ಬಳ್ಳಾರಿ ಉಪಚುನಾವಣೆ ಗೆದ್ದು ಹುರುಪಿನಲ್ಲಿದ್ದ ಕಾಂಗ್ರೆಸ್ ಇದೀಗ ಸಾರ್ವತ್ರಿಕ ಚುನಾವಣೆಗೆ ತಯಾರಿ ನಡೆಸಿದೆ. ಭಾನುವಾರ ಬಳ್ಳಾರಿ ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಗೊಂದಲದ ಗೂಡಾಗಿದ್ದ ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಸಂಡೂರಿನಲ್ಲಿ ಕಾರ್ಯಕರ್ತರ ಸಮಾವೇಶ ನಡೆಯಲಿದೆ.
ಈ ಮೂಲಕ ಕಾಂಗ್ರೆಸ್ ಚುನಾವಣೆ ಸಮರ ಸಾರಲು ಮುಂದಾಗಿದೆ. ಇತ್ತ ಬಳ್ಳಾರಿಯಲ್ಲಿ ಎಡಪಕ್ಷದ ಸಮಾವೇಶವೂ ನಡೆಯಲಿದೆ.ಬಳ್ಳಾರಿ ಉಪಚುನಾವಣೆ ಬಳಿಕ ಮತ್ತೊಮ್ಮೆ ಲೋಕಸಭೆ ಚುನಾವಣೆ ಸಮರ ಎದುರಿಸಲು ಕಾಂಗ್ರೆಸ್ ಸಜ್ಜಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ನೇತೃತ್ವ ದಲ್ಲಿ ಬೃಹತ್ ಸಮಾವೇಶ ಭಾನುವಾರ ನಡೆಯಲಿದೆ. ಜಿಲ್ಲೆಯ ಇಬ್ಬರು ಸಚಿವರು ಸೇರಿದಂತೆ ಆರು ಮಂದಿ ಕಾಂಗ್ರೆಸ್ ಶಾಸಕರು ಸಮಾವೇಶಕ್ಕೆ ಸಾಕ್ಷಿಯಾಗಲಿದ್ದಾರೆ.
ಎಲ್ಲಾ ಸರಿಯಿದೆ ಎನ್ನಲಾಗುತ್ತಿದ್ರು ಗೊಂದಲದ ಗೂಡಾಗಿರುವ ಬಳ್ಳಾರಿ ಕಾಂಗ್ರೆಸ್ ಬಲಪಡಿಸಲು ಸಚಿವ ಡಿ.ಕೆ.ಶಿವಕುಮಾರ ನೇತೃದಲ್ಲಿ ಸಂಡೂರಿನಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ನಡೆಯುತ್ತಿದೆ. ಉಪಚುನಾವಣೆ ನಂತರ ಗ್ಯಾಪ್ ನೀಡಿದ್ದ ಡಿಕೆಶಿ ಹಂಪಿ ಉತ್ಸವಕ್ಕೆ ಬಂದಿದ್ರು, ಇದೀಗ ಮತ್ತೊಮ್ಮೆ ಜಿಲ್ಲೆಗೆ ಕಾಲಿಡುತ್ತಿದ್ದು, ಎಲ್ಲ ನಾಯಕರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅನಾರೋಗ್ಯದಿಂದ ಬಳಲುತ್ತಿರುವ ಆನಂದ್ ಸಿಂಗ್, ಭಿನ್ನಮತೀಯ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿರೋ ನಾಗೇಂದ್ರೇ, ಮತ್ತು ಜೈಲಿನಲ್ಲಿರೋ ಕಂಪ್ಲಿ ಗಣೇಶ್ ಸಮಾವೇಶಕ್ಕೆ ಬರೋದು ಡೌಟ್ ಎನ್ನಲಾಗುತ್ತಿದೆ.
ಇನ್ನೂ ಜಿಲ್ಲೆಯ ಇಬ್ಬರು ಸಚಿವರಾದ ತುಕಾರಂ, ಪಿ.ಟಿ.ಪರಮೇಶ್ವರ ನಾಯ್ಕ ಕಾರ್ಯಕ್ರಮಕ್ಕೆ ಬಂದ್ರೂ ಅವರಿಗೆ ಬೇರೆ ಜಿಲ್ಲೆಯ ಉಸ್ತುವಾರಿ ಇರೋ ಕಾರಣ ಚುನಾವಣೆ ಯಲ್ಲಿ ಪೂರ್ಣವಾಗಿ ಪಾಲ್ಗೊಳ್ಳುತ್ತಾರೊ ಇಲ್ಲವೋ ಅನ್ನೋ ಅನುಮಾನ ಇದೆ. ಇನ್ನೂ ಶಾಸಕ ಭೀಮಾನಾಯ್ಕ್ ಗೆ ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದು, ರಾಜ್ಯಾದ್ಯಾಂತ ಪ್ರವಾಸದಲ್ಲಿದ್ದಾರೆ. ಅವರು ಕೂಡ ಎಷ್ಟರ ಮಟ್ಟಿಗೆ ಚುನಾವಣೆ ಕೆಲಸದಲ್ಲಿ ಪಾಲ್ಗೋಳ್ಳುತ್ತಾರೋ ಅನ್ನೋದನ್ನ ಕಾದು ನೋಡಬೇಕಿದೆ.
ಇನ್ನೂ ಜಿಲ್ಲೆಯಲ್ಲಿ ಕಾಂಗ್ರೆಸ್ ಬಂದ್ರೂ ಅಷ್ಟೇ ಬಿಜೆಪಿ ಬಂದ್ರೂ ಅಷ್ಟೇ ಯಾರಿಂದಲೂ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲವೆಂದು ಎಡಪಕ್ಷಗಳು ಪ್ರತ್ಯೇಕ ಸಮಾವೇಶ ಮಾಡುತ್ತಿವೆ. ಭಾನುವಾರ ಬಳ್ಳಾರಿ ಗಾಂಧಿ ಭವನದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆ ಕಾರ್ಮಿಕರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸಮಾವೇಶ ಮಾಡುತ್ತಿದ್ದು, ಉತ್ತಮ ಅಭ್ಯರ್ಥಿ ಆಯ್ಕೆ ಮಾಡಿ ಎನ್ನುತ್ತಿವೆ.
ಒಟ್ಟಿನಲ್ಲಿ ಬಿಜೆಪಿ ಕಾಂಗ್ರೆಸ್ ನೇರಹಣಾಹಣಿ ಇರೋ ಬಳ್ಳಾರಿಯಲ್ಲಿ ಈ ಬಾರಿ ಮತ್ತೊಮ್ಮೆ ಚುನಾವಣೆ ಫಲಿತಾಂಶ ಕುತೂಹಲವನ್ನು ಮೂಡಿಸಿದೆ. ಅಲ್ಲದೇ ಇಷ್ಟು ದಿನ ಒಂದು ಲೆಕ್ಕ, ಇನ್ಮೂಂದೆ ಬೇರೆಯದ್ದೆ ಲೆಕ್ಕ ಎನ್ನುತ್ತಿದ್ದಾರೆ ಸಚಿವ ಡಿಕೆಶಿ. ಆದ್ರೆ ಬಳ್ಳಾರಿಯಲ್ಲಿ ಏನಿದ್ರೂ ನಮ್ದೆ ಹವಾ ಎನ್ನುತ್ತಿರುವ ರಾಮುಲು ಸಹ ಗೆಲುವಿಗಾಗಿ ರಣ ತಂತ್ರ ಹಣೆದು ಕಾದು ಕುಳಿತಿದ್ದಾರೆ.