Home District ಮಹಾಭಾರತದಲ್ಲಿ ದ್ರೌಪದಿಯನ್ನ ಪಣಕ್ಕಿಟ್ಟಿದ್ದ ಪಾಂಡವರು! ಇಂದು ಕುರುಕ್ಷೇತ್ರ ಚಿತ್ರವನ್ನ ಪಣಕ್ಕಿಟ್ಟ ಶಾಸಕ ಮುನಿರತ್ನ! ಹೆಚ್ಡಿಕೆ ಬಜೆಟ್...

ಮಹಾಭಾರತದಲ್ಲಿ ದ್ರೌಪದಿಯನ್ನ ಪಣಕ್ಕಿಟ್ಟಿದ್ದ ಪಾಂಡವರು! ಇಂದು ಕುರುಕ್ಷೇತ್ರ ಚಿತ್ರವನ್ನ ಪಣಕ್ಕಿಟ್ಟ ಶಾಸಕ ಮುನಿರತ್ನ! ಹೆಚ್ಡಿಕೆ ಬಜೆಟ್ ಮಂಡಿಸದಿದ್ದರೆ ಬಿಜೆಪಿಗೆ ಸಿನಿಮಾ ಹಕ್ಕು!

2405
0
SHARE

ಕುಮಾರಸ್ವಾಮಿ ಬಜೆಟ್ ಮಂಡಿಸಿದರೆ ಬಿಜೆಪಿ ನನಗೆ ಐದು ಕೋಟಿ ರೂ. ಮಾತ್ರ ಕೊಡಲಿ. ಬಜೆಟ್ ಮಂಡಿಸದೇ ಇದ್ದರೆ ನನ್ನ ಕುರುಕ್ಷೇತ್ರ ಸಿನಿಮಾ ಬಿಜೆಪಿಯವರಿಗೆ ಬಿಟ್ಟುಕೊಡ್ತೇನೆ. ಬಿಜೆಪಿಯಲ್ಲಿ ಸರ್ಕಾರ ಉರುಳಿಸಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ.

ಅವರಿಗೆ ನಾನು ಸವಾಲು ಹಾಕುತ್ತೇನೆ. ಬಿಜೆಪಿಯವರು ಮುಂದೆ ಬಂದು ನನ್ನ ಸವಾಲು ಸ್ವೀಕರಿಸಲಿ. ನಾವು ಬಜೆಟ್ ಅನ್ನು ಮಂಡನೆ ಮಾಡೇ ಮಾಡುತ್ತೇವೆ” ಎಂದು ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿ ಸವಾಲು ಎಸೆದಿದ್ದಾರೆ.. ಮುನಿರತ್ನ ಹಾಕಿರೋ ಸವಾಲಿಗೆ ಬಿಜೆಪಿ ನಾಯಕರು ಕೆರಳಿ ತಿರುಗೇಟು ನೀಡಿದ್ದಾರೆ..

ಮಹಾಭಾರತದಲ್ಲಿ ಪಾಂಡವರು ದ್ರೌಪದಿಯನ್ನು ಜೂಜಾಟದಲ್ಲಿ ಪಣಕ್ಕಿಟ್ಟು ಕೌರವರಿಗೆ ಸೋತಿದ್ದನ್ನ ಕೇಳಿದ್ದೇವೆ, ಓದಿದ್ದೇವೆ… ಇನ್ನೂ ಚುನಾವಣೆ ವೇಳೆ ಆಸ್ತಿ-ಪಾಸ್ತಿಯನ್ನ ಪಣಕ್ಕಿಡುವವರನ್ನ ನೋಡಿದ್ದೇವೆ… ಆದ್ರೆ ಶಾಸಕರೂ ಆದ ನಿರ್ಮಾಪಕ ಮುನಿರತ್ನ ಇದೀಗ ತಮ್ಮ ನಿರ್ಮಾಣದ ಕುರುಕ್ಷೇತ್ರ ಚಿತ್ರವನ್ನೇ ರಾಜಕೀಯ ಮೇಲಾಟದಲ್ಲಿ ಬೆಟ್ಟಿಂಗ್ ಕಟ್ಟಿದ್ದಾರೆ… ಕುರುಕ್ಷೇತ್ರ ಯುದ್ಧ ನಡೆಯೋಕೆ ಒಂದು ರೀತಿ ಕೌರವರು ಮತ್ತು ಪಾಂಡವರ ನಡುವೆ ನಡೆದ ಜೂಜಾಟವೂ ಕಾರಣ.

ಇದೀಗ, ಕುರುಕ್ಷೇತ್ರ ಚಿತ್ರವನ್ನೇ ಪಣಕ್ಕಿಟ್ಟು ಬೆಟ್ಟಿಂಗ್ ಕಟ್ಟಿದ್ದಾರೆ ನಿರ್ಮಾಪಕ ಮುನಿರತ್ನ.
ಸಿಎಂ ಕುಮಾರಸ್ವಾಮಿ ಬಜೆಟ್ ಮಂಡಿಸುವುದು ಅನುಮಾನ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಮಾತನಾಡಿದ ಮುನಿರತ್ನ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಅವರು ಬಜೆಟ್ ಮಂಡಿಸದಿದ್ದರೆ 50 ಕೋಟಿ ರೂ. ವೆಚ್ಚದ ಸಿನಿಮಾ ಹಕ್ಕನ್ನು 5 ಕೋಟಿಗೆ ಬಿಜೆಪಿಗೆ ಬಿಟ್ಟು ಕೊಡುತ್ತೇನೆ ಎಂದು ಮುನಿರತ್ನ ಸವಾಲು ಹಾಕಿದ್ದಾರೆ.

ಮುನಿರತ್ನ ಅವರ ಸವಾಲು ಸಹಜವಾಗಿಯೇ ಬಿಜೆಪಿ ಪ್ರಮುಖರನ್ನು ಕೆರಳಿಸಿದೆ. ಇದನ್ನು ಹಣ ಮದ, ಅಹಂಕಾರದ ಪರಮಾವಧಿ ಎಂದು ರಾಜ್ಯ ಬಿಜೆಪಿಗರು ಟೀಕಿಸಿದ್ದರೆ, ಮಾಜಿ ಸಚಿವ ರೇಣುಕಾಚಾರ್ಯ ಅವರಂತೂ ಜೂಜಿಗೆ ಪ್ರೋತ್ಸಾಹ ಕೊಟ್ಟ ಆರೋಪದಡಿ ಮುನಿರತ್ನ ಅವರನ್ನು ಬಂಧನಕ್ಕೆ ಒಳಪಡಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಒತ್ತಾಯಿಸಿದ್ದಾರೆ.

ಒಟ್ಟಾರೆ ಆಪರೇಷನ್ ಕಮಲ ಸುದ್ದಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.. ಇದುವರೆಗೆ ವಾಕ್ಸಮರಕ್ಕೆ ಮಾತ್ರ ಸೀಮಿತವಾಗಿದ್ದ ಆಪರೇಷನ್ ಇದೀಗ ಮತ್ತೊಂದು ಹಂತ ತಲುಪಿದ್ದು, ಸರ್ಕಾರ ಉಳಿಯುತ್ತಾ … ಉರುಳುತ್ತಾ ಅನ್ನೋದ್ರ ಬಗ್ಗೆ ಬೆಟ್ಟಿಂಗ್ ಜೋರಾಗಿ ನಡೆಯುವ ಸೂಚನೆ ಸಿಕ್ಕಿದೆ..

LEAVE A REPLY

Please enter your comment!
Please enter your name here