ಮಹಾತ್ಮ ಗಾಂಧಿಜೀ ಅವರು ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡರು. ಆದರೆ ಈ ದೇಶದ ತತ್ವ ಹಾಗೂ ಮೌಲ್ಯಗಳ ವಿರುದ್ಧ ಹೊಡೆದಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇರವಾಗಿ ಪ್ರಧಾನಿ ಮೋದಿ ವಿರುದ್ಧ ಗುಡುಗಿದರು.
ವಾರ್ದಾದಲ್ಲಿ ನಡೆಯುತ್ತಿರುವ ಗಾಂಧಿ ಸಂಕಲ್ಪ ಸಭೆಯನ್ನು ಉದ್ದೇಶಿ ಮಾತನಾಡಿದ ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಗಾಂಧಿ ದೇಶವನ್ನು ಒಗ್ಗೂಡಿಸಿದರು. ಆದರೆ ಮೋದಿ ದೇಶವನ್ನು ಒಡೆದುಹಾಕುತ್ತಿದ್ದಾರೆ.
ಸತ್ಯದ ಉಳಿವಿಗಾಗಿ ಗಾಂಧಿ ಹೋರಾಡಿದರೆ, ಪ್ರಧಾನಿ ಮೋದಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದಿದ್ದರು. ಅದು ಸತ್ಯವೇ ಅಥವಾ ಸುಳ್ಳೇ? ಎಂದು ಪ್ರಶ್ನಿಸಿದರು. ಮಹಾರಾಷ್ಟ್ರದ ವಾರ್ಧಾದಲ್ಲಿನ ಸೇವಾಗ್ರಾಮದಲ್ಲಿ ಮಧ್ಯಾಹ್ನ ಭೋಜನ ಸ್ವೀಕರಿಸಿದ ಬಳಿಕ ತಾವು ಊಟ ಮಾಡಿದ ತಟ್ಟೆಯನ್ನು ತಾವೇ ತೊಳೆದು ಸ್ವಸಹಾಯ ತತ್ವಕ್ಕೆ ನಿದರ್ಶನ ತೋರಿದರು.
ಮಹಾತ್ಮ ಗಾಂಧಿಯವರ 150ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ ಸೇವಾಗ್ರಾಮದಲ್ಲಿನ ಆಶ್ರಮದಲ್ಲಿ ಇಂದು ನಡೆದ ಪ್ರಾರ್ಥನಾ ಸಭೆಯಲ್ಲಿ ಸೋನಿಯಾ ಮತ್ತು ರಾಹುಲ್ ಭಾಗಿಯಾದರು. ಇವರೊಂದಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಕ್ರಿಯಾ ಸಮಿತಿಯ ಸದಸ್ಯರು ಕೂಡ ಭಾಗಿಯಾದರು. ಮಹಾತ್ಮ ಗಾಂಧೀಜಿಯವರು ತಮ್ಮ ಜೀವಿತದ ಕೊನೆಯ ವರ್ಷಗಳನ್ನು ಕಳೆದ “ಬಾಪು ಕುಟೀರ” ದಲ್ಲಿ ಪ್ರಾರ್ಥನಾ ಸಭೆ ನಡೆದಿತ್ತು.