Home Crime ಶರವಣ ಭವನ ಹೋಟೆಲ್ ಸಾಮ್ರಾಜ್ಯದ ಒಡೆಯ ಬದುಕನ್ನ ಬರ್ಬಾದ್ ಮಾಡಿಕೊಂಡ ಇಂಟರೆಸ್ಟಿಂಗ್ ಸ್ಟೋರಿ..! ಕೆನ್ನೆ ಮೇಲಿನ...

ಶರವಣ ಭವನ ಹೋಟೆಲ್ ಸಾಮ್ರಾಜ್ಯದ ಒಡೆಯ ಬದುಕನ್ನ ಬರ್ಬಾದ್ ಮಾಡಿಕೊಂಡ ಇಂಟರೆಸ್ಟಿಂಗ್ ಸ್ಟೋರಿ..! ಕೆನ್ನೆ ಮೇಲಿನ ಮಚ್ಚೆ ಹುಡುಗಿಗಾಗಿ ಶುರುಮಾಡಿದ್ದ ಹುಡುಕಾಟ..ಜ್ಯೋತಿಷಿಯ ಮಾತು ನಂಬಿ ಆಗಿದ್ದ ಎರಡನೇ ಮದುವೆ..

4882
0
SHARE

ಶರವಣ ಭವನ ಈ ಹೆಸರು ಭಾರತೀಯ ಭೋಜನ ಪ್ರಿಯರಿಗೆಲ್ಲಾ ಗೊತ್ತಿರೋ ಹೆಸರು. ಸೌತ್ ಇಂಡಿಯನ್ ಫುಡ್ ಗೆ ದೇಶ ವಿದೇಶಗಲ್ಲಿ ಹೆಸರುವಾಸಿ ಈ ಹೋಟೆಲ್. ಶರವಣ ಭವನ ಇವತ್ತಿಗೆ 47 ರಾಷ್ಟ್ರಗಳಲ್ಲಿ ತನ್ನ ಬ್ರಾಂಚ್ ಗಳನ್ನ ಹೊಂದಿದೆ, ದೇಶದ ಪ್ರತಿಷ್ಠಿತ ನಗರಗಳಲ್ಲಿಯು ಶರವಣ ಭವನದ ಶಾಖೆಗಳಿವೆ, ಇಲ್ಲಿನ ರುಚಿಯನ್ನ ಬಲ್ಲವನೇ ಬಲ್ಲ. ಕೇವಲ ತನ್ನ ಸ್ವಾದಿಷ್ಟ ರುಚಿಯಿಂದಲೇ ಒಂದು ಬ್ರಾಂಡ್ ಆಗಿ ಬೆಳದ ಹೋಟೆಲ್ ಇದು. ಇವತ್ತಿನ ಬೃಹತ್ ಸಾಮ್ರಾಜ್ಯ ಶರವಣ ಭವನದ ಸಂಸ್ಥಾಪಕನೇ ಪಿ.ರಾಜ್ ಗೋಪಾಲ್.  1981ರಲ್ಲಿ ರಾಜ್ ಗೋಪಾಲ್  ಕಾಮಾಕ್ಷಿ ಭವನ ಅನ್ನೋ ನಷ್ಟದಲ್ಲಿದ್ದ ಹೋಟೆಲ್ ಒಂದನ್ನ ಖರೀದಿಸಿದ್ರು. ನಂತ್ರ ಆ ಹೋಟೆಲ್ ಅನ್ನ ಮಾರ್ಪಾಡು ಮಾಡಿ ಶರವಣ ಭವನ ಅಂತ ನಾಮಕರಣ ಮಾಡಿ ತಮ್ಮ ಉದ್ದಿಮೆಯನ್ನ ಸ್ಟಾರ್ಟ್ ಮಾಡಿದ್ರು.

ಅಲ್ಲಿಂದಲೇ ಶುರುವಾಗಿದ್ದು ನೋಡಿ ಶರವಣ ಅನ್ನೋ ಯಶಸ್ವಿ ಉದ್ಯಮಿಯ ಮಿಂಚಿನ ಓಟ. ರಾಜ್ ಗೋಪಾಲ್ ತಮಿಳುನಾಡಿನ ಸಣ್ಣ ಹಳ್ಳಿಯಲ್ಲಿ ಹುಟ್ಟಿದ್ದ. ನಂತ್ರ ವಯಸ್ಕನಾದ ಬಳಿಕ ತನ್ನದೇ ಒಂದು ಪ್ರಾವಿಜನ್ ಸ್ಟೋರ್ ಅನ್ನ ಪ್ರಾರಂಭಿಸಿದ್ದ. ಅದೇ ಟೈಂಲನಲ್ಲಿ ಇದ್ದಕ್ಕಿದ್ದ ಹಾಗೆ ಶರವಣ ಭವನವನ್ನ ಆರಂಭಿಸೋ ಯೋಚನೆ ಬಂದಿತ್ತು. ಹೀಗಾಗಿ ತನ್ನ ಹೋಟೆಲ್ ಒಂದನ್ನ ಪ್ರಾರಂಭಿಸಿದ್ರು. ರಾಜ್ ಗೋಪಾಲ್ ಕೈಯಲ್ಲಿ ಆಗ ಅದೃಷ್ಠದ ರೇಖೆ ಮೇಲ್ಮುಖವಾಗಿ ಇತ್ತು ಅನ್ಸುತ್ತೆ. ಅವರ ಹೋಟೆಲ್ ನಲ್ಲಿ ಊಟ ಮಾಡಿದವರ ಹೊಟ್ಟೆ ತಣಿದದ್ದು ಮಾತ್ರವಲ್ಲ. ಅಲ್ಲಿನ ಊಟದಲ್ಲಿದ್ದ ರುಚಿ ಒಂದು ಬಗೆಯ ಹೊಸತನ್ನ ನೀಡಿತ್ತು. ಆ ರುಚಿಯನ್ನ ಆಸ್ವಾದಿಸಿದವರು ಮತ್ತೆ ಮತ್ತೆ ಬಂದು ಅಲ್ಲಿ ತಿನ್ನೋದಕ್ಕೆ ಶುರುಮಾಡಿದ್ರು.

ಆ ರುಚಿಯ ಓಘ ಹೇಗಿತ್ತು ಅಂದ್ರೆ ಕೆಲವೇ ಕೆಲವು ದಿನಗಳಲ್ಲಿ ಶರವಣ ಭವನ ದೊಡ್ಡ ಬ್ರಾಂಡ್ ಆಗಿ ಹೋಗಿತ್ತು. ಅಲ್ಲಿ ಇಡ್ಲಿ ವಡಾ, ದೋಸೆಯನ್ನ ತಿನ್ನೋದಕ್ಕೆ ಜನ ಕ್ಯೂ ನಿಂತು ಕೊಳ್ಳೋದಕ್ಕೆ ಶುರುಮಾಡಿದ್ರು. ಇಲ್ಲೊಂದು ಮಾತು ಹೇಳಬೇಕು ವೀಕ್ಷಕರೇ ನಿಮಗೆ ಒಂದು ಬಾಳೆದೆಲೆ ಹರಿದರೆ ಮಧ್ಯೆ ಸಿಗುವ ಕಡ್ಡಿಯಿಂದ ಟೇಬಲ್ ಒರೆಸುತ್ತಿದ್ದ ತಿರುನಲ್ವೇಲಿಯ ಮಾಮೂಲಿ ಆರೆ ಅನಕ್ಷರಸ್ಥ ಹುಡುಗ ರಾಜಗೋಪಾಲ್ ಹೋಟೆಲ್ ಇಂಡಸ್ಟ್ರಿಗೆ ಕೈಯಿರಿಸಿದಾಗ ಅದರ ಪ್ರತಿ ಇಂಚನ್ನೂ ತಿಳಿದುಕೊಂಡಿದ್ದ. ಪ್ರತಿಯೊಂದರಲ್ಲೂ ಪರ್ ಫೆಕ್ಷನ್. ಗ್ರಾಹಕರಿಗೆ ರುಚಿ ಬೇಕು. ಶುಚಿ ಬೇಕು. ಕಾರ್ಮಿಕರಿಗೆ ಅನುಕೂಲ ಬೇಕು. ಮಾಲೀಕನಿಗೆ ಲಾಭ ಬೇಕು. ಕೊಡುವವರಿಗೆ, ಕೊಡುತ್ತೇನೆಂದ ದಿನ ಹಣ ಕಟ್ಟಿ ಬಿಡಬೇಕು. ವ್ಯಾಪಾರದಲ್ಲಿ ಕೇವಲ ಒಳ್ಳೆಯತನ ಸಾಲದು. ಕರಾರುವಾಕ್ಕಾಗಿ ಆರ್ಥಿಕ ನಿಷ್ಠೆ ಬೇಕು. ಅದನ್ನು ಪಾಲಿಸದಿದ್ದರೆ ಅವನು ಎಂಥ ಜಾಣನಾದರೂ ವ್ಯವಹಾರದಲ್ಲಿ ಸೋಲುತ್ತಾನೆ. ಇದು ಆತನ ವ್ಯಾಪಾರದ ಸೀಕ್ರೆಟ್ ಆಗಿತ್ತು.

ಆತ ಜೀವನದಲ್ಲಿ ಯಶಸ್ಸು ಅನ್ನೋದನ್ನ ನೋಡುವ ಮೊದಲೆ ಒಂದು ಮದುವೆಯನ್ನ ಆಗಿದ್ದ. ಆಕೆಯ ಹೆಸರು ವೆಳ್ಳಿಯಮ್ಮ ಅಂತ. ಆಕೆ ಗಂಡನ ಆರಂಭದ ದಿನಗಳ ಸೋಲು. ಗೆಲುವು, ಕಷ್ಟ ಸುಖ ಎಲ್ಲವನ್ನ ಕಂಡಿದ್ಲು. ಆದ್ರೆ ಆಕೆ ಆತನ ಪತ್ನಿಯಾಗಿ ಎಲ್ಲಾ ಸಂದರ್ಭದಲ್ಲೂ ಜೊತೆಯಾಗಿ ನಿಂತಿದ್ಲು. ಅಲ್ಲದೆ ಗಂಡ ಏನು ಮಾಡಿದ್ರು ಅದಕ್ಕೊಂದು ಪ್ರತಿ ಮಾತನ್ನ ಮಾತನಾಡ್ತಿರಲಿಲ್ಲ. ಹೀಗೆ ಆತನಿಗೆ ಹೋಟೆಲ್ ವ್ಯಾಪಾರ ಕೈ ಹಿಡಿಯೋದಕ್ಕೆ ಶುರುವಾಯ್ತು. ಅದ್ರಲ್ಲಿ ಹಣ ಕೈ ತುಂಬಾ ಸೇರೋದಕ್ಕೆ ಶುರುವಾಯ್ತು. ಇದೇ ಟೈಂನಲ್ಲಿ ಆತನಿಗೆ ಒಬ್ಬ ಜ್ಯೋತಿಷಿಯ ಪರಿಚಯವಾಗುತ್ತೆ. ಆತ ನೀನು ಮುಂದೊಂದು ದಿನ ನಿನ್ನದೆ ಸಾಮ್ರಾಜ್ಯವನ್ನ ಕಟ್ಟುತ್ತಿಯಾ, ನಿನಗೆ ಅದೃಷ್ಠದ ಎಲ್ಲಾ ಡೋರ್ ಗಳು ಓಪನ್ ಆಗಿದೆ ಅಂತ ಹೇಳಿದ್ದ. ಅದರ ಜೊತೆಗೆ ನಿನ್ನ ಯಶಸ್ಸು ಅಶ್ವಮೇಧ ಯಾಗದ ಕುದುರೆ ರೀತಿ ಓಡ ಬೇಕಾದ್ರೆ ನೀನು ಎರಡನೇ ಮದುವೆಯಾಗು ಅಂತ ಹೇಳ್ತಾನೆ.

ಕಾಲಕ್ಕೆ ತಕ್ಕಂತೆ ಒಗ್ಗಿಕೊಂಡು ಹೋದವನು ಎಲ್ಲಿಯೂ ಸೋಲೋದಿಲ್ಲ. ಹೊಸ ಹರಿವಿನ ನೀರಿನಲ್ಲೂ ಬದುಕೋದನ್ನ ರೂಢಿಸಿಕೊಂಡವನು ಅಷ್ಟು ಸುಲಭಕ್ಕೆ ಎಲ್ಲಿಯು ನೆಲಕ್ಕಚ್ಚೋದಿಲ್ಲ. ಇಲ್ಲೂ ಕೂಡಾ ಹಾಗೆ ಆಗಿತ್ತು. ಅವನಿಗೆ ಜ್ಯೋತಿಷಿ ಎರಡನೆ ಮದುವೆಯಾಗು ಅಂತ ಹೇಳಿದಾಗ ಆತ ಮರು ಮಾತಿಲ್ಲದೆ ಶ್ರೀಂತಿಕೆಯ ಬದುಕನ್ನ ಅರಸಿ ಕೃತಿಕಾ ಅನ್ನೋ ಹುಡುಗಿಯನ್ನ ಮದುವೆಯಾಗಿಬಿಟ್ಟಿದ್ದ.  ಕೃತಿಕಾ ಅದ್ಯಾವಾಗ ಇವನ ಕೈಯಿಂದ ತಾಳಿಕಟ್ಟಿಸಿಕೊಂಡಳೋ ಇವನ ಅದೃಷ್ಟಕ್ಕೆ ಕೊನೆಯೇ ಇಲ್ಲದಂತಾಗಿ ಹೋಗಿತ್ತು. ಅಷ್ಟೊತ್ತಿಗೆ ಶರವಣ ಭವನ ಅನ್ನೋ ಒಂದು ಬ್ರಾಂಡ್ ತಲೆ ಎತ್ತಿ ನಿಂತಿತ್ತು. ಅಲ್ಲದೆ ಅವನು ಹೋಟೆಲ್ ಉದ್ಯಮದಲ್ಲಿ ಅವತ್ತು ಆಗ್ತಿದ್ದ ಬದಲಾವಣೆಗೆ ತನ್ನನ್ನ ತೊಡಗಿಸಿಕೊಂಡಿದ್ದ. ಆಗ ಫಾಸ್ಟ್ ಫುಡ್ ಚಲಾವಣೆಗೆ ಬರೋದಕ್ಕೆ ಶುರುವಾಗಿತ್ತು. ಅದಕ್ಕೂ ಶರವಣ ಭವನ ತೆರೆದುಕೊಳ್ಳುವಂತೆ ಮಾಡಿದ್ದ.

ತಮಿಳುನಾಡಿನ ಸಣ್ಣ ಊರನಲ್ಲಿ ಶುರುವಾದ ಇವನ ಹೋಟೆಲ್ ಈಗ ಸಾಲು ಸಾಲಾಗಿ ಬೆಳೆದು ನಿಂತಿತ್ತು. ದೇಶವನ್ನ ದಾಟಿ ಅದು ವಿದೇಶದಲ್ಲೂ ತನ್ನ ಬ್ರಾಂಚ್ ಗಳನ್ನ ಓಪನ್  ಮಾಡಿತ್ತು. ಕೃತಿಕಾ ಅನ್ನೋ ಹೆಣ್ಣು ಅವನ ಪಾಲಿಗೆ ಲಕ್ಷ್ಮಿಯೇ ಆಗಿ ಹೋಗಿದ್ಲು. ಸಿಂಗಾಪುರ ಸೇರಿ ಸೌಥ್ ಈಸ್ಟ್ ಏಷಿಯಾಗಳಲ್ಲೂ ಶರವಣ ಭವನ ಕಿಲ ಕಿಲ ಅಂತ ನಗೋದಕ್ಕೆ ಶುರುಮಾಡಿತ್ತು. ಅಲ್ಲದೆ ಕೃತಿಕಾ ಸಾಮಾನ್ಯ ಜೀವನದಿಂದ ದೊಡ್ಡ ಶ್ರೀಮಂತಿಕೆಯ ಜೀವನವನ್ನ ನೋಡಿದ್ಲು. ಆದ್ರೆ ನೆಲದ ಮೇಲಿನ ಚಾಪೆಯ ಬದುಕನ್ನ ನೋಡಿದ್ದ ಮೊದಲ ಪತ್ನಿ ಈಗಲೂ ಹಾಗೆಯೇ ಗಂಡನ ಜೊತೆ ಒಬ್ಬಳಾಗಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬದುಕು ಸಾಗಹಾಕ್ತಿದ್ಲು. ಆದ್ರೆ ಶ್ರೀಮಂತಿಕೆಯ ಗತ್ತಿನಲ್ಲಿ ಮರೆಯುತ್ತಿದ್ದ ಕೃತಿಕಾಗೆ ನಮ್ಮ ಬದುಕು ಮತ್ತೊಂದು ದಿಕ್ಕಿನತ್ತ ಹೊರಳುತ್ತೆ ಅನ್ನೋದು ಗೊತ್ತೇ ಇರಲಿಲ್ಲ.

ಕೃತಿಕಾ ಮತ್ತು ಶ್ರೀಮಂತಿಕೆ ರಾಜ್ ಗೋಪಾಲ್ ಗೆ ಸಾಕಾಗಿತ್ತು. ಆತನಿಗೆ ಒಂದು ಹೆಣ್ಣಿನ ಸುಖದ ಬದಲಾಗಿ ಮತ್ತೊಬ್ಬಳು ಸಿಕ್ಕಿದ್ಲು. ಅಲ್ಲದೆ ಆಸ್ತಿಯು ಅನಂತವಾಗಿ ಹೋಗಿತ್ತು.  ಆದ್ರೆ ಇದರ ಮಧ್ಯೆ ಮತ್ತೆ  ಇವನಿಗೆ ಜ್ಯೋತಿಷಿಯ ನೆನಪಾಗಿತ್ತು. ಆತ ಸಿಂಗಾಪುರ್ ನಿಂದ ಒಮ್ಮೆ ಬರುವಾಗ ಫೋನ್ ಮಾಡಿದ್ದ. ಆಗ ಆತ ತನ್ನ ಮನೆಗೆ ಕರೆಸಿಕೊಂಡು ಇವನ ಬದುಕು ಹಾಳಾಗುವ ಇನ್ನೊಂದು ಐಡಿಯಾ ಕೊಟ್ಟಿದ್ದ. ಅದೇಂದ್ರೆ ಮತ್ತೊಂದು ಮದುವೆಯಾಗೋದರ ಬಗ್ಗೆ. ಲಕ್ಷದ ಲೆಕ್ಕದ ವ್ಯಾಪಾರ ಮಾಡುವ ನಿನಗೆ ಕೋಟಿ ಕೈಗೆ ಸಿಗಬೇಕು ಅಂತ ಅಂದ್ರೆ ನೀನು ಇನ್ನೊಂದು ಮದುವೆಯಾಗಬೇಕು. ಇನ್ನು ನಿನ್ನ ಬದುಕಲ್ಲಿ ಬರೋ ಹೆಣ್ಣು ನಿನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿ ಬಿಡ್ತಾಳೆ ಅಂತ ಹೇಳ್ತಾನೆ. ಇಲ್ಲಿವರೆಗೂ ಆ ಜ್ಯೋತಿಷಿ ಹೇಳಿದ ಹಾಗೆಯೇ ಆಗಿತ್ತು. ಅವನು ಹೇಳಿದ ಪ್ರತಿಯೊಂದ ಪದವು ಅವನ ಲೈಫ್ ನಲ್ಲಿ ನಡೆದು ಹೋಗಿತ್ತು.

ಅಷ್ಠೇ ಅಲ್ಲದೆ ಆ ಜ್ಯೋತಿಷಿ ಇಂತಹದ್ದೇ ಹುಡುಗಿಯನ್ನ ಮದುವೆಯಾಗಬೇಕು ಅಂತ ಹೇಳಿದ್ದ. ಆ ಹುಡುಗಿಯ ಬಲ ಕೆನ್ನೆಯಲ್ಲಿ ಕಪ್ಪು ಮಚ್ಚೆಯಿರಬೇಕು ಹಾಗೂ ಆಕೆಗೆ ಇಪ್ಪತ್ತು ವಯಸ್ಸು ಆಗಿರಬೇಕು ಅಂತ ಹೇಳಿ ಸುಮ್ಮನೆ ನಕ್ಕಿರ್ತಾನೆ. ತಕ್ಷಣವೇ ರಾಜ್ ಗೋಪಾಲ್ ತನ್ನ ಆಪ್ತರಿಗೆ ಅಂತಹದ್ದೊಂದು ಹುಡುಗಿಯನ್ನ ಹುಡುಕೋದಕ್ಕೆ ಹೇಳ್ತಾನೆ, ಯಾಕಂದ್ರೆ ಅವನಿಗೆ ಗೊತ್ತಿತ್ತು. ತನ್ನ ವಯಸ್ಸಿಗೆ ಅಲ್ಲದಿದ್ರು ನನ್ನಲ್ಲಿರೋ ಆಸ್ತಿಗಾದ್ರು ಹುಡುಗಿಯೊಬ್ಬಳು ನನ್ನನ್ನ ಮದುವೆಯಾಗ್ತಾಳೆ ಅನ್ನೋದು ಅದಕ್ಕೆ ಅವನು ಹಿಂದು ಮುಂದು ನೋಡದೆ ಹುಡುಗಿಯೊಬ್ಬಳನ್ನ ನೋಡೋದಕ್ಕೆ ಹೇಳ್ತಾನೆ. ಇದೇ ಸಮಯದಲ್ಲಿ ಆತನ ಆಪ್ತ ಇವನ ಹೋಟೆಲ್ ನಲ್ಲಿ ಮ್ಯಾನೇಜರ್ ಆಗಿದ್ದ ರಾಮಸ್ವಾಮಿ ಅನ್ನೋನ ಮಗಳು ಜೀವ ಜ್ಯೋತಿಗೆ ಈಗ ಇಪ್ಪತ್ತು ವರ್ಷ. ಅಲ್ಲದೆ ಆಕೆಯ ಬಲಗಡೆ ಕೆನ್ನೆಯಲ್ಲಿ ಮಚ್ಚೆಯಿದೆ ಅಂತ ಹೇಳಿದ್ದ. ಇಷ್ಟು ಸಾಕಾಗಿದ್ದು ಆತನಿಗೆ ತನ್ನ ಮನದಿಂಗಿತವನ್ನ ರಾಮಸ್ವಾಮಿಯ ಹತ್ತಿರ ಹೇಳ್ತಾನೆ. ಆದ್ರೆ ರಾಮಸ್ವಾಮಿ ಇವನಿಗೆ ಹೆಣ್ಣು ಕೊಡೋದಕ್ಕೆ ಒಪ್ಪೋದಿಲ್ಲ. ಅಲ್ಲದೆ ಜಿವ ಜ್ಯೋತಿಯು ಕೂಡಾ ಇವನ ಶ್ರೀಮಂತಿಕೆಯ ಆಫರ್ ಅನ್ನ ತಿರಸ್ಕರಿಬಿಡ್ತಾಳೆ. ಅಲ್ಲದೆ ಅವಳು ಶಾಂತಕುಮಾರ್ ನನ್ನ ಗುಟ್ಟಾಗಿ ವರಿಸಿಬಿಡ್ತಾಳೆ. ಅಲ್ಲಿಗೆ ಅವನ ಆಶಾಗೋಪುರ ಕಳಚಿ ಬೀಳುತ್ತೆ. ಆದ್ರೆ ರಾಜಗೋಪಾಲ್ ಆಕೆಯನ್ನ ಅಲ್ಲಿಗೆ ಬಿಡೋದೆ ಇಲ್ಲ.

ತನ್ನ ಇಷ್ಟಾರ್ಥ ಸಿದ್ದಿ ಸಾಧನೆಗೆ ಆಕೆ ಬೇಕೇ ಬೇಕು ಅಂತ ಹಠಕ್ಕೆ ಬಿದ್ದು ಬಿಡ್ತಾನೆ. ಇಲ್ಲಿಂದಲೇ ನೋಡಿ ಶರವಣ ಭವನ ಅನ್ನೋ ದೊಡ್ಡ ಬ್ರಾಂಡ್ ನ ಅಡಿಪಾಯ ಅಲುಗಾಡೋದಕ್ಕೆ ಶುರುವಾಗುತ್ತೆ. ಯಾಕಂದ್ರೆ ಇಲ್ಲಿಂದ ಮುಂದಾಗೋದೆಲ್ಲವು ದುರಂತಗಳ ಸರಮಾಲೆ. ಅವನಿಗೆ ಹೆಣ್ಣು ಮತ್ತು ಮಣ್ಣು ಒಲಿದಿತ್ತು. ಆದ್ರು ಆತ ಇನ್ನೊಂದು ಹೆಣ್ಣಿನ ಹಿಂದೆ ಬಿದ್ದಿದ್ದ. ಜೀವ ಜ್ಯೋತಿ ಮದುವೆಯಾದ್ರು ಕೂಡಾ ಆತನನ್ನ ಬಿಟ್ಟು ಬಾ ಅಂತ ಪೀಡಿಸೋದಕ್ಕೆ ಶುರುಮಾಡ್ತಾನೆ. ಆಕೆಯನ್ನ ಹೇಗಾದ್ರು ದಕ್ಕಿಸಿಕೊಳ್ಳಲೇಬೇಕು ಅನ್ನೋ ಹಠಕ್ಕೆ ಬಿದ್ದು ಬಿಡ್ತಾನೆ. ತನ್ನ ಬದುಕಿಗೆ ತಾನೇ ಕೊಳ್ಳಿಯಿಟ್ಟುಕೊಳ್ಳೋದರ ಜೊತೆ ಜೀವ ಜ್ಯೋತಿಯ ಬಾಳಿನ ಜ್ಯೋತಿಯನ್ನ ಕೂಡಾ ಆರಿಸೋದಕ್ಕೆ ಮುಂದಾಗ್ತಾನೆ.

ಅದ್ಯಾವಾಗ ಜೀವ ಜ್ಯೋತಿ ಮತ್ತು ಶಾಂತಕುಮಾರ್ ಮದುವೆಯಾದ್ರೋ ಆಗಲಾದ್ರು ಆತ ಸುಮ್ಮನಿರಬಹುದಿತ್ತು. ಆದ್ರೆ ಜ್ಯೋತಿಷಿಯ ಬಂಗಾರದ ಬದುಕಿನ ಮಾತಿತ್ತಲ್ವಾ ಅದು ಸುಮ್ಮನೆ ಕೂರೋದಕ್ಕೆ ಬಿಡಲಿಲ್ಲ. ಹೇಗಾದ್ರು ಈ ಹೆಣ್ಣನ್ನ ಒಲಿಸಿಕೊಂಡು ಬಿಡೋಣ ಅಂತ ಹಠಕ್ಕೆ ಬಿದ್ದಿದ್ದ. ಅದಕ್ಕಾಗಿ ಗಂಡನನ್ನ ಬಿಟ್ಟು ಬರೋದಕ್ಕೆ ಆತ ಆಕೆಗೆ ಹೇಳಿದ್ದ. ಆದ್ರೆ ಆಕೆ  ಇವನ ಮಾತಿಗೆ ಸೊಪ್ಪು ಹಾಕಲೇ ಇಲ್ಲ. ನಂತ್ರ ಶಾಂತಕುಮಾರ್ ನನ್ನ ಹೇಗಾದ್ರು ಮಾಡಿ ಕಿಡ್ನಾಪ್ ಮಾಡಬೇಕು ಅಂತ ತನ್ನ ಸಹಚರರಿಗೆ ಹೇಳಿದ್ದ. ಇದರ ಬಗ್ಗೆ ಮಾಹಿತಿ ಅರಿತ ಅವ್ರು ಪೊಲೀಸ್ ಠಾಣೆಗೆ ಹೋಗಿ ದೂರನ್ನ ಕೊಟ್ಟಿದ್ರು. ಆದ್ರೆ ಅದರ ಹೊರತಾಗಿಯು ಶಾಂತಕುಮಾರ್ ನನ್ನ ರಾಜಗೋಪಾಲ್ ಕಿಡ್ನಾಪ್ ಮಾಡಿಸಿದ್ದ.

ಹೀಗೆ ಕಿಡ್ನಾಪ್ ಮಾಡಿಸಿದ ನಂತ್ರ ಆತನನ್ನ ಅವತ್ತೇ ಕೊಲೆ ಮಾಡಿದ್ರು, ನಂತ್ರ ಕೊಡೈಕೆನಲ್ ಬಳಿ ಎಸೆದು ಹೋಗಿದ್ರು. ಕೆಲವು ದಿನಗಳ ನಂತ್ರ ಕೊಳೆತ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿತ್ತು,  ನಂತ್ರ ರಾಜಗೋಪಾಲ್ ಬಾಡಿಗೆ ಬಂಟರು ಪೊಲೀಸ್ರಿಗೆ ಶರಣಾಗಿದ್ರು. ಅಲ್ಲದೆ ರಾಜ್ ಗೋಪಾಲ್ ಕೈ ಕೂಡಾ ಬೇಡಿ ಬಿದ್ದಿತ್ತು. 2003ರಲ್ಲಿ ಬೇಲ್ ಮೇಲೆ ಹೊರಗೆ ಬಂದ ಮೇಲು ಆತ ಜೀವ ಜ್ಯೋತಿಗೆ ಮದುವೆಯಾಗುವಂತೆ ಆಫರ್ ಕೊಟ್ಟಿದ್ದ. ಆರು ಲಕ್ಷ ರೂಪಾಯಿ ಹಣ ಮತ್ತು ಚಿನ್ನಾಭರಣಗಳನ್ನ ಕೊಡ್ತೀನಿ ಅಂತ ಹೇಳಿದ್ದ. ಆದ್ರೆ ಆಕೆ ಒಫ್ಪಲಿಲ್ಲ. ನಂತ್ರ ಮತ್ತೆ ಆಕೆಯನ್ನ ಅಪಹರಣ ಮಾಡೋದಾಗಿ ಬೆದರಿಕೆ ಹಾಕಿದ್ದ. ಇದೇ ಕೇಸ್ ನಲ್ಲಿ ಮತ್ತೆ ಜೈಲನ್ನ ಸೇರಿದ್ದ. ಹೀಗೆ ಆ ಹೆಣ್ಣನ್ನ ದಕ್ಕಿಸಿಕೊಳ್ಳೋದಕ್ಕೆ ಆತ ಮಾಡಬಾರದನ್ನ ಮಾಡುತ್ತಲೇ ಬಂದ.

ಶಾಂತಕುಮಾರ್ ಕೊಲೆ ಕೇಸ್ ನಲ್ಲಿ ಕೆಳ ಹಂತದ ನ್ಯಾಯಾಲಯ 10 ವರ್ಷಗಳ  ಶಿಕ್ಷೆಯನ್ನ ನೀಡಿತ್ತು. ಆದ್ರೆ ಆತ ಅದನ್ನ ಮದ್ರಾಸ್ ಹೈ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದ. ಆಗ ಹೈಕೋರ್ಟ್ ಕೂಡಾ ಆತನಿಗೆ ಜೀವವಾಧಿ ಶಿಕ್ಷೆಯನ್ನ ನೀಡಿತ್ತು. ಅಲ್ಲದೆ ಕೆಳ ಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನ ಎತ್ತಿ ಹಿಡಿದಿತ್ತು. ಆಗಲೂ ಆತ ಹೈಕೋರ್ಟ್ ನೀಡಿದ್ದ ತೀರ್ಪನ್ನ ಮರುಪರಿಶೀಲನೆ ಮಾಡುವಂತೆ ಸರ್ವೋಚ್ಛ ನ್ಯಾಯಲಯಕ್ಕೆ ಹೋಗಿದ್ದ. ಆದ್ರೆ ಅಲ್ಲೂ ನ್ಯಾಯಾಧೀಶರು ಇವನ ಮನವಿಗೆ ಸೊಪ್ಪು ಹಾಕಲಿಲ್ಲ. ನ್ಯಾಯಾಲಯದ ಮುಂದೆ ಬಂದು ಹಾಜರಾಗುವಂತೆ ತಾಕೀತು ಮಾಡಿತ್ತು. ಹೀಗಾಗಿ ಆತನಿಗೆ ಇನ್ನು ಬೇರೆಯ ದಾರಿಯೇ ಇರಲಿಲ್ಲ. ಹೀಗಾಗಿ ಮುಖಕ್ಕೆ ಆಕ್ಸಿಜನ್ ಹಾಕ್ಕೊಂಡು ಆಂಬ್ಯುಲೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ.

ರಾಜಗೋಪಾಲ್ ಗೆ ಈಗ ಜೀವನದ ಸಂಧ್ಯಾಕಾಲ. ಆ ಜೀವನವನ್ನ ಆತ ಜೈಲಲ್ಲೇ ಕಳೆಯಬೇಕು. ಸಾಯೋವರೆಗೂ ಜೈಲೇ ಆತನಿಗೆ ಆತ್ಮಸಂಗಾತಿ. ಹಣ ಬಲದಿಂದ ಎಷ್ಟೇ ಹೋರಾಟ ನಡೆಸಿದ್ರು ಆತನಿಗೆ ದಕ್ಕಿತ್ತು ಕೇವಲ ಜೈಲು ಶಿಕ್ಷೆ ಮಾತ್ರ. ಆಕೆಯನ್ನ ಮದುವೆಯಾದ್ರೆ ಬಂಗಾರ ಬದುಕು ಸಿಗ್ತಿತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಸುಮ್ಮನಿದ್ದು ಬಿಟ್ಟಿದ್ರೆ ಅವರ ದೊಡ್ಡ ಸಾಮ್ರಾಜ್ಯಕ್ಕೆ ಒಡೆಯನಾಗಿ ಇತಿಹಾಸವಾಗ್ತಿದ್ದ. ಈಗ ಎಷ್ಟೇ ಹಣ ಅಂತಸ್ತು ಇದ್ರು ಅದನ್ನ ಜೈಲಲ್ಲಿ ಅನುಭವಿಸೋದಕ್ಕೆ ಸಾಧ್ಯವೇ ಇಲ್ಲ. ಅಲ್ಲಿ ಆತನೊಬ್ಬ ಸಾಮಾನ್ಯ ಖೈದಿ. ತಪ್ಪು ಮಾಡಿದಕ್ಕೆ ಶಿಕ್ಷೆಯನ್ನ ಅನುಭವಿಸಲೇ ಬೇಕು. ಅದನ್ನ ಆತ ಮಾಡ್ತಿದ್ದಾನೆ ಅಷ್ಟೆ.ರಾಜಗೋಪಾಲ್ ಗೆ ಯಾವುದು ಕಡಿಮೆಯಿರಲಿಲ್ಲ. ಕಿರಾಣಿ ಅಂಗಡಿಯಿಟ್ಟವನು ಹೋಟೆಲ್ ಉದ್ಯಮದಲ್ಲಿ ತನ್ನದೇ ಆದ ಛಾಪನ್ನ ಹೊಂದಿದ್ದ. ಅಲ್ಲದೆ ಇಬ್ಬರು ಹೆಂಡ್ತಿಯರು ಮಕ್ಕಳು ಎಲ್ಲವೂ ಇತ್ತು.  ಇವತ್ತಿಗೂ ಶರವಣ ಭವನ ಅನ್ನೋ ಬ್ರಾಂಡ್ ಕುಸಿದು ಹೋಗಿಲ್ಲ. ಅವನು ಜನರಿಗೆ ಬೇಕಾಗಿದ್ದ ಸ್ವಾದಿಷ್ಟ ತಿನಿಸನ್ನ ಕೊಟ್ಟಿದ್ದ. ಅಲ್ಲಿ ಕೆಲಸ ಮಾಡೋ ಕೆಲಸಗಾರರಿಗೆ ಒಂದೊಳ್ಳೆ ಸಂಬಳದ ಜೊತೆಗೆ ಅಗತ್ಯ ಸೌಲಭ್ಯಗಳನ್ನ ನೀಡಿದ್ದ. ಹೀಗಾಗಿ ಅವನು ಯಶಸ್ವಿ ಉದ್ಯಮಿಯಾಗಿದ್ದ. ಆದ್ರೆ ಇನ್ನು ಬೇಕು ಅನ್ನೋ ಅತಿಯಾಸೆಯಿದೆಯಲ್ಲ ಅದು ಅವನ ಬದುಕನ್ನ ನುಂಗಿ ನೀರು ಕುಡಿದು ಬಿಟ್ಟಿತ್ತು.

ಯಾವುದಕ್ಕೆ ಆಗಲಿ ಒಂದು ಲಿಮಿಟ್ ಅನ್ನೋದು ಇರುತ್ತೆ. ಇವನ ಯಶಸ್ಸಿಗೂ ಅಂತಹದ್ದೇ ಲಿಮಿಟ್ ಅನ್ನೋದು ಇತ್ತು. ಜ್ಯೋತಿಷಿ ಅವತ್ತು ಮತ್ತಷ್ಟು ಶ್ರೀಮಂತಿಕೆಯ ಆಸೆ ಹುಟ್ಟಿಸಿದಾಗ ನನಗೆ ಭಗವಂತ ಇಷ್ಟು ಕೊಟ್ಟಿದ್ದಾನೆ ಅಷ್ಟೇ ಸಾಕು ಅಂತ ಸುಮ್ಮನಾಗಿದ್ರೆ ಅವನ ಬದುಕು ಬೇರೆ ರೀತಿಯಲ್ಲೇ ಬದಲಾಗಿ ಹೋಗಿತ್ತು. ಆದ್ರೆ ಇವನ ಬದುಕಲ್ಲಿ ಹೀಗೆಯೇ ಆಗಬೇಕು ಅಂತ ವಿಧಿ ಲಿಖಿತವಾಗಿತ್ತೋ ಅದಕ್ಕೆ ಆತ ಜೈಲಲ್ಲಿ ಸಾಯುವ ಸ್ಥಿತಿ ಬಂದಿದೆ. ಮನುಷ್ಯನ ಪ್ರಯತ್ನಗಳೇನೇ ಇದ್ರು ವಿಧಿಯಾಟದ ಮುಂದೆ ಎಲ್ಲವೂ ನಗಣ್ಯ ಅನ್ನೋದು ಮತ್ತೆ ಸಾಬೀತಾಗಿದೆ.

LEAVE A REPLY

Please enter your comment!
Please enter your name here