ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತವರು ಜಿಲ್ಲೆ ಹಾಸನದಲ್ಲಿಂದು ಮೊಮ್ಮಗ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡಿದರು. ಬೇಲೂರು ತಾಲೂಕಿನ ವಿವಿಧೆಡೆ ಸಂಚರಿಸಿದ ಗೌಡರು. ತಾವು ಲೋಕಸಭೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ ನಂತರವೂ ಮತ್ತೆ ಸ್ಪರ್ಧೆ ಮಾಡಿದ್ದರ ಬಗ್ಗೆ ಸ್ಪಷ್ಟನೆ ನೀಡಿದ್ರು.
ಇದೇ ವೇಳೆ ನಾನು-ಸಿದ್ದರಾಮಯ್ಯ ಸೇರಿ ರಾಜ್ಯಾದ್ಯಂತ ಪ್ರವಾಸ ಮಾಡುವ ಮೂಲಕ ಬಿಜೆಪಿ ಬಲ ಕುಗ್ಗಿಸಲು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.ತಾವು ಪ್ರತಿನಿಧಿಸುತ್ತಿದ್ದ ತವರು ಜಿಲ್ಲೆಯನ್ನು ಮೊಮ್ಮಗ ಪ್ರಜ್ವಲ್ ಗೆ ಬಿಟ್ಟುಕೊಟ್ಟಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು. ಹಾಸನ ಜಿಲ್ಲೆಯ ವಿವಿಧೆಡೆ ಸಂಚರಿಸಿ ಪ್ರಜ್ವಲ್ ಪರ ಚುನಾವಣಾ ಪ್ರಚಾರ ಮಾಡಿದರು.
ಮೊದಲು ಚನ್ನರಾಯಪಟ್ಟಣ ತಾಲೂಕು ಯಲಿಯೂರಿನ ದೇವೀರಮ್ಮ ಹಾಗೂ ಬೇಲೂರಿನ ಚನ್ನಕೇಶವ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಗೌಡರು ನಂತರ ಮತಯಾಚನೆ ಮಾಡಿದರು.ಬೇಲೂರು ತಾಲೂಕು ಹಗರೆಯಿಂದ ಎಲೆಕ್ಷನ್ ಕ್ಯಾಂಪೇನ್ ಆರಂಭಿಸಿದ ಗೌಡರು. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲರೂ ಸೇರಿ ಪ್ರಜ್ವಲ್ ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ತಮ್ಮ ಬಹುತೇಕ ಭಾಷಣದ ಉದ್ದಕ್ಕೂ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಗೌಡರು, ಮೋದಿಯವರು 5 ವರ್ಷ ದೇಶ ಆಳಿದ್ದರೆ, ವಾಜಪೇಯಿ 6 ವರ್ಷ ಆಡಳಿತ ನಡೆಸಿದ್ದಾರೆ. ಇವರಂತೆ ವಾಜಪೇಯಿ ಎಂದೂ ಆಡಲಿಲ್ಲ. ಸ್ಪಷ್ಟ ಬಹುಮತ ಪಡೆದು ಅಧಿಕಾರ ನಡೆಸಿದ್ರೂ. ನಾನೇ ಎಲ್ಲಾ ಎನ್ನುತ್ತಿದ್ದ ಮೋದಿ ಅವರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ 3 ರಾಜ್ಯಗಳು ಕೈ ತಪ್ಪಿದ ನಂತರ ಐಟಿ, ಇಡಿ ದಾಳಿ ಮೂಲಕ ಸಣ್ಣ ಸಣ್ಣ ಪಕ್ಷಗಳನ್ನು ಮುಗಿಸಲು ಹೊರಟಿದ್ದಾರೆ ಎಂದು ಮೋದಿ ಕಾರ್ಯವೈಖರಿ ಯನ್ನು ಟೀಕಿಸಿದರು.
ಇದೇ ವೇಳೆ ತಾನು ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿದ್ದೆ. ಆದ್ರೆ ನೀವು ಮತ್ತೊಮ್ಮೆ ಲೋಕಸಭೆಗೆ ಬರಬೇಕು ಎಂದು ಅನೇಕರು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ನಿಲ್ಲುವ ಅನಿವಾರ್ಯತೆ ಎದುರಾಯಿತು. ಆದ್ರೆ ನನ್ನ ನಿರ್ಧಾರ ಬದಲಿಸುವ ವೇಳೆಗೆ ಹಾಸನ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಡುವ ನಿರ್ಧಾರ ಮಾಡಿದ್ದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಗೌಡರು ಸ್ಪಷ್ಟಪಡಿಸಿದರು.
ನಾನು ಸಿದ್ದರಾಮಯ್ಯ ಒಟ್ಟಾಗಿ ಮಂಡ್ಯ, ಮೈಸೂರು ಸೇರಿ ಎಲ್ಲೆಡೆ ಪ್ರಚಾರ ಮಾಡುತ್ತೇವೆ. ಬೆಂಗಳೂರಲ್ಲಿ ಹಾಲಿ 3 ಸ್ಥಾನ ಗೆದ್ದಿರುವ ಬಿಜೆಪಿಯನ್ನು ಅಷ್ಟು ಸ್ಥಾನ ಗೆಲ್ಲಲು ಬಿಡುವುದಿಲ್ಲ ಎಂದು ಶಪಥ ಮಾಡಿದರು. ನಂತರ ಪ್ರಜ್ವಲ್ ಜೊತೆಗೂಡಿ ಬೇಲೂರು ತಾಲೂಕಿನ ವಿವಿಧೆಡೆ ಸಂಚರಿಸಿ ನನ್ನಂತೆಯೇ ಮೊಮ್ಮಗನನ್ನೂ ಬೆಂಬಲಿಸಿ ಮನವಿ ಮಾಡಿದರು. ಇದರಿಂದ ಜಿಲ್ಲೆಯ ಅಭಿವೃದ್ಧಿ ಮತ್ತಷ್ಟು ಹೆಚ್ಚಾಗಲಿದೆ. ಇದಕ್ಕಾಗಿ ಉಭಯ ಪಕ್ಷಗಳವರೂ ಬೆಂಬಲಿಸಿ ಎಂದು ವಿನಂತಿ ಮಾಡಿದರು.