Home Cinema ಮುನಿರತ್ನಗೆ ಕಣದಲ್ಲಿ ಉತ್ತರ ಕೋಡೊಣ..ಇದು ನಿಖಿಲ್ ಕುಮಾರ್ ಹಠ..! ಮುನಿರತ್ನಗೆ ದ್ರೋಹಿ ಪಟ್ಟ ಕಟ್ಟಿದ್ದವ್ರಿಗೆ ಯುವರಾಜ...

ಮುನಿರತ್ನಗೆ ಕಣದಲ್ಲಿ ಉತ್ತರ ಕೋಡೊಣ..ಇದು ನಿಖಿಲ್ ಕುಮಾರ್ ಹಠ..! ಮುನಿರತ್ನಗೆ ದ್ರೋಹಿ ಪಟ್ಟ ಕಟ್ಟಿದ್ದವ್ರಿಗೆ ಯುವರಾಜ ಹೇಳಿದ್ಯಾವ ಪಾಠ..?

1240
0
SHARE

ರಾಜಕೀಯ ಬೇರೆ, ವೈಯಕ್ತಿಕ ಸ್ನೇಹವೇ ಬೇರೆ ಎನ್ನುವ ಸೂಕ್ಷ್ಮತೆಯನ್ನ ಸ್ಯಾಂಡಲ್‌ವುಡ್‌ನ ಯುವರಾಜ ನಿಖಿಲ್ ಗೌಡ ಚೆನ್ನಾಗಿ ಅರ್ಥ ಮಾಡಿಕೊಂಡಿರೋ ಹಾಗಿದೆ. ರಾಜಕೀಯ ಒಳದ್ವೇಷಗಳನ್ನ ಗಂಟುಮೂಟೆ ಕಟ್ಟಿ ಬರೀ ವಿಶ್ವಾಸದ ಅಲೆಯನ್ನ ಮಾತ್ರ ಸೃಷ್ಟಿಸೋಕೆ ನಿಖಿಲ್ ಮುಂದಾಗಿದ್ದಾರೆ.

ನಿರ್ಮಾಪಕ ಮುನಿರತ್ನರ ಹುಟ್ಟುಹಬ್ಬಕ್ಕೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವಿಶ್ ಮಾಡೋದರ ಮೂಲಕ ಜೆಡಿಎಸ್ ಕಾರ್ಯಕರ್ತರು ಹಾಗೂ ತಮ್ಮ ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿದ್ದಾರೆ. ನಂತರ ಈ ಹುಟ್ಟುಹಬ್ಬದ ಹಾರೈಕೆ ಬೇರೆ ದಾರಿ ಹಿಡಿದಿದ್ದು ಸುಳ್ಳಲ್ಲ.ಸಿನಿಮಾರಂಗಕ್ಕೂ ಮೀರಿ ನಿಖಿಲ್ ಹಾಗೂ ಮುನಿರತ್ನರಿಗೆ ಒಂದು ಗಟ್ಟಿ ಭಾಂಧವ್ಯವಿದೆ. ಆದರೆ ರಾಜಕೀಯದ ಅಂಗಳಕ್ಕೆ ಬಂದಾಗ ಇಬ್ಬರದ್ದು ಬೇರೆ ಐಡಿಯಾಲಾಜಿಗಳೇ. ಎಚ್.ಡಿ.ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸಮ್ಮಿಶ್ರ ಸರ್ಕಾರವನ್ನ ಬೀಳಿಸೋದ್ರಲ್ಲಿ ಮುನಿರತ್ನರ ಪಾತ್ರ ಬಹಳ ದೊಡ್ಡದಿತ್ತು.

ಆ ಸಮಯದಲ್ಲಿ ಮುನಿರತ್ನ ಜೆಡಿಎಸ್ ವಲಯದ ಅಸಮಾಧಾನಕ್ಕೆ ಕಾರಣವಾಗಿದ್ರು. ಈದೀಗ ನಿಖಿಲ್ ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಮುನಿರತ್ನಗೆ ಶುಭಕೋರಿರೋದು ಜೆಡಿಎಸ್ ಬಳಗದಲ್ಲಿ ತೀವ್ರಮಟ್ಟದ ಕೋಪವನ್ನೂ ತರಿಸಿದೆ.ರಾಜಕೀಯ ಜಿದ್ದಜಿದ್ದಿಯೇ ಬೇರೆ, ಇವರಿಬ್ಬರ ಸಿನಿಮಾ ಸಂಬಂಧವೇ ಬೇರೆ ಎನ್ನುವ ಮೇಸೆಜ್ ಕೊಟ್ಟಿದ್ದಾರೆ ನಿಖಿಲ್ ಕುಮಾರಸ್ವಾಮಿ. ಮುನಿರತ್ನರಿಗೆ ನಿಖಿಲ್ ಯಾವಾಗ ವಿಶ್ ಮಾಡಿದ್ರೋ ಆ ಕ್ಷಣದಿಂದಲೇ ನಿಖಿಲ್ ಅಭಿಮಾನಿಗಳಿಂದ ದೊಡ್ಡಮಟ್ಟದ ವಿರೋಧ ವ್ಯಕ್ತವಾಯಿತು. ನಿಮ್ಮ ತಂದೆ ಕುಮಾರಸ್ವಾಮಿಯವರ ನೇತೃತ್ವದ ದೋಸ್ತಿ ಸರ್ಕಾರವನ್ನ ಉರುಳಿಸಿದ ಮುನಿರತ್ನಗೆ ವಿಶ್ ಮಾಡ್ತಿರಲ್ಲ ಅಂತ ಲೈಟಾಗಿ ಗರಂ ಆದ್ರು.

ಆದರೆ ಎಲ್ಲ ಗೊಂದಲಗಳಿಗೆ ತೆರೆ ಎಳೆದ ನಿಖಿಲ್, ನಾನು ಮುನಿರತ್ನರಿಗೆ ಯಾಕೆ ಹುಟ್ಟುಹಬ್ಬದ ಶುಭಶಯಗಳನ್ನ ತಿಳಿಸಿದೆ ಎಂಬುದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಈ ರೀತಿ ಪೋಸ್ಟ್ ಹಾಕಿ ಅಭಿಮಾನಿಗಳ ಆಕ್ಷೇಪಕ್ಕೆ ಉತ್ತರ ನೀಡಿದ್ದಾರೆ.

“ಮುನಿರತ್ನ ಅವರ ಹುಟ್ಟಹಬ್ಬಕ್ಕೆ ಶುಭ ಕೋರಿದ್ದಕ್ಕೆ ಹಲವರು ಆಕ್ಷೇಪಿಸಿರುವುದು ನನ್ನ ಗಮನಕ್ಕೆ ಬಂತು. ‘ಕುಮಾರಸ್ವಾಮಿ ಅವರಿಗೆ ದ್ರೋಹ ಬಗೆದವರಿಗೆ ನೀವು ಶುಭಕೋರಬಾರದಿತ್ತು‘ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲರ ಅಭಿಪ್ರಾಯಗಳನ್ನೂ ಗೌರವಿಸುತ್ತೇನೆ. ನಿರ್ಮಾಪಕನಿಗೆ ನಟನಾಗಿ ನಾನು ಶುಭಕೋರಿದ್ದೇನೇ ಹೊರತು ಯುವ ಜನತಾದಳ ನಾಯಕನಾಗಿ ಅಲ್ಲ. ರಾಜಕೀಯ ಸಂಘರ್ಷಗಳನ್ನು ಮೀರಿ ದೇವೇಗೌಡರು ಮೋದಿ ಅವರಿಗೆ ಶುಭ ಕೋರುತ್ತಾರೆ. ಮೋದಿ ದೇವೇಗೌಡರಿಗೆ ಶುಭ ಕೋರುತ್ತಾರೆ. ಯಡಿಯೂರಪ್ಪನವರು ಕುಮಾರಸ್ವಾಮಿ ಅವರಿಗೆ ಶುಭ ಆಶಿಸುತ್ತಾರೆ. ಕುಮಾರಸ್ವಾಮಿ ಅವರೂ ಶುಭಾರೈಕೆಗಳನ್ನು ತಿಳಿಸುತ್ತಾರೆ. ಇದು ಕರ್ನಾಟಕದ ರಾಜಕೀಯದ ಸತ್ಸಂಪ್ರದಾಯ. ಹೀಗಾಗಿ ನನ್ನ ಶುಭಕೋರಿಕೆಯಲ್ಲಿ ತಪ್ಪಿರದು ಎಂದು ಭಾವಿಸುತ್ತೇನೆ. ಮುನಿರತ್ನ ರಾಜಕೀಯವಾಗಿ ಕುಮಾರಸ್ವಾಮಿ ಅವರಿಗೆ ಏನೇ ಮಾಡಿರಬಹುದು. ಅವುಗಳಿಗೆ ಕಣದಲ್ಲಿ ಉತ್ತರಿಸುವ ಪ್ರಯತ್ನ ಮಾಡೋಣ. ಅದರಲ್ಲಿ ಎರಡು ಮಾತಿಲ್ಲ. ಕಾರ್ಯಕರ್ತನಾಗಿ, ಯುವ ಜನತಾದಳದ ಮುಂದಾಳುವಾಗಿ ನನ್ನ ದುಡಿಮೆ ಪಕ್ಷಕ್ಕೆ ಮಾತ್ರ”.

ನಿಖಿಲ್‌ರ ಈ ಕ್ಲಾರಿಟಿ ಈಗ ಅಭಿಮಾನಿಗಳ ಕೋಪವನ್ನ ಕೊಂಚಮಟ್ಟಿಗೆ ತಣ್ಣಗಾಗಿಸಿದೆ. ಆಗ ಪರಿಸ್ಥಿತಿ ಬೇರೆಯಿತ್ತು. ಮೈತ್ರಿಸರ್ಕಾರಕ್ಕೆ ರಾಜಕೀಯವಾಗಿ ಪೆಟ್ಟು ನೀಡಲು ಬಿಜೆಪಿ ಪ್ಲಾನ್ ಮಾಡಿತ್ತು. ಅತೃಪ್ತರ ಪಟ್ಟಿಯಲ್ಲಿ ಆರ್.ಆರ್.ನಗರ ಶಾಸಕರಾಗಿದ್ದ ಮುನಿರತ್ನ ಹೆಸರು ಮೂಂಚೂಣಿಯಲ್ಲಿತ್ತು. ಹಾಗಂತ ನಿಖಿಲ್ ಮುನಿರತ್ನರ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಮಾತ್ರಕ್ಕೆ ಹಿಂದಿನ ಘಟನೆಗಳನ್ನ ನಿಖಿಲ್ ಮರೆತಿಲ್ಲ. ಒಬ್ಬ ನಟನಾಗಿ ಮಾತ್ರ ನಿರ್ಮಾಪಕರಿಗೆ ವಿಶ್ ಮಾಡಿದ್ದೇನೆ ಎನ್ನುವ ಮೂಲಕ ಅಂದು ಮುನಿರತ್ನ ತೆಗೆದುಕೊಂಡಿದ್ದ ನಿರ್ಧಾರವನ್ನ ಇಂದಿಗೂ ಖಂಡಿಸಿದ್ದಾರೆ. ಯುವ ಜನತಾದಳ ನಾಯಕನಾಗಿ ನಿಖಿಲ್ ಇಲ್ಲಿ ಮುನಿರತ್ನರನ್ನ ಸಮರ್ಥಿಸಿಕೊಂಡಿಲ್ಲ ಎನ್ನುವ ಇನ್‌ಡೈರೆಕ್ಟ್ ಪಂಚ್ ಕೂಡ ಕಾಣಿಸ್ತಿದೆ. ರಾಜಕೀಯ ಸಂಘರ್ಷಗಳನ್ನ ಪಕ್ಕಕ್ಕಿಟ್ಟ ನಿಖಿಲ್ ನಟನಾಗಿ ಮಾತ್ರ ವಿಶ್ ಮಾಡಿದ್ದಾರೆ ಎನ್ನುವ ಅಂಶವನ್ನೂ ಯಾರು ಮರೆಯುವಂತಿಲ್ಲ.

ಮುನಿರತ್ನ ಕನ್ನಡ ಚಿತ್ರರಂಗದ ಟಾಪ್ ನಿರ್ಮಾಪಕರಲ್ಲಿ ಒಬ್ಬರು. ಸಿನಿಮಾ ನಿರ್ಮಾಣದ ಮೇಲೆ ಮುನಿರತ್ನರಿಗೆ ಬೇರೆಯಾದೇ ಲವ್ ಇದೆ. ಕುರುಕ್ಷೇತ್ರ ಸಿನಿಮಾದ ಮೂಲಕ ಚಿತ್ರರಂಗದಲ್ಲಿ ಮೆಗಾ ಬಜೆಟ್ ಸಂಚಲನ ಮೂಡಿಸಿದ ಮುನಿರತ್ನ ಕೂಡ ನಿಖಿಲ್ ಮೇಲೆ ತಮ್ಮದೇ ವಿಶ್ವಾವನ್ನ ಹೊಂದಿದ್ದಾರೆ. ಕುರುಕ್ಷೇತ್ರದಂತಹ ಪ್ರಾಜೆಕ್ಟ್‌ನಲ್ಲಿ ನಿಖಿಲ್ ಅಭಿಮನ್ಯುವಿನ ಪಾತ್ರಕ್ಕೆ ಬಣ್ಣ ಹಚ್ಚಿದ್ರೆ ಚೆನ್ನಾಗಿರುತ್ತೆ ಎಂಬ ಆಸೆಯೊಂದಿಗೆ ಸಿನಿಮಾವನ್ನ ಶುರು ಮಾಡಿದ್ರು. ನಂತರ ಕುರುಕ್ಷೇತ್ರ ನಿಖಿಲ್ ಸಿನಿಕೆರಿಯರ್‌ನ ಗತಿಯನ್ನೇ ಬದಲಾಯಿಸಿದ ವೇಗ ಎಲ್ಲರಿಗೂ ಗೊತ್ತೇ ಇದೆ.

ರಾಜಕೀಯ ವೈ ಮನಸ್ಸುಗಳನ್ನ ಬದಿಗೆ ತಳ್ಳಿ ಮುನಿರತ್ನರಿಗೆ ನಿಖಿಲ್ ವಿಶ್ ಮಾಡಿರೋದು ಸದ್ಯದ ಮಟ್ಟಿಗೆ ಬದಲಾವಣೆಯ ಸೂಚನೆಯೇ. ಯಾಕಂದ್ರೆ ಹುಟ್ಟುಹಬ್ಬದ ವಿಶ್ ಮಾಡೋದ್ರಲ್ಲಿ ತಪ್ಪೆನಿಲ್ಲ ಎನ್ನುವುದೇ ನಿಖಿಲ್ ವಾದ. ಅಲ್ಲದೇ, ಒಂದು ಬಿಗ್‌ಬಜೆಟ್ ಸಿನಿಮಾಗಾಗಿ ಮತ್ತೆ ಮುನಿರತ್ನ ಹಾಗೂ ನಿಖಿಲ್ ಒಂದಾಗುತ್ತಿದ್ದಾರೆ. ಚಿತ್ರದ ಹೆಸರು ಧನುಷ್ ಐಪಿಎಸ್. ಕುರುಕ್ಷೇತ್ರ ನಂತರ ಮತ್ತೆ ಮುನಿರತ್ನ ಬ್ಯಾನರ್‌ನಲ್ಲಿ ನಿಖಿಲ್ ಬಣ್ಣ ಹಚ್ತಿರೋ ವಿಷಯ ಕೂಡ ಗಾಂಧಿನಗರದಲ್ಲಿ ಹೆಚ್ಚು ಟಾಕ್ ಆಗ್ತಿದೆ. ಸಿನಿಮಾ ಬಂದ್ರೆ ಒಂದು ರೇಂಜ್‌ಗೆ ಇರುತ್ತೆ ಎನ್ನುವ ಅಂಶವೂ ಮೊದಲ ಪೋಸ್ಟರ್‌ನಲ್ಲೇ ರಿವೀಲ್ ಆಗಿದೆ. ಅಂತೂ ದೇವೆಗೌಡರ ಕುಟುಂಬಕ್ಕೂ ಹಾಗೂ ಮುನಿರತ್ನಗೂ ಏನೇ ರಾಜಕೀಯ ಭಿನ್ನಭಿಪ್ರಾಯಗಳಿದ್ರೂ, ನಿಖಿಲ್ ಹಾಗೂ ಮುನಿರತ್ನ ಮಾತ್ರ ತಮ್ಮ ಸಿನಿಮಾ ಗೆಳೆತನವನ್ನ ಮುಂದುವರೆಸಿಕೊಂಡು ಹೋಗಿರೋದು ಅಚ್ಚರಿಯೇ ಸರಿ.
-ಎಂಟರ್‌ಟೈನ್‌ಮೆಂಟ್ ಡೆಸ್ಕ್. ಪ್ರಜಾಟಿವಿ

LEAVE A REPLY

Please enter your comment!
Please enter your name here