Home District ಪ್ರಪಂಚ ಕೊರೋನಾ ಮುಕ್ತವಾಗಲಿ, ಬೇಗ ಲಸಿಕೆ ಸಿಗಲಿ, ರಾಜ್ಯ ಜಲ ಸಂಕಷ್ಟದಿಂದ ಪಾರಾಗಲಿ.. ಮೈಸೂರು ದಸರಾಕ್ಕೆ...

ಪ್ರಪಂಚ ಕೊರೋನಾ ಮುಕ್ತವಾಗಲಿ, ಬೇಗ ಲಸಿಕೆ ಸಿಗಲಿ, ರಾಜ್ಯ ಜಲ ಸಂಕಷ್ಟದಿಂದ ಪಾರಾಗಲಿ.. ಮೈಸೂರು ದಸರಾಕ್ಕೆ ವಿದ್ಯುಕ್ತ ಚಾಲನೆ ನೀಡಿದ ಡಾ.ಮಂಜುನಾಥ್ ಕೋರಿಕೆ

389
0
SHARE

ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಅವರು ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಈ ಸಂಭ್ರಮಕ್ಕೆ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್, ಕೃಷಿ ಸಚಿವರಾದ ಬಿ.ಸಿ.ಪಾಟೀಲ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ರಾಮದಾಸ್, ನಾಗೇಂದ್ರ, ಹರ್ಷವರ್ಧನ್, ಮಹೇಶ್, ನಿರಂಜನ್, ವಿಧಾನಪರಿಷತ್ ಸದಸ್ಯರಾದ ವಿಶ್ವನಾಥ್ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಮಾತನಾಡಿ, ಪ್ರಪಂಚ ಕೊರೋನಾ ಸಂಕಷ್ಟಗಳಿಂದ ಮುಕ್ತವಾಗಲಿ, ಬೇಗ ಕೊರೋನಾಕ್ಕೆ ಲಸಿಕೆ ಸಿಗಲಿ ಹಾಗೂ ರಾಜ್ಯವು ಈ ಜಲಸಂಕಷ್ಟದಿಂದ ಮುಕ್ತವಾಗಲಿ ಎಂದು ಚಾಮುಂಡೇಶ್ವರಿ ತಾಯಿಯಲ್ಲಿ ಕೇಳೊಕೊಂಡಿದ್ದೇನೆ. ವೈಯುಕ್ತಿಕವಾಗಿ ಹಾಗೂ ಕುಟುಂಬಕ್ಕೋಸ್ಕರ ಏನನ್ನೂ ಕೇಳಿಕೊಂಡಿಲ್ಲ. ಇದು ನನ್ನ ಪತ್ನಿ ಹಾಗೂ ಮಕ್ಕಳ ಉದ್ದೇಶವೂ ಆಗಿದೆ ಎಂದು ತಿಳಿಸಿದರು. ದಸರಾ ಮಹೋತ್ಸವದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಉದ್ಘಾಟನೆ ಮಾಡಲು ವೈದ್ಯರಿಗೆ ಅವಕಾಶ ಮಾಡಿಕೊಟ್ಟ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು. ಈ ದಸರಾ ಮಹೋತ್ಸವವು ನಾಡಿನ ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ದೇಶೀಯತೆ ಯನ್ನು ಸಾರುತ್ತದೆ ಎಂದು ತಿಳಿಸಿದರು.

ಪರಿಸರವನ್ನು ನಾವು ಬೆಳೆಸಬೇಕು. ಅದನ್ನು ಹಾಳು ಮಾಡಿದರೆ ಹೇಗೆ ಸಂಕಷ್ಟ ಎದುರಾಗುತ್ತದೆ ಎಂಬುದನ್ನು ಇಂದು ಪ್ರಕೃತಿ ತೋರಿಸುತ್ತಿದೆ. ಇದಕ್ಕಾಗಿ ನಾವು ಶುಚಿತ್ವವನ್ನು ಕಾಪಾಡಿಕೊಳ್ಳಬೇಕು, ಸ್ಯಾನಿಟೇಷನ್‌ ಮಾಡಿಕೊಳ್ಳಬೇಕು, ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳಬೇಕು. ಮಾಸ್ಕ್ ಹಾಕಿಕೊಳ್ಳಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಡಾ. ಮಂಜುನಾಥ್ ಹೇಳಿದರು. ಕೊರೋನಾ ಸಂಕಷ್ಟಗಳ ವಿರುದ್ಧ ರಾಜ್ಯ ಸರ್ಕಾರ ಸಹ ಹೋರಾಡುತ್ತಿದೆ. ಈಗಾಗಲೇ 150ಕ್ಕೂ ಹೆಚ್ಚು ಲ್ಯಾಬ್ ಟೆಸ್ಟ್ ಕೇಂದ್ರಗಳಿದ್ದು, ದಿನಕ್ಕೆ 1 ಲಕ್ಷ ಪರೀಕ್ಷೆಗಳಾಗುತ್ತಿದೆ ಎಂದು ತಿಳಿಸಿದರು.

ಕೊರೋನಾ ಸೋಂಕಿನಿಂದ ಬಳಲುತ್ತಿದ್ದವರಿಗೆ ಪ್ರೀತಿ ಹಾಗೂ ಮಾನವೀಯತೆ ತೋರಬೇಕು. ಇಂದು ಕೊರೋನಾ ಕಾಯಿಲೆಗಿಂತ ಅದರ ಭಯದ ಕಾಯಿಲೆಯೇ ಹೆಚ್ಚುತ್ತಿದೆ. ನಾವು ಸೋಂಕಿತರಿಂದ ದೈಹಿಕವಾಗಿ ಮಾತ್ರ ದೂರವಿರಬೇಕು, ಮಾನಸಿಕವಾಗಲ್ಲ ಎಂದು ಡಾ. ಮಂಜುನಾಥ್ ತಿಳಿಸಿದರು. ಇಂದು ವೈದ್ಯರಿಗೆ ಅಭದ್ರತೆ ಕಾಡುತ್ತಿದೆ. ಅವರು ವೃತ್ತಿಯ ಒತ್ತಡ, ಮಾನಸಿಕ ಒತ್ತಡ ಹಾಗೂ ದೈಹಿಕ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಹಲ್ಲೆ ಭೀತಿಯಿಂದ ಗ್ರಾಮೀಣ ಭಾಗಗಳಿಗೆ ವೈದ್ಯರು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅವರಿಗೆ ಸೌಹಾರ್ದಯುತ ವಾತಾವರಣ ಹಾಗೂ ಭದ್ರತೆಯನ್ನು ಸರ್ಕಾರ ಕಲ್ಪಿಸಬೇಕಿದೆ ಎಂದು ಡಾ. ಮಂಜುನಾಥ್ ತಿಳಿಸಿದರು.

ಸಮಾಜ ಜಾಲಾಡುತ್ತಿರುವ ಸಾಮಾಜಿಕ ಜಾಲತಾಣ : ಸಾಮಾಜಿಕ ಜಾಲತಾಣಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ. ಸಮಾಜವನ್ನು ಜಾಲಾಡುತ್ತಿದೆ. ಜನರ ದಿಕ್ಕಿ ತಪ್ಪಿಸುತ್ತಿದೆ. ಕೊರೋನಾ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಪ್ಪು ಮಾಹಿತಿಗಳು ರವಾನೆಯಾಗುತ್ತಿದೆ. ಇಂಥದ್ದು ನಿಲ್ಲಬೇಕಿದ್ದು, ನೈಜ ಸುದ್ದಿಯನ್ನು ಮಾತ್ರ ರವಾನಿಸಬೇಕು ಎಂದು ಡಾ. ಮಂಜುನಾಥ್ ಮನವಿ ಮಾಡಿದರು. ಯಾರು ಎಷ್ಟೇ ವಿದ್ಯೆ ಪಡೆದಿದ್ದರೂ ನಮ್ಮ ಸಂಸ್ಕಾರ ಬಹಳ ಮುಖ್ಯವಾಗುತ್ತದೆ. ನಾವು ಸಹ ಜನರ ಜೀವ ಮೊದಲು ಆಮೇಲೆ ಶುಲ್ಕ ಎಂಬ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ ಎಂದು ಡಾ. ಮಂಜುನಾಥ್ ತಿಳಿಸಿದರು.

ಮಾಸ್ಕ್ – ಸಾಮಾಜಿಕ ಅಂತರ – ಸ್ಯಾನಿಟೈಸರ್ ಬಳಸಿ : ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ದೇಶ ಹಾಗೂ ರಾಜ್ಯ ಕೊರೋನಾ ಮುಕ್ತವಾಗಲಿ ಎಂದು ತಾಯಿ ಚಾಮುಂಡೇಶ್ವರಿ ಬಳಿ ಕೋರಿಕೊಂಡಿದ್ದೇನೆ. ದೇವಿಯ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ. ವೈದ್ಯರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ದಾದಿಯರು ಕೊರೋನಾ ಸಂದರ್ಭದಲ್ಲಿ ವಿಶೇಷ ಸೇವೆ ನೀಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

ಮಾಸ್ಕ್ – ಸಾಮಾಜಿಕ ಅಂತರ – ಸ್ಯಾನಿಟೈಸರ್ ಅನ್ನು ಬಳಸಿ ಕೊರೋನಾ ಹೋಗಲಾಡಿಸಲು ಶ್ರಮಿಸಬೇಕು. ಅಲ್ಲದೆ, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿ ಪರಿಸ್ಥಿತಿ ಬಗ್ಗೆ ವಿವರಣೆ ಪಡೆದುಕೊಂಡಿದ್ದಾರೆ. ಜೊತೆಗೆ ಬೆಂಬಲಕ್ಕೆ ಲಭ್ಯವಿರುವುದಾಗಿ ಹೇಳಿದ್ದರಿಂದ ನೆಮ್ಮದಿ ಉಂಟಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕಲಬುರಗಿಯಲ್ಲಿ ಪ್ರವಾಹಪೀಡಿತ ಗ್ರಾಮವೊಂದನ್ನು ಸ್ಥಳಾಂತರ ಮಾಡಲಾಗಿದ್ದು, ಕಂದಾಯ ಮಂತ್ರಿಗಳು ಹಲವು ಕಡೆ ಭೇಟಿ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರವಾಹಪೀಡಿತ ಪ್ರದೇಶಗಳ ನಿರ್ವಹಣೆಗೊಸ್ಕರ 34 ಕೋಟಿ ರೂ.ವನ್ನು ನೇರವಾಗಿ ನೆರೆ ಸಂತ್ರಸ್ತರ ಖಾತೆಗೆ ಹಾಕಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಈಗಾಗಲೇ ಹಣ ಇದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

LEAVE A REPLY

Please enter your comment!
Please enter your name here