Home District ಸಂಸದ ನಳಿನ್ ಮಾನಕಳೆದ ಫ್ಲೈ ಓವರ್ ಕೊನೆಗೂ ಪೂರ್ಣ..ದಶಕ ಬಳಿಕ ಪಂಪ್‌ವೆಲ್‌ ಮೇಲ್ಸೇತುವೆಗೆ ಮುಕ್ತಿ..!

ಸಂಸದ ನಳಿನ್ ಮಾನಕಳೆದ ಫ್ಲೈ ಓವರ್ ಕೊನೆಗೂ ಪೂರ್ಣ..ದಶಕ ಬಳಿಕ ಪಂಪ್‌ವೆಲ್‌ ಮೇಲ್ಸೇತುವೆಗೆ ಮುಕ್ತಿ..!

1134
0
SHARE

ಅದು ದೇಶದಲ್ಲೇ ಅತಿ ಹೆಚ್ಚು ಟ್ರೋಲ್ ಗೆ ಒಳಗಾಗಿದ್ದ ಕಾಮಗಾರಿ. ಸುದೀರ್ಘ ಕಾಲದಿಂದ ಜಾಲತಾಣದಲ್ಲಿ ಸದ್ದು ಮಾಡಿ ಸಾರ್ವಜನಿಕರ ಟೀಕೆ, ಟಿಪ್ಪಣಿಗೆ ಈಡಾಗಿದ್ದ ಕಾಮಗಾರಿ. ಹತ್ತು ವರ್ಷಗಳಿಂದ ಕುಂಟುತ್ತಾ ಸಾಗಿದ ಈ ಕಾಮಗಾರಿ ಕೊನೆಗೂ ಸಾರ್ವಜನಿಕರ ಒತ್ತಡಕ್ಕೆ ಕಟ್ಟುಬಿದ್ದು ಕೊನೆಯಾಗಿದೆ. ಹೌದು.. ಮಂಗಳೂರಿನ ಹೆಬ್ಬಾಗಿಲು ಅಂತಲೇ ಕರೆಸಿಕೊಳ್ಳುವ ಪಂಪ್ವೆಲ್ ಫ್ಲೈ ಓವರ್ ಕಡೆಗೂ ಸಂಚಾರಕ್ಕೆ ತೆರೆದುಕೊಂಡಿದೆ.

ಕರಾವಳಿ ಜನರು ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡಿದ್ದು ಕಡೆಗೂ ಸಾರ್ಥಕ ಆಯ್ತು. ಮಂಗಳೂರು ನಗರದ ಹೆಬ್ಬಾಗಿಲಲ್ಲಿ ಕಳೆದ ಹತ್ತು ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಕಾಮಗಾರಿಗೆ ಕಡೆಗೂ ಅಂತಿಮ ಮುದ್ರೆ ಬಿದ್ದಿದೆ. ಸಾರ್ವಜನಿಕರ ತರಾಟೆ, ಆಕ್ರೋಶಕ್ಕೆ ತುತ್ತಾಗಿದ್ದ ಪಂಪ್ವೆಲ್ ಫ್ಲೈ ಓವರ್ ಕಾಮಗಾರಿಯನ್ನು ಕೊನೆಗೂ ಅಧಿಕಾರಿಗಳು ತರಾತುರಿಯಲ್ಲಿ ಮುಗಿಸಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಉಪಸ್ಥಿತಿಯಲ್ಲಿ ಮೇಲ್ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದಾರೆ.2010 ರಲ್ಲಿ ಸಂಸದ ನಳಿನ್ ಕುಮಾರ್ ಕೈಯಲ್ಲೇ ಶಿಲಾನ್ಯಾಸಗೊಂಡಿದ್ದ ಕಾಮಗಾರಿ 2013ರಲ್ಲಿ ಕೊನೆಗೊಳ್ಳಬೇಕಿತ್ತು. ಆದರೆ, ಗುತ್ತಿಗೆ ವಹಿಸಿಕೊಂಡ ಹೈದರಾಬಾದ್ ಮೂಲದ ನವಯುಗ ಕಂಪನಿ ನಿಧಾನಗತಿ ಕಾಮಗಾರಿ ನಡೆಸಿತ್ತು. ಎರಡು ಪಿಲ್ಲರ್ ಹಾಕಿ, ಕೆಲಸ ಬಾಕಿ ಮಾಡಿದ್ದರಿಂದ ಪಂಪ್ವೆಲ್ ಭಾಗದಲ್ಲಿ ಟ್ರಾಫಿಕ್ ಜಾಮ್ ಗೆ ಕಾರಣವಾಗಿತ್ತು. ಅಪಘಾತದ ವಲಯವಾಗಿತ್ತು. ಆದ್ರೆ ಕಾಮಗಾರಿ ಮಾತ್ರ ಚುರುಕು ಪಡೆದಿರಲಿಲ್ಲ.

ಹೀಗಾಗಿ ಕಳೆದ ಲೋಕಸಭಾ ಚುನಾವಣೆ ವೇಳೆ ಪಂಪ್ವೆಲ್ ಕಾಮಗಾರಿ ವಿಚಾರ ಜೋರಾಗಿಯೇ ಸದ್ದು ಮಾಡಿತ್ತು. ಪ್ರತಿಪಕ್ಷಗಳ ಟೀಕೆಯ ಜೊತೆಗೆ ಜಾಲತಾಣದಲ್ಲಿ ನಳಿನ್ ಕುಮಾರ್ ಟ್ರೋಲಿಗೆ ಒಳಗಾಗಿದ್ದರು. ಬಳಿಕ ಎಚ್ಚೆತ್ತ ನಳೀನ್ ಡಿಸಿ ನೇತೃತ್ವದಲ್ಲಿ ನವಯುಗ ಅಧಿಕಾರಿಗಳ ಜೊತೆ ಸಭೆ ನಡೆಸಿ ಗಡುವು ನೀಡಿದ್ರು. ಇದರ ಪರಿಣಾಮ ಕಾಮಗಾರಿ ತರಾತುರಿಯಲ್ಲಿ ಮುಗಿದಿದೆ.ಇನ್ನೂ ಹತ್ತಾರು ಗಡುವುಗಳ ಬಳಿಕ‌ ಮಾನ ಉಳಿಸಿಕೊಳ್ಳಲೇ ಬೇಕಿದ್ದ ಸಂಸದ ನಳಿನ್ ಕುಮಾರ್ ಕಟೀಲ್, ಫ್ಲೈ ಓವರ್ ಕೆಲಸದ ಮೇಲುಸ್ತುವಾರಿಯನ್ನು ಜನವರಿ ತಿಂಗಳಲ್ಲಿ ಜಿಲ್ಲಾಡಳಿತಕ್ಕೆ ನೀಡಿದ್ದರು. ಬಾಕಿ ಉಳಿದಿದ್ದ 20 ಮೀಟರ್ ಅಗಲದ ಫ್ಲೈ ಓವರ್ ಕಾಮಗಾರಿಯ ಪ್ರತಿ ದಿನದ ಕೆಲಸದ ವಿವರವನ್ನು ನವಯುಗ ಕಂಪೆನಿ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ನೀಡಬೇಕಿತ್ತು. ಹೀಗಾಗಿ ಜಿಲ್ಲಾಧಿಕಾರಿಗಳು ನೀಡಿದ ಡೆಡ್ ಲೈನ್ ನಂತೆಯೇ ಕಂಪೆನಿ ಜನವರಿ 31 ರ ಒಳಗೆ ಕೆಲಸ ಮುಗಿಸಿದೆ.

ಇನ್ನೂ ಕಾಂಗ್ರೆಸ್ ಪ್ರತಿಭಟನೆ ಹಾಗೂ ಸತ್ಯ ಶೋಧನೆ ಸಮಿತಿ ವಿರುದ್ಧ ನಳೀನ್ ಕಿಡಿಕಾರಿದ್ದಾರೆ.ಒಟ್ಟಿನ್ನಲ್ಲಿ ನಿಧಾನಗತಿಯ ಕಾಮಗಾರಿಯಿಂದಲೇ ಕುಖ್ಯಾತಿಗೆ ಗುರಿಯಾಗಿದ್ದ ಮಂಗಳೂರಿನ ಪಂಪ್ವೆಲ್ ಫ್ಲೈ ಓವರ್ ಕೆಲಸ ಕೊನೆಗೂ ಮುಗಿದುಹೋಗಿದೆ. ಹೀಗಾಗಿ ಜನಪ್ರತಿನಿಧಿಗಳು ಕೆಲಸ ಮಾಡಬೇಕಾದರೆ ಜನ ಇಷ್ಟೆಲ್ಲಾ ಕಸರತ್ತು ಪಡಬೇಕಾ ಅನ್ನೋ ಪ್ರಶ್ನೆಯಂತೂ ಉತ್ತರ ಸಿಗದೇ ಉಳಿದುಬಿಟ್ಟಿದೆ.

LEAVE A REPLY

Please enter your comment!
Please enter your name here