Home District ಯಾರು ಕೂಡ ಮಾಡಿಲ್ಲ ಸಮ್ಮಿಶ್ರ ಸರ್ಕಾರದಲ್ಲಿ ಪೂರ್ಣವಧಿ ಅಧಿಕಾರ.! ಪತನದ ಹಾದಿ ಹಿಡಿದಿರೋ ಈ ಸರ್ಕಾರವೂ...

ಯಾರು ಕೂಡ ಮಾಡಿಲ್ಲ ಸಮ್ಮಿಶ್ರ ಸರ್ಕಾರದಲ್ಲಿ ಪೂರ್ಣವಧಿ ಅಧಿಕಾರ.! ಪತನದ ಹಾದಿ ಹಿಡಿದಿರೋ ಈ ಸರ್ಕಾರವೂ ಆಗುತ್ತಾ ಅಲ್ಪಾಯುಷಿ.!?

1962
0
SHARE

ಫ್ಯೂಚರ್ ಸ್ಟಾಂಡ್ ಆನ್ ಹಿಸ್ಟರಿ ಶೋಲ್ಡರ್…….. ಭವಿಷ್ಯ ಯಾವತ್ತು ಇತಿಹಾಸದ ಭುಜದ ಮೇಲೆ ನಿಂತಿರುತ್ತೆ. ಈ ಮಾತು ಅಕ್ಷರಶಃ ಸತ್ಯ. ಇಂದಿನ ರಾಜಕಾರಣ ಗಮನಿಸಿದ್ರೆ, ದೋಸ್ತಿ ಸರ್ಕಾರ ನಡೆಯುತ್ತಿರೋ ಹಾದಿ ನೋಡಿದ್ರೆ ಆ ಇತಿಹಾಸದ ಪುಟಗಳು ಒಮ್ಮಿದೊಂದೆಲೆ ತೆರೆದುಕೊಳ್ಳಲಾರಂಭಿಸುತ್ತಿವೆ. ಇಂದಿನ ರೆಸಾರ್ಟ್ ರಾಜಕಾರಣ, ಆಪರೇಷನ್ ಕಮಲ, ಸರ್ಕಾರವನ್ನ ಆಡಿಸಿ, ಬೀಳಿಸುತ್ತಿರೋ ಆಟ. ಇದೇ ಮೊದಲೇನಲ್ಲ. ಯಾವಾಗೆಲ್ಲ ಅತಂತ್ರ ಫಲಿತಾಂಶ ಬಂದು ಸಮ್ಮಿಸ್ರ ಸರ್ಕಾರ  ಬಂದಿದ್ಯೋ ಆಗೆಲ್ಲಾ ಇದೇ ಪರಿಸ್ಥಿತಿಯನ್ನ ಎದುರಿಸಬೇಕಾಗಿದೆ.

ಇದು ರಾಜ್ಯದ ಕರ್ಮ ಎನ್ನುವುದಕ್ಕಿಂತ ಹೆಚ್ಚಾಗಿ ಅತಂತ್ರ ಫಲಿತಾಂಶ ನೀಡಿದ್ದಕ್ಕಾಗಿ ಮತದಾರರು ತಮಗೆ ತಾವೇ ವಿಧಿಸಿಕೊಂಡ ಶಿಕ್ಷೆ ಎಂದುಕೊಳ್ಳಬಹುದು…ಕರ್ನಾಟಕದಲ್ಲಿ ಯಾವುದೇ ಮೈತ್ರಿಕೂಟದ ಸರ್ಕಾರ ಪೂರ್ಣಾವಧಿ ಆಡಳಿತ ನಡೆಸಿದ ನಿದರ್ಶನಗಳೇ ಇಲ್ಲ. ಎಲ್ಲ ಸರಕಾರಗಳೂ ಅಲ್ಪಾವಧಿ ಸರಕಾರಗಳೇ… ಅತ್ಯಧಿಕ ಎರಡು ವರ್ಷಗಳ ಕಾಲ ರಾಮಕೃಷ್ಣ ಹೆಗಡೆ ಮೈತ್ರಿ ಸರಕಾರದ ಮುಖ್ಯಮಂತ್ರಿ ಆಗಿದ್ರೆ.. ಅತ್ಯಂತ ಕಡಿಮೆ ಏಳು ದಿನಗಳ ಅವಧಿಗೆ ಮೈತ್ರಿ ಸರಕಾರದ ಮುಖ್ಯಮಂತ್ರಿ ಆಗಿದ್ದವರು ಬಿ.ಎಸ್‌.ಯಡಿಯೂರಪ್ಪ.

ಧರ್ಮಸಿಂಗ್‌ ಇಪ್ಪತ್ತು ತಿಂಗಳು ಮುಖ್ಯಮಂತ್ರಿ ಆಗಿದ್ದರೆ, ಅವರ ನಂತರ ಎಚ್‌.ಡಿ.ಕುಮಾರಸ್ವಾಮಿ ಇಪ್ಪತ್ತು ತಿಂಗಳು ಮುಖ್ಯಮಂತ್ರಿ ಆಗಿದ್ದರು. ಹೀಗೆ ಮೈತ್ರಿ ಸರಕಾರದ ಮುಖ್ಯಮಂತ್ರಿ ಯಾವುದೇ ಸಂದರ್ಭದಲ್ಲಿ ಪೂರ್ಣಾವಧಿ ಆಡಳಿತ ನಡೆಸುವ ಚಾಕ್ಯತೆಯನ್ನು ಪ್ರದರ್ಶಿಸಲು ಸಾಧ್ಯವೇ ಆಗಲಿಲ್ಲ. ಸದ್ಯ ಎರಡನೇ ಅವಧಿಗೆ ಮುಖ್ಯಮಂತ್ರಿ ಆಗಿರುವ ಕುಮಾರಸ್ವಾಮಿ ಅಧಿಕಾರ ಸೂತ್ರ ಹಿಡಿದ ಏಳೆಂಟು ತಿಂಗಳ ಅವಧಿಯಲ್ಲಿ ಗಂಭೀರ ರಾಜಕೀಯ ಅಭದ್ರತೆಯ ಸುಳಿಯಲ್ಲಿ ಸಿಲುಕಿದ್ದಾರೆ. ಇಂತಹ ಗಂಭೀರ ಬಿಕ್ಕಟ್ಟಿನ ಸುಳಿಯಲ್ಲಿ ಎಚ್ ಡಿಕೆ ಮುಳುಗಲೂಬಹದು, ತೇಲಿ ಸ್ವಲ್ಪ ಕಾಲ ಜೀವ ಉಳಿಸಿಕೊಳ್ಳಬಹುದು. ಆದರೆ ಈ ಸರಕಾರ ಒಂದು ರೀತಿಯಲ್ಲಿ ಅಲ್ಪಾಯುಷಿ ಎನ್ನುವುದಂತೂ ಸತ್ಯ.

ಇಂದು ಕಾಂಗ್ರೆಸ್ ನಾಯಕರು ಅಪರೇಷನ್ ಕಮಲ ಹಾಗೆ ಹೀಗೆ ಅಂತಾ ಬೊಬ್ಬೆ ಇಡುತ್ತಿದ್ದಾರೆ, ಆದ್ರೆ ಮೊದ ಮೊದಲು ಆಪರೇಷನ್, ಶಾಸಕರ ಕುದುರೆ ವ್ಯಾಪರವನ್ನ ಪರಿಚಯಿದ್ದೇ ಕಾಂಗ್ರೆಸ್. ಸೋ ಆದೇ ಸಂಸ್ಕೃತಿ ಇಂದಿಗೂ ಮುಂದುವರೆಯುತ್ತಿದೆ. ಅದೇನೇ ಇರ್ಲಿ, 1983ರಲ್ಲಿ ಅಧಿಕಾರಕ್ಕೇ ಏರಿದ್ದ ರಾಮಕೃಷ್ಣ ಹೆಗಡೆ ನೇತೃತ್ವದ ಮೊದಲ ಸಮ್ಮಿಶ್ರ ಸರ್ಕಾರ ಎರಡು ವರ್ಷ ಅವಧಿಗೆ ಅಸ್ತಿತ್ವವನ್ನ ಕಳೆದುಕೊಂಡಿದ್ದು ಮಾತ್ರ ಇತಿಹಾಸ.ಸಿದ್ದರಾಮಯ್ಯಗೆ ಉಪ ಮುಖ್ಯಮಂತ್ರಿ ಪಟ್ಟ ದೊರೆತರೂ ಭುಸುಗುಡಲಾರಂಭಿಸಿದ್ದರು. ಸರಕಾರದಲ್ಲಿದ್ದುಕೊಂಡೇ ಅಹಿಂದ ಸಮಾವೇಶ ನಡೆಸಲಾರಂಭಿಸಿದ್ದರು.

ಇದರಿಂದ ಆಕ್ರೋಶಗೊಂಡ ದೇವೇಗೌಡ, ಸಿದ್ದರಾಮಯ್ಯನವರನ್ನು ಸಂಪುಟದಿಂದ ಕೈಬಿಡಲು ಧರ್ಮಸಿಂಗ್‌ ಅವರಿಗೆ ಸೂಚಿಸಿದ್ದರು. ದೇವೇಗೌಡರು ಇಂತಹ ನಿರ್ಧಾರ ತೆಗೆದುಕೊಳ್ಳದಿದ್ದರೆ ಜೆಡಿಎಸ್‌ ಪಕ್ಷ ವೇ ವಿಭಜನೆಗೊಳ್ಳುವ ಸಾಧ್ಯತೆ ಇತ್ತು. ಸಿದ್ದರಾಮಯ್ಯ ಉಚ್ಛಾಟನೆಯ ನಂತರವೂ ಜೆಡಿಎಸ್‌ ವಿಭಜನೆಯ ಪ್ರಯತ್ನ ಮುಂದುವರಿದಿದ್ದಾಗ ಎಚ್‌.ಡಿ ಕುಮಾರಸ್ವಾಮಿ ಕ್ಷಿಪ್ರಕ್ರಾಂತಿ ನಡೆಸಿದ್ದರು. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ತೃತೀಯ ಮೈತ್ರಿಕೂಟದ ಸರಕಾರ ರಚಿಸಿದ್ದರು. ಈ ಮೂಲಕ ಧರ್ಮಸಿಂಗ್‌ ಕೇವಲ ಇಪ್ಪತ್ತು ತಿಂಗಳಿಗೆ ಅಧಿಕಾರ ಕಳೆದುಕೊಂಡರು. ಮೊದಲ ಇಪ್ಪತ್ತು ತಿಂಗಳಿಗೆ ಜೆಡಿಎಸ್‌ನ ಕುಮಾರಸ್ವಾಮಿ ಮುಖ್ಯಮಂತ್ರಿ, ಉಳಿದ ಇಪ್ಪತ್ತು ತಿಂಗಳಿಗೆ  ಯಡಿಯೂರಪ್ಪ ಮುಖ್ಯಮಂತ್ರಿ ಎನ್ನುವುದು ಮೈತ್ರಿಕೂಟದ ನಡುವಣ ಒಪ್ಪಂದವಾಗಿತ್ತು.

ಇಪ್ಪತ್ತು ತಿಂಗಳು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅಧಿಕಾರ ಹಸ್ತಾಂತರಿಸಲು ಮೀನಮೇಷ ಎಣಿಸಿದ್ದರು. ಕಟ್ಟಕಡೆಗೆ ಅಧಿಕಾರ ಹಸ್ತಾಂತರಿಸಿ ಕೇವಲ ಏಳೇ ದಿನಗಳಲ್ಲಿ ಯಡಿಯೂರಪ್ಪಗೆ ನೀಡಿದ್ದ ಬೆಂಬಲ ವಾಪಸ್‌ ಪಡೆದಿದ್ದರು. ಈ ಮೂಲಕ ಯಡಿಯೂರಪ್ಪ ನೇತೃತ್ವದ ನಾಲ್ಕನೇ ಮೈತ್ರಿಕೂಟದ ಸರಕಾರವೂ ಪತನಗೊಂಡಿತ್ತು.ಇದು ಕರ್ನಾಟಕದಲ್ಲಿ ಮೈತ್ರಿಕೂಟಗಳು ಯಾವ ರೀತಿ ವಿಫಲಗೊಂಡವು ಅನ್ನುವುದರ ಇತಿಹಾಸ. ಇಂಥ ಇತಿಹಾಸಕ್ಕೆ ಹೊಸದಾಗಿ ಕುಮಾರಸ್ವಾಮಿಯವರ ನೇತೃತ್ವದ ಐದನೇ ಮೈತ್ರಿಕೂಟವೂ ಸೇರ್ಪಡೆಗೊಳ್ಳುವ ಅಪಾಯದಲ್ಲಿದೆ.

2018ರ ವಿಧಾನಸಭಾ ಚುನಾವಣೆಯ ನಂತರ ಮೇ 23ರಂದು  ಅಚ್ಚರಿಯ ರೀತಿಯಲ್ಲಿ ಕಾಂಗ್ರೆಸ್‌ ಜತೆ ಅಧಿಕಾರ ಸೂತ್ರ ಹಿಡಿದ ಕುಮಾರಸ್ವಾಮಿ ಸರಕಾರ ಆರಂಭದಿಂದಲೂ ಒಂದು ರೀತಿಯಲ್ಲಿ ಬಾಲಗ್ರಹಪೀಡಿತವಾಗಿತ್ತು. ಬಾಲಗ್ರಹ ಪೀಡನೆ ಅನ್ನೋದಕ್ಕಿಂತ ಹೆಚ್ಚಾಗಿ ಸಿದ್ದಗ್ರಹಪೀಡಿತವಾಗಿತ್ತು. ಐದು ವರ್ಷ ಯಶಸ್ವಿಯಾಗಿ ಸುಭದ್ರ ಆಡಳಿತ ನೀಡಿದ್ದ ಸಿದ್ದರಾಮಯ್ಯ, 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ನಿರೀಕ್ಷಿತ ಗೆಲುವು ದೊರಕಿಸಿಕೊಡಲು ಸಾಧ್ಯವಾಗಿರಲಿಲ್ಲ. ಸ್ವಯಂ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ 36 ಸಾವಿರ ಮತಗಳ ಅಂತರದಿಂದ ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡರಿಂದ ಪರಾಭವಗೊಂಡಿದ್ದರು.

ಬಾದಾಮಿಯಲ್ಲಿ ಅಲ್ಪಮತಗಳಿಂದ ಗೆಲುವು ಸಾಧಿಸಿದ್ದರೂ, ಚಾಮುಂಡೇಶ್ವರಿಯ ಸೋಲು ಅವರಿಗೆ ಮರ್ಮಾಘಾತವಾಗಿದ್ದು ನಿಜ. ಮೊದಲೇ ದೇವೇಗೌಡರ ಕುಟುಂಬದ ಮೇಲೆ ಬೆಂಕಿಯುಗುಳುತ್ತಿದ್ದ ಸಿದ್ದರಾಮಯ್ಯನವರಿಗೆ ಈಗ ಗಾಯದ ಮೇಲೆ ಬರೆಯೆಳೆದಂತಾಗಿತ್ತು. ಇಂಥ ಗಾಯದ ಮೇಲೆ ಮತ್ತೊಂದು ಬರೆಯೆಳೆದದ್ದು, ರಾಹುಲ್‌ ಗಾಂಧಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಎಂದು ಘೋಷಿಸಿದಾಗ. ಒಲ್ಲದ ಮನಸ್ಸಿನಿಂದ ಈ ಮೈತ್ರಿಯನ್ನು ಒಪ್ಪಿಕೊಂಡಿದ್ದ ಸಿದ್ದರಾಮಯ್ಯ ಆರಂಭದ ದಿನಗಳಿಂದ ಕುಮಾರಸ್ವಾಮಿ ಸರಕಾರದ ವಿರುದ್ಧ ಅಸಮಾಧಾನದ ಕಿಡಿ ಸಿಡಿಸುತ್ತಲೇ ಇದ್ದರು.

ಯಡಿಯೂರಪ್ಪ ಅಧಿಕೃತ ವಿರೋಧ ಪಕ್ಷ ದ ನಾಯಕರಾಗಿದ್ದರೆ, ಸಿದ್ದರಾಮಯ್ಯ ಮೈತ್ರಿಕೂಟ ಸರಕಾರದೊಳಗಿನ ವಿರೋಧಪಕ್ಷ ದ ನಾಯರಂತೆ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ಕಾಂಗ್ರೆಸ್‌ ಶಾಸಕಾಂಗ ಪಕ್ಷ ದ ನಾಯಕರಾಗಿ, ಮೈತ್ರಿಕೂಟ ಸಮನ್ವಯ ಸಮಿತಿ ಅಧ್ಯಕ್ಷ ರಾಗಿದ್ದರೂ, ಅವರಿಂದ ಅದುಮಿಟ್ಟುಕೊಳ್ಳಲಾಗದ ಅಸಹನೆ, ಆಕ್ರೋಶ ಕುಮಾರಸ್ವಾಮಿ ಸರಕಾರದ ವಿರುದ್ಧ ವ್ಯಕ್ತವಾಗುತ್ತಿತ್ತು. ಪೂರ್ಣ ಪ್ರಮಾಣದ ಬಜೆಟ್‌ ಮಂಡನೆಯಿರಬಹುದು, ಧರ್ಮಸ್ಥಳದ ಶಾಂತಿವನದಲ್ಲಿ ಆಡಿದ ಈ ಸರಕಾರದ ಆಯಸ್ಸು ಲೋಕಸಭಾ ಚುನಾವಣೆವರೆಗೆ ಎನ್ನುವ ಮಾತುಗಳಿರಬಹುದು, ತಮ್ಮ ಸರಕಾರದ ಯೋಜನೆಗಳನ್ನು ಚಾಚೂತಪ್ಪದೆ ಅನುಷ್ಠಾನಗೊಳಿಸಬೇಕು ಎನ್ನುವ ಕಟ್ಟಪ್ಪಣೆ ಇರಬಹುದು,

ಇತ್ತೀಚೆಗೆ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳಿಗೆ ಅಧ್ಯಕ್ಷ ರ ನೇಮಕವಿರಬಹುದು, ಹೀಗೆ ಪ್ರತಿ ಹೆಜ್ಜೆಯಲ್ಲಿ ಸಿದ್ದರಾಮಯ್ಯ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರದ ಸೂಪರ್‌ ಸಿಎಂ ಆಗಿದ್ದರು. ಇದರಿಂದಲೇ ಕುಮಾರಸ್ವಾಮಿಯವರು, ‘ನಾನು ವಿಷಕಂಠ, ಈ ಸರಕಾರ ಬಿಸಿತುಪ್ಪ’ ಎನ್ನುವ ಅತೃಪ್ತಿಯ ಮಾತುಗಳನ್ನಾಡುತ್ತ, ಕಟ್ಟಕಡೆಗೆ ಈ ಸರಕಾರದಲ್ಲಿ ನಾನು ಕ್ಲರ್ಕ್‌ ರೀತಿಯಲ್ಲಿದ್ದೇನೆ ಎಂದು ಪಕ್ಷ ದ ಸಭೆಗಳಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದರು.ಒಂದು ರೀತಿಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರದಲ್ಲಿ ಅಸಮಾಧಾನ ಅತೃಪ್ತಿ ಮಡುಗಟ್ಟಿದೆ. ಸಿದ್ದರಾಮಯ್ಯನವರಿಗೆ ಈ ಸರಕಾರ ಮುಂದುವರಿಯುವುದು ಕಿಂಚಿತ್ತೂ ಇಷ್ಟವಿಲ್ಲ.

ಬಿಜೆಪಿ ಮಡುಗಟ್ಟಿದ್ದ ಮೈತ್ರಿಕೂಟದ ಅತೃಪ್ತಿಯನ್ನು ಈಗ ಸಮರ್ಥವಾಗಿ ಬಳಸಿಕೊಳ್ಳುವ ಷಡ್ಯಂತ್ರದಲ್ಲಿ ಸಕ್ರಿಯವಾಗಿದೆ. ಅದೇನೇ ಇರಲಿ ಕರ್ನಾಟಕದ ಐದನೇ ಮೈತ್ರಿಕೂಟದ ಸರಕಾರವೂ ಅವಧಿಗೆ ಮೊದಲೇ ಪತನಗೊಳ್ಳುವ ಹಾದಿಯಲ್ಲಿದೆ. ಸೋ ಹಿಸ್ಟರಿ ರಿಪೀಟ್ ಎನ್ನುವ ಹಾಗೆ ಈ ಹಿಂದೆ ಸಮ್ಮಿಶ್ರ ಸರ್ಕಾರಕ್ಕೆ ಆದ ಗತಿಯೇ ಈ ಸಮ್ಮಿಶ್ರ ಸರ್ಕಾರಕ್ಕೂ ಆಗುತ್ತಿದೆ.

LEAVE A REPLY

Please enter your comment!
Please enter your name here