ಮನುಷ್ಯನಿಗೆ ಲೈಫ್ನಲ್ಲಿ ತುಂಬಾ ಕಷ್ಟವಿರುವಾಗ್ಲೇ ಸ್ವಲ್ಪ ಜಾಸ್ತಿ ತಲೆ ಓಡೋದಂತೆ. ಇದಕ್ಕೆ ನಮ್ಮ ಸ್ಯಾಂಡಲ್ವುಡ್ನ ಕರಿಚರತೆ ದುನಿಯಾ ವಿಜಿಯೇ ಫೈನ್ ಎಕ್ಸಾಂಪಲ್. ವೈಯಕ್ತಿಕ ಜೀವನದ ಕಹಿಗಳಿಂದ ವಿಜಿ ಆಚೆ ಬರಲು ಪಟ್ಟಪಾಡು ಅಷ್ಟಿಷ್ಟಲ್ಲ. ಕಷ್ಟಗಳ ಮೆಟ್ಟಿಲುಗಳನ್ನೇ ಚಾಲೆಂಜ್ ಆಗಿ ಸ್ವೀಕರಿಸಿ ಮುನ್ನುಗುವ ವಿಜಿಗೆ ಈ ದುನಿಯಾನೇ ಒಂದು ಅಖಾಡ.
ಇಷ್ಟುದಿನಗಳ ಕಾಲ ನಿರಂತರ ನೋವುಗಳಿಂದ ತತ್ತರಿಸಿ ಹೋಗಿದ್ದ ವಿಜಯ್ ಈಗ ಮತ್ತೆ ಒಂಟಿಸಲಗದಂತೆ ಎದ್ದು ನಿಲ್ಲುವ ಪ್ರಾಮೀಸ್ ಮಾಡಿದ್ದಾರೆ. ಸ್ಟ್ರಗಲ್ಗಳ ಸರಮಾಲೆಯನ್ನೇ ಹಾಕಿಕೊಂಡು ಗಾಂಧಿನಗರಕ್ಕೆ ಕಾಲಿಟ್ಟ ವಿಜಿಗೆ ಸಕ್ಸಸ್ ಅನ್ನೋದೇನೂ ಸುಲಭದ ತುತ್ತಾಗಿರಲಿಲ್ಲ. ತಾನಿಟ್ಟ ಪ್ರತಿಹೆಜ್ಜೆಯಲ್ಲೂ ದುನಿಯಾ ವಿಜಿ ಚುಚ್ಚುಮಾತುಗಳನ್ನ ಕೇಳಿದ್ದಾರೆ. ನಿರ್ದೇಶಕ ಸೂರಿಯ ಮಾಸ್ಟರ್ ವರ್ಕ್ ದುನಿಯಾ ಸಿನಿಮಾಗೆ ವಿಜಿ ಹೀರೊ ಅಂತ ಅನೌನ್ಸ್ ಆದಾಗ ಇಡೀ ಗಾಂಧಿನಗರವೇ ಗಹಗಹಿಸಿ ನಕ್ಕಿಬಿಟ್ಟಿತ್ತು.
’ಇವನು ಯಾವ ಸೀಮೆ ಹೀರೊ? ಸಿನಿಮಾ ತೋಪಾಗೋದು ೧೦೦ ಗ್ಯಾರಂಟಿ’ ಅಂತ ವಿತ್ ಔಟ್ ಥಿಂಕಿಂಗ್ ಭವಿಷ್ಟ ನುಡಿದುಬಿಟ್ರು. ಆಮೇಲೆ ನಡೆದಿದ್ದು ಈಗ ಇತಿಹಾಸ. ವಿಜಿಯ ಬಾಳಿನಲ್ಲಿ ದುನಿಯಾ ಸಿನಿಮಾ ಹೊಸ ಭರವಸೆಯ ಬೆಳಕು ಮೂಡಿಸಿ ಗಾಂಧಿನಗರದ ಕೆಲವು ಸೋ ಕಾಲ್ಡ್ ಪಂಡಿತರ ಬಾಯಿಗೆ ಬೀಗ ಹಾಕಿಬಿಟ್ಟಿತ್ತು.ದುನಿಯಾ ವಿಜಿ ಏನೇ ಮಾಡಿದ್ರು ಅದರಲ್ಲಿ ಅರ್ಥಪೂರ್ಣ ಸಂದೇಶವಿರುತ್ತೆ ಎನ್ನುವ ವಿಷಯ ಅವರ ಅಭಿಮಾನಿಗಳಿಗೂ ಗೊತ್ತಿದೆ. ಸ್ವಲ್ಪ ದಿನಗಳಿಂದ ಯಾರ ಸಹವಾಸನೂ ಬೇಡ ಎಂದು ಸೈಲೆಂಟ್ ಆಗಿದ್ದ ಬ್ಲ್ಯಾಕ್ ಕೋಬ್ರಾ ಈಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದಾರೆ.
ಅದು ತಮ್ಮ ರಾ ಸ್ಟೈಲ್ನಲ್ಲೇ. ತಮ್ಮ ಪರಿಶ್ರಮದ ಹಿಂದಿನ ದಿನಗಳನ್ನ ಮೆಲುಕುಹಾಕಿರೋ ವಿಜಯ್ ಇದುವರೆಗೂ ಯಾರಿಗೂ ಹೇಳದ ಕೆಲವು ಇಂಟ್ರೆಸ್ಟಿಂಗ್ ಘಟನೆಗಳನ್ನ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಬ್ಯಾಕ್ ಟು ಮೆಮೊರಿಸ್ ಅಂತೀರೋ ವಿಜಿಯ ಅಂತರಂಗದಲ್ಲಿ ಏನೇನೂ ಅಡಗಿದೆ ಎನ್ನುವ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ ನೋಡಿ.ಆಶ್ಚರ್ಯವೆಂದ್ರೇ ದುನಿಯಾ ವಿಜಿ ಚಿತ್ರರಂಗದಲ್ಲಿ ಹೀರೊ ಆಗೋಕೆ ಮುಂಚೆ ಒಬ್ಬ ನಿಷ್ಟಾವಂತ ಪೊಲೀಸ್ ಅಧಿಕಾರಿಯಾಗಬೇಕು ಅಂತ ಕನಸಿಟ್ಟುಕೊಂಡಿದ್ರಂತೆ. ಆ ಕನಸಂತೂ ನನಸಾಗಲಿಲ್ಲ. ಹತ್ತೊಂಭತ್ತು ವರ್ಷದ ನವಯುವಕ ವಿಜಯ್ ಮನಸ್ಸಿನಲ್ಲಿ ಹುಟ್ಟಿಕೊಂಡ ಈ ಆಸೆಯ ರಿಯಲ್ ಸ್ಟೋರಿಯೇನು? ಆದರೆ ಆ ಟೈಮ್ನಲ್ಲಿ ವಿಜಿಯ ತಲೆಯಲ್ಲಿ ಈ ಕನಸು ಮೊಳಕೆಯೊಡೆದಿದ್ದು ಹೇಗೆ ಅಂತ ನೀವೆ ಕೇಳಿಬಿಡಿ.
’ಹೀಗೆ ಒಂದು ದಿನ ನಾನು ಶಶಿಕುಮಾರ್ ಅಭಿನಯದ ಕೆಂಪಯ್ಯ ಐಪಿಎಸ್ ಸಿನಿಮಾ ನೋಡಿ, ಪೊಲೀಸ್ ಅಧಿಕಾರಯಾಗಬೇಕು ಅಂತ ನಿರ್ಧಾರ ಮಾಡಿದೆ. ನನ್ನ ಒಬ್ಬ ವಿದ್ಯಾವಂತ ಗೆಳೆಯ ಅದಕ್ಕೆ ಜೀವ ತುಂಬಿದ. ಮಗಾ ೧೦ನೇ ಕ್ಲಾಸ್ ಪಾಸ್ ಆಗೀದಿಯಾ ಪಿಸಿ ಕೆಲಸಕ್ಕೆ ಸೇರಿಕೋ, ಆಮೇಲೆ ಕಷ್ಟಪಟ್ಟು ಡಿಗ್ರಿ ಮಾಡಿ ಕೆಎಎಸ್ ಅಥವಾ ಐಪಿಎಸ್ ಆಗಿಬಿಡು ಎಂದೆಲ್ಲಾ ಆತ್ಮವಿಶ್ವಾಸದ ಮಾತುಗಳನ್ನ ಹೇಳಿದ. ನಾನು ಅವನ ಮಾತಿನಂತೆ ರೂರಲ್ ಕೋಟಾದಲ್ಲಿ ಪಿಸಿ ಪೋಸ್ಟ್ಗೆ ಅಪ್ಲಿಕೇಶನ್ ಹಾಕಿಸುತ್ತಿದ್ದ ಒಬ್ಬ ಪುಣ್ಯಾತ್ಮನ ಬಳಿ ಹೋದೆ. ಆತ ಜಾಸ್ತಿ ಇಲ್ಲ ಎಂದು ಐನೂರು ರೂಪಾಯಿ ಕೇಳಿದ. ಹೇಗೋ ಹಣ ಹೊಂದಿಸಿ ಅವನಿಗೆ ಕೊಟ್ಟೆ.
ನಂತರ ಶಬರಿ ರಾಮನನ್ನ ಕಾದಹಾಗೇ ನಾನು ಪೋಸ್ಟ್ಗೋಸ್ಕರ ಕಾದೆ. ಅದಂತೂ ಬರಲೇಇಲ್ಲ. ಆಮೇಲೆ ನಾನು ಹೋಗಿ ಆ ಭೂಪನನ್ನ ಕೇಳಿದ್ರೆ ನೀನು ನೆನಪಿಗೆ ಬರ್ತಾ ಇಲ್ಲ ಎಂದುಬಿಟ್ಟ. ಅವತ್ತಿಗೆ ಪಿಸಿ ಪೋಸ್ಟ್ಗೆ ಐನೂರು ರೂಪಾಯಿ. ಇವತ್ತಿಗೆ ಅದು ಐದು ಸಾವಿರ ಆಗಿರಬಹುದು. ಈಗ ಸಾವಿರ ರೂಪಾಯಿಯ ನೋಟು ಬ್ಯಾನ್ ಆಗಿರುವುದರಿಂದ ಆರು ಸಾವಿರ ಆಗಿರುತ್ತೇನೋಪ್ಪಾ. . .!ದುನಿಯಾ ವಿಜಿಯ ಈ ನೆನಪುಗಳಲ್ಲಿ ಒಂದು ಸೀರಿಯಸ್ ಸಂದೇಶವೂ ಇದೆಕಣ್ರೀ. ಆಗಲೂ ಲಂಚ ಹೇಗೆ ತನ್ನ ಆಟವನ್ನ ತೋರಿಸಿತ್ತು ಅಂತ ಬೇರೆ ಶೈಲಿಯಲ್ಲಿ ಹೇಳಿದ್ದಾರೆ ಈ ಕರಿಚಿರತೆ. ಹಾಗೇನಾದ್ರೂ ವಿಜಿ ಪೊಲೀಸ್ ಅಧಿಕಾರಿಯಾಗಿಬಿಟ್ಟಿದ್ರೆ ನಾವು ಇಂದಿಗೆ ಒಬ್ಬ ಒಳ್ಳೆ ನಟನನ್ನ ಕಳೆದುಕೊಂಡು ಬಿಡ್ತಿದ್ವಿ.
ಆದರೆ ವಿಧಿಯ ಆಟವೇ ಬೇರೆ ಇತ್ತು ಬಿಡಿ. ಹಾಗೇನೂ ಆಗಲಿಲ್ಲ. ಸಿನಿಮಾ ಎನ್ನುವ ಮಾಯಾಲೋಕದಲ್ಲಿ ಅನ್ನ ತಿನ್ನಬೇಕು ಅಂತ ದುನಿಯಾ ವಿಜಿಯ ಹಣೆಯಲ್ಲಿ ಬರೆದಿತ್ತು ಅಂತ ಕಾಣುತ್ತೆ. ಅಂತೂ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ಅನ್ಟೋಲ್ಡ್ ಸ್ಟೋರಿ ಎಲ್ಲರ ಗಮನ ಸೆಳೆದಿದೆ.ಇನ್ನು ದುನಿಯಾ ವಿಜಿ ಯಶಸ್ಸಿನ ಉತ್ತುಂಗದಲ್ಲಿರುವಾಗ್ಲೇ ಪರ್ಸನಲ್ ಲೈಫ್ನಲ್ಲಿ ಎದ್ದ ಬಿರುಗಾಳಿಯೊಂದು ವಿಜಿಯ ಎಲ್ಲ ಸಿನಿಕನಸುಗಳಿಗೆ ಅಡ್ಡಗಾಲಾಗಿಹೋಯ್ತು. ಇಬ್ಬರ ಹೆಂಡತಿಯರ ಜಗಳದಲ್ಲಿ ಸಿನಿಮಾ ಮಾಡೋದು ಬಿಟ್ಟು ವಿಜಿ ಪೊಲೀಸ್ ಸ್ಟೇಷನ್, ಕೋರ್ಟು ಕಛೇರಿ ಅಂತ ಅಲೆಯೋ ಪರಿಸ್ಥಿತಿ ಬಂತು.
ಸಿನಿಮಾಗೋಸ್ಕರ ಏನು ಬೇಕಾದ್ರೂ ಮಾಡೋ ವಿಜಿಯ ಮನಸ್ಥಿತಿ ಈ ಎಲ್ಲ ಘಟನೆಗಳಿಂದ ಬೇಸತ್ತು ಹೋಗಿಬಿಟ್ಟಿತ್ತು. ಹೀಗೆ ಆದ ಬೇಸರ ಹಾಗೂ ಮುಂದಿನ ಭವಿಷ್ಯದ ಸಾಗರದ ಬಗ್ಗೆಯೂ ತಮ್ಮ ಮನದಾಳದ ಮಾತುಗಳನ್ನ ವಿಜಿ ಹಂಚಿಕೊಂಡಿದ್ದಾರೆ.ಕ್ಷಮೆ ಇರಲಿ.. ತುಂಬಾ ದಿನಗಳ ನಂತರ ಪುನ ಎಫ್ ಬಿ ಅಲ್ಲಿ ಆಕ್ಟಿವ್ ಆಗಿದ್ದೇನೆ. ನನಗೆ ಗೊತ್ತಿರೋದು ಸಿನಿಮಾ. ಸಿನಿಮಾ ಬಿಟ್ಟರೆ ನನಗೆ ಬೇರೆನೂ ಗೊತ್ತಿಲ್ಲ. ನನ್ನ ಕಳೆದ ಸಿನಿಮಾ ಬಿಡುಗಡೆಯಾಗಿ ಸುಮಾರು ೮ ತಿಂಗಳಾಯ್ತು. ಅಲ್ಲಿಂದಾಚೆ ಯಾವದೇ ಸಿನಿಮಾಗಳನ್ನು ನಾನು ಮಾಡಿಲ್ಲ. ಬದುಕಿನ ಬಂಡಿಯ ಚಕ್ರಕ್ಕೆ ಕಸಕಡ್ಡಿ ಸಿಲುಕಿದಾಗ ವೇಗ ಕಮ್ಮಿಯಾಗೋದು ಸಹಜ. ಅದು ನನ್ನೊಬ್ಬನಿಗೆ ಅಲ್ಲ ಪ್ರತಿಯೊಬ್ಬರಿಗೂ. ಹೀಗೆ ತಿಂಗಳ ಹಿಂದೆ ನನ್ನ ಅಖಾಡದಲ್ಲಿಯೇ ಕುಸ್ತಿ ಎಂಬ ಕಥೆ ಬರೆದೆ.
ಅದನ್ನು ಮುಂದೆ ಮಾಡಿಯೇ ತೀರುತ್ತೇನೆ. ಕಾಲಕ್ಕೆ ಕಾಯುವವನು ನಾನು. ಅದಾದ ಮೇಲೊಂದು ಕಥೆಯನ್ನ ಮಾಡಿದೆ. ಯಾಕೋ ಸಮಾಧಾನವಾಗಲಿಲ್ಲ. ಮನಸಿನಲ್ಲಿ ಇನ್ನೇನೋ ಬೇಕು ಅನಿಸುತ್ತಿತ್ತು. ಸ್ವಲ್ಪ ಕಾಲ ಯಾರೊಟ್ಟಿಗೂ ಬೆರೆಯದೇ ಮೌನನಾದೆ. ಒಂದಷ್ಟು ಪುಸ್ತಕಗಳನ್ನ ಓದಿದೆ. ಸಿನಿಮಾ ನೋಡಿದೆ ಮತ್ತೆ ಹೊಸ ಆಲೋಚನೆಯಲ್ಲಿ ಕುಳಿತೆ. ಪುಟ್ಟ ಮಗುವಿನ ಹಾಗೆ ಹಾಳೆಗಳ ಮೇಲೆ ತೋಚಿದ್ದು ಗೀಚತೊಡಗಿದೆ.ಹಿರಿಯರೊಬ್ಬರು ಹೇಳುತ್ತಿದ್ದಿದ್ದು ನೆನಪಾಯ್ತು. ವಿದ್ಯಾರ್ಥಿಯಂತೆ ಬರೆಯಲು ಕುಳಿತೆ. ಆಗ ಹೊಳೆದಿದ್ದೇ ಸಲಗ ಕಥೆ. ಬರೆದ ಆಲೋಚನೆಗಳನ್ನು, ಅನುಭವಗಳನ್ನು, ಹೊಳೆದ ಗಟ್ಟಿ ಕಥೆಯನ್ನು ಈಗೀನ ಕಾಲಘಟ್ಟಕ್ಕೆ ಇಳಿಸಿ ಚಿತ್ರಕಥೆಯನ್ನಾಗಿ ತಯಾರು ಮಾಡಬೇಕೆಂಬ ಸಂಕಲ್ಪ ತೊಟ್ಟೆ.
ಈ ಸಂಕಲ್ಪದ ಹೆಸರೇ ಸಲಗ. ಇವಿಷ್ಟನ್ನು ಮನರಂಜನೆಯ ಪಾಕದೊಂದಿಗೆ ನಿಮ್ಮುಂದಿಡಬೇಕೆಂಬ ಮಹಾದಾಸೆ ನನ್ನದು. ಜಯಮ್ಮನ ಮಗನ ನಂತರ ಇದು ನಾನು ಮಾಡಿದ ಎರಡನೆ ಕಥೆ. ಅನುಭವದ ಮಾತೆಂದರೆ ಶತ್ರುವು ಸದಾ ಅನ್ನವನ್ನ ಕಸಿದುಕೊಳ್ಳುವ ಆಲೋಚನೆಯಲ್ಲೇ ಇರ್ತಾನೆ. ಆದರೆ ಅವನು ಯಾವ್ದೇ ಕಾರಣಕ್ಕೂ ನನ್ನ ಹಸಿವನ್ನ ಕದಿಯಲು ಸಾಧ್ಯವಿಲ್ಲ. ಯಸ್, ಹೀಗೆ ತಮ್ಮ ಮನಸಿನಾಳದ ಮಾತುಗಳನ್ನ ಪತ್ರದ ಮೂಲಕ ಹಂಚಿಕೊಂಡಿರುವ ವಿಜಿ, ಇದೀಗ ’ಬ್ಯಾಕ್ ಟು ಫೀಲ್ಡ್’ ಅಂತ ಧೂಳು ಕೊಡವಿಕೊಂಡು ನಿಂತಿದ್ದಾರೆ. ಹೊಸ ಕನಸುಗಳನ್ನ ಕಾಣುತ್ತಿದ್ದಾರೆ. ಮತ್ತೆ ಸಿನಿಮಾರಂಗದಲ್ಲಿ ಬ್ಯುಸಿಯಾಗುವತ್ತ ಹೆಜ್ಜೆ ಇಡುತ್ತಿದ್ದಾರೆ.ಎಲ್ಲರ ಜೀವನದಲ್ಲೂ ಕೆಟ್ಟ ಪೇಸ್ ಬಂದೇಬರುತ್ತೆ .ಆದರೆ ಅವುಗಳನ್ನೆಲ್ಲ ಮೆಟ್ಟಿ ನಿಂತ್ರೆ ಮಾತ್ರ ನಾವು ಏನಾದ್ರೂ ಅಚೀವ್ ಮಾಡೋಕೆ ಸಾಧ್ಯ ಅಂತ ದುನಿಯಾ ವಿಜಿಗೆ ಬಹಳ ಬೇಗ ಅರ್ಥವಾಗಿದೆ.
ವೈಯಕ್ತಿಕ ಕಷ್ಟಗಳು ಸಿನಿಮಾಗೆ ಅಫೆಕ್ಟ್ ಆಗಬಾರದು ಎನ್ನುವ ಕಹಿಸತ್ಯ ವಿಜಿ ಪಾಲಿಗೆ ಈಗ ಸ್ವೀಟ್ ಟಾನಿಕ್. ಸಲಗ ಸಿನಿಮಾವನ್ನ ಮಾಡೇಮಾಡ್ತೀನಿ ಅಂತ ಟೊಂಕಕಟ್ಟಿ ನಿಂತಿರುವ ವಿಜಿಗೆ ಈ ಹೊಸ ಸಂಕಲ್ಪವೇ ಶಕ್ತಿ ಕೊಟ್ಟಂತಾಗಿದೆ. ಈಗೀನ ಕಾಲಘಟ್ಟಕ್ಕೆ ಹೊಂದಾಣಿಕೆಯಾಗುವಂತೆ ಕಥೆ ಮಾಡಲು ದುನಿಯಾ ವಿಜಿ ಹಗಲುರಾತ್ರಿ ಸಲಗದ ಬಗ್ಗೆಯೇ ಜಪ ಮಾಡ್ತಿದಾರೆ. ಒಟ್ಟಿನಲ್ಲಿ ಒಬ್ಬ ಕೆಲಸ ಹುಡುಕುವ ಸಾಮಾನ್ಯ ಹುಡುಗನಿಂದ ಹಿಡಿದು ಸ್ಯಾಂಡಲ್ವುಡ್ನಲ್ಲಿ ಟಾಪ್ ಹೀರೊಗಳ ಸಾಲಿಗೆ ಬಂದುನಿಂತ ವಿಜಿ ಜೀವನಕಥೆ ಕೇಳಿದೆ ಮೈಜುಮ್ಮೆನುವುದು ಅಷ್ಟೇ ಸತ್ಯ. ಸತತ ಸಂಘರ್ಷಗಳಿಂದ ಆಚೆ ಬಂದು ಈಗ ಹೊಸ ಸಿನಿಮಾ ಮಾಡುವ ಉತ್ಸಾಹದಲ್ಲಿರುವ ಕರಿಚಿರತೆಗೆ ಯಶಸ್ಸು ಹುಡುಕಿಕೊಂಡು ಬರಲಿಎನ್ನುವುದೇ ಎಲ್ಲರ ಆಶಯ. ಓನ್ಸ್ ಅಗೇನ್ ಆಲ್ ದಿ ಬೆಸ್ಟ್ ದುನಿಯಾ ವಿಜಯ್…