Home District ಮುಖ್ಯಮಂತ್ರಿ ಕುಟುಂಬದಲ್ಲಿ ಬಿರುಕು, ಬಿರುಗಾಳಿ..!? ತಂಗಿ ಮಗ v/s ಬೀಗರು.. ಸಿಎಂ ಯಡಿಯೂರಪ್ಪಗೆ ನುಂಗಲಾರದ...

ಮುಖ್ಯಮಂತ್ರಿ ಕುಟುಂಬದಲ್ಲಿ ಬಿರುಕು, ಬಿರುಗಾಳಿ..!? ತಂಗಿ ಮಗ v/s ಬೀಗರು.. ಸಿಎಂ ಯಡಿಯೂರಪ್ಪಗೆ ನುಂಗಲಾರದ ಬಿಸಿತುಪ್ಪ? ಒಬ್ಬರ ಹಿಂದೆ ಆರ್.ಎಸ್.ಎಸ್ ಇನ್ನೊಬ್ಬರ ಬೆನ್ನ ಹಿಂದೆ ರಾಜ್ಯದ ಮುಖ್ಯಮಂತ್ರಿ.

570
0
SHARE

ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದಲ್ಲಿ ಈಗ ಸಣ್ಣದಾದ ಒಂದು ಬಿರುಗಾಳಿ ಎದ್ದಿದೆ, ಅದು ಯಾರಿಬ್ಬರ ನಡುವೆ ಮತ್ತು ಯಾವ ವಿಷಯಕ್ಕೆ ಎಂಬುದು ಈಗ ಸಧ್ಯ ಚರ್ಚೆಯಾಗುತ್ತಿರುವ ವಿಷ್ಯ. ಇಷ್ಟಕ್ಕೂ ಈ ಇಬ್ಬರು ಯಾರು ಮತ್ತು ಇವರಿಗೆ ಅಖಾಡ ವಾಗಿರುವ ಕ್ಷೇತ್ರವಾದರೂ ಯಾವುದು ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ. ಸಿಎಂ ಯಡಿಯೂರಪ್ಪ ಕುಟುಂಬದಲ್ಲಿ ಬಿರುಗಾಳಿಗೆ ಕಾರಣವಾಗಿರುವ ಆ ರಾಜಕೀಯ ಅಖಾಡವಾಗಿರುವ ಕ್ಷೇತ್ರ ಯಾವುದೆಂದರೆ ಹಾಸನದ ಅರಸೀಕೆರೆ ಕ್ಷೇತ್ರ.

ಒಂದು ಕಡೆ ತಮ್ಮ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಮತ್ತು ಕಳೆದ ಬಾರಿ ಅರಸೀಕೆರೆ ಕ್ಷೇತ್ರದಿಂದ ಕೊನೆಯ ಕ್ಷಣದಲ್ಲಿ ಕಣದಲ್ಲಿದ್ದು ಬಿಜೆಪಿಯಿಂದ ಸ್ಪರ್ಧಿಸಿದ್ದ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರಿಸ್ವಾಮಿ. ಮರಿಸ್ವಾಮಿ ಮುಖ್ಯಮಂತ್ರಿಗಳ ಬೀಗರು ಕೂಡ. ರಾಜಕೀಯ ಕಾರ್ಯದರ್ಶಿಯಾಗಿರುವ ಎನ್.ಆರ್.ಸಂತೋಷ್ ಯಡಿಯೂರಪ್ಪನವರ ತಂಗಿ ಮಗ ಕೂಡ ಹೌದು ಮತ್ತೆ ಇತ್ತೀಚಿನ ದಿನಗಳಲ್ಲಿ ನಡೆದ ರಾಜಕೀಯ ಘಟನೆಗಳಲ್ಲಿ, ಅಂದರೆ ಮೈತ್ರಿ ಸರ್ಕಾರ ಕೆಡವಲು ಆಪರೇಷನ್ ಕಮಲ ನಡೆದಾಗ ಅತಿ ಹೆಚ್ಚು ಚಾಲ್ತಿಯಲ್ಲಿದ್ದ ಹೆಸರೇ ಈ ಎನ್.ಆರ್.ಸಂತೋಷ್. ಈ ಆಪರೇಷನ್ ಕಮಲದ ನಂತರ ಎನ್.ಆರ್.ಸಂತೋಷ್ ತುಂಬಾ ಪ್ರಸಿದ್ದ ಮತ್ತು ತುಂಬಾ ಪವರ್ ಫುಲ್ ಆಗಿಬಿಟ್ಟಿದ್ದಾರೆ.

ಇವರಿಬ್ಬರ ಪೈಪೋಟಿಗೆ ಕಾರಣವಾಗಿರುವುದು ಹಾಸನದ ಅರಸೀಕೆರೆ ವಿಧಾನಸಭಾ ಕ್ಷೇತ್ರ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೊನೆಯ ಕ್ಷಣದಲ್ಲಿ ಸ್ಪರ್ಧೆಗಿಳಿದಿದ್ದರು ಮರಿಸ್ವಾಮಿ ಮತ್ತು ಕಡಿಮೆ ಅಂತರದಿಂದ ಸೋತಿದ್ದರು ಕೂಡ, ಸೋತ ಮೇಲೆ ಮನೆಯಲ್ಲಿ ಕೂರದೆ ಕ್ಷೇತ್ರದಲ್ಲಿ ಹಲವಾರು ಚಟುವಟಿಕೆಗಳಲ್ಲಿ ಭಾಗಿ ಆಗಿದ್ದರು ಮರಿಸ್ವಾಮಿ. ಕೊರೊನ ಸಂದರ್ಭದಲ್ಲಿ 25000 ಫುಡ್ ಕಿಟ್ ನೀಡಿ ಕ್ಷೇತ್ರದ ತುಂಬಾ ಓಡಾಡುತ್ತಿದ್ದರು.

ಆದರೆ ಇದೇ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಸಂತೋಷ್ ಅರಸಿಕೆರೆಯ ತುಂಬೆಲ್ಲಾ ಗಣೇಶ ಹಬ್ಬದ ನೆಪದಲ್ಲಿ ಫ್ಲೆಕ್ಸ್ಗಳನ್ನು ಹಾಕಿದ್ದಾರೆ. ಈಗ ಇದು ಸಿಎಂ ಕುಟುಂಬದಲ್ಲಿ ರಾಜಕೀಯ ಪೈಪೋಟಿಗೆ ಕಾರಣವಾಗಿದೆ. ಮುಖ್ಯಮಂತ್ರಿಗಳು ತಮ್ಮ ಬೀಗರಾದ ಮರಿಸ್ವಾಮಿಯ ಬೆನ್ನಹಿಂದೆ ಇದ್ದರೆ, ಸಂತೋಷ್ ಹಿಂದೆ ಆರ್.ಎಸ್.ಎಸ್ ನ ಮುಖಂಡರು ಇದ್ದಾರೆ ಎಂದು ರಾಜಕೀಯ ಪಂಡಿತರು ಮಾತನಾಡಿಕೊಳ್ಳುತ್ತಿದ್ದಾರೆ.

ಸಂತೋಷ್ ಮುಖಾಂತರ ಯಡಿಯೂರಪ್ಪನವರ ಮೇಲೆ ಹಿಡಿತ ಸಾಧಿಸಲು ಆರ್.ಎಸ್.ಎಸ್ ಹೊರಟಂತಿದೆ. ಗೌರಿ ಗಣೇಶ ಹಬ್ಬಕ್ಕೆ ಹಾಕಿದ್ದ ಫ್ಲೆಕ್ಸ್ ಗಳನ್ನು ಅನಧಿಕೃತ ಎಂದು ಅರಸೀಕೆರೆ ನಗರಸಭೆ ತೆರವುಗೊಳಿಸಿದೆ. ಇದು ಎನ್.ಆರ್.ಸಂತೋಷ್ ಬೆಂಬಲಿಗರನ್ನು ಕೆರಳಿಸಿದೆ. ಪ್ಲೆಕ್ಸ್ ತೆರವುಗೊಳಿಸಿದರಲ್ಲಿ ಮರಿಸ್ವಾಮಿಯ ಕೈವಾಡ ಇದೆ ಎಂದು ಎನ್.ಆರ್.ಸಂತೋಷ್ ಬೆಂಬಲಿಗರು ದೂರುತ್ತಿದ್ದಾರೆ. ಚುನಾವಣೆ ಇನ್ನೂ ಮೂರುವರೆ ವರ್ಷಗಳು ಇರುವಾಗಲೇ ಸಿಎಂ ಕುಟುಂಬದಲ್ಲಿ ಬಿರುಕು ಬಿಟ್ಟಿರುವುದು ಆಶ್ಚರ್ಯಕರ ಮತ್ತು ಸಿ ಎಂ ಯಡಿಯೂರಪ್ಪಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಈ ಸಣ್ಣದಾದ ಬಿರುಕು ಈ ಹಂತದಲ್ಲೇ ಶಮನವಾದರೆ ಒಳ್ಳೆಯದು, ಇಲ್ಲವಾದರೆ ಇಬ್ಬರ ಬೆಂಬಲಿಗರ ನಡುವೆ ಆರೋಪ ಪ್ರತ್ಯಾರೋಪ ಮತ್ತು ವಾಕ್ಸಮರ ತಾರಕಕ್ಕೇರಿ ಮುಂದೊಂದು ದಿನ ಕುಟುಂಬದಲ್ಲಿ ದೊಡ್ಡ ಬಿರುಗಾಳಿ ಬೀಸುವುದು ಖಚಿತ.

LEAVE A REPLY

Please enter your comment!
Please enter your name here