Home Elections 2019 ನಮೋನಾಥನ ಮಾಸ್ಟರ್ ಸ್ಟ್ರೋಕ್‌ಗೆ ಕಕ್ಕಾಬಿಕ್ಕಿಯಾದ್ವು ಪ್ರತಿಪಕ್ಷ.! 2019ರ ಮಹಾಯುದ್ಧಕ್ಕೆ ಮೋದಿ ಬತ್ತಳಿಕೆಯಿಂದ ಬಂತು ಬ್ರಹ್ಮಾಸ್ತ್ರ.!

ನಮೋನಾಥನ ಮಾಸ್ಟರ್ ಸ್ಟ್ರೋಕ್‌ಗೆ ಕಕ್ಕಾಬಿಕ್ಕಿಯಾದ್ವು ಪ್ರತಿಪಕ್ಷ.! 2019ರ ಮಹಾಯುದ್ಧಕ್ಕೆ ಮೋದಿ ಬತ್ತಳಿಕೆಯಿಂದ ಬಂತು ಬ್ರಹ್ಮಾಸ್ತ್ರ.!

544
0
SHARE

2019ರ ಚುನಾವಣೆ.. ಅದು ಬರೀ ಚುನಾವಣೆ ಅಲ್ಲ, ಬದಲಾಗಿ ಮೋದಿ ಮತ್ತು ಪ್ರತಿಪಕ್ಷಗಳ ನಡುವೆ ನಡೆಯಲಿರೋ ಮಹಾಯುದ್ಧ, ಈ ಯುದ್ಧದಲ್ಲಿ ಗೆಲ್ಲಲೇ ಬೇಕು, ಅಧಿಕಾರ ಹಿಡಿಯಲೇ ಬೇಕು ಅಂತಾ ಮೋದಿ ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ, ಮೋದಿ ಮಕ್ಕರ್ ಮಾಡಿ ನಾವೇ ಅಧಿಕಾರಕ್ಕೆ ಏರಬೇಕು ಅಂತಾ ಕಾಂಗ್ರೆಸ್ ಪಕ್ಷ ತನ್ನ ಎಲ್ಲಾ ಹಳೆಯ ಸ್ನೇಹಿತರನ್ನು ಒಂದೆಡೆ ಒಗ್ಗೂಡಿಸುತ್ತಿದೆ. ಈ ಇಬ್ಬರ ಮಧ್ಯೆ ತೃತೀಯ ರಂಗವನ್ನ ರಚಿಸಿಕೊಂಡು ಮತ್ತೊಂದು ಪಾಳೆಯ ಮದ್ಯೆ ಬಂದು ಕೂತಿದೆ.

ಈ ಮೂರು ತಂಡಗಳಲ್ಲಿ ಇನ್ನೇನು ಮೂರು ತಿಂಗಳಲ್ಲಿ ಭರ್ಜರಿಯ ಯುದ್ಧ ನಡೆಯುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.ಈ ಯುದ್ಧದಲ್ಲೇ ಗೆಲ್ಲಲೇ ಬೇಕು ಅಂತಾ, ಕಾಂಗ್ರೆಸ್ ಮಹಾ ಘಟಬಂಧನ್ ಅಸ್ತ್ರ ಪ್ರಯೋಗಿಸುತ್ತಿದ್ರೆ, ತೃತೀಯ ರಂಗ ಒಗ್ಗಟ್ಟು ಪ್ರದರ್ಶನ ಮಾಡುತ್ತಿದೆ. ಬಿಜೆಪಿ ಮಾತ್ರ ತಮ್ಮ ಬತ್ತಳಿಕೆಯಿಂದ ಒಂದೊಂದಾಗಿ ಅಸ್ತ್ರವನ್ನ ತೂರಿ ಬಿಡುತ್ತಿದೆ. ಮೋದಿಯ ಈ ಅಸ್ತ್ರಕ್ಕೆ ಪ್ರತಿ ಪಕ್ಷಗಳು ಪತರುಗುಟ್ಟುತ್ತಿದೆ. ಮೊನ್ನೆ ತಾನೆ ರೈತರಿಗೆ ಭಾವಂತರ ಪ್ರಯೋಗ ಮಾಡಿದ್ದ ಮೋದಿ ಈಗ ಮೀಸಲಾತಿ ಅಸ್ತ್ರವನ್ನ ಪ್ರಯೋಗಿಸುತ್ತಿದ್ದಾರೆ.ಬಡಜನರ, ಆರ್ಥಿಕ ದುರ್ಬಲರ ಸರ್ವಾಂಗೀಣ ಅಭಿವೃದ್ಧಿಯತ್ತ ಹೆಜ್ಜೆಯಿಟ್ಟಿರುವ ಕೇಂದ್ರ ಸರಕಾರ, ಸರಕಾರಿ ಮೀಸಲಾತಿ ಹೊಂದಿರದ ಸಾಮಾನ್ಯ ವರ್ಗದ ಬಡವರಿಗೂ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಶೇಕಡಾ 10ರಷ್ಟು ಮೀಸಲಾತಿ ಕಲ್ಪಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಭೆಯಲ್ಲಿ ಸೋಮವಾರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ.  ಸದ್ಯಕ್ಕಿರುವ ಶೇಕಡಾ 50ರ ಮೀಸಲಾತಿಯ ಅನುಕೂಲಗಳಿಂದ ವಂಚಿತವಾಗಿರುವ ಸಮುದಾಯಗಳಿಗೆ ಈ ಮೀಸಲಾತಿ ಅನ್ವಯವಾಗಲಿದೆ. ಸ್ವಾತಂತ್ರ್ಯ ನಂತರ ಕೇಂದ್ರ ಸರಕಾರ ಕೈಗೊಂಡಿರುವ ಅತ್ಯಂತ ಮಹತ್ವದ ನಿರ್ಧಾರ ಇದು ಎಂದು ಹೇಳಲಾಗಿದೆ.  ಹೊಸ ಮೀಸಲಾತಿಗೆ ಪೂರಕವಾದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಈಗ ನಡೆಯುತ್ತಿರುವ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿಯೇ ಮಂಡಿಸಲು ತೀರ್ಮಾನಿಸಲಾಗಿದೆ. ಮಸೂದೆಯ ಮೇಲಿನ ಚರ್ಚೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹಾಲಿ ಅಧಿವೇಶನವನ್ನು ಒಂದು ದಿನ ವಿಸ್ತರಣೆ ಮಾಡಲಾಗಿದೆ.

ಕೇಂದ್ರ ಸರಕಾರದ ಈ ನಿರ್ಧಾರವನ್ನು ಬಿಜೆಪಿ ಹಾಗೂ ಮಿತ್ರಪಕ್ಷಗಳು, ಪ್ರಧಾನಿ ಮೋದಿ ಅವರ “ಮಾಸ್ಟರ್‌ಸ್ಟ್ರೋಕ್‌’ ಎಂದು ಬಣ್ಣಿಸಿವೆ. ಕೇರಳ ಸಿಎಂ ಪಿಣರಾಯಿ ವಿಜಯನ್‌, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಸಹಿತ ವಿಪಕ್ಷಗಳ ಕೆಲವು ನಾಯಕರೂ ಇದನ್ನು ಸ್ವಾಗತಿಸಿದ್ದಾರೆ. ಮತ್ತೂಂದೆಡೆ ಇದು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೋದಿ ಅವರು ಮಾಡುತ್ತಿರುವ ಚುನಾವಣ ಗಿಮಿಕ್‌ ಎಂದು ಕಾಂಗ್ರೆಸ್‌ ಆರೋಪಿಸಿದೆ. ಅದೇನೇ ಇರ್ಲಿ ಚುನಾವಣೆ ಸಮಯದಲ್ಲಿ ಮೋದಿ ತೆಗೆದುಕೊಂಡಿರೋ ಈ ನಿರ್ಧಾರ ಎಲೆಕ್ಷನ್ ನಲ್ಲಿ ಭರ್ಜರಿ ಫಸಲು ಕೊಡೋದ್ರಲ್ಲ ಯಾವುದೇ ಅನುಮಾನವಿಲ್ಲ.

ಆದ್ರೆ ಇಷ್ಟು ದಿನಗಳ ಕಾಲ ಸುಮ್ಮನಿದ್ದು ಇದೀಗ ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿರೋ ಈ ಹೊತ್ತಲ್ಲಿ ಇಂತದ್ದೊಂದು ಮೀಸಲಾತಿ ವಿಧೇಯಕ ಜಾರಿಗೆ ತರೋದಕ್ಕೆ ಹೊರಟಿರೋ ಮೋದಿ ಮುಂದೆ ಸಾಕಷ್ಟು ಅಡೆತಡೆಗಳಿವೆ.. ಅದಾಗ್ಯೂ ಮೋದಿ ಇಂಥ ಮೀಸಲು ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದು ಯಾಕೆ ಅಂತ ನೋಡೋದಾದ್ರೆ,  ಮೇಲ್ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಮತಬ್ಯಾಂಕ್ ಆಗಿ ಗುರುತಿಸಿಕೊಂಡಿದ್ದಾರೆ. ಆದ್ರೆ ದಲಿತರ ದೌರ್ಜನ್ಯ ತಡೆ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ಸೃಷ್ಟಿಯಾದ ಗೊಂದಲ ಮೇಲ್ವರ್ಗವು ಬಿಜೆಪಿ ವಿರುದ್ಧ ಮುನಿಸಿಕೊಲ್ಳೋಕೆ ಕಾರಣವಾಗಿತ್ತು.

ದಲಿತರಿಂದ ದೂರು ಬಂದಾಕ್ಷಣ ಅಟ್ರಾಸಿಟಿ ಕಾಯ್ದೆಯಡಿ ಬಂಧನ ಮಾಡಬೇಕಾಗಿಲ್ಲ ಅಂತ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದಕ್ಕೆ ದಲಿತ ಸಮುದಾಯದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡಿ ಅಟ್ರಾಸಿಟಿ ಕಾಯ್ದೆಗೆ ಬಲ ತುಂಬಿತ್ತು. ಆದ್ರೆ ಈ ಕಸರತ್ತಿನಲ್ಲಿ ಮೇಲ್ವರ್ಗದ ಸಿಟ್ಟು ಕಟ್ಟಿಕೊಂಡಿತ್ತು. ಮಧ್ಯಪ್ರದೇಶ, ರಾಜಸ್ತಾನ, ಹಾಗೂ ಛತ್ತೀಸ್ ಗಢ ಸೋಲಿನ ಹಿಂದೆ ಈ ಆಕ್ರೋಶವೂ ಕೆಲಸ ಮಾಡಿದೆ ಎಂಬುದು ಪತ್ತೆ ಮಾಡಿದೆ. ಹೀಗಾಗಿ ಮೇಲ್ವರ್ಗದವ್ರನ್ನ ಓಲೈಸೋಕೆ ಮೋದಿ ಸರ್ಕಾರ ಮೀಸಲು ಅಸ್ತ್ರ ಪ್ರಯೋಗಿಸಿದೆ ಅಂತ ಹೇಳಲಾಗಿದೆ…

ಸದ್ಯಕ್ಕೆ ಎನ್​ಡಿಎ ಸರಕಾರಕ್ಕೆ ಲೋಕಸಭೆಯಲ್ಲಿ ಬಹುಸಂಖ್ಯೆ ಇದೆ. ಆದರೆ, ರಾಜ್ಯಸಭೆಯಲ್ಲಿ ಅಷ್ಟು ಬಲ ಇಲ್ಲ. ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಹಸಿರುನಿಶಾನೆ ಸಿಕ್ಕುತ್ತದಾದರೂ ರಾಜ್ಯಸಭೆಯಲ್ಲಿ ಅವಕಾಶ ತೀರಾ ಕಡಿಮೆ. ರಾಜ್ಯಸಭೆಯಲ್ಲಿರುವ ಮೇಲ್ವರ್ಗ ಸಮುದಾಯಕ್ಕೆ ಸೇರಿದ ಸಂಸದರನ್ನು ಸೆಳೆದುಕೊಂಡು ಮಸೂದೆಗೆ ಅಂಗೀಕಾರ ಹಾಕಿಸುವ ಒಂದು ಅವಕಾಶ ಮೋದಿ ಅವರ ಮುಂದಿದೆ. ಆದರೆ, ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬರುವಷ್ಟರಲ್ಲಿ ಈ ಪ್ರಕ್ರಿಯೆ ಮುಗಿಯಬೇಕಾಗುತ್ತದೆ. ಇದು ಅಷ್ಟು ಸುಲಭವಂತೂ ಅಲ್ಲ.

ಎನ್ ಡಿಎ ಮೈತ್ರಿಕೂಟದ ಪಕ್ಷಗಳಾದ ಆರ್ಪಿಐ ಮತ್ತು ರಾಮ ವಿಲಾಸ್ ಪಾಸ್ವಾನ್ ಅವರ ಎಲ್ ಜೆಪಿ ಸೇರಿದಂತೆ ಹಲವು ಪಕ್ಷಗಳು ಈ ಹಿಂದೆ ಸರ್ಕಾರಿ ಉದ್ಯೋಗಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ ಸದಸ್ಯರಿಗೆ ಮಿಸಲಾತಿ ನೀಡುವಂತೆ ಆಗ್ರಹಿಸಿದ್ದವು. ಈಗ ಕೇಂದ್ರ ಸರ್ಕಾರದ ನಿರ್ಧಾರದಿಂದ ಸಾಮಾನ್ಯ ವರ್ಗದಲ್ಲಿ ಬರುವ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಈ ಮಿಸಲಾತಿ ಸೌಲಭ್ಯ ಅನ್ವಯವಾಗಲಿದೆ ಎನ್ನಲಾಗಿದೆ.ಮೋದಿ ಸರ್ಕಾರದ ಈ ನಿರ್ಣಯದಿಂದ ಇನ್ನು ಮುಂದಿನ ದಿನಗಳಲ್ಲಿ ಎಸ್ ಸಿ, ಎಸ್ ಟಿ ಹೊರತಾಗಿ, ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗವರಿಗೂ ಮೀಸಲಾತಿ ಸಿಗಲಿದೆ.

2019 ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಮೋದಿ ಸರ್ಕಾರ ನಿರ್ಣಯ ಮಹತ್ವ ಪಡೆದುಕೊಂಡಿದ್ದು ಈ ನಡೆಯನ್ನು ಸಾಮಾನ್ಯವರ್ಗದ ಜನತೆಯ ಮತ ಗಳಿಸಲು ರೂಪಿಸಿರುವ ಮಾಸ್ಟ್ರರ್ ಸ್ಟ್ರೋಕ್ ಎಂದೇ ವಿಶ್ಲೇಷಿಸಲಾಗುತ್ತಿದೆ. ಇತ್ತೀಚೆಗೆ ಮೋದಿ ಸರ್ಕಾರವು ಜಿಎಸ್ಟಿ ಹಾಗೂ ನೋಟು ನಿಷೇಧದಂತಹ ಕಾಯ್ದೆ ಮೂಲಕ ಜನ ಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿತ್ತು ಮತ್ತು ಹಲವು ಮೇಲ್ಜಾತಿಗಳು ಕೂಡ ಸರ್ಕಾರದ ನಡೆಗೆ ತೀವ್ರ   ಅಸಮಾಧಾನಗೊಂಡಿದ್ದವು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರದ ನಿರೀಕ್ಷೆಯಲ್ಲಿದೆ. ಈ ಹಿನ್ನಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತಗಳು ಕೈ ತಪ್ಪದಂತೆ ನೋಡಿಕೊಳ್ಳಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ.

ಹಿಂದುಳಿತ ಮೇಲ್ಜಾತಿಗಳಿಗೆ ಮೀಸಲಾತಿ ಕೊಡುವ ಕ್ರಮವು ಒಂದು ದೊಡ್ಡ ವೋಟ್ ಬ್ಯಾಂಕ್​ಗೆ ಕೈಹಾಕಿದಂತಾಗಿದೆ. ಬಿಜೆಪಿಯ ಪಾಲಿಗೆ ಇದು ಅಕ್ಷರಶಃ ಬ್ರಹ್ಮಾಸ್ತ್ರವಾಗಿದೆ. ಆರ್ಥಿಕವಾಗಿ ಹಿಂದುಳಿದಿದ್ದೂ ಯಾವುದೇ ಮೀಸಲಾತಿಯಿಂದ ವಂಚಿತವಾಗಿರುವ ದೊಡ್ಡ ಪ್ರಮಾಣವೇ ದೇಶದಲ್ಲಿದೆ. ಹೀಗಾಗಿ ವಿಪಕ್ಷಗಳು, ಅದರಲ್ಲೂ ಕಾಂಗ್ರೆಸ್ ಪಕ್ಷವು ಈ ಮೀಸಲಾತಿ ಪ್ರಯತ್ನವನ್ನು ಸಂಪೂರ್ಣವಾಗಿ ವಿರೋಧಿಸಲು ಸಾಧ್ಯವಾಗದು. ಕೇರಳದ ಸಿಎಂ ಪಿಣಾರಯಿ ವಿಜಯನ್, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಈ ಮೀಸಲಾತಿ ವ್ಯವಸ್ಥೆಯನ್ನು ಸ್ವಾಗತಿಸಿದ್ದಾರಾದರೂ, ತಾಕತ್ತಿದ್ದರೆ ತಿದ್ದುಪಡಿ ಮಸೂದೆಯನ್ನು ಸಂಸತ್​ನಲ್ಲಿ ಮಂಡಿಸುವಂತೆ ಕೇಂದ್ರಕ್ಕೆ ಸವಾಲನ್ನೂ ಹಾಕಿದ್ದಾರೆ. ಇತ್ತ ಗುಜರಾತ್ ನ ಹಾರ್ಧಿಕ್ ಪಟೇಲ್ ಇದು ಮೋದಿ ಬತ್ತಳಿಕೆಯಲ್ಲಿರೋ ಕೊನೇ ಅಸ್ತ್ರ ಅಂತ ಟೀಕಿಸಿದ್ದಾರೆ….

ಒಟ್ಟಾರೆಯಾಗಿ ಈ ಮೀಸಲಾತಿ ನಿರ್ಧಾರದಿಂದ ವಿದ್ಯೆ ಮತ್ತು ಉದ್ಯೋಗ ವಂಚಿತ ಎಲ್ಲಾ ಜಾತಿ, ಧರ್ಮ, ಸಮುದಾಯದ ಬಡವರಿಗೆ ಆರ್ಥಿಕ ಹಿಂದುಳಿದಿರುವಿಕೆ ಆಧಾರದ ಮೇಲೆ ಮೀಸಲಾತಿ ಕಲ್ಪಿಸಿದ್ದು ಮೋದಿ ಸರ್ಕಾರದ ದೊಡ್ಡ ಸಾಧನೆ. ಇದರಿಂದ ಮೇಲ್ವರ್ಗದ ಬಡವರು ಮತ್ತು ಜಾತಿ, ಧರ್ಮ ಆಧಾರಿತ ಮೀಸಲಾತಿ ವಂಚಿರಾದವರಿಗೆ ಆಶಾವಾದಿಗಳಾಗಿ ಬದುಕಲು ಒಂದು ದಾರಿ ಆಗಿದೆ ಅನ್ನೋ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ..

 

LEAVE A REPLY

Please enter your comment!
Please enter your name here