ಮಂಡ್ಯ: ಮಂಡ್ಯದಲ್ಲಿ ಆಲೆಮನೆ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ತಕ್ಷಣ ಜಿಲ್ಲಾಧಿಕಾರಿಗಳು ಸಮಿತಿ ರಚನೆ ಮಾಡಿ ವರದಿಯನ್ನು ಕೊಡಬೇಕು. ಈ ಸಮತಿ ನೀಡುವ ವರದಿಯನ್ವಯ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಸಂಸದೆ ಸುಮಲತಾ ಅಂಬರೀಷ್ ಮಾತನಾಡಿ, ಮಂಡ್ಯದ ಸಾವಯವ ಬೆಲ್ಲ ಇನ್ನೂ ಬ್ರಾಂಡ್ ಆಗಿಲ್ಲ. ಇದಕ್ಕೆ ಪ್ರಮೋಟಿಂಗ್ ಹಾಗೂ ಮಾರ್ಕೆಟಿಂಗ್ ಮಾಡುವ ಅವಶ್ಯಕತೆ ಇದ್ದು, ಹೆಚ್ಚಿನ ಬೆಲೆ ಸಿಗಬೇಕೆಂದರೆ ವಿದೇಶಗಳಿಗೆ ರಫ್ತು ಮಾಡಬೇಕು. ಇದಕ್ಕೆ ಉತ್ಕೃಷ್ಟ ಗುಣಮಟ್ಟ ಬೇಕಾಗುತ್ತದೆ. ಇದರಿಂದ ಈಗ ರಚನೆಯಾಗುವ ಸಮಿತಿಯು ಇವುಗಳ ಬಗ್ಗೆಯೂ ಗಮನಹರಿಸಿ ವರದಿ ಸಿದ್ಧಪಡಿಸಬೇಕು ಎಂದು ಸಲಹೆ ನೀಡಿದರು.
ಉತ್ತಮ ಬೆಲೆ ಬಿಗದಿ ಮಾಡಲು ಮನವಿ : ನೀತಿ-ನಿಯಮಗಳಲ್ಲಿ ಆದಷ್ಟು ಸರಳೀಕರಣ ಮಾಡಬೇಕು. ಮಂಡ್ಯ ಜಿಲ್ಲೆಯಲ್ಲಿ ಆಲೆಮನೆ ಉದ್ಯಮಗಳು ಪ್ರಾರಂಭವಾಗಬೇಕು, ಯಾರೇ ಬಂದು ಉತ್ಸುಕತೆ ತೋರಿದರೂ ಸಬ್ಸಿಡಿ ಕೊಡಬೇಕು. ಸಕ್ಕರೆ ಕೊಡುವಂತಹ ರೀತಿಯಲ್ಲಿ ಬೆಲ್ಲವನ್ನು ಯಾವುದೇ ಉಷ್ಣತೆಯಲ್ಲಿಯೂ ಕೆಡದಂತೆ ಪ್ಯಾಕಿಂಗ್ ಮಾಡಬೇಕು. ಮುಖ್ಯವಾಗಿ ಉತ್ತಮ ಬೆಲೆ ನಿಗದುಯಾಗಬೇಕು ಎಂದು ರೈತ ಮುಖಂಡರು, ಮಾರಾಟಗಾರರು ಮನವಿ ಮಾಡಿಕೊಂಡರು.
ವಿಧಾನಪರಿಷತ್ ಸದಸ್ಯರಾದ ಶ್ರೀಕಂಠೇಗೌಡ ಮಾತನಾಡಿ, ಆಲೆಮನೆಗಳಿಗೆ ಮೊದಲು ಲೈಸೆನ್ಸ್ ಕೊಡಬೇಕು. ಲೈಸೆನ್ಸ್ ಪಡೆಯದೇ ಬ್ಯಾಂಕ್ ಗಳಲ್ಲಿ ಸಾಲಕೊಡುವುದಿಲ್ಲ. ಅಲ್ಲದೆ, ಆಲೆಮನೆಗಳಿಗೆ ಪ್ರಾಥಮಿಕ ಮೂಲ ಸೌಕರ್ಯಗಳನ್ನು ಕಲ್ಪಿಸಿ ಬಳಿಕ ಯೋಜನೆಗಳನ್ನು ಜಾರಿಗೊಳಿಸಿ ಎಂದು ಹೇಳಿದರು.ಆಲಮನೆ ಸಂಘದ ಅಧ್ಯಕ್ಷರಾದ ಸೋಮಶೇಖರ್ ಗೌಡ ಮಾತನಾಡಿ, ಕಬ್ಬು ಬೆಳೆಗೆ ಸೂಕ್ತ ಬೆಂಬಲ ಸರ್ಕಾರದಿಂದ ಸಿಗಬೇಕು. ಇದಕ್ಕೆ ಯಾವ ರೀತಿ ಬೆಳೆಯಬೇಕು ಹಾಗೂ ಅದಕ್ಕೇನು ಲಾಭ ಸಿಗಲಿದೆ? ರೈತರೇನು ಮಾಡಬೇಕು? ಗುಣಮಟ್ಟವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ತರಬೇತಿ ಇಲ್ಲವೇ ಕಾರ್ಯಾಗಾರಗಳು ನಡೆಯಬೇಕು ಎಂದು ಮನವಿ ಮಾಡಿದರು.
ಒಂದು ಜಿಲ್ಲೆಗೆ ಒಂದು ಉತ್ಪನ್ನ/ಬೆಳೆ : “ಒಂದು ಜಿಲ್ಲೆಗೆ ಒಂದು ಉತ್ಪನ್ನ/ಬೆಳೆ” (One District One Product-ODPO) ವಿಷಯಕ್ಕೆ ಸಂಬಂಧಿಸಿದಂತೆ ಕೆಲ ತಿಂಗಳ ಹಿಂದೆ ಮಂಡ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಕೃಷಿ ವಾಣಿಜ್ಯ, ಆಹಾರ ಸಂಸ್ಕರಣೆ ಮತ್ತು ಕೃಷಿ ರಫ್ತು ಅಭಿವೃದ್ಧಿ ಸಮಿತಿ ಸಭೆಯಲ್ಲಿ ರಾಸಾಯನಿಕ ಮುಕ್ತ ಬೆಲ್ಲ ಹಾಗೂ ಅದರ ಮೌಲ್ಯವರ್ಧಿತ ಉತ್ಪನ್ನ ಮತ್ತು ಹೆಚ್ಚುವರಿಯಾಗಿ ಸಿರಿಧಾನ್ಯವನ್ನು ಮಂಡ್ಯ ಜಿಲ್ಲೆಗೆ ಆಯ್ಕೆ ಮಾಡಲಾಗಿರುತ್ತದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಸಭೆಗೆ ನೀಡಿದರು.
ಮಂಡ್ಯ ಜಿಲ್ಲೆಯಲ್ಲಿ 42500 ಹೆ. ಪ್ರದೇಶದಲ್ಲಿ ಕಬ್ಬು ಬೆಳೆಯನ್ನು ಬೆಳೆಯಾಗುತ್ತಿದ್ದು, 45 ಲಕ್ಷ ಟನ್ ಕಬ್ಬು ಉತ್ಪಾದನೆಯಾಗುತ್ತಿದೆ. ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜು ಮಾಡುವ ಜೊತೆಗೆ ಹಾಲಿ 590 ಬೆಲ್ಲ ತಯಾರಿಸುವ ಘಟಕಗಳಿಗೆ (ಆಲೆಮನೆ) ಸರಬರಾಜು ಮಾಡಿ ಬೆಲ್ಲ ಉತ್ಪಾದಿಸಲಾಗುತ್ತಿದೆ. ಸದರಿ ಬೆಲ್ಲ ತಯಾರಿಸುವ ಘಟಕಗಳನ್ನು ಮೇಲ್ದರ್ಜೆಗೇರಿಸಲು ಹಾಗೂ ಹೊಸ ಘಟಕಗಳನ್ನು ಪ್ರಾರಂಭಿಸಲು ಈ ಯೋಜನೆಯಡಿ ಉತ್ತೇಜನ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ರಾಸಾಯನಿಕ ಮುಕ್ತ ಬೆಲ್ಲ ತಯಾರಿಸಿ, ರಫ್ತಿಗೆ ಹೆಚ್ಚಿನ ಆದ್ಯತೆ : ಆಲೆಮನೆಗಳಲ್ಲಿ ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಪದ್ಧತಿಯಡಿ ನೂತನ ತಾಂತ್ರಿಕತೆ ಅಳವಡಿಸಿ – ಉತ್ಕೃಷ್ಟ ಗುಣಮಟ್ಟದ ಬೆಲ್ಲ ತಯಾರಿಸಿ, ರಪ್ತಿನ ಪ್ರಮಾಣವನ್ನು ಹೆಚ್ಚಿಸಿ, ಆರ್ಥಿಕ ಲಾಭವನ್ನು ಪಡೆಯಲು ಅನುವು ಮಾಡಿಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಒಂದು ಜಿಲ್ಲೆ ಒಂದು ಉತ್ಪನ್ನ/ಬೆಳೆಗೆ ಬೇಕಿದೆ ಹೆಚ್ಚಿನ ಒತ್ತು : ಆತ್ಮನಿರ್ಭರ ಭಾರತ ಯೋಜನೆಯಡಿ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಸಹ ಬರಲಿದ್ದು, ಇದರ ಸಮರ್ಪಕ ಅನುಷ್ಠಾನ ಆಗಬೇಕಿದೆ. ಇಲ್ಲಿ ಪ್ರಮುಖವಾಗಿ ಅಸಂಘಟಿತ ವಲಯದಲ್ಲಿರುವ ಸೂಕ್ಷ್ಮ / ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಪ್ರೋತ್ಸಾಹಿಸುವುದು ಮುಖ್ಯಕ್ತವಾಗಿದೆ. ಇದರ ಪ್ರಮುಖ ಉದ್ದೇಶವು “ಒಂದು ಜಿಲ್ಲೆ ಒಂದು ಉತ್ಪನ್ನ/ಬೆಳೆ”ಯಾಗಿದೆ. ಹೀಗಾಗಿ ಇದಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ವಿವರಿಸಲಾಯಿತು.
ಶಾಸಕರಾದ ಎಂ. ಶ್ರೀನಿವಾಸ, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ. ಅಪ್ಪಾಜಿನಗೌಡ, ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಉಮೇಶ್, ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಸೇರಿದಂತೆ ಬೆಲ್ಲ ತಯಾರಿಕರು, ಕಬ್ಬು ಬೆಳೆಗಾರರು, ಕೃಷಿ ವಿಜ್ಞಾನಿಗಳು ಮತ್ತಿತರರು ಇದ್ದರು.