ಪಂಚರಾಜ್ಯಗಳ ಚುನಾವಣೆಯ ಸೋಲಿನಿಂದ ಕಂಗೆಟ್ಟಿದ್ದ ಬಿಜೆಪಿಗೆ ಅತ್ಯಂತ ಸಂತೋಷಕರ ಸುದ್ದಿ ಸುಪ್ರೀಂ ಕೋರ್ಟ್ ನಿಂದ ಬಂದಿದೆ… ವಿವಾದಾತ್ಮಕ ರಫೇಲ್ ಯುದ್ಧ ವಿಮಾನ ಖರೀದಿ ಕುರಿತು ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆ ಒಳಪಡಿಸಬೇಕು ಎಂದು ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.. ಸುಪ್ರೀಂ ತೀರ್ಪು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ನಿರಾಳವನ್ನುಂಟು ಮಾಡಿದೆ..
ಮತ್ತೊಂದೆಡೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ಮುಖಭಂಗವಾಗಿದೆ..ರಫೇಲ್ ಒಪ್ಪಂದ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅಮಿತ್ ಶಾ ಅವರು ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುಪ್ರೀಂಕೋರ್ಟ್ ಆದೇಶದಿಂದ ಒಪ್ಪಂದದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರವಿಲ್ಲ ಎಂಬುದು ಸಾಬೀತಾಗಿದೆ. ನರೇಂದ್ರ ಮೋದಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದ ರಾಹುಲ್ ಗಾಂಧಿ ಇದೀಗ ಕ್ಷಮೆಯಾಚಿಸಲಿ.
ಯಾವ ಆಧಾರದ ಮೇಲೆ ನಮ್ಮ ಮೇಲೆ ಇಂತಹ ದೊಡ್ಡ ಆರೋಪವನ್ನು ಮಾಡಲಾಗಿತ್ತು ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿ ರಾಹುಲ್ ವಿರುದ್ಧ ಕಿಡಿಕಾರಿದ್ದಾರೆ. ರಫೇಲ್ ಡೀಲ್ ಗೆ ಸಂಬಂಧಿಸಿದ ವಿಷಯ ಸ್ಫಟಿಕದಷ್ಟೇ ಪಾರದರ್ಶಕವಾಗಿತ್ತು. ಆದರೆ ತನ್ನ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಸುಖಾಸುಮ್ಮನೆ ಆಧಾರರಹಿತ ಆರೋಪ ಮಾಡಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮಾತನಾಡಿ, ಇನ್ನಾದ್ರೂ ರಫೇಲ್ ಒಪ್ಪಂದದ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡುವುದನ್ನ ಬಿಡಬೇಕು ಎಂದಿದ್ದಾರೆ..ಇನ್ನೂ ಸುಪ್ರೀಂ ತೀರ್ಪಿನಿಂದ ಹಿನ್ನಡೆಯಾಗಿಲ್ಲ ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ..ರಫೇಲ್ ಡೀಲ್ ವಿವಾದ ಸಂಬಂಧ ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆ ನಡೆಸುವಂತೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರವನ್ನ ಒತ್ತಾಯಿಸಿದ್ದಾರೆ..ಒಟ್ಟಾರೆ, ರಫೇಲ್ ಒಪ್ಪಂದ ತನಿಖೆಗೆ ಸರ್ವೋಚ್ಚ ನ್ಯಾಯಾಲಯ ಸಾರಾಸಗಟಾಗಿ ನಿರಾಕರಿಸಿದ್ದರಿಂದ, ರಾಹುಲ್ ಗಾಂಧಿ ಅವರ ಹೋರಾಟಕ್ಕೆ, ಪ್ರತಿಷ್ಠೆಗೆ ಭಾರೀ ಹೊಡೆತ ಬಿದ್ದಂತಾಗಿದೆ.