Home District ಆಟೋ ಚಾಲಕನ ಪತ್ನಿ ಶಿವಮೊಗ್ಗದ ಪ್ರಥಮ ಪ್ರಜೆ..! ಮೊದಲ ಬಾರಿಗೆ ಮಹಿಳೆಗೆ ಒಲಿದು ಬಂದ ಮೇಯರ್...

ಆಟೋ ಚಾಲಕನ ಪತ್ನಿ ಶಿವಮೊಗ್ಗದ ಪ್ರಥಮ ಪ್ರಜೆ..! ಮೊದಲ ಬಾರಿಗೆ ಮಹಿಳೆಗೆ ಒಲಿದು ಬಂದ ಮೇಯರ್ ಸ್ಥಾನ..!

250
0
SHARE

ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಗೆಲವು ಸಾಧಿಸಿ,ಅಧಿಕಾರದ ಗದ್ದುಗೆ ಏರಲು ತುದಿಗಾಲಲ್ಲಿ ನಿಂತಿದೆ. ಬಿಜೆಪಿಗೆ ಮೊದಲ ಬಾರಿ ಮೇಯರ್ ಸ್ಥಾನ ಒಲಿದಿದ್ದು, ಪ್ರಥಮ ಬಾರಿಗೆ ಆಟೋ ಚಾಲಕನ ಪತ್ನಿಯೊಬ್ಬಳು ಮೇಯರ್ ಆಗುವ ಭಾಗ್ಯ ಲಭಿಸಿದೆ. ಮೊದಲ ಬಾರಿಗೆ ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾಗಿ..ಮೊದಲ ಬಾರಿಗೆ ಮೇಯರ್ ಆಗ್ತಿರೋ..

ಶಿವಮೊಗ್ಗ ಮಹಾನಗರ ಪಾಲಿಕೆಯ ಅಧಿಕಾರ ಗದ್ದುಗೆ ಏರಬೇಕೆಂಬ ಬಿಜೆಪಿಯ ಕನಸು ಕೊನೆಗೂ ಭಾರೀ ಬಹುಮತದೊಂದಿಗೆ ನನಸಾಗಿದೆ.ಪ್ರಥಮ ಬಾರಿಗೆ ಮೇಯರ್ ಸ್ಥಾನವನ್ನು ಆಟೋ ಚಾಲಕನ ಪತ್ನಿ ಲತಾ ಗಣೇಶ್ ಅಲಂಕರಿಸಿದ್ದಾರೆ. ಮಹಾನಗರ ಪಾಲಿಕೆಯ ಒಟ್ಟು 35 ವಾರ್ಡ್‌ಗಳಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮೇಯರ್, ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲತಾ ಗಣೇಶ್ ಮೇಯರ್ ಆಗಿ ಚೆನ್ನಬಸಪ್ಪ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಲತಾ ಗಣೇಶ್ ಕಳೆದ ಆರು ವರ್ಷಗಳಿಂದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯಲ್ಲಿ ಸಂಸ್ಥೆಯಲ್ಲಿ ಅಧ್ಯಕ್ಷರಾಗಿದ್ದಾರೆ,ಬಿಜೆಪಿ ಪಕ್ಷದಲ್ಲಿ 20 ವರ್ಷಗಳಿಂದ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ವಾರ್ಡ್ ನಂಬರ್ 6, ಗಾಡಿಕೊಪ್ಪದ ಒಣಿಯ ಸಣ್ಣ ಮನೆಯಲ್ಲಿ ವಾಸವಾಗಿರುವ ಲತಾ ಮತ್ತು ಗಣೇಶ್ ದಂಪತಿ ಬಡತನದಲ್ಲಿದ್ದರೂ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು.. ಗಣೇಶ್ ಆಟೋವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು,ದಿನದ ಸಂಪಾದನೆಯಲ್ಲಿ ಬದುಕನ್ನು ದೂಡುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಈ ಬಾರಿ ಗಾಡಿಕೊಪ್ಪ ವಾರ್ಡ್ ನಲ್ಲಿ ಬಿಜೆಪಿಯಿಂದ ಸ್ಪರ್ಧಿಸುವವರೇ ಇಲ್ಲದಂತ ಸಂದರ್ಭದಲ್ಲಿ ಮೊದಲ ಬಾರಿಗೆ ಲತಾ ಅವರಿಗೆ ಪಕ್ಷ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಟ್ಟಿತು. ತೀವ್ರ ಪೈಪೋಟಿಯ ನಡುವೆ ಲತಾ 1866 ಮತಗಳನ್ನು ಪಡೆದು ವಿಜಯಿಶಾಲಿಯಾಗಿ ಹೊರಹೊಮ್ಮಿದರು. ಇದೇ ಸಂದರ್ಭದಲ್ಲಿ ಮೀಸಲಾತಿ ಎಸ್ಸಿ ವರ್ಗಕ್ಕೆ ಒಲಿದದ್ದರಿಂದ ಮೇಯರ್ ಸ್ಥಾನ ಒಲಿದು ಬಂದಿದೆ.

ಬಿಜೆಪಿಗೆ ಮಹಾನಗರ ಪಾಲಿಕೆ ಬಿಜೆಪಿ ಅಧಿಕಾರ ಗದ್ದುಗೆ ಹಿಡಿಯಲು ಪಕ್ಷದ ಹಿರಿಯರ ತಪಸ್ಸಿನ ಪ್ರತಿಫಲವಾಗಿದೆ.ಬಿಜೆಪಿಯನ್ನು ಬಹುಮತದೊಂದಿಗೆ ಗೆಲ್ಲಿಸಿದ ನಗರದ ಜನತೆಯ ಆಶೋತ್ತರಗಳಿಗೆ ಪೂರಕವಾಗಿ ಅಭಿವೃದ್ಧಿ ಕೆಲಸ ಮಾಡುವುದಾಗಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.ಸಾಮಾಜಿಕ ನ್ಯಾಯ ಎಂಬ ಸಂವಿಧಾನದ ಮೂಲ ಆಶಯಗಳು ಕೆಳಸ್ಥರದ ವರ್ಗಗಳನ್ನು ಮೇಲೆತ್ತಬಲ್ಲದು ಎಂಬುದಕ್ಕೆ ಆಟೋ ಚಾಲಕನ ಪತ್ನಿಯೊಬ್ಬಳು ಮೊದಲ ಬಾರಿಗೆ ಮೇಯರ್ ಆಗುತ್ತಿರುವುದೇ ಸಾಕ್ಷಿಯಾಗಿದೆ.

LEAVE A REPLY

Please enter your comment!
Please enter your name here