Home District ಮೈಲಾರಕ್ಕೆ ಹೆಲಿಕಾಪ್ಟರ್ ನಲ್ಲಿ ಬಂದಿದ್ದರಿಂದ ಡಿಕೆಶಿಗೆ ಸಂಕಷ್ಟ- ಕಾರ್ಣಿಕ ಸ್ಥಳವಾದ ಡೆಂಕಣ ಮರಡಿ ಮೇಲೆ ಹಾರಾಡಿದ್ದರಿಂದ...

ಮೈಲಾರಕ್ಕೆ ಹೆಲಿಕಾಪ್ಟರ್ ನಲ್ಲಿ ಬಂದಿದ್ದರಿಂದ ಡಿಕೆಶಿಗೆ ಸಂಕಷ್ಟ- ಕಾರ್ಣಿಕ ಸ್ಥಳವಾದ ಡೆಂಕಣ ಮರಡಿ ಮೇಲೆ ಹಾರಾಡಿದ್ದರಿಂದ ಕಂಟಕ- ಜನಾರ್ದನ ರೆಡ್ಡಿ ಜೈಲು ಸೇರಿದ್ದಕ್ಕೂ ಇದೇ ಕಾರಣ- ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್​​

2920
0
SHARE

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮೈಲಾರ ಕ್ಷೇತ್ರಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದಿದ್ದಕ್ಕೆ ಅವರಿಗೆ ಸಂಕಷ್ಟ ಎದುರಾಗಿದೆ ಎಂದು ಮೈಲಾರ ಲಿಂಗೇಶ್ವರ ದೇವಸ್ಥಾನದ ವಂಶ ಪಾರಂಪಾರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್​ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದು, ಕಳೆದ 13 ದಿನಗಳಿಂದ ಸತತವಾಗಿ ವಿಚಾರಣೆ ನಡೆಸುತ್ತಿದೆ.

ಇಂದು ಅವರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದ್ದು ಜಾಮೀನು ಸಿಗುವ ವಿಶ್ವಾಸದಲ್ಲಿದ್ದಾರೆ. ಆದರೆ, ಅವರು ಇ.ಡಿ. ಸಂಕಷ್ಟಕ್ಕೆ ಸಿಲುಕಲು ಕಾರಣ ಏನೆಂಬುದನ್ನು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಐತಿಹಾಸಿಕ ಮೈಲಾರಲಿಂಗೇಶ್ವರ ದೇವಸ್ಥಾನ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್​​ ತಿಳಿಸಿದ್ದಾರೆ. ಮೈಲಾರಲಿಂಗೇಶ್ವರನ ಕಾರ್ಣಿಕ ಕೇಳಲು ಭಕ್ತರು ಕಾಲ್ನಡಿಗೆಯಲ್ಲೇ ಬರುತ್ತಾರೆ. ಆದರೆ ಡಿ.ಕೆ. ಶಿವಕುಮಾರ್ ಮೈಲಾರ ಕ್ಷೇತ್ರಕ್ಕೆ ಪಾದಯಾತ್ರೆಯಲ್ಲಿ ಬಾರದೆ ಹೆಲಿಕಾಪ್ಟರ್‌ನಲ್ಲಿ ಬಂದಿದ್ದಕ್ಕೆ ಇದೀಗ ಡಿಕೆಶಿಗೆ ಸಂಕಷ್ಟ ಎದುರಾಗಿದೆ ಎಂದಿದ್ದಾರೆ.

ಮುಖ್ಯವಾಗಿ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಮೈಲಾರಲಿಂಗೇಶ್ವರ ಆಶೀರ್ವದಿಸುತ್ತಾನೆ ಎಂಬ ನಂಬಿಕೆ ಇದೆ. ಮೈಲಾರಲಿಂಗೇಶ್ವರನೇ ಇಲ್ಲಿ ಅಧಿಪತಿಯಾಗಿದ್ದಾನೆ. ಭಕ್ತರು ಆಡಂಬರದಿಂದ ಬರದೇ ಭಕ್ತಿ, ನಮ್ರತೆಯಿಂದ ಕ್ಷೇತ್ರಕ್ಕೆ ಬಂದು ದರ್ಶನ ಪಡೆಯಬೇಕು. ಎಷ್ಟೇ ಶ್ರೀಮಂತರಿದ್ದರೂ ಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ಬರುತ್ತಾರೆ. ಆದ್ರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಹಾಗೂ ಪಿ.ಟಿ.ಪರಮೇಶ್ವರ್ ನಾಯ್ಕ್ ಹೆಲಿಕಾಪ್ಟರ್ ಮೂಲಕ ಕಾರ್ಣಿಕ ಕೇಳಲು ಬಂದಿದ್ದರು. ಅವರಿದ್ದ ಹೆಲಿಕಾಪ್ಟರ್ ದೇವಸ್ಥಾನದ ಗೋಪುರ ಹಾಗೂ ಕಾರ್ಣಿಕ ಸ್ಥಳವಾದ ಡೆಂಕಣ ಮರಡಿ ಮೇಲೆ ಹಾರಾಡಿದ್ದರಿಂದ ಇಬ್ಬರೂ ಸಂಕಷ್ಟ ಅನುಭವಿಸಿದ್ದಾರೆ. ಪಿ.ಟಿ.ಪರಮೇಶ್ವರ್ ನಾಯ್ಕ್ ಅಂದು ಸಚಿವ ಸ್ಥಾನ ಕಳೆದುಕೊಂಡರೆ ಇಂದು ಡಿ.ಕೆ.ಶಿವಕುಮಾರ್ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.

ಈ ಕ್ಷೇತ್ರದಲ್ಲಿ ಆಡಂಬರಕ್ಕೆ ಆದ್ಯತೆ ಇಲ್ಲ, ಅವರು ಎಷ್ಟೇ ಶ್ರೀಮಂತರಾಗಿದ್ದರೂ ಪಾದಯಾತ್ರೆ ಮೂಲಕ ಬಂದು ದೇವರಲ್ಲಿ ಅರಿಕೆ ಮಾಡಿಕೊಂಡಾಗ ಸಂಕಷ್ಟ ದೂರವಾಗುತ್ತದೆ ಎಂದರು. ಹಿಂದೆ 2009ರಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಜನಾರ್ದನ ರೆಡ್ಡಿ ಸಹ ಕ್ಷೇತ್ರಕ್ಕೆ ಹೆಲಿಕಾಪ್ಟರ್ ಮೂಲಕ ಬಂದಿದ್ದರಿಂದಲೇ ಅವರು ಜೈಲು ಸೇರಬೇಕಾಯಿತು ಎಂದರು.. ಹಾಗಾಗಿ ಡಿ.ಕೆ. ಶಿವಕುಮಾರ್​ ಆದಷ್ಟು ಬೇಗ ಕ್ಷೇತ್ರಕ್ಕೆ ಬಂದು ಸ್ವಾಮಿಯ ದರ್ಶನ ಪಡೆದು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ವೆಂಕಪ್ಪಯ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here