ರಮ್ಯಾ ಚಿತ್ರರಂಗದಲ್ಲಿ ಮಿಂಚಿದ್ದ ಗ್ಲಾಮರ್ ನಟಿ. ಮಂಡ್ಯ ಜನರು ಲೋಕಸಭೆ ಉಪಚುನಾವಣೆಯಲ್ಲಿ ಮತ ಹಾಕಿ ಗೆಲುವು ತಂದು ಕೊಟ್ಟು ರಾಜಕಾರಣಿಯನ್ನೂ ಮಾಡಿದ್ರು. ಆ ಬಳಿಕ ನಾನು ಜನ ಸೇವೆ ಮಾಡ್ತೇನೆ ಎಂದು ಹೇಳಿ ರಮ್ಯಾ ಮಂಡ್ಯದಲ್ಲಿ ಮನೆಯನ್ನೂ ಮಾಡಿದ್ರು.
ಆದ್ರೆ ಇದೀಗ ಇದ್ದಕ್ಕಿದ್ದಂತೆ ರಾತ್ರೋ ರಾತ್ರಿ ಮಂಡ್ಯದಲ್ಲಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿಸಿದ್ದಾರೆ. ಇದು ಸಕ್ಕರೆ ನಾಡಿನ ಜನರನ್ನು ಮತ್ತಷ್ಟು ಕೆಂಡಾಮಂಡಲರನ್ನಾಗಿಸಿದೆ. ಸಕ್ಕರೆ ನಾಡು ಮಂಡ್ಯದೊಂದಿಗಿನ ಸಂಬಂಧವನ್ನ ಮಾಜಿ ಸಂಸದೆ, ನಟಿ ರಮ್ಯಾ ಕಡಿದುಕೊಂಡಿದ್ದಾರೆ… ಬಹುಷಃ ಹತ್ತಿದ ಏಣಿಯನ್ನು ಒದ್ದು ಹೋಗೋದು ಅಂದ್ರೆ ಇದೆ ಇರಬೇಕು…. ಮಂಡ್ಯ ಜಿಲ್ಲೆಯ ರಾಜಕೀಯಕ್ಕೆ ಬಿರುಗಾಳಿ ಬಂದಂತೆ ಬಂದು ಅಲ್ಪಾವಧಿಯಲ್ಲಿ ಸಂಸದರಾಗಿ ಆಯ್ಕೆಯಾದ್ರು… ಕಾಂಗ್ರೆಸ್ ನಲ್ಲಿ ಪ್ರಬಲ ನಾಯಕಿಯಾಗಿ ಬೆಳೆದ್ರು.
ಹೈಕಮಾಂಡ್ ಜೊತೆ ಅದರಲ್ಲೂ ರಾಹುಲ್ ಗಾಂಧಿ ಅವರಿಗೆ ಹತ್ತಿರವಾದ ಮೇಲೆ ರಮ್ಯಾ ಮಂಡ್ಯ ಮತ್ತು ಜಿಲ್ಲೆಯ ಜನರನ್ನ ಮರೆತೇಬಿಟ್ರು..ಕೊನೆ ಪಕ್ಷ ರೆಬೆಲ್ ಸ್ಟಾರ್ ಅಂಬರೀಷ್ ನಿಧನರಾದಾಗ ಅವರ ಅಂತಿಮ ದರ್ಶನ ಪಡೆಯಲು ರಮ್ಯಾ ಬರ್ತಾರೆ ಅಂತಾ ಎಲ್ರೂ ಭಾವಿಸಿದ್ದರು… ಆದ್ರೆ ಕಲ್ಲು ಮನಸ್ಸಿನ ಹುಡುಗಿ ಪದ್ಮಾವತಿ ಒಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದು ಬಿಟ್ರೆ, ಮಂಡ್ಯ ಕಡೆ ತಲೆ ಹಾಕಿಯೂ ಮಲಗಲಿಲ್ಲ…ಇದು ಅಂಬಿ ಅಭಿಮಾನಿಗಳಲ್ಲಿ ಮತ್ತು ಸಕ್ಕರೆ ನಾಡಿನ ಜನರಲ್ಲಿ ತೀವ್ರ ಬೇಸರ ಮೂಡಿಸಿತ್ತು…
ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ರಮ್ಯಾ ಅವರ ಮಂಡ್ಯ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.ಇದೀಗ ರಮ್ಯಾ ರಾತ್ರೋರಾತ್ರಿ ಮಂಡ್ಯ ನಿವಾಸ ಖಾಲಿ ಮಾಡಿಕೊಂಡು ಹೋಗಿದ್ದಾರೆ.. ರಮ್ಯಾ ಅವರ ಮನೆ ಮಂಡ್ಯ ನಗರದ ವಿದ್ಯಾನಗರದಲ್ಲಿದ್ದು, ನಿನ್ನೆ ತಡರಾತ್ರಿ ಎರಡು ಲಾರಿಗಳಲ್ಲಿ ಮನೆಯಲ್ಲಿದ್ದ ವಸ್ತುಗಳನ್ನು ಸಾಗಣೆ ಮಾಡಲಾಗಿದೆ..
ಸುಮಾರು ರಾತ್ರಿ ಹತ್ತು ಗಂಟೆಯಿಂದ ಮಧ್ಯರಾತ್ರಿ ಎರಡು ಗಂಟೆವರೆಗೆ ಮನೆಯಲ್ಲಿದ್ದ ವಸ್ತುಗಳನ್ನು ತುಂಬಿಕೊಂಡು ಹೋಗಿದ್ದಾರೆ.ರಮ್ಯಾ ಮೊದಲ ಬಾರಿಗೆ ಮಂಡ್ಯ ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ಮಂಡ್ಯದಲ್ಲಿ ಮನೆ ಮಾಡಿ, ಅಲ್ಲೇ ಇದ್ದು ಜನರ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ರು. ಅದಾದ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ರಮ್ಯಾ, ಸದ್ದಿಲ್ಲದೆ ಮಂಡ್ಯದಿಂದ ಮನೆ ಖಾಲಿ ಮಾಡಿದ್ರು. ಇದ್ದಕ್ಕಿದ್ದಂತೆ ಮತ್ತೆ ಮಂಡ್ಯಕ್ಕೆ ಆಗಮಿಸಿದ ರಮ್ಯಾ ನಾನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಿದ್ದೆ.
ಈಗ ವಿದ್ಯಾಭ್ಯಾಸ ಮುಗಿಸಿ ವಾಪಸ್ ಬಂದಿದ್ದೇನೆ. ಇನ್ನು ಮುಂದೆ ನಾನು ನಿಮ್ಮ ಜೊತೆಯೇ ಇರುತ್ತೇನೆ ಎಂದು ಮಂಡ್ಯದಲ್ಲಿ ಎರಡನೇ ಬಾರಿಗೆ ಬಾಡಿಗೆ ಮನೆ ಮಾಡಿದ್ರು.ಒಟ್ಟಾರೆ ರಾತ್ರೋರಾತ್ರಿ ಮಂಡ್ಯದಿಂದ ಬಾಡಿಗೆ ಮನೆ ಖಾಲಿ ಮಾಡುವ ಮೂಲಕ, ರಾಜಕೀಯವಾಗಿಯೂ ಮಂಡ್ಯದಿಂದ ರಮ್ಯಾ ದೂರ ಸರಿದಿದ್ದಾರೆ.