Home District ಮಕ್ಕಳ ಊಟ ಕಸಿದ ಸರ್ಕಾರದಿಂದಲೇ ಕಲ್ಲಡ್ಕಕ್ಕೆ ಬಿಸಿಯೂಟ..ಶಿಕ್ಷಣ ಇಲಾಖೆಗೆ ಪತ್ರ ಬರೆದು ಮಂಡಿಯೂರಿದ ಶಾಲಾಡಳಿತ

ಮಕ್ಕಳ ಊಟ ಕಸಿದ ಸರ್ಕಾರದಿಂದಲೇ ಕಲ್ಲಡ್ಕಕ್ಕೆ ಬಿಸಿಯೂಟ..ಶಿಕ್ಷಣ ಇಲಾಖೆಗೆ ಪತ್ರ ಬರೆದು ಮಂಡಿಯೂರಿದ ಶಾಲಾಡಳಿತ

1502
0
SHARE

ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ನೇತೃತ್ವದ ಎರಡು ಶಾಲೆಗಳಿಗೆ ಕಳೆದ ಬಾರಿ ಅನುದಾನ ಕಡಿತ ಮಾಡಿದ್ದ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಆಗಿನ ಸಚಿವ ರಮಾನಾಥ ರೈ ಮಕ್ಕಳ ಅನ್ನ ಕಸಿದರೆಂದು ವ್ಯಾಪಕ ಪ್ರಚಾರವೂ ಪಡೆದಿತ್ತು. ಶಿಕ್ಷಣ ಇಲಾಖೆಯಿಂದ ಬಿಸಿಯೂಟದ ಪ್ರಸ್ತಾಪ ಮಾಡಿದ್ದರೂ, ಶಾಲಾಡಳಿತ ಮಂಡಳಿ ಅದನ್ನು ನಿರಾಕರಿಸಿತ್ತು.

ಆದರೆ, ಇದೀಗ ಅದೇ ಎರಡು ಶಾಲೆಗಳಿಗೆ ಬಿಸಿಯೂಟ ಪೂರೈಕೆ ಮಾಡುವಂತೆ ಆಡಳಿತ ಮಂಡಳಿ ಸರಕಾರಕ್ಕೆ ದುಂಬಾಲು ಬಿದ್ದಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಮತ್ತು ಪುಣಚದ ಶ್ರೀದೇವಿ ವಿದ್ಯಾಸಂಸ್ಥೆಗಳಿಗೆ ಕೊಲ್ಲೂರಿನಿಂದ ಹಣದ ರೂಪದಲ್ಲಿ ಬರುತ್ತಿದ್ದ ನೆರವನ್ನು ಕಡಿತಗೊಳಿಸಲಾಗಿತ್ತು. ದೇವಸ್ಥಾನದ ದುಡ್ಡನ್ನು ಹಣದ ರೂಪದಲ್ಲಿ ಪಡೆಯುವುದು ಸರಿಯಲ್ಲ ಅಂತಾ ಆಗಿನ ಸಚಿವ ರಮಾನಾಥ ರೈ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದ್ದು ವಿವಾದಕ್ಕೂ ಕಾರಣವಾಗಿತ್ತು.

ಕಲ್ಲಡ್ಕದ ಎರಡು ಶಾಲೆಗಳ ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸಿ, ರಾಜ್ಯ ಸರಕಾರ ಮತ್ತು ರಮಾನಾಥ ರೈ ವಿರುದ್ಧ ಪ್ರತಿಭಟನೆ ನಡೆಸುವಂತೆ ಮಾಡಿದ್ದರು. ಹಣದ ಬದಲಿಗೆ, ಶಿಕ್ಷಣ ಇಲಾಖೆಯಿಂದ ಬಿಸಿಯೂಟದ ವ್ಯವಸ್ಥೆ ಮಾಡುತ್ತೇವೆಂಬ ಜಿಲ್ಲಾಡಳಿತದ ಪ್ರಸ್ತಾಪವನ್ನೂ ಶಾಲಾಡಳಿತ ತಿರಸ್ಕರಿಸಿತ್ತು. ಅಲ್ಲದೆ, ಭಿಕ್ಷೆ ಎತ್ತಿಯಾದ್ರೂ ಮಕ್ಕಳ ಹೊಟ್ಟೆ ತುಂಬಿಸುತ್ತೇವೆಂದು ಪ್ರಭಾಕರ ಭಟ್ ಸವಾಲು ಹಾಕಿದ್ದರು. ಆದರೆ, ಇದೀಗ ಅದೇ ಶಾಲೆಗಳ ವತಿಯಿಂದ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, ಬಿಸಿಯೂಟ ನೀಡುವಂತೆ ಗೋಗರೆದಿದ್ದಾರೆ.

ಪತ್ರ ಬರೆದ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದ್ದು, ಅಂದು ಆರೋಪಿ ಸ್ಥಾನದಲ್ಲಿ ಬಿಂಬಿಸಲ್ಪಟ್ಟಿದ್ದ ಆಗಿನ ಸಚಿವ ರಮಾನಾಥ ರೈ ಇದೀಗ ಕಿಡಿಕಾರಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು ದೇವಸ್ಥಾನದ ದುಡ್ಡು ಪಡೆಯುತ್ತಿದ್ದುದನ್ನು ತಡೆದಿದ್ದೆ. ಆದರೆ, ಅದೇ ವಿಚಾರವನ್ನು ಬಿಜೆಪಿಯವರು ಅಪಪ್ರಚಾರ ಮಾಡಿದ್ರು ಅಂತಾ ಹೇಳಿದ್ದಾರೆ.

ಮಕ್ಕಳು ಬೀದಿಗಿಳಿದು, ಊಟದ ತಟ್ಟೆಯನ್ನು ಬಡಿದುಕೊಂಡು ಪ್ರತಿಭಟನೆ ನಡೆಸಿದ್ದು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಇದರಿಂದ ಎಚ್ಚೆತ್ತ ಹಿಂದು ಸಂಘಟನೆಗಳು ರಾಜ್ಯದಾದ್ಯಂತ ಭಿಕ್ಷಾಂದೇಹಿ ಅಭಿಯಾನ ನಡೆಸಿ, ಲಕ್ಷಾಂತರ ರೂಪಾಯಿ ದೇಣಿಗೆ ಪಡೆದು ಶಾಲೆಗೆ ಮುಟ್ಟಿಸಿದ್ದರು. ಮಾಜಿ ಸಚಿವ ಜನಾರ್ದನ ರೆಡ್ಡಿ ಕಲ್ಲಡ್ಕಕ್ಕೆ ಆಗಮಿಸಿ, 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಸಂಸದೆ ಶೋಭಾ ಕರಂದ್ಲಾಜೆ ಅಕ್ಕಿ ಮುಷ್ಠಿ ಅಭಿಯಾನದ ಮೂಲಕ ಕ್ವಿಂಟಾಲ್ ಗಟ್ಟಲೆ ಅಕ್ಕಿ ತರಿಸಿಕೊಂಡು ಶಾಲೆಗೆ ನೀಡಿದ್ದರು.

ಇಷ್ಟೆಲ್ಲ ನಡೆದಿದ್ದರೂ, ಅಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಬಿಸಿಯೂಟ ಸ್ವೀಕರಿಸುವಂತೆ ಮನವಿ ಮಾಡಿಕೊಂಡಿದ್ದರು. ಆ ಬಳಿಕ ಚುನಾವಣೆ ಸಂದರ್ಭದಲ್ಲಿಯೂ ಕಲ್ಲಡ್ಕದ ಅನ್ನ ಕಸಿದ ವಿಚಾರ ಬಿಜೆಪಿಗೆ ದೊಡ್ಡ ಇಶ್ಯು ಆಗಿತ್ತು. ಆದರೆ, ಈಗ ರಾಜ್ಯದಲ್ಲಿ ಸರಕಾರ ಬದಲಾಗುತ್ತಿದ್ದಂತೆ ಕಲ್ಲಡ್ಕದ ಶಾಲೆಗಳು ವರಸೆ ಬದಲಿಸಿದ್ದು, ಹಿಂದಿನ ವಿಚಾರಗಳನ್ನು ಬದಿಗಿಟ್ಟು ಬಿಸಿಯೂಟಕ್ಕಾಗಿ ಅಂಗಲಾಚಿದಂತಾಗಿದೆ.

ಇದೇನಿದ್ದರೂ, ಇಂಥ ಅಪಪ್ರಚಾರದ ನಾಟಕಗಳೇ ನನ್ನನ್ನು ಸೋಲಿಸಿದ್ದಾಗಿ ರಮಾನಾಥ ರೈ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಕಲ್ಲಡ್ಕದ ಅನ್ನ ಕಸಿದ ವಿಚಾರದಲ್ಲಿ ಶಾಲಾಡಳಿತ ಮಂಡಳಿ ಸಾಕಷ್ಟು ದೇಣಿಗೆ ಸಂಗ್ರಹಿಸಿದ್ದಲ್ಲದೆ, ಕಳೆದ ಚುನಾವಣೆಯಲ್ಲಿ ರಮಾನಾಥ ರೈಯನ್ನು ಸೋಲಿಸಲು ಅಸ್ತ್ರವಾಗಿ ಮಾಡಿಕೊಂಡಿದ್ದಂತೂ ಸುಳ್ಳಲ್ಲ..

LEAVE A REPLY

Please enter your comment!
Please enter your name here