Home KARNATAKA ಬಿಜೆಪಿ ಸರ್ಕಾರ ಇದೆ ಎಂದು ಮುನಿರತ್ನ ಪರ ಕೆಲಸ ಮಾಡಿದರೆ ಮುಂದೆ ನಿಮಗೆ ಕಷ್ಟದ ದಿನಗಳು...

ಬಿಜೆಪಿ ಸರ್ಕಾರ ಇದೆ ಎಂದು ಮುನಿರತ್ನ ಪರ ಕೆಲಸ ಮಾಡಿದರೆ ಮುಂದೆ ನಿಮಗೆ ಕಷ್ಟದ ದಿನಗಳು ಕಾದಿವೆ -SIDDARAMAIAH

410
0
SHARE

ಬೆಂಗಳೂರು: ಬಿಜೆಪಿ ಸರ್ಕಾರ ಇದೆ ಎಂದು ಮುನಿರತ್ನ ಪರ ಕೆಲಸ ಮಾಡಿದರೆ ಮುಂದೆ ನಿಮಗೆ ಕಷ್ಟದ ದಿನಗಳು ಕಾದಿವೆ.ಇದು ಪೊಲೀಸರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ನೀಡಿದ ಎಚ್ಚರಿಕೆ.ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದ ಜಾಲಹಳ್ಳಿ, ಪೀಣ್ಯ ಮತ್ತಿತರ ವಾರ್ಡ್ ನಲ್ಲಿ ಇಂದು ರೋಡ್‌ ಶೋ ನಡೆಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಅವರ ಪರ ಮತ ಯಾಚನೆ ಮಾಡಿ ಮಾತನಾಡಿದ ಅವರು, ಪೊಲೀಸರು ಒಂದು ಪಕ್ಷದ ಪರ ಕೆಲಸ ಮಾಡಿದರೆ ಸಹಿಸುವುದಿಲ್ಲ ಎಂದರು.

ತನ್ನ ವಿರೋಧಿಗಳನ್ನು ಹೆದರಿಸಿ, ಬೆದರಿಸಿ ತಾನು ಶಾಸಕನಾಗಬಹುದು ಅಂತ ಮುನಿರತ್ನ ಭಾವಿಸಿದ್ದರೆ, ಅವರಂಥ ಮೂರ್ಖ ಬೇರೊಬ್ಬರಿಲ್ಲ. ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿರಬೇಕು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಎಂಬ ಕಾರಣಕ್ಕೆ ಅವರ ಪರ ಕೆಲಸ ಮಾಡಿದರೆ ಭವಿಷ್ಯದಲ್ಲಿ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತೆ. ಮುನಿರತ್ನ ಅವರು ಎರಡು ಬಾರಿ ಗೆದ್ದು ಶಾಸಕನಾಗಲು ಕಾರಣ ಕಾಂಗ್ರೆಸ್ ಪಕ್ಷವೇ ಹೊರತು ಅವರ ವೈಯಕ್ತಿಕ ವರ್ಚಸ್ಸಲ್ಲ.

ನಾನು ಮುಖ್ಯಮಂತ್ರಿಯಾಗಿದ್ದಾಗ ಆರ್.ಆರ್ ನಗರ ಕ್ಷೇತ್ರದ ಅಭಿವೃದ್ಧಿಗೆ ರೂ.2,000 ಕೋಟಿ ಅನುದಾನ ನೀಡಿದ್ದೆ, ಆದರೂ ನಮಗೆ ದ್ರೋಹ ಮಾಡಿದ್ರಲ ಮುನಿರತ್ನ ಅವರೇ, ಅಂಥಾ ಅನ್ಯಾಯ ನಾವೇನು ಮಾಡಿದ್ವಿ ನಿಮ್ಗೆ? ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ನನ್ನ ತಾಯಿ ಅಂತ ಹೇಳ್ತಿದ್ದ ಮುನಿರತ್ನ ಅದೇ ತಾಯಿಗೆ ದ್ರೋಹ ಬಗೆದು ಬಿಜೆಪಿ ಸೇರಿದ್ರು. ನಾವು ಯಾಕಪ್ಪಾ ಪಕ್ಷನ ತಾಯಿ ಅಂತ ಕರೀತಿದ್ದಿ, ಈಗ ಅದೇ ತಾಯಿಗೆ ಮೋಸ ಮಾಡಿದ್ಯಲ ಅಂದ್ರೆ ಕಾಂಗ್ರೆಸ್ ನಾಯಕರು ನನ್ನ ತಾಯಿಗೆ ಅವಮಾನ ಮಾಡ್ತಿದಾರೆಂದು ಗೊಳೋ ಅಂತ ಮೊಸಳೆ ಕಣ್ಣೀರು ಸುರಿಸ್ತಾರೆ.

ಕಾಂಗ್ರೆಸ್ ಅಭ್ಯರ್ಥಿ ಎಂಬ ಕಾರಣಕ್ಕೆ ಕ್ಷೇತ್ರದ ಜನತೆ ಮುನಿರತ್ನ ಅವರನ್ನು ಎರಡು ಬಾರಿ ಆಯ್ಕೆ ಮಾಡಿದರೇ ಹೊರತು ಅವರು ದೊಡ್ಡ ನಾಯಕರು‌ ಎಂದಲ್ಲ. ನಾವೇನೂ ಅವರ ಕುತ್ತಿಗೆ ಹಿಡಿದು‌ ಪಕ್ಷದಿಂದ ಹೊರ ದಬ್ಬಲಿಲ್ಲ. ಸ್ವಾರ್ಥಕ್ಕಾಗಿ ಅವರು ಬಿಜೆಪಿಗೆ ಹೋದರು. ಇಂಥವರು ರಾಜಕೀಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ.ಮುನಿರತ್ನ ಅವರದ್ದು ಬ್ಲಾಕ್ ಮೇಲ್ ರಾಜಕೀಯ. ತಮಗಾಗಿ ದುಡಿಯುವ ಕಾರ್ಯಕರ್ತರ ಮೇಲೆಯೇ ಸುಳ್ಳು ಕೇಸು ಹಾಕಿಸುವುದು ಅವರ ಅಭ್ಯಾಸ.‌ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸಾವಿರಾರು ಸುಳ್ಳು ಕೇಸ್ ಗಳನ್ನು ಮುನಿರತ್ನ ಹಾಕಿಸಿದ್ದಾರೆ.

ರಾಜ್ಯ ಸರ್ಕಾರ ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು ಕಡಿತ ಮಾಡಿದೆ, ಅದರ ಜೊತೆಗೆ ವಿತರಣೆ ಆಗುತ್ತಿರುವ ಆಹಾರ ಪದಾರ್ಥಗಳು ಕಲಬೆರಕೆ ಬೇರೆ. ನಾನು ಶಿರಾಕ್ಕೆ ಹೋದಾಗ ಸರ್ಕಾರ ಕೊಡ್ತಿರುವ ರಾಗಿನ ಕೋಳಿ ಸಹಾ ತಿನ್ನಲ್ಲ ಅಷ್ಟು ಕಲ್ಲು, ಕಡ್ಡಿಗಳಿವೆ ಅಂತ ಜನ ಹಿಡಿಹಿಡಿ ಶಾಪ ಹಾಕ್ತಿದ್ರು. ನಾಚಿಕೆಯಾಗ್ಬೇಕು ಈ ಸರ್ಕಾರಕ್ಕೆ.ಮೋದಿ ಮೋದಿ ಎಂದು ಕೂಗುವ ಯುವಕರಿಗೆ ನರೇಂದ್ರ ಮೋದಿಯವರು ಮೂರು ನಾಮ ಹಾಕಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುತ್ತೇವೆ ಎಂದವರು ಪ್ರಧಾನಿ ಮೋದಿ. ಈಗ ಇದ್ದ ಉದ್ಯೋಗ ಕಳೆದುಕೊಂಡು ಯುವಕರು ಬೀದಿ ಪಾಲಾಗಿದ್ದಾರೆ. ಉದ್ಯೋಗ ಕೇಳಿದರೆ ಪಕೋಡ ಮಾರಲು ಹೋಗಿ ಎನ್ನುತ್ತಾರೆ.

ನಮ್ಮ ಸರ್ಕಾರದ ಅವಧಿಯಲ್ಲಿ ಆಡಳಿತದಲ್ಲಿ‌ ಪಾರದರ್ಶಕತೆ ಇತ್ತು. ಈಗ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತದಲ್ಲಿ ಲಂಚಾವತಾರ ವಿಜೃಂಭಿಸುತ್ತಿದ್ದು ಭ್ರಷ್ಟಾಚಾರ ಪಾರದರ್ಶಕವಾಗಿ ನಡೆಯುತ್ತಿದೆ. ಇಂಥ ಸರ್ಕಾರಕ್ಕೆ ಉಪ ಚುನಾವಣೆ ಫಲಿತಾಂಶ ಎಚ್ಚರಿಕೆಯ ಗಂಟೆ ಆಗಬೇಕು. ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಸಿದ್ದರಾಮಯ್ಯ ಅವರು‌ ಮನವಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಮಾಜಿ‌ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಶಾಸಕರಾದ ಬೈರತಿ ಸುರೇಶ್, ಡಾ. ಅಜಯಸಿಂಗ್, ವಿಜಯಸಿಂಗ್ ಮತ್ತಿರರು ಹಾಜರಿದ್ದರು

LEAVE A REPLY

Please enter your comment!
Please enter your name here