ಪ್ರತಿ ಮಳೆಗಾಲದಲ್ಲಿ ದಟ್ಟ ಕಾಡಿನ ತುತ್ತತುದಿಯಲ್ಲಿ ವಾಸಿಸುವ ಈ ಗ್ರಾಮದ ವಾಸ್ತವ ಚಿತ್ರಣವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಟ್ಟಿಸಲು ಈ ಗ್ರಾಮಸ್ಥರು ಬೋರ್ಗರೆಯುವ ಮಳೆಯಲ್ಲಿ ಮಹಿಳೆಯ ಶವವನ್ನು ಜೋಲಿಯಲ್ಲಿ ಹಾಕಿಕೊಂಡು ಕಷ್ಟಪಟ್ಟು ಐದು ಕಿಲೋಮೀಟರ್ ನಡೆದು ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಾಡಿದ ಸನ್ನಿವೇಶವನ್ನು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.
ಈ ವಿಡಿಯೋ ಸಿಡಿಯನ್ನು ಪ್ರದಾನಿ ನರೇಂದ್ರ ಮೋದಿಯವರ ಕಾರ್ಯಾಲಯಕ್ಕೆ ಕಳುಹಿಸಿದರು. ನಮ್ಮ ಗ್ರಾಮಕ್ಕೆ ರಸ್ತೆಯನ್ನು ನೀಡಿ ಪ್ರದಾನಿಗಳೇ ಎಂದು ಮನವಿ ಮಾಡಿದರು. ಈ ವಿಡಿಯೋ ತಲುಪಿ ಒಂದು ವರ್ಷವಾದರೂ ಪ್ರಧಾನಿ ಕಾರ್ಯಾಲಯದಿಂದ ಕಿಂಚಿತ್ತು ಸ್ಪಂಧನೆ ಸಿಕ್ಕಿಲ್ಲ.
ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 180 ಕಿಲೋಮೀಟರ್ ದೂರದಲ್ಲಿರುವ ಕೋಗಾರು ಬಟ್ಕಳ ಗಡಿಭಾಗದಲ್ಲಿರುವ ಕುಗ್ರಾಮ ಮೇಘಾನೆಯಲ್ಲಿ ನಡೆದಿರುವ ಘಟನೆ ಇದು. ಮಳೆಗಾಲದಲ್ಲಿ ಸೌಂದರ್ಯಕ್ಕೆ ಹೊದ್ದು ನಿಲ್ಲುವ ಮೇಘಾನೆ ಗ್ರಾಮದ ಒಡಲಲ್ಲಿ ಮರಾಠಿ ಕುಣಬಿ ಜನಾಂಗದ ಬುಡಕಟ್ಟು ಸಮುದಾಯದವರೇ ವಾಸವಾಗಿದ್ದಾರೆ.
ಗ್ರಾಮದಲ್ಲಿ 60 ಮನೆಗಳಿದ್ದು,300 ಜನಸಂಖ್ಯೆ ಹೊಂದಿದೆ.ಆದರೆ ಸುಂದರ ಗ್ರಾಮದಲ್ಲಿ ನೂರಾರು ಸಮಸ್ಯೆಗಳಿವೆ.ಅದರಲ್ಲೂ ಮಳೆಗಾಲದಲ್ಲಿ ಈ ಗ್ರಾಮಕ್ಕೆ ಹೊರಗಿನವರು ಹೋಗುವುದು ಕಷ್ಟ.ಗ್ರಾಮಸ್ಥರು ಕೂಡ ಮಳೆಗಾಲದಲ್ಲಿ ನಗರ ಪ್ರದೇಶಗಳತ್ತ ಮುಖ ಮಾಡುವುದಿಲ್ಲ.
ಶರಾವತಿ ಅಭಯಾರಣ್ಯದಲ್ಲಿರುವ ಮೇಘಾನೆ ಕುಗ್ರಾಮಕ್ಕೆ ರಸ್ತೆಯಿಲ್ಲ.ರಸ್ತೆಯಿಲ್ಲದಿರುವುದರಿಂದ ಈ ಗ್ರಾಮ ಶೈಕ್ಷಣಿಕವಾಗಿ,ಆರ್ಥಿಕವಾಗಿ,ಆರೋಗ್ಯದಲ್ಲಿ ಹಿಂದುಳಿದಿದೆ.ಗ್ರಾಮದಲ್ಲಿ ಶಾಲೆಯಿದೆ.ವಿದ್ಯುತ್ ಸೌಲಭ್ಯವಿದೆ.ನೀರಿದೆ.ಆದರೆ ಗ್ರಾಮಸ್ಥರಿಗೆ ಸಂಚರಿಸಲು ಸರಿಯಾದ ರಸ್ತೆಯಿಲ್ಲ ಎಂದು ದೂರಿದ್ದಾರೆ.