಾಗಿದ್ದರೂ, ಅದು ಬೂದಿ ಮುಚ್ಚಿದ ಕೆಂಡದಂತಿತ್ತು ಅನ್ನೋ ಸತ್ಯ ಈಗ ಎಲ್ಲರಿಗೂ ಗೊತ್ತಾಗಿದೆ.

ಯಾಕಂದ್ರೆ, ಈಗ ಜನರ ಅಪೇಕ್ಷೆಯಂತೆಯೇ ಡಬ್ ಆದ ಕಮ್ಯಾಂಡೋ ಚಿತ್ರ  ಕನ್ನಡದಲ್ಲಿ ದೊಡ್ಡ ಮಟ್ಟದಲ್ಲೇ ಬಿಡುಗಡೆಯಾಗಿದೆ.ಕಮಾಂಡೋ ಸಿನಿಮಾ ಬಹುತಾರಾಗಣವನ್ನ ಹೊಂದಿರೋ ಚಿತ್ರ. ಅಜಿತ್ ಕುಮಾರ್, ವಿವೇಕ್ ಓಬೇರಾಯ್, ಕಾಜಲ್ ಅಗರವಾಲ್, ಅಕ್ಷರಾ ಹಾಸನ್ ಸೇರಿದಂತೆ ತಾರೆಯರ ದಂಡೇ ಸಿನಿಮಾದಲ್ಲಿದೆ. ಅಂದಹಾಗೆ ಇದು ತಮಿಳಿನ ವಿವೇಗಮ್ ಸಿನಿಮಾದ ಡಬ್ಬಿಂಗ್ ಅವತರಣಿಕೆ. ವಿವೇಗಮ್ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ತೆರೆಗೆ ಬಂದಿತ್ತು. ಇದೀಗ ಸರಿಯಾಗಿ ಒಂದು ವರ್ಷದ ಬಳಿಕ ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆಗಿದೆ. ಹರಿವು ಕ್ರಿಯೇಯನ್ಸ್ ಪ್ರೈವೇಟ್ ಲಿಮಿಟೆಡ್ ಈ ಚಿತ್ರವನ್ನ ಡಬ್ ಮಾಡಿ ಕನ್ನಡದಲ್ಲಿ ಬಿಡುಗಡೆಮಾಡಿದೆ.

ಕಮಾಂಡೋ ಸಿನಿಮಾ ಬರೊಬ್ಬರಿ 85ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿದೆ. ಮೊದಲೆಲ್ಲಾ ಅನ್ಯಭಾಷೆಗಳಲ್ಲಿ ತಯಾರಾದ ಅದ್ಧೂರಿ ಸಿನಿಮಾಗಳನ್ನ ಕನ್ನಡದಲ್ಲಿ ನೋಡಬೇಕು ಅನ್ನೋ ಡಬ್ಬಿಂಗ್ ಪ್ರಿಯರ ಆಸೆಗೆ ಬೆಲೆ ಇರಲಿಲ್ಲ. ಇದೀಗ ಬರೊಬ್ಬರಿ 130 ಕೋಟಿ ವೆಚ್ಚದ ಅದ್ಧೂರಿ ಆಕ್ಷನ್ ಡ್ರಾಮಾವನ್ನ ಅಚ್ಚ ಕನ್ನಡದಲ್ಲೇ ನೋಡುವ ಅವಕಾಶ ಇವರಿಗೆ ಸಿಕ್ಕಿದೆ.ಈ ಕಮ್ಯಾಂಡೋ ಚಿತ್ರದ ಮೂಲಕ ಡಬ್ಬಿಂಗ್ ಹಾದಿ ತೆರೆದಂತಾಗಿದೆ. ಹಾಲಿವುಡ್-ಬಾಲಿವುಡ್ ಸಿನಿಮಾಗಳೆಲ್ಲಾ ಪಕ್ಕದ ರಾಜ್ಯಗಳಲ್ಲಿ ತಮಿಳು-ತೆಲುಗಿನಲ್ಲಿ ಬಿಡುಗಡೆಯಾಗೋವಾಗ ಕನ್ನಡಿಗರು ಮಾತ್ರ ಅವುಗಳನ್ನ ಅದೇ ಭಾಷೆಯಲ್ಲಿ ನೋಡಬೇಕಾಗ್ತಿತ್ತು.

ತಮ್ಮ ಮಾತೃ ಭಾಷೆಯಲ್ಲಿ ತಮ್ಮ ಆಯ್ಕೆಯ ಸಿನಿಮಾ ನೋಡುವ ಆಯ್ಕೆ ಬೇಕು ಅನ್ನೋ ಕೂಗು ಇದ್ದರೂ ಅದು ಸಾಧ್ಯವಾಗಿರಲಿಲ್ಲ. ಆದ್ರೆ ಇದೀಗ  ಆ ಅಡ್ಡಗೋಡೆಯನ್ನು ಕೆಡವಲಾಗಿದೆ.  ಕಮಾಂಡೋ ಚಿತ್ರದ ಮೂಲಕ ಕನ್ನಡದಲ್ಲಿ ಡಬ್ಬಿಂಗ್ ಪರ್ವ ಶುರುವಾಗಿದೆ.ಈ ಹಿಂದೆ ಸತ್ಯದೇವ್ ಐ.ಪಿ.ಎಸ್ ಚಿತ್ರವನ್ನ ರಾಜ್ಯಾದ್ಯಂತ ತೆರೆಗೆ ತರುವ ಪ್ರಯತ್ನಕ್ಕೆ ಕೆಲ ಹೋರಾಟಗಾರರಿಂದ ವಿರೋಧ ವ್ಯಕ್ತವಾಗಿತ್ತು. ಆದರೂ ಮುಂದೆ ಅಜೀತ್ ನಟನೆಯ ಮತ್ತೊಂದು ಚಿತ್ರ ಆರಂಭಂ ಡಬ್ ಆಗಿ ತೆರೆಗೆ ಬಂತು. ಈ ಚಿತ್ರವನ್ನೂ ಸಾಕಷ್ಟು ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು.

ಆದರೆ ಅವ್ಯಾವೂ ಕಮ್ಯಾಂಡೋ ಚಿತ್ರದಂತೆ ಸದ್ದು ಮಾಡಲಿಲ್ಲ. ಯಾಕಂದ್ರೆ ಅವು ಬಹುತೇಕ ಕದ್ದು ಮುಚ್ಚಿ ಎನ್ನುವಂತೆ ಬಿಡುಗಡೆ ಆಗಿ ವಿರೋಧವನ್ನು ಎದುರಿಸಿದ್ದವು.ಇದಿಷ್ಟೂ ಕನ್ನಡ ಚಿತ್ರರಂಗದಲ್ಲಿ ಮತ್ತೆ ಡಬ್ಬಿಂಗ್ ಚಿತ್ರಗಳ ಕಾಲ ಶುರುವಾಗುವ ಲಕ್ಷಣವನ್ನು ತೋರಿಸುತ್ತಿದೆ. ಆದರೆ ಇಲ್ಲಿ ಗಮನಿಸಬೇಕಾದ ವಿಷ್ಯ ಅಂದ್ರೆ, ಇಷ್ಟು ದಿನ ಡಬ್ಬಿಂಗ್ ಚಿತ್ರಗಳನ್ನು ವಿರೋಧಿಸುತ್ತಿದ್ದ ಕನ್ನಡ ಚಿತ್ರರಂಗದ ಖ್ಯಾತನಾಮರು ಮತ್ತು ಕನ್ನಡ ಪರ ಹೋರಾಟಗಾರರು ಈಗ ಎಲ್ಲೂ ಕಾಣಿಸುತ್ತಿಲ್ಲ. ಅವರ ಸದ್ದೂ ಕೇಳಿಸುತ್ತಿಲ್ಲ. ವಾಟಾಳ್ ನಾಗರಾಜ್, ಸಾರಾ ಗೋವಿಂದು ಅವರಂಥ ಕನ್ನಡಪರ ಹೋರಾಟಗಾರರು ಈಗ ಕಮ್ಯಾಂಡೋ ಆರ್ಭಟಕ್ಕೆ ಮೊದಲಿನಂತೆ ತೀವ್ರವಾದ ಪ್ರತಿಕ್ರಿಯೆಯನ್ನೇ ತೋರಿಸುತ್ತಿಲ್ಲ.

ಇಲ್ಲಿ ವಿಶೇಷ ಅಂದ್ರೆ ಕರವೇಯಂಥ ಕನ್ನಡ ಪರ ಸಂಘಟನೆಗಳೇ ಈಗ ಡಬ್ಬಿಂಗ್ ಚಿತ್ರಗಳ ಪರವಾಗಿ ನಿಂತಿದೆ. ಇದರ ಜೊತೆಗೆ ಬನವಾಸಿ ಒಕ್ಕೂಟ, ಕನ್ನಡ ಗ್ರಾಹಕರ ವೇದಿಕೆಯಂಥ ಚಿಕ್ಕಪುಟ್ಟ ಡಬ್ಬಿಂಗ್ ಪರ ಸಂಘಟನೆಗಳು ಕೂಡ ಕಮ್ಯಾಂಡೋ ಚಿತ್ರದ ಬಿಡುಗಡೆಗೆ ಬೆಂಬಲ ಸೂಚಿಸಿವೆ. ಇಷ್ಟು ದಿನಗಳ ಕಾಲ ಯಾರಾದರೂ ಡಬ್ಬಿಂಗ್ ಚಿತ್ರ ಬಿಡುಗಡೆ ಮಾಡಲು ಹೊರಟರೆ ಅದಕ್ಕೆ ತೀವ್ರ ಪ್ರತಿಭಟನೆಯ ಬಿಸಿ ತಾಗುತ್ತಿತ್ತು. ಅಂಥ ಥಿಯೇಟರ್ ಗಳ ಮುಂದೆ ಗಲಾಟೆಗಳಾಗುತ್ತಿದ್ದವು. ಥಿಯೇಟರ್ ಮುಂದೆ ಬೆಂಕಿಯ ಜ್ವಾಲೆ ಕಾಣಿಸುತ್ತಿತ್ತು. ಆದರೆ ಈಗ ಪಟಾಕಿಗಳಿಂದ ಬರೋ ಬೆಂಕಿ ಕಾಣಿಸುತ್ತಿದೆ.

ಚಿತ್ರಮಂದಿರದ ಮುಂದೆ ಪ್ರತಿಭಟನೆಯ ಕೂಗಿನ ಬದಲು ಸಂತಸದ ಕೇಕೆ ಕೇಳಿಸುತ್ತಿದೆ. ಬಣ್ಣದ ಲೋಕದಲ್ಲಿ ಆದ ಬದಲಾವಣೆಯನ್ನು ಸ್ವಾಗತಿಸುತ್ತಿರುವ ಕೆಲವರಿಂದ ಚಿತ್ರಮಂದಿರದ ಮುಂದೆ ಬಣ್ಣದ ಓಕುಳಿ ಆಗುತ್ತಿದೆ.ಹೀಗೆ ಡಬ್ಬಿಂಗ್ ಚಿತ್ರವೊಂದು ರಾಜಾರೋಷವಾಗಿ ಬಿಡುಗಡೆ ಆಗಿ ಪ್ರದರ್ಶನ ಕಾಣುತ್ತಿದ್ದರೂ, ಅದಕ್ಕೆ ಹಲವರ ಬೆಂಬಲ ಸಿಕ್ಕಿದ್ದರೂ, ಚಿತ್ರಮಂದಿರಗಳ ಮುಂದೆ ಸಂಭ್ರಮಾಚರಣೆ ನಡೆಯುತ್ತಿದ್ದರೂ ಡಬ್ಬಿಂಗ್ ವಿರೋಧಿ ಸಂಘಟನೆಗಳಾಗಲೀ, ಅಥವಾ ಚಿತ್ರರಂಗದಲ್ಲಿರುವ ಕನ್ನಡ ಪರ ಹೋರಾಟಗಾರರಾಗಲೀ ಎಲ್ಲೂ ಕಾಣಿಸುತ್ತಿಲ್ಲ. ಇದು ಡಬ್ಬಿಂಗ್ ವಿರೋಧಿಗಳ ಪಾಲಿಗೆ ಆತಂಕದ ವಿಷಯ ಆಗಿರೋದಂತೂ ಸತ್ಯ.

ಆದರೆ ಇದಕ್ಕೆ ಕಾರಣ ಏನು ಅಂತ ಕೇಳಿದರೆ ಅದಕ್ಕೆ ಉತ್ತರವೂ ಇದೆ. ನಮ್ಮ ಕನ್ನಡ ಚಿತ್ರರಂಗದವರು ಈಗ ಏನೂ ಮಾಡಲ್ವಾ ಅಂತ ಮುಖದ ಮೇಲೆ ಪ್ರಶ್ನಾರ್ಥಕ ಚಿನ್ಹೆ ಹೊತ್ತು ಕೂತಿದ್ದಾರೆ. ಕನ್ನಡ ಹೋರಾಟಗಾಗರು ಧ್ವನಿಯನ್ನು ಈಗ ತಾತ್ಕಾಲಿಕವಾಗಿ ಅಡಗಿಸಲಾಗಿದೆ. ಆದರೆ ಜಗ್ಗೇಶ್ ಅವರಂಥ ಹಿರಿಯ ನಟರು ನೇರವಾಗಿ ಅಲ್ಲದಿದ್ದರೂ ಇನ್ ಡೈರೆಕ್ಟ್ ಆಗಿ ಟ್ವಿಟ್ಟರ್ ನಲ್ಲಿ ಈ ಜಗ್ಗೇಶ್ ಯಾವುದಕ್ಕೂ ಜಗ್ಗೋನಲ್ಲ ಎನ್ನುವಂಥ ದಿಟ್ಟತನದ ಮಾತುಗಳನ್ನು ಬರೆದುಕೊಂಡಿದ್ದಾರೆ.ಇನ್ನು ವಾಣಿಜ್ಯ ಮಂಡಳಿಯ ಪರವಾಗಿ ಮಾತನಾಡಿರುವ ಭಾ ಮಾ ಹರೀಶ್, ನಮಗೆ ದಂಡ ವಿಧಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ಆದರೆ ನಮಗೆ ಇನ್ನೂ ಅಧಿಕೃತವಾಗಿ ಯಾವ ಪತ್ರವೂ ಬಂದಿಲ್ಲ.

ಅದು ಬಂದ ಮೇಲೆ ಪ್ರತಿಕ್ರಿಯಿಸುತ್ತೇನೆ ಎಂದಿದ್ದಾರೆ. ಅದರ ಜೊತೆಗೆ ಡಬ್ಬಿಂಗ್ ವಿರುದ್ಧದ ಹೋರಾಟಕ್ಕೆ ಹಿನ್ನಡೆ ಆಯ್ತಾ? ಇನ್ನು ಮುಂದೆಯೂ ವಾಣಿಜ್ಯ ಮಂಡಳಿ ಡಬ್ಬಿಂಗ್ ಅನ್ನು ವಿರೋಧ ಮಾಡಿ ಮಾತನಾಡುತ್ತದಾ? ಅನ್ನೋದರ ಬಗ್ಗೆಯೂ ಮಾತನಾಡಿದ್ದಾರೆ.ಒಟ್ಟಿನಲ್ಲಿ ಡಬ್ಬಿಂಗ್ ವಿರೋಧಿಗಳ ಬಾಯಿ ಮುಚ್ಚಿಸೋ ಪ್ರಯತ್ನ ಕಾನೂನಿನ ಪ್ರಕಾರವೇ ನಡೆಯುತ್ತಿದೆ. ಹಾಗಾಗಿ ಇಷ್ಟು ದಿನ ಕದ್ದು ಮುಚ್ಚಿ ನಡೆಯುತ್ತಿದ್ದ ಡಬ್ಬಿಂಗ್ ವ್ಯವಹಾರ ಇನ್ನುಮುಂದೆ ರಾಜಾರೋಷವಾಗಿ ನಡೆಯುವ ಎಲ್ಲಾ ಲಕ್ಷಣಗಳಿವೆ.

ಆದರೆ ಈಗ ಸದ್ಯಕ್ಕೆ ಕಾನೂನಿಗೆ ತಲೆಬಾಗಿ ಸುಮ್ಮನಾಗಿರುವ ಡಬ್ಬಿಂಗ್ ವಿರೋಧಿಗಳು, ಕನ್ನಡ ಪರ ಹೋರಾಟಗಾರರು ಮುಂದಿನ ದಿನಗಳಲ್ಲಿ ಏನು ಮಾಡುತ್ತಾರೆ ಅನ್ನೋ ಕುತೂಹಲ ಎಲ್ಲರದು. ಡಬ್ಬಿಂಗ್ ಚಿತ್ರಗಳ ಹಾವಳಿ ಮುಂದೆ ಕೈ ಕಟ್ಟಿ ಕೂಡುತ್ತಾರಾ ಅಥವಾ ಮತ್ತೊಂದು ರೂಪದಲ್ಲಿ ಹೋರಾಟಕ್ಕೆ ಅಣಿಯಾಗುತ್ತಾರಾ ಎನ್ನುವ ಪ್ರಶ್ನೆ ಸದ್ಯಕ್ಕೆ ಗಾಂಧಿನಗರದಲ್ಲಿ ಓಡಾಡುತ್ತಿದೆ. ಒಂದು ಕಾಲದಲ್ಲಿ ರೋಡಿಗಿಳಿದು ತಮ್ಮ ಒಗ್ಗಟ್ಟನ್ನೆಲ್ಲಾ ಪ್ರದರ್ಶಿಸಿ ನಾವು ಡಬ್ಬಿಂಗ್ ಚಿತ್ರಗಳು ಬಿಡುಗಡೆ ಆಗೋದಕ್ಕೆ ಬಿಡೋದಿಲ್ಲ ಎನ್ನುತ್ತಿದ್ದ ಚಿತ್ರರಂಗದ ಜನ ಕೂಡ ಈಗ ಗಪ್ ಚುಪ್ ಆಗಿದ್ದಾರೆ. ಇದು ಕನ್ನಡ ಚಿತ್ರರಂಗ ಮತ್ತು ಡಬ್ಬಿಂಗ್ ವಿರೋಧಿ ಹೋರಾಟಗಾರರ ಸದ್ಯದ ಪರಿಸ್ಥಿತಿ. ಆದರೆ ಇದು ಹೀಗೇ ಇರುತ್ತೆ ಅಂತ ಹೇಳೋಕಾಗಲ್ಲ. ಯಾಕಂದ್ರೆ ಹೇಳಿ ಕೇಳಿ ಇದು ಚಿತ್ರರಂಗ.

LEAVE A REPLY

Please enter your comment!
Please enter your name here