
ಬ್ರಿಟನ್ನ ಮುಂದಿನ ರಾಣಿ ಯಾರು ಗೊತ್ತಾ..? ಎರಡನೇ ಎಲಿಜಬೆತ್ ಘೋಷಿಸಿದ್ದು ಯಾರ ಹೆಸರನ್ನ?
ಲಂಡನ್:ಮುಂದಿನ ಬ್ರಿಟನ್ ರಾಣಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆ ಮೂಲಕ ಹಲವು ದಿನಗಳಿಂದ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ತಮ್ಮ ಪುತ್ರ ಪ್ರಿನ್ಸ್ ಚಾರ್ಲ್ಸ್ ರಾಜನಾದ ಬಳಿಕ ಅವರ ಪತ್ನಿ ಕ್ಯಾಮಿಲ್ಲಾ ದೇಶದ ರಾಣಿ ಎನ್ನಿಸಿಕೊಳ್ಳಲಿದ್ದಾರೆ ಎಂದು ಬ್ರಿಟನ್ನ ಹಾಲಿ ರಾಣಿ ಎರಡನೇ ಎಲಿಜಬೆತ್ ಘೋಷಿಸಿದ್ದಾರೆ. ಈ ಮೂಲಕ ಮುಂದಿನ ರಾಣಿ ಹುದ್ದೆಯ ಬಗ್ಗೆ ಇದ್ದ ವದಂತಿ, ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ತಾವು ಅಧಿಕಾರಕ್ಕೆ ಏರಿ 70 ವರ್ಷ ತುಂಬಿದ ಹಿನ್ನೆಲೆಯಲ್ಲಿ ಶನಿವಾರ ಹೇಳಿಕೆ ನೀಡಿರುವ ರಾಣಿ 2ನೇ ಎಲಿಜಬೆತ್, ‘ಇಷ್ಟುವರ್ಷ ನೀವು ನನಗೆ ನೀಡಿದ ಎಲ್ಲಾ ಬೆಂಬಲಗಳಿಗೆ ಧನ್ಯವಾದಗಳು. ಇದಕ್ಕೆ ನಾನು ನಿಮಗೆ ಎಂದೆಂದಿಗೂ ಕೃತಜ್ಞಳಾಗಿರುತ್ತೇನೆ. ಅದೇ ರೀತಿ ಕಾಲ ಕೂಡಿಬಂದಾಗ, ನನ್ನ ಪುತ್ರ ಚಾರ್ಲ್ಸ್ ರಾಜನಾಗಿ ಅಧಿಕಾರ ವಹಿಸಿಕೊಂಡ ಬಳಿಕ ನೀವು ಅವರಿಗೆ ಮತ್ತು ಅವರ ಪತ್ನಿ ಕ್ಯಾಮಿಲ್ಲಾಗೂ ಕೂಡಾ ಇದೇ ರೀತಿಯ ಬೆಂಬಲ ನೀಡುತ್ತೀರಿ ಎಂದು ಭಾವಿಸಿದ್ದೇನೆ. ಆ ಸಮಯ ಬಂದಾಗ ಕ್ಯಾಮಿಲ್ಲಾರನ್ನು ಕ್ವೀನ್ ಕನ್ಸೋರ್ಟ್ (ರಾಜನ ಪತ್ನಿ) ಎಂದು ಗೌರವಿಸಬೇಕು ಎಂಬುದು ನನ್ನ ಕಳಕಳಿಯ ಆಶಯ’ ಎಂದು ಹೇಳಿದ್ದಾರೆ.