ರಕ್ತಪಿಶಾಚಿ ನಾಯಿಗಳ ಅಟ್ಟಹಾಸಕ್ಕೆ ಅಮಾಯಕ ಮಗುವೊಂದು ಬಲಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಪಂತಬಾಳೇಕುಂದ್ರಿ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದ್ದು ಇಡೀ ಸಮಾಜವೇ ಮಮ್ಮಲ ಮರುಗುವಂತೆ ಮಾಡಿದೆ.
ಅಬ್ಬಾಸ್ ಸನದಿ ಎಂಬ ಎರಡು ವರ್ಷದ ಬಾಲಕ ಮನೆಯ ಕಾಂಪೌಂಡ್ ಮುಂದೆ ಶೌಚಕ್ಕೆ ಕುಳಿತಿರುವ ಸಂದರ್ಭದಲ್ಲಿ ಬೀದಿ ನಾಯಿಗಳು ಮಗುವಿನ ಮೇಲೆ ಮುಗಿಬಿದ್ದು ಮಗುವನ್ನ ಎಳೆದುಕೊಂಡು ಹೋಗಿ ಮಗು ಅಬ್ಬಾಸ್ ನನ್ನ ಬೇಕಾಬಿಟ್ಟಿ ಕಚ್ಚಿ ಗಾಯಗೊಳಿಸಿವೆ. ಇತ್ತ ಮಗುವಿನ ಪೋಷಕರು ಮಗು ಎಲ್ಲಿ ಹೋಯಿತು ಅಂತ ಮನೆಯಲ್ಲ ಹುಡುಕಿ, ನಂತರ ಅಕ್ಕಪಕ್ಕದ ಮನೆಯಲ್ಲೂ ಹುಡುಕಿದ್ದಾರೆ.
ಮಗು ಸಿಗದೇ ಇದ್ದಾಗ ಮನೆ ಹಿಂಭಾಗದ ಮೋರಿ ಬಳಿ ನಾಯಿ ದಾಳಿಗೊಳಗಾಗುತ್ತಿರುವ ಮಗುವನ್ನ ನಾಯಿಗಳಿಂದ ರಕ್ಷಿಸಿದ್ದಾರೆ.ನಾಯಿಗಳು ಮಗುವನ್ನೇ ತಿನ್ನಲು ಯತ್ನಿಸಿದ್ದರಿಂದ ಮಗು ಅಬ್ಬಾಸ್ನ ಮುಖ, ತಲೆ ಭಾಗ ಸೇರಿ ಮೈತುಂಬಾ ಗಾಯಗಳಾಗಿವೆ. ಮಗುವಿನ ತಲೆಭಾಗದ ಬಹುತೇಕ ಹಾನಿಯಾಗಿದ್ದರಿಂದ ತೀವ್ರಗಾಯಕ್ಕೊಳಗಾದ ಬಾಲಕ ಅಬ್ಬಾಸನನ್ನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಿದರು ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಅಬ್ಬಾಸ್ ಕೊನೆಯುಸಿರೆಳೆದಿದ್ದಾನೆ.
ಎರಡು ವರ್ಷದ ಪುಟ್ಟ ಬಾಲಕ ಸಾವನ್ನಪ್ಪಿದ್ದರಿಂದ ಮಗನನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.ಒಟ್ಟಿನಲ್ಲಿ ತನ್ನದಲ್ಲದ ತಪ್ಪಿಗೆ ಮುಗ್ದ ಕಂದಮ್ಮ ಬಲಿಯಾಗಿದ್ದು ಯಾರ ಬಳಿ ನ್ಯಾಯಕೇಳಬೇಕು ಎಂಬ ಸಂದಿಗ್ದ ಸ್ಥಿತಿ ಪೋಷಕರಿಗೆ ಒದಗಿಬಂದಿರೋದು ವಿಪರ್ಯಾಸವೇ ಸರಿ.