ಮೈಸೂರು: ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ಶಿರಾ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜಯಚಂದ್ರ ಅವರಿಗೆ ಫಲಿತಾಂಶ ಬರುವವರೆಗೆ ಕಾಯುವಷ್ಟು ವ್ಯವಧಾನವಿಲ್ಲದೆ ಸೋಲೊಪ್ಪಿಕೊಂಡಿದ್ದಾರೆ. ಈಗಲೇ ಇಲ್ಲದ ಕಾರಣ ಹುಡುಕುತ್ತಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.
ರಾಜರಾಜೇಶ್ವರಿ ಕ್ಷೇತ್ರದಲ್ಲಿ ಮುನಿರತ್ನ ಅವರ ಗೆಲವು ನಿಶ್ಚಿತ. ಅಲ್ಲಿ ಮತದಾನದ ಸಂಖ್ಯೆ ಕಡಿಮೆಯಾಗಿದ್ದರೂ ಸಹ ಅವರ ಅಭಿವೃದ್ದಿ ಕೆಲಸಗಳಿಗೆ ಜನ ಕೈಹಿಡಿದಿದ್ದಾರೆ. ಕಾಂಗ್ರೆಸ್ ಇಲ್ಲದ ಕಾರಣಗಳನ್ನು ಹುಡುಕುತ್ತಿದೆ. ಆ ಪಕ್ಷಕ್ಕೆ ಸೋಲುವ ಅರಿವಾಗಿದೆ. ಆದರೆ, ಬಿಜೆಪಿ ಗೆಲುವು ನಿಶ್ಚಿತ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.ಹೈಕೋರ್ಟ್ ಆದೇಶದಂತೆ ಸಹಕಾರ ಸಂಸ್ಥೆಗಳ ಚುನಾವಣೆಗಳು ನಡೆಯಲಿವೆ. ಡಿಸೆಂಬರ್ ನಲ್ಲಿ ಜನರಲ್ ಬಾಡಿ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಚಾಮರಾಜ ವಿಧಾನಸಭಾ ಕ್ಷೇತ್ರದ ಕೆ ಆರ್ ಎಸ್ ಮುಖ್ಯ ರಸ್ತೆಯಿಂದ ಸೂರ್ಯ ಬೇಕರಿ ಸರ್ಕಲ್ ವರೆಗಿನ 1.99 ಕೋಟಿ ರೂಪಾಯಿ ವೆಚ್ಚದ ಡಾಂಬರೀಕರಣ ಕಾಮಗಾರಿಗೆ ಈಗ ಚಾಲನೆ ನೀಡಲಾಗಿದೆ. ಶಾಸಕರಾದ ಎಲ್. ನಾಗೇಂದ್ರ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಇನ್ನೂ ಹೆಚ್ಚಿನ ಕಡೆ ರಸ್ತೆ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.ಮೈಸೂರು ಹಾಗೂ ಸುತ್ತಮುತ್ತಲಿನ ಬಹುತೇಕ ರಸ್ತೆಗಳಿಗೆ ಡಾಂಬರೀಕರಣವಾಗಲಿದೆ. ಮೈಸೂರಿನ ಅಭಿವೃದ್ಧಿ ನಮ್ಮ ಗುರಿ ಎಂದು ಉಸ್ತುವಾರಿ ಸಚಿವರಾದ ಸೋಮಶೇಖರ್ ತಿಳಿಸಿದರು.
ಚಾಮರಾಜ ವಿಧಾನಸಭಾ ಕ್ಷೇತ್ರದ ಕೆ ಆರ್ ಎಸ್ ಮುಖ್ಯ ರಸ್ತೆಯಿಂದ ಸೂರ್ಯ ಬೇಕರಿ ಸರ್ಕಲ್ ವರೆಗಿನ 1.99 ಕೋಟಿ ರೂಪಾಯಿ ವೆಚ್ಚದ ಡಾಂಬರೀಕರಣ ಕಾಮಗಾರಿಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಶಾಸಕರಾದ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.