Home Crime ಶಿವಮೊಗ್ಗೆಯಲ್ಲಿ ಮೊಳಗಿದೆ ರಣಕಹಳೆ..! ಇನ್ನೆಷ್ಟು ಹೆಣಗಳನ್ನ ನುಂಗುತ್ತೆ ತುಂಗೆಯ ಒಡಲು..!? ಯಾರಿಗೆ ದಕ್ಕಲಿದೆ ಶಿವಮೊಗ್ಗದ ಭೂಗತ...

ಶಿವಮೊಗ್ಗೆಯಲ್ಲಿ ಮೊಳಗಿದೆ ರಣಕಹಳೆ..! ಇನ್ನೆಷ್ಟು ಹೆಣಗಳನ್ನ ನುಂಗುತ್ತೆ ತುಂಗೆಯ ಒಡಲು..!? ಯಾರಿಗೆ ದಕ್ಕಲಿದೆ ಶಿವಮೊಗ್ಗದ ಭೂಗತ ಲೋಕ ..? ಹೆಬ್ಬೆಟ್ಟು V/s ಫಿಂಗರ್ ಲೆಸ್ (ಸಿಂಹಾಸನಕ್ಕಾಗಿ ಕಿತ್ತಾಟ)

3136
0
SHARE

ಶಿವಮೊಗ್ಗ ಈ ಹೆಸರನ್ನ ಕೇಳಿದ್ರೆ ಸಾಕು ಈ ಊರಿನ ಬಗ್ಗೆ ಗೊತ್ತಿರೋರರ ಮೈ ಜುಂ ಅನ್ನುತ್ತೆ. ಎಲ್ಲಾ ಊರಿಗೆ ಒಂದೊಂದು ವೈವಿಧ್ಯತೆ ಇದ್ರೆ, ಇಲ್ಲಿ ಮಣ್ಣು ಹಾಗಲ್ಲ. ಇಲ್ಲಿಗೆ ಒಮ್ಮೆ ಕಾಲಿಟ್ರೆ ಇಡೀ ಕರ್ನಾಟಕವನ್ನೇ ಒಮ್ಮೆ ಸುತ್ತಿಬಂದ ಅನುಭವವಾಗುತ್ತೆ. ಶಿವಮೊಗ್ಗ ಕೇವಲ ಮಲೆಗಳ ನಾಡಲ್ಲ. ಬರೀ ಮಳೆ ನೀರು ಯಥೇಚ್ಛವಾಗಿ ಹರಿಯೋ ಸ್ಥಳವೂ ಅಲ್ಲ. ಗಿರಿಕಂದರ, ಜಲಪಾತಗಳು, ಸಮೃದ್ಧ ಅರಣ್ಯರಾಶಿ ಭೌಗೋಳಿಕವಾಗಿ ಈ ಊರನ್ನ ಶ್ರೀಮಂತವಾಗಿಸಿದ್ರೆ, ಇಲ್ಲಿನ ಮಣ್ಣು ಚಾರಿತ್ರಿಕವಾಗಿ, ಶೈಕ್ಷಣಿಕವಾಗಿ, ಸಾಹಿತ್ಯಕವಾಗಿ ಸಾಧಕರನ್ನ ನೀಡಿದ ಹೆಮ್ಮೆ ಹೊಂದಿದೆ.

ಶಿವಮೊಗ್ಗ ಇಲ್ಲಿ ರಾಷ್ಟ್ರವೇ ಮೆಚ್ಚಿದ ಕವಿಗಳನ್ನ ನೀಡಿದೆ. ಮಲೆನಾಡ ಮಡಿಲಲ್ಲಿ ಐತಿಹಾಸಿಕವಾಗಿ ಉಳಿದ ಹೋರಾಟಗಳಿಗೆ ಲೆಕ್ಕವೇ ಇಲ್ಲ.ಯಾವ ನೆಲದಲ್ಲಿ ಏನು ನಡೆಯಬಾರದಿತ್ತೋ ಆ ಘಟನೆಗಳು ನಡೆಯೋದಕ್ಕೆ ಶುರುವಾಗಿದೆ. ಹೌದು ಈ ಕಾದಾಟವೇ ಅಂಡರ್ ವರ್ಲ್ಡ್ ಫೈಟ್.ಶಿವಮೊಗ್ಗ ಭೌಗೋಳಿಕವಾಗಿ ಎಷ್ಟು ಶ್ರೀಮಂತವೋ ಅಷ್ಟೇ ಆರ್ಥಿವಾಗಿಯೂ ಶ್ರೀಮಂತವಾಗಿದೆ. ಇಲ್ಲಿ ಸರ್ಕಾರಕ್ಕೆ ಕಟ್ಟೋ ಟ್ಯಾಕ್ಸ್ ಗಿಂತ ರೌಡಿಗಳಿಗೆ ಕೊಡೋ ಮಾಮೂಲಿಯೇ ಜಾಸ್ತಿಯಿದೆ. ಹೀಗಾಗಿ ಈ ನೆಲದ ಮೇಲಿನ ಸಾರ್ವಭೌಮತ್ವಕ್ಕಾಗಿ ಇಬ್ಬರು ಘಟಾನುಘಟಿ ರೌಡಿಗಳು ಕಿತ್ತಾಡ್ತಿದ್ದಾರೆ. ಅದ್ರಲ್ಲಿ ಒಬ್ಬ ವಿದೇಶದಲ್ಲಿರೋ ಹೆಬ್ಬೆಟ್ಟು ಮಂಜ. ಇನ್ನೊಬ್ಬ ಫಿಂಗರ್ ಲೆಸ್ ಕೊರಂಗು ಕೃಷ್ಣ.

ಇವರಿಬ್ಬರ ಕಿತ್ತಾಟ, ಇವರಿಬ್ಬರ ನಡುವಿನ ದ್ವೇಷ ಮಲೆನಾಡಿನ ನೆಮ್ಮದಿಯನ್ನ ಕಿತ್ಕೊಂಡಿದೆ. ಆದ್ರೆ ಈ ಬಾರಿ ಇಬ್ಬರು ನಾನು ಮೊದಲು ನುಗ್ತೀನಿ ನಾನು ಮೊದಲು ನುಗ್ತೀನಿ ಅಂತ ಸದ್ದಿಲ್ಲದೆ ಸ್ಕೆತ್ ಹಾಕ್ತಾ ಕೂತಿದ್ದಾರೆ. ಇವರಿಬ್ಬರ ಸಮರದಲ್ಲಿ ಮೊದಲು ಬಲಿಯಾಗೋ ಸೈನಿಕ ಯಾರು ಅನ್ನೋದು ಗುಟ್ಟಾಗಿ ಉಳಿದಿದೆ.ಶಿವಮೊಗ್ಗದ ರಕ್ತ ಚರಿತ್ರೆಯಲ್ಲಿ ಕೊತ್ವಾಲ್ ರಾಮಚಂದ್ರನಿಂದ ಹಿಡಿದು ಶಿವಮೊಗ್ಗದ ರೌಡಿ ಪ್ರಕಾಶ,ಲವಕುಶ,ತಮಿಳ್ ಕುಮಾರ,ನಸ್ರು,ಬಚ್ಚೆ, ತುಕಾರಾಂ, ತುಳಸಿರಾಮ್, ಮೆಂಟಲ್ ಸೀನಾ. ಹೀಗೆ ಹಲವಾರು ಮಂದಿ ರೌಡಿಗಳು ಹಗೆ ದ್ವೇಷಕ್ಕೆ ನೆತ್ತರು ಹರಿಸಿದ್ದಾರೆ. ಇಲ್ಲಿ ಯಾವಾಗ್ಲೂ ಒಬ್ಬರಿಗೊಬ್ರು ಸ್ಕೆಚ್ ಹಾಕ್ತಾನೇ ಇರ್ತಾರೆ. ಅದರಲ್ಲಿ ಒಂದಲ್ಲಾ ಒಂದು  ವಿಕೇಟೇ ಬೀಳ್ತಾನೆ ಇರುತ್ತೆ. ಹೀಗೆ ಒಂದೊಂದು ಕೊಲೆ ಮುಂದಿನ ಮತ್ತೊಂದು ಕೊಲೆಗೆ ವೇದಿಕೆಯಾಗುತ್ತೆ. ಇತ್ತೀಚೆಗೆ ಮತ್ತೊಂದು ಕೊಲೆಗೆ ಪ್ರೇರೇಪಣೆ ನೀಡಿದ್ದು ಮಾರ್ಕೆಟ್ ಗಿರಿ ಮರ್ಡರ್.

ಮಾರ್ಕೇಟ್ ಗಿರಿ ಕೊಲೆ ಮಾಡಿದ್ದು..ನಟೋರಿಯಸ್ ರೌಡಿ ಲೋಕಿ ಅಂಡ್ ಗ್ಯಾಂಗ್ ಅನ್ನೋದು ಜಗತ್ತಿಗೆ ಗೊತ್ತಿರೋ ಸತ್ಯ. ಈ ಕೊಲೆಯ ಹಿಂದೆ ಕಾಣದ ಕೈಗಳು ವ್ಯವಸ್ಥಿತವಾಗಿ ಕೆಲಸ ಮಾಡಿರೋದು ಈಗ ಗುಟ್ಟಾಗಿ ಉಳಿದಿಲ್ಲ. ಮಾರ್ಕೆಟ್ ಗಿರಿ  ಕೊಲೆ ಪ್ರಕರಣದಲ್ಲಿ ಇಬ್ಬರು ನಟೋರಿಯಸ್ ರೌಡಿಗಳ ಹೆಸರುಗಳು ಹೆಚ್ಚು ಸದ್ದು ಮಾಡ್ತಿವೆ. ಅದು ಬೇರ್ಯಾರು ಅಲ್ಲ. ನಟೋರಿಯಸ್ ರೌಡಿ ಹೆಬ್ಬೆಟ್ಟು ಮಂಜ ಮತ್ತು ಆತನ ಎದುರಾಳಿ ಕೊರಂಗು ಕೃಷ್ಣ. ಅರೆ ಮಾರ್ಕೇಟ್ ಗಿರಿ ಕೊಲೆಗೂ ಈ ರೌಡಿಗಳಿಗೂ ಏನ್ ನಂಟು ಅಂತಿರಾ. ಇದೇ ನೋಡಿ ಇವತ್ತು ಶಿವಮೊಗ್ಗ ಮತ್ತೆ ಕಂಪಿಸೋದಕ್ಕೆ ಕಾರಣವಾಗಿದ್ದು.

2011 ರಲ್ಲಿ ರೌಡಿ ತುಳಸಿರಾಂ ನನ್ನು ಮೆಂಟಲ್ ಸೀನಾ ಅನ್ನೋ ರೌಡಿ ಸವಾರ್ ಲೈನ್ ರಸ್ತೆಯ ದೇವಸ್ಥಾನದ ಬಳಿ ಖಾರದಪುಡಿ ಎರಚಿ ಕೊಲೆ ಮಾಡಿದ್ದ. ಕೊಲೆಯಾದ ತುಳಸಿ ರಾಂ ,ಲೋಕಿಯ ಅಣ್ಣ. ಲೋಕಿ ಸದ್ಯಕ್ಕೆ ಶಿವಮೊಗ್ಗದ ಅಪರಾಧ ಜಗತ್ತಿನಲ್ಲಿ ಬೆಳೆಯುತ್ತಿರುವ ನಟೋರಿಸ್ ರೌಡಿ. ಅಣ್ಣನ ಪ್ರತಿಕಾರಕ್ಕೆ ಇದುವರೆಗೂ ಈತ ಮೂವರನ್ನ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈತನ ಮಚ್ಚಿಗೆ ತಲೆಕೊಟ್ಟವರು ಮೆಂಟಲ್ ಸೀನಾ, ಮೋಟಿ ವೆಂಕಟೇಶ್ ಹಾಗೂ ಮಾರ್ಕೇಟ್ ಗಿರಿ.

ಅಣ್ಣ ತುಳಸಿ ರಾಂ ಕೊಲೆಯನ್ನು ಮೆಂಟಲ್ ಸೀನಾ ಮಾಡಿದ್ರೂ. ಅದಕ್ಕೆ ಕಾರಣ ಸಂಬಂಧಿಯಾದ ಮಾರ್ಕೇಟ್ ಗಿರಿ ಅನ್ನೋದು ಲೋಕಿ ಕುಟುಂಬದ ಆರೋಪ. ಶಿವಮೊಗ್ಗದ ಶಿವಪ್ಪನಾಯಕ ಮಳಿಗೆ ಸ್ಥಳಾಂತರದ ವಿಚಾರದಲ್ಲಿ ತುಳಸಿಂರಾಮ್ ಗೂ ಮತ್ತು ಗಿರಿ ನಡುವೆ ಕೌಟುಂಬಿಕ ದ್ವೇಷ ಮನೆ ಮಾಡಿತ್ತು. ತುಳಸಿ ರಾಂ ಗೆ ಸಿಗಬೇಕಾದ ಪ್ಲವರ್ ಸ್ಟಾಲ್ ನ್ನು ಗಿರಿ ಹೆಚ್ಚು ಬಿಡ್ ಮಾಡಿ ಪಡೆದುಕೊಂಡಿದ್ದ. ಇದು ಎರಡು ಕುಟುಂಬ ದ್ವೇಷವನ್ನು ಇಮ್ಮಡಿಗೊಳಿಸಿತ್ತು. 2011 ರಲ್ಲಿ ರೌಡಿ ತುಳಸಿ ರಾಮ್ ಶಿವಮೊಗ್ಗದ ಸವಾರ್ ಲೈನ್ ರಸ್ತೆಯಲ್ಲಿ ಭೀಕರವಾಗಿ ಕೊಲೆಯಾದ. ಹಳೆ ವೈಷಮ್ಯದ ಹಿನ್ನಲೆಯಲ್ಲಿ ರೌಡಿ ಮೆಂಟಲ್ ಸೀನಾ ಮತ್ತು ಗ್ಯಾಂಗ್, ತುಳಸಿರಾಮ್ ನನ್ನು ಕೊಲೆ ಮಾಡಿತ್ತು. ಮೆಂಟಲ್ ಸೀನಾಗೂ ತುಳಸಿಂರಾಮ್ ಗೂ ಹಳೆ ದ್ವೇಷ ಇರೋದು ಕೂಡ ಎಲ್ಲರಿಗೂ ಗೊತ್ತಿತ್ತು. ಆದರೆ ತುಳಸಿರಾಂ ಕೊಲೆ ಮಾಡಿದ ಮೆಂಟಲ್ ಸೀನಾಗೆ ಕೋರ್ಟ್, ಜೈಲು, ಬೇಲು ಅಂತಾ ಸಹಕಾರ ನೀಡ್ದೋನು ಗಿರಿ. ಇದು ಗಿರಿ ಲೋಕಿಯ ದೃಷ್ಠಿಯಲ್ಲಿ ಟಾರ್ಗೆಟ್ ಆಗೋದಕ್ಕೆ ಕಾರಣವಾಗಿತ್ತು.

ಗಿರಿಗೆ ಅವತ್ತು ಟೈಂ ಮುಗಿದಿತ್ತು ಅಂತ ಕಾಣಿಸುತ್ತೆ. ಅಂದ್ರೆ 11-09-18 ರ ರಾತ್ರಿ ಶಿವಮೊಗ್ಗ ನಗರದ ಸೂರ್ಯ ಕಂಪರ್ಟ್ ಬಳಿ ಸ್ನೇಹಿತ ಮೋಸೆಸ್ ನ ಕಾರಿನಲ್ಲಿ ಗಿರಿ ಅಪರೂಪಕ್ಕೆ ಎಣ್ಣೆ ಹಾಕುವಾಗ್ಲೆ,ಲೋಕಿ ತಂಡ ಮಚ್ಚುಲಾಂಗುಗಳೊಂದಿಗೆ ಎರಗಿಬಿದ್ದಿತ್ತು.  ಕ್ಷಣಾರ್ಧದಲ್ಲಿಯೇ ಗಿರಿಯನ್ನು ಕಾರಿನಿಂದ ಎದ್ದೇಳಲು ಬಿಡದೇ ಮಚ್ಚುಗಳಿಂದ ಭೀಕರವಾಗಿ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿತ್ತು. ಎಲ್ಲಾ ದ್ವೇಷ ಹಗೆಯನ್ನು, ಮರೆತು ಲೋಕಿ ಜೊತೆ ರಾಜೀಯಾಗಿದ್ದ ಗಿರಿ ಲೋಕಿಯ ಮಚ್ಚಿನೇಟಿಗೆ ಕೊಲೆಯಾಗಲೇ ಬೇಕಾಯ್ತು. ಅವತ್ತು ಮಾರ್ಕೇಟ್ ಗಿರಿ ಕೊಲೆಗೆ ಇಡೀ ಸಮುದಾಯ ಕಣ್ಣೀರು ಹಾಕಿತ್ತು.

ಅಣ್ಣನ ಸಾವನ್ನು ದುಡ್ಡಿನಿಂದ ಅಳೆಯಾಕಾಗುತ್ತಾ ಅಂತ ಲೋಕಿ ಈ ಮರ್ಡರ್ ಕೇಸ್ ಗೆ ಒಂದು ಷರಾ ಬರ್ತಿದ್ದ. ಹೀಗೆ ತನ್ನ ಅಣ್ಣನ ಕೊಲೆಗೆ ಕಾರಣವಾಗಿದ್ದ ಮೂರು ಜನರನ್ನ ಲೋಕಿ ಬಡಿದು ಬಾಯಿಗೆ ಹಾಕ್ಕೊಂಡಿದ್ದ. ಆದ್ರೆ ಲೋಕಿ ಎಲ್ಲೂ ಪೊಲೀಸ್ರಿಗೆ ಸಿಗಲೇ ಇಲ್ಲ.ಲೋಕಿ ಇವತ್ತು ಫೇಮಸ್ ರೌಡಿ. ಅಲ್ಲದೆ ಪೊಲೀಸ್ರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಮತ್ತು ಯಾವಾಗ ಯಾರನ್ನ ಮಟ್ಟ ಹಾಕಬೇಕು ಅನ್ನೋ ತಿಳಿದಿರೋ ಬುದ್ಧಿವಂತ. ಹೀಗಾಗಿ ಖಾಕಿ ಕಣ್ಣಿಗೆ ಲೋಕಿ ಮತ್ತೆ ಕಾಣಿಸಲೇ ಇಲ್ಲ. ಈತ ಮೊಬೈಲ್ ಬಳಸ್ತಿಲ್ಲ. ಬ್ಯಾಂಕ್ ಅಕೌಂಟ್ ನಿಂದ ಹಣ ಡ್ರಾ ಮಾಡ್ತಿಲ್ಲ. ಶಿವಮೊಗ್ಗದ ಯಾವ ಹುಡುಗ್ರ ಜೊತೆ ಸಂಪರ್ಕವಿಲ್ಲ. ಯಾಕಂದ್ರೆ ಲೋಕಿ ಲೀಸ್ಟ್ ನಲ್ಲಿ ಇನ್ನು ಎರಡು ಹೆಸರಿದೆ. ಅದನ್ನ ಟಾಸ್ಕ್ ಅನ್ನ ಮುಗಿಸಿದೇ ಲೋಕಿ ಸೆರೆಂಡರ್ ಆಗೋ ಮಾತಿಲ್ಲ ಅಂತಿದ್ದಾನೆ. ಅಲ್ಲದೆ ಅದಕ್ಕಾಗಿಯೇ ಭೂಗತವಾಗಿದ್ದುಕೊಂಡೇ ಲೋಕಿ ಪ್ಲಾನ್ ಮಾಡ್ತಿದ್ದಾನೆ.

ಅಣ್ಣನ ಸಾವಿಗೆ ಕಾರಣರಾದವರನ್ನು ಲೆಕ್ಕ ಸಮೇತ ಮುಗಿಸಲು ಲೋಕಿ  ಯಾವಾಗ್ಲೂ ಅಕ್ಯುರೇಟ್ ಸ್ಕೆಚ್ ಹಾಕ್ತಾನೆ. ಆತ ಕೊಲೆ ಮಾಡಿದ, ಮೆಂಟಲ್ ಸೀನಾ, ಮೋಟಿ ವೆಂಕಟೇಶ್ ಮತ್ತು ಮಾರ್ಕೇಟ್ ಗಿರಿ ಮೂರು ಪ್ರಕರಣಗಳನ್ನು ನೋಡಿದ್ರೆ ಈತ ಎಲ್ಲರನ್ನೂ ಯಾಮಾರಿಯಿಸಿ ಕೊಲೆ ಮಾಡಿರೋದು ಗೊತ್ತಾಗುತ್ತೆ. ಮೊದಲು ಪೊಲೀಸ್ರಿಗಂತೂ ಒಂದು ಸುಳಿವು ಇರೋದಿಲ್ಲ. ಎರಡನೆದಾಗಿ, ಕೊಲೆಯಾಗೋ ವ್ಯಕ್ತಿಗಂತೂ ಅದರ ಮುನ್ಸೂಚನೆಯೂ ಗೊತ್ತಿರಲ್ಲ. ಮಚ್ಚು ನೋಡೋ ಹೊತ್ತಿಗೆ ನೆತ್ತರು ಹರಿಸಿ ಕೊಲೆ ಮಾಡಿದ್ದಾನೆ ಲೋಕಿ. ಈ ರೀತಿ ಪಕ್ಕಾ ಸ್ಕೆಚ್ ಹಾಕೋ ಲೋಕಿ ಕೋಕಾ ಕೇಸ್ ನಲ್ಲಿ ಬೆಂಗಳೂರು ಜೈಲಿನಲ್ಲಿರೋ ವಾಗ್ಲೇ ಮೊದಲು ಬೇಲ್ ಪಡೆಯುದಕ್ಕೆ ಮುಂದಾಗಿದಾನೆ. ಹಾಗೆ ನೋಡಿದ್ರೆ ಕೋಕಾ ಕಾಯ್ದೆಯಡಿ ಜೈಲಿನಲ್ಲಿದ್ದ ಲೋಕಿ ತನ್ನ ಮೇಲಿನ ಕೇಸುಗಳ ವಿಚಾರಣೆ ಮುಗಿಯುವವರೆಗೂ ಜೈಲಿನಲ್ಲಿರಬೇಕಿತ್ತು.ಆದ್ರೆ ಕಳೆದ ಮೂರು ತಿಂಗಳ ಹಿಂದೆ ನ್ಯಾಯಾಲಯದಲ್ಲಿ ಕೋಕಾ ಕೇಸಿಗೆ ಜಾಮೀನು ಪಡೆಯುವಲ್ಲಿ ಲೋಕಿ ಯಶಸ್ವಿಯಾಗಿದ್ದ.

ಲೋಕಿ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಮನೆಯೊಂದನ್ನು ಬಾಡಿಗೆ ಪಡೆದಿದ್ದಾನೆ. ಅಲ್ಲಿಂದಲೇ ಮಾರ್ಕೇಟ್ ಗಿರಿಯನ್ನು ಮುಗಿಸಲು  ಪ್ಲಾನ್ ರೂಪಿಸಿದ್ದ. ಈ ಹಿಂದೆ ಮೆಂಟಲ್ ಸೀನಾ ಮತ್ತು ಮೋಟಿ ವೆಂಕಟೇಶ್ ಕೊಲೆ ಪ್ರಕರಣದಲ್ಲಿ ಲೋಕಿ ತಪ್ಪಿಸಿಕೊಳ್ಳಲು ಹಣಕಾಸಿನ ತೊಂದರೆ ಎದುರಿಸಿದ್ದ. ಆದರೆ ಈ ಬಾರಿ ಮಾರ್ಕೇಟ್ ಗಿರಿ ಕೊಲೆ ಹೇಗೆ ಮಾಡಬೇಕು. ಯಾವ ಹುಡುಗರನ್ನ ಬಳಸಿಕೊಳ್ಳಬೇಕು. ಕೊಲೆ ಮಾಡಿದ ನಂತರ ಹೇಗೆಲ್ಲಾ ಎಸ್ಕೇಪ್ ಆಗಬೇಕು.ಪೈನಾನ್ಸ್ ಹೇಗೆ ಕ್ರೂಡಿಕರಿಸಿಕೊಳ್ಳಬೇಕು,ಪ್ರೇಯಸಿ ,ಕುಟುಂಬಸ್ಥರು, ಸ್ನೇಹಿತರಿಂದ ಯಾವ ಸಂಪರ್ಕವಿಲ್ಲದೆ ಹೇಗೆ ದೂರವಿರಬೇಕು ಅನ್ನೋದನ್ನು ಮೂರು ತಿಂಗಳ ಹಿಂದೆ ಪ್ಲಾನ್ ಮಾಡಿದ್ದ.

ಶಿವಮೊಗ್ಗದ ಹುಡುಗರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದೆ ಜೈಲಿನಲ್ಲಿದ್ದಾಗ ಪರಿಚಯವಾಗಿದ್ದ ಕಡೂರಿನ ಹುಡುಗ್ರನ್ನ ರೆಡಿ ಮಾಡ್ದ. ಲೋಕಿಗೆ ರೌಡಿಸಂ ಕೇಸಿನಲ್ಲಿ ಜೈಲಿನಲ್ಲಿರುವ ರಾಜ್ಯದ ಎಲ್ಲಾ ಕಾರಾಗೃಹದ ರೌಡಿಗಳ ಲೀಸ್ಟ್ ಇದೆ. ಕೇಸಿನಲ್ಲಿ ಸಿಕ್ಕಿಕೊಂಡು ಕೋರ್ಟ್, ಜೈಲು, ಅಂತಾ ಓಡಾಡುವ ಹುಡುಗ್ರ ಮೈಂಡ್ ರೀಡ್ ಮಾಡೋ ಲೋಕಿ ಅಂತಹ ಹುಡುಗರಿಗೆ ಹಣಕಾಸಿನ ಆಸೆ ತೋರಿಸಿ  ಪೀಲ್ಡ್ ಗೆ ರಿಎಂಟ್ರಿ ಕೊಡಿಸ್ತಾನೆ. ಕಡೂರು ಹುಡುಗರಿಗೂ ಅದೇ ರೀತಿ ಮೈಂಡ್ ವಾಷ್ ಮಾಡಿ.ಗಿರಿ ಕೊಲೆಗೆ ರೆಡಿ ಮಾಡಿದ್ದ.

ವಿಪರ್ಸಾಯ ಎಂದರೆ ಮಾರ್ಕೇಟ್ ಗಿರಿ ಕೊಲೆ ಪ್ರಕರಣದಲ್ಲಿ ಆತನ ಎರಡನೇ ಪತ್ನಿಯ ಮೊದಲ ಗಂಡ ಪ್ರಕಾಶನೇ ನೇರವಾಗಿ ಭಾಗಿಯಾಗಿದ್ದ. ಹಾಗೆ ನೋಡಿದ್ರೆ ಪ್ರಕಾಶ್ ಮತ್ತು ಗಿರೀಶ್ ಸ್ನೇಹಿತರು. ಪ್ರಕಾಶ್ ,ಮಾರ್ಕೇಟ್ ಗಿರಿಯ ರಿಯಲ್ ಎಸ್ಟೇಟ್ ವ್ಯವಹಾರ ನೋಡಿಕೊಳ್ತಿದ್ದ . ಪ್ರಕಾಶ್ ಗೆ ಸುಂದರ ಮಡದಿ ಇದ್ಲು. ತನ್ನ ಬಳಿಯೇ ಕೆಲಸಕ್ಕಿದ್ದ ಪ್ರಕಾಶ್ ಗೆ ಅಲ್ಲಿ ಹೋಗು ಇಲ್ಲಿ ಹೋಗು ಅಂತಾ ಗಿರೀಶ್ ಊರೂರಿಗೆ ಕಳಿಸ್ತಿದ್ದ.  ನಿಧಾನವಾಗಿ ಪ್ರಕಾಶ್ ಪತ್ನಿಯ ಸ್ನೇಹ ಬೆಳಿಸಿದ ಗಿರೀಶ್ ಆಕೆಯನ್ನು ಪಟಾಯಿಸಿ, ಚಿಕ್ಕಮಗಳೂರಿನಲ್ಲಿ ಮನೆ ಮಾಡಿಟ್ಟಿದ್ದ. ಆಗ್ಗಾಗ್ಗೆ ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ಹೋಗಿಬರ್ತಿದ್ದ. ಸ್ನೇಹಿತನೇ ನನ್ನ ಪತ್ನಿಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಬೇರೆಡೆ ಇಟ್ಟಿರೋದು ಪ್ರಕಾಶ್ ನನ್ನು ಕೆರಳಿಸಿತ್ತು. ಆದರೆ ಎಲ್ಲಾ ರೀತಿಯಲ್ಲಿ ಬಲಶಾಲಿಯಾಗಿರೋ ಮಾರ್ಕೇಟ್ ಗಿರಿಯನ್ನು ಎದುರಿಸಲು ಪ್ರಕಾಶ್ ಗೆ ಸಾಧ್ಯವಾಗಿರಲಿಲ್ಲ. ಗಿರಿಯ ಎಲ್ಲಾ ಪರ್ಸನಲ್ ಮ್ಯಾಟರ್ ಲೋಕಿಗೆ ಗೊತ್ತಿತ್ತು. ತನ್ನ ಸ್ಕೆಚ್ ನಲ್ಲಿ ಪ್ರಕಾಶ್ ಗೂ ಒಂದು ಪಾಲು ಇಟ್ಟಿದ್ದ ಲೋಕಿ. ನಂತ್ರ ಪ್ರಕಾಶ್ ಗೆ ಧೈರ್ಯ ತುಂಬಿ ತನ್ನ ಸ್ಕೆಚ್ ಗೆ ಬಳಸಿಕೊಂಡಿದ್ದ.

ಲೋಕಿಗೆ ಅಣ್ಣನ ಕೊಲೆಗೆ ಗಿರಿ ಕಾರಣವಾದ್ರೆ, ಪ್ರಕಾಶ್ ಗೆ ಪತ್ನಿಯನ್ನು ಗಿರಿ ಪಟಾಯಿಸಿದ ಸಿಟ್ಟಿಗೆ ಇಬ್ಬರು ಒಂದಾದ್ರು. ಅಂದುಕೊಂಡಂತೆ ಲೋಕಿ ಸ್ಕೆಚ್ ಹಾಕಿದ ರೀತಿ ಮಾರ್ಕೇಟ್ ಗಿರಿಯನ್ನು 11-09-18 ರ ರಾತ್ರಿ ಶಿವಮೊಗ್ಗದ ಸೂರ್ಯ ಕಂಪರ್ಟ್ ಬಳಿ ಕೊಲೆ ಮಾಡಿ ಪರಾರಿಯಾಯ್ತು. ಆದರೆ ಗಿರಿ ವಿರುದ್ಧ ಕತ್ತಿ ಮಸೆಯುತ್ತಿದ್ದ ಪ್ರಕಾಶ್ ಸೇರಿದಂತೆ ಕಡೂರಿನ ಒಟ್ಟು ಏಳು ಮಂದಿ ಈಗ ಅಂದರ್ ಆಗಿದ್ದಾರೆ.ಆದ್ರೆ ಮಾರ್ಕೇಟ್ ಗಿರಿ ಕೊಲೆಯಾದ ನಂತ್ರ, ಲೋಕಿ ಶಿವಮೊಗ್ಗ ಬಿಟ್ಟವನು ಇದುವರೆಗೂ ಆತನ ಸುಳಿವು ಸಿಕ್ಕಿಲ್ಲ.ಆತನ ಸಹಚರರು ಸಿಕ್ಕಿಬಿದ್ರೂ ಲೋಕಿ ಮಾತ್ರ ಪೊಲೀಸರಿಗೆ ಸಣ್ಣ ಕ್ಲೂ ಕೂಡ ಕೊಡದೆ ಅಜ್ಞಾತ ಸ್ಥಳ ಸೇರಿಕೊಂಡಿದ್ದಾನೆ. ಇದು ಪೊಲೀಸ್ರಿಗೂ ಕೂಡ ದೊಡ್ಡ ತಲೆನೋವಾಗಿದೆ. ಪೊಲೀಸರ ಕೈಗೆ ಆರೋಪಿ ಹೇಗೆಲ್ಲಾ ಸಿಕ್ಕಿಬೀಳಬಹುದೆಂಬ ಅರಿವು ಇರೋ ಲೋಕಿ ಈ ಬಾರಿ ಕ್ರೈಂ ಅಟೆಂಪ್ಟ್ ಮಾಡುವಾಗ ಎಲ್ಲಾ ಸಿದ್ದತೆ ಮಾಡಿಕೊಂಡೇ ಪೊಲೀಸರಿಂದ ತಪ್ಪಿಸಿಕೊಂಡಿದ್ದಾನೆ.ಡಿಸಿಬಿ ಇನ್ಸ್ ಪೆಕ್ಟರ್ ಕುಮಾರ್ ತಂಡ ಈವರೆಗೂ 6000 ಸಾವಿರ ಕಿಲೋಮೀಟರ್ ಕ್ರಮಿಸಿ ಹಲವರನ್ನು ವಿಚಾರಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಬೇಸಿಕ್ ಪೊಲೀಸಿಂಗ್ ಮಾಡಿದ್ರೂ ಲೋಕಿ ಮಾತ್ರ ನಾಪತ್ತೆಯಾಗಿದ್ದಾನೆ.

ಲೋಕಿಗೆ ಪೊಲೀಸರನ್ನ ಎದುರಿಸುವಷ್ಟು ಧೈರ್ಯ ಬಂದಿದ್ದಾದ್ರು ಎಲ್ಲಿಂದ ಅಂತಾ ಕೆದಕ್ತಾ ಹೋದ್ರೆ, ಅದರ ನೆರಳು ಕೊರಂಗು ಕೃಷ್ಣನನ್ನ ಬೊಟ್ಟು ಮಾಡಿ ತೋರ್ಸುತ್ತೆ. ಮಾರ್ಕೆಟ್ ಗಿರಿ ಕೊಲೆಯಿಂದ ಪೊಲೀಸರಿಗೆ ಶಿವಮೊಗ್ಗದ ನಟೋರಿಯಸ್ ರೌಡಿ ಗ್ಯಾಂಗ್ ಗಳ ಸೀರಿಸ್ ಮರ್ಡರ್ ಗೆ ಸ್ಕೆಚ್ ಹಾಕಿರೋ ಬಹಿರಂಗ ಸತ್ಯ ಹೊರಬಂದಿದೆ.ಲೋಕಿ ಗ್ಯಾಂಗ್ ನಲ್ಲಿ ಬಂದಿತರಾದ ಆರೋಪಿಗಳು ನೀಡಿರುವ ಹೇಳಿಕೆಗಳು ಸುಳಿವುಗಳನ್ನು ಗಮನಸಿದ್ರೆ ಶಿವಮೊಗ್ಗದಲ್ಲಿ ಮತ್ತೆ ನೆತ್ತರ ಕೋಡಿ ಹರಿಯೋದಂತೂ ನಿಜ. ಹೌದು ಶಿವಮೊಗ್ಗ ಮೂಲದ ನಟೋರಿಯಸ್ ರೌಡಿ ಹೆಬ್ಬೆಟ್ ಮಂಜ ಹಾಗು ಕೊರಂಗು ಕೃಷ್ಣ ನಡುವಿನ ದ್ವೇಷಕ್ಕೆ ಮತ್ತೆ ಶಿವಮೊಗ್ಗ ಜಿಲ್ಲೆ ವೇದಿಕೆಯಾಗಿದೆ.

 

ಮಾರ್ಕೆಟ್ ಗಿರಿ ಕೊಲೆಯ ಹಿಂದೆ ಕೊರಂಗು ಕೃಷ್ಣನ ಪಾತ್ರ ಇಲ್ಲದಿದ್ದರೂ ಲೋಕಿಯ ದ್ವೇಷದ ಪ್ರತಿಕಾರಕ್ಕೆ ಕೊರಂಗು ಸಾಥ್ ನೀಡಿದ್ದಾನೆ. ನೀನು ನಿನ್ನ ವೈಯಕ್ತಿಕ ಕೆಲಸ ಮುಗಿಸು ಎಲ್ಲಾ ನೆರವನ್ನ ನಾನು ಕೊಡ್ತಿನಿ ಅನ್ನೋ ಭರವಸೆ ನೀಡಿದ್ದಾನಂತೆ. ನಾನು ಹೇಳಿದ ಇಬ್ಬರನ್ನು ನೀನು ಎತ್ತಿದ್ರೆ ನಿನ್ನ ಲೈಪ್ ಸೆಟಲ್ ಮೆಂಟ್ ಮಾಡ್ತಿನಿ ಅಂತಾ ಲೋಕಿಗೆ ವಿಶ್ವಾಸ ತುಂಬಿದ್ದಾನಂತೆ ಕೊರಂಗು.ಅಷ್ಟಕ್ಕೂ ಕೊರಂಗು ಕೃಷ್ಣ ಮತ್ತು ಹೆಬ್ಬೆಟ್ ಮಂಜನ ದ್ವೇಷಕ್ಕೆ ಶಿವಮೊಗ್ಗ ನೆಲವೇ ರಣಕಣವಾಗಿರೋದಕ್ಕೆ ಕಾರಣ ಕೂಡ ಇದೆ.ಮುಲಾಮನ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿರುವ ಹೆಬ್ಬೆಟ್ ಮಂಜ ಸದ್ಯಕ್ಕೆ ಕೊರಂಗು ಕೃಷ್ಣನಿಗೆ ದೊಡ್ಡ ವೈರಿ. ಇಬ್ಬರು ಪ್ರತಿಕಾರಕ್ಕಾಗಿ ಪರಸ್ಪರ ಹೊಂಚು ಹಾಕುತ್ತಿದ್ದಾರೆ. ಹೆಬ್ಬೆಟ್ಟು ಮಲೇಷ್ಯಾದಲ್ಲಿ ಕೂತು ಶಿವಮೊಗ್ಗ ಮತ್ತು ಬೆಂಗಳೂರು ರೌಡಿಸಂ ನಿಯಂತ್ರಿಸುತ್ತಿದ್ದಾನೆ.

 

ಕಳೆದ ಹತ್ತು ವರ್ಷಗಳ ಹಿಂದೆ ಚಿತ್ರದುರ್ಗದ ಹಿರಿಯೂರಿನ ಡಾಬಾ ಬಳಿ ಕೊರಂಗು ಟೀಂ ಮೇಲೆ ಹೆಬ್ಬೆಟ್ಟು ಮಂಜ ತನ್ನ ಸಹಚರರೊಂದಿಗೆ ಸೇರಿ ಗುಂಡಿನ ದಾಳಿ ನಡೆಸಿದ್ದ. ಈ ಸಂದರ್ಭದಲ್ಲಿ ಕೊರಂಗು ಕೈಬೆರಳು ತುಂಡಾಗಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದ.ನಂತರ ಬೇರೆ ಪ್ರಕರಣದಲ್ಲಿ ಬೆಂಗಳೂರು ಧಾರವಾಡ ಜೈಲಿನಲ್ಲಿದ್ದ ಹೆಬ್ಬೆಟ್ಚು ಶಿವಮೊಗ್ಗದ ಜೈಲಿಗೆ ಸ್ಥಳಾಂತರಗೊಂಡಿದ್ದ,ಇದೇ ಸಮಯ ಕಾಯುತ್ತಿದ್ದ ಕೊರಂಗು ಶಿವಮೊಗ್ಗದ ಜೈಲಿನಲ್ಲಿಯೇ ಹೆಬ್ಬೆಟ್ಟು ಮಂಜನನ್ನು ಮುಗಿಸಲು ಸ್ಕೆಚ್ ಹಾಕಿದ್ದ. ಅದಕ್ಕೆ ಆತ ಶಿವಮೊಗ್ಗದ ಖಡಕ್ ರೌಡಿಯ ಹುಡುಕಾಟದಲ್ಲಿದ್ದ. ನಂತರ ಕೊರಂಗುಗೆ ಸಿಕ್ಕವನೇ ಸ್ಪಾಟ್ ನಾಗ.

2007 ರಲ್ಲಿ ಹೆಬ್ಬೆಟ್ಟು ಮಂಜ ಶಿವಮೊಗ್ಗ ನ್ಯಾಯಾಲಯದಲ್ಲಿ ವಿಚಾರಣೆ ಮುಗಿಸಿಕೊಂಡು ಪುನಃ ಶಿವಮೊಗ್ಗ ಜೈಲಿಗೆ ಸಂಜೆ ವಾಪಸ್ಸಾದ ಸಂದರ್ಭದಲ್ಲಿ ಸ್ಪಾಟ್ ನಾಗ ಹೆಬ್ಬೆಟ್ಟು ಮಂಜನ ಮೇಲೆ ಎರಗಿದ್ದ. ಆ ಸಂದರ್ಭದಲ್ಲಿ ಜೈಲು ರಣರಂಗವಾಗಿತ್ತು. ಇದು ಹೆಬ್ಬೆಟ್ ಮಂಜನನ್ನು ಕೆರಳಿಸಿತ್ತು, ಜೈಲಿನಲ್ಲಿಯೇ ನನಗೆ ಮುಗಿಸಲು ಕೊರಂಗು ಡೀಲ್ ಕೊಟ್ಟಿರುವಾಗ ಇನ್ನು ಸುಮ್ಮನಿದ್ರೆ ಆಗೋಲ್ಲಾ ಅಂತಾ ಮಂಜ ಶಿವಮೊಗ್ಗದಲ್ಲಿಯೇ ಸ್ಪಾಟ್ ನಾಗನನ್ನು ಮುಗಿಸಲು ಸ್ಕೆಚ್ ಹಾಕಿದ್ದ. ಮಲೇಷಿಯದಲ್ಲಿಯೇ ಕೂತು ಸ್ಪಾಟ್ ಚಲನವಲನದ ಮಾಹಿತಿ ಪಡೆದುಕೊಂಡ. ನಾಗನನ್ನು ಮುಗಿಸಲು ರೌಡಿ ಹಂದಿ ಅಣ್ಣಿಯ ಹುಡುಗರ ನೆರವನ್ನು ಪಡೆದ.  2-09-14 ರಂದು ಶಿವಮೊಗ್ಗದ ಬಿ.ಹೆಚ್ ರಸ್ತೆಯ ಮಲೆನಾಡು ಅಭಿವೃದ್ಧಿ ಮಂಡಳಿ ಬಳಿ ರಾತ್ರಿ ಹಂದಿ ಅಣ್ಣಿ ಕಡೆ ಹುಡುಗ್ರು  ಸ್ಪಾಟ್ ನಾಗನನ್ನು ಕೊಲೆ ಮಾಡಿದ್ರು.

ತನ್ನ ಶಿಷ್ಯ ಸ್ಪಾಟ್ ನಾಗನನ್ನು ಕೊಲೆ ಮಾಡಿದ ಹೆಬ್ಬೆಟ್ಟು ಮಂಜನ ಗ್ಯಾಂಗ್ ನ ವಿರುದ್ಧ ಕೊರಂಗು ಕೃಷ್ಣ ಕತ್ತಿ ಮಸೆಯುತ್ತ, ಕಾಯುತ್ತಿದ್ದಾನೆ.ಸ್ಪಾಟ್ ನಾಗ ಕೊಲೆಯಾಗಿ ಹತ್ತು ವರ್ಷವಾದರೂ,ಕೊರಂಗು ಗೆ ಶಿವಮೊಗ್ಗದಲ್ಲಿ ಹೆಬ್ಬೆಟ್ಟು ಮಂಜನ ಹುಡುಗ್ರನ್ನ ಮುಟ್ಟಲು ಸಾಧ್ಯವಾಗಿರಲಿಲ್ಲ. ಅವಕಾಶಕ್ಕಾಗಿ ಕಾದು ಕೂತಿದ್ದ ಕೊರಂಗು ಕೃಷ್ಣಗೆ ಈಗ ಶಿವಮೊಗ್ಗದಲ್ಲಿ ನಟೋರಿಯಸ್ ರೌಡಿಯಾಗಿ ಬೆಳೆಯುತ್ತಿರೋ ಲೋಕಿ ಸಿಕ್ಕಿದ್ದಾನೆ. ದುಷ್ಮನ್ ಕಾ ದುಷ್ಮನ್ ದೋಸ್ತ್ ಅನ್ನೋ ಹಾಗೆ,ಲೋಕಿಗೆ ಆರ್ಥಿಕವಾಗಿ ಬೇಕಾಗಿರುವ ಎಲ್ಲಾ ನೆರವನ್ನು ಕೊರಂಗು ನೀಡಿದ್ದಾನೆ ಎನ್ನಲಾಗಿದೆ. ಲೋಕಿಗೆ ತನ್ನ ಅಣ್ಣ ತುಳಸಿರಾಂ ನ ಕೊಲೆಗೆ ಕಾರಣರಾದವರ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಬೇಕಿತ್ತು. ಅದಕ್ಕೆ ಬೇಕಾದ ಎಲ್ಲಾ ನೆರವನ್ನು ಕೊರಂಗು ಕೃಷ್ಣ ಮಾಡಿದ್ದಾನೆ ಎನ್ನಲಾಗಿದೆ. ಆದರೆ ಈ ಬಗ್ಗೆ ಪೊಲೀಸರು ಎಲ್ಲೂ ಬಹಿರಂಗ ಪಡಿಸಿಲ್ಲ.ಈಗ ಲೋಕಿ ಕೊರಂಗು ಕೃಷ್ಣನ ಕೆಲಸ ಮಾಡಬೇಕಾಗಿದೆ. ಕೊರಂಗು ಹೇಳಿದ ಹೆಬ್ಬೆಟ್ಟು ಶಿಷ್ಯರನ್ನು ಎತ್ತಬೇಕಾಗಿದೆ. ಹೆಬ್ಬೆಟ್ಟು ಮಂಜನ ರೈಟ್ ಹ್ಯಾಂಡ್ ಎನಿಸಿಕೊಂಡವರನ್ನೇ ಕೊರಂಗು ಎತ್ತಲು ಸ್ಕೆಚ್ ಹಾಕಿದ್ದಾನೆ. ಅದು ಶಿವಮೊಗ್ಗದಲ್ಲಿಯೇ.ಆದರೆ ಹೆಬ್ಬೆಟ್ಟು ಶಿಷ್ಯರಲ್ಲಿ ಯಾರಿಗೆ ಮಹೂರ್ತ ಇಟ್ಟಿದ್ದಾರೆ ಅನ್ನೋ ಮಾಹಿತಿಯ ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ.

ಹೀಗಾಗಿ ಈಗ ಮಾರ್ಕೆಟ್ ಗಿರಿಯನ್ನು ಕೊಲೆ ಮಾಡಿ ತಪ್ಪಿಸಿಕೊಂಡಿರುವ ಲೋಕಿ. ಸದ್ಯಕ್ಕೆ ಪೊಲೀಸರಿಂದ ನಾಟ್ ರೀಚಬಲ್ ಆಗಿದ್ದಾನೆ.ಆತ ತನ್ನದೆ ಹುಡುಗರ ಪಡೆಯನ್ನು ಸಿದ್ದಮಾಡಿಕೊಂಡು ಸದ್ಯದಲ್ಲಿಯೇ ಶಿವಮೊಗ್ಗದಲ್ಲಿ ಮತ್ತೆ ರಕ್ತಪಾತ ಹರಿಸಲಿದ್ದಾನೆ. ಇದು ಹೆಬ್ಬೆಟ್ಟು ಮಂಜನಿಗೂ ಗೊತ್ತಿರುವ ವಿಷಯ. ಆತ ವಿದೇಶದಲ್ಲಿದ್ರೂ ತನ್ನ ಹುಡುಗ್ರನ್ನ ಹೇಗೆ ಭದ್ರವಾಗಿಟ್ಟುಕೊಳ್ಳಬೇಕೆಂಬ ಸಂದೇಶವನ್ನು ಈಗಾಗ್ಲೇ ಆತ ನೀಡಿದ್ದಾನೆ.ಇಬ್ಬರ ನಡುವಿನ ದ್ವೇಷದಲ್ಲಿ ಈಗ ಯಾರು ಮೊದಲು ಯಾರನ್ನು ಮುಗಿಸ್ತಾರೋ ಗೊತ್ತಿಲ್ಲ. ಈ ಗ್ಯಾಂಗ್ ವಾರ್ ಕೇಂದ್ರಬಿಂದುವಾಗಿರೋ ಲೋಕಿ. ಕೊರಂಗು ಕೆಲಸ ಮಾಡ್ತಾನಾ, ಅಥವಾ ಹೆಬ್ಬೆಟ್ಟು ಮಂಜನ ಸ್ಕೆಚ್ ಗೆ ಇವನೇ ಟಾರ್ಗೇಟ್ ಆಗ್ತಾನಾ ಅನ್ನೋದು.

ಶಿವಮೊಗ್ಗದ ರಕ್ತಚರಿತ್ರೆಯಲ್ಲಿ ಈ ಬಾರಿ ಬೀದಿ ಹೆಣವಾಗೋರು ಯಾರು ಅನ್ನೋದನ್ನ ರೌಡಿ ಜಗತ್ತು ಆತಂಕದಲ್ಲಿಯೇ ಎದುರು ನೋಡ್ತಿದೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಶಿವಮೊಗ್ಗ ಪೊಲೀಸ್ರು ಏನೂ ಮೌನವಾಗಿ ಕೂತಿಲ್ಲ. ಶಿವಮೊಗ್ಗ ಮರಳು ಮಾಫಿಯಾವನ್ನ ನಿಯಂತ್ರಿಸುತ್ತಿರುವ ರೌಡಿಗಳಿಗೆ ತಕ್ಕ ಪಾಠ ಕಲಿಸಲು ಸಜ್ಜಾಗಿದ್ದಾರೆ. ವಿದೇಶದಲ್ಲಿ ಕೂತು ತನ್ನ ಶಿಷ್ಯರ ಮುಖಾಂತರ ಮರಳು ದಂಧೆಯನ್ನು  ನಡೆಸುತ್ತಿರುವ ಹೆಬ್ಬೆಟ್ಟು ಮಂಜನ ಆರ್ಥಿಕ ಮೂಲಕ್ಕೆ ಬ್ರೇಕ್ ಹಾಕಲು ಪೊಲೀಸರು ತಯಾರಿ ನಡೆಸಿದ್ದಾರೆ.

ಈಗ ಶಿವಮೊಗ್ಗ ಅಂಡರ್ ವರ್ಲ್ಡ್ ಲೋಕಿಯ ಸುತ್ತ ಸುತ್ತುತ್ತಿದೆ. ಕೊರಂಗು ಮತ್ತು ಹೆಬ್ಬೆಟ್ಟು ಕಾಳಗದಲ್ಲಿ ಲೋಕಿ ಬಲಿಯಾಗ್ತಾನ. ಅಥವಾ ಲೋಕಿ ಮಂಜನ ಬುಡ್ಡಕ್ಕೆ ಬಿಸಿನೀರು ಹೊಯ್ದು ಪ್ರಶ್ನಾತೀತ ಡಾನ್ ಆಗ್ತಾನಾ ಅನ್ನೋದು ಸದ್ಯದ ಕುತೂಹ. ಆದ್ರೆ ಇಬ್ಬರು ರೌಡಿಗಳಿಗಾಗಿ ಶಿವಮೊಗ್ಗ ಅನ್ನೋ ಶಾಂತಿಯ ನಾಡು ಆಗಾಗ ಕಂಪಿಸುತ್ತಿರೋದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಶಿವಮೊಗ್ಗ ಪೊಲೀಸ್ರು ಈ ಗ್ಯಾಂಗ್ ವಾರ್ ಗೆ ಅದ್ಯಾವಾಗ ಬ್ರೇಕ್ ಹಾಕ್ತಾರೋ ಆಗ ಮಲೆನಾಡಲ್ಲಿ ನೆಮ್ಮದಿಯ ತಂಗಾಳಿ ಬೀಸಲಿದೆ.

LEAVE A REPLY

Please enter your comment!
Please enter your name here