ಆತ 2018ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನ, ಬೆಳ್ಳಿ ಪದಕ ಜಯಿಸಿ, ದೇಶಕ್ಕೆ ಕೀರ್ತಿ ತಂದಿದ್ದ ಯುವಕ. ಪವರ್ ಲಿಫ್ಟಿಂಗ್ ವಿಭಾಗದಲ್ಲಿ ಮೊದಲ ಬಾರಿಗೆ 2 ಚಿನ್ನ, ಮೂರು ಬೆಳ್ಳಿ ಗೆದ್ದು ಕಾಮನ್ವೆಲ್ತ್ ಇತಿಹಾಸದಲ್ಲಿ ಭಾರತದ ಪರವಾಗಿ ಹೊಸ ದಾಖಲೆ ಬರೆದಿದ್ದ. ಅಂಥ ಸಾಧನೆ ಮಾಡಿದ ಪ್ರತಿಭೆ ಮಂಗಳೂರಿನ ಪ್ರದೀಪ್ ಆಚಾರ್ಯಗೆ ಈಗ ಆರ್ಥಿಕ ಮುಗ್ಗಟ್ಟು ಎದುರಾಗಿದೆ.
ಸೆ.18ರಿಂದ 25ರ ವರೆಗೆ ದುಬೈನಲ್ಲಿ ನಡೆಯುವ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪ್ಯನ್ ಶಿಪ್ಪಿಗೆ ತೆರಳಲು ತಾಯಿ ಚಿನ್ನ ಅಡವಿಡುವ ಪರಿಸ್ಥಿತಿ. ವಿಮಾನ ಪ್ರಯಾಣ ಮತ್ತು ಅಲ್ಲಿ ಉಳಿದುಕೊಳ್ಳಲು ಕನಿಷ್ಠ 1.60 ಲಕ್ಷ ರೂಪಾಯಿ ಬೇಕಾಗುತ್ತೆ. ಆದರೆ, ಮಂಗಳೂರಿನ ರಥಬೀದಿಯ ಬಾಲಾಂಜನೇಯ ಜಿಮ್ ನಲ್ಲಿ ಕೋಚಿಂಗ್ ನೀಡುತ್ತಿರುವ ಪ್ರದೀಪ್ಗೆ ಸರಕಾರದ ಯಾವುದೇ ನೆರವು ಲಭಿಸಿಲ್ಲ.
ಕಳೆದ ಬಾರಿ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಾಗ ರಾಜ್ಯ ಮತ್ತು ಕೇಂದ್ರ ಸರಕಾರಗಳು ಪ್ರೋತ್ಸಾಹ ಧನದ ಭರವಸೆ ನೀಡಿದ್ದವು. ಆದರೆ, ಸರಕಾರದಿಂದ ಚಿಕ್ಕಾಸೂ ದೊರೆಯದ ಕಾರಣ ಮುಂದಿನ ಸ್ಪರ್ಧೆಗೆ ಪ್ರದೀಪ್ ಈಗ ಸಾರ್ವಜನಿಕರ ಮೊರೆ ಹೋಗುವಂತಾಗಿದೆ. ಪವರ್ ಲಿಫ್ಟಿಂಗ್ ಬಗ್ಗೆ ಸರಕಾರ ಮತ್ತು ಅಧಿಕಾರಿಗಳ ತಾತ್ಸಾರ ಮನೋಭಾವದಿಂದಾಗಿ ಭರವಸೆಯ ತಾರೆಗಳು ಬಳಲುವಂತಾಗಿವೆ.
ಕಳೆದ ಎಪ್ರಿಲ್ ತಿಂಗಳಲ್ಲಿ ಕಾಮನ್ವೆಲ್ತ್ ಗಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಲು ಬ್ಯಾಂಕ್ ಲೋನ್ ಮಾಡಿದ್ದ ಪ್ರದೀಪ್ ಈಗ ತಾಯಿ ಚಿನ್ನ ಅಡವಿಟ್ಟು 50 ಸಾವಿರ ಕ್ರೋಢೀಕರಿಸಿದ್ದಾರೆ. ಉಳಿದ ಹಣಕ್ಕಾಗಿ ಗೆಳೆಯರು ಸೇರಿ ಕಲೆಕ್ಷನ್ ಮಾಡುತ್ತಿದ್ದಾರೆ. ಏಷ್ಯಾ ವಿಭಾಗದಲ್ಲಿ ಜೀವಮಾನದ ಸಾಧನೆ ತೋರಿಸಲು ಸರಕಾರದ ಅಸಡ್ಡೆಯೇ ಅಡ್ಡಿಯಾಗಿರುವುದು ವಿಪರ್ಯಾಸ..