ಹಾಸನದ ಬಿಎಂ ರಸ್ತೆಯಲ್ಲಿ 2ನೇ ದಿನವೂ ಜೆಸಿಬಿಗಳು ಗರ್ಜಿಸಿದವು. ಮೊದಲ ದಿನ ನಿಯಮ ಬಾಹಿರವಾಗಿ ನಿರ್ಮಿಸಿದ್ದ ಸುಮಾರು 15 ಕಟ್ಟಡಗಳನ್ನು ಭಾಗಶಃ ತೆರವು ಮಾಡಿದ್ದ ನಗರಸಭೆ ಅಧಿಕಾರಿಗಳು, ಇಂದು ಸಚಿವ ರೇವಣ್ಣ ಪುತ್ರರಿಗೆ ಸೇರಿದ ಮಳಿಗೆಗಳು ಸೇರಿದಂತೆ ಹೆಚ್ಚು ಕಡಿಮೆ ನೋಟಿಸ್ ನೀಡಿದ್ದ 41 ನಿರ್ಮಾಣಗಳ ಮುಂಭಾಗವನ್ನು ಸಣ್ಣ ಪುಟ್ಟ ವಿರೋಧದ ನಡುವೆಯೂ ನೆಲಸಮ ಮಾಡಿದರು.
ಈ ಮಧ್ಯೆ ತೆರವು ಕಾರ್ಯಾಚರಣೆ ವೇಳೆ ಪ್ರತಿಭಟನೆ ನಡೆಸಿದ ಬಿಜೆಪಿ ಕ್ರಮವನ್ನು ಖಂಡಿಸಿರುವ ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ, ಕೇವಲ ಒಬ್ಬರ ರಕ್ಷಣೆಗಾಗಿ ಅವರು ಹಾಗೆ ಮಾಡಿದ್ದಾರೆ. ನಮ್ಮದು ಅಭಿವೃದ್ಧಿ ಪರ, ಇದರಲ್ಲಿ ನಮ್ಮ ಆಸ್ತಿ ಹೋದ್ರೂ ಹಿಂದೆ ಬೀಳೋ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.ಹಾಸನದ ಬಿಎಂ ರಸ್ತೆಯ 6 ಮೀಟರ್ ವ್ಯಾಪ್ತಿಯಲ್ಲಿ ಅಕ್ರಮ ವಾಗಿ ಕಟ್ಟಿದ್ದ ಮೊದಲ ಹಂತದ ಕಟ್ಟಡ ತೆರವು ಕಾರ್ಯಾಚರಣೆ ಇಂದು ಕೊನೆ ಗೊಂಡಿತು.
ನಿನ್ನೆ ಮತ್ತು ಇಂದು ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 41 ಕಟ್ಟಡ ಮತ್ತು ಅಂಗಡಿ-ಮಳಿಗೆಗಳನ್ನು ಭಾಗಶಃ ತೆರವುಗೊಳಿಸಲಾಯಿತು. ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲುಸ್ತುವಾರಿ ಯಲ್ಲಿ ನಿನ್ನೆ 15 ಕಟ್ಟಡಗಳನ್ನ ನೆಲಸಮ ಮಾಡಿದ್ದ ಜೆಸಿಬಿ, ಇಂದು ಬೆಳಗ್ಗೆಯಿಂದಲೇ ಬಾಕಿ ಕಟ್ಟಡ ಗಳ ಅಕ್ರಮ ಭಾಗವನ್ನು ತೆರವುಗೊಳಿಸಿದರು.ಈ ಮಧ್ಯೆ ಬಿಗ್ ಬಜಾರ್, ಹೊಯ್ಸಳ ಹೋಂಡಾ ಶೋರೂಂ, ಕೃಷ್ಣ ಹೋಟೆಲ್ ಸೇರಿ ನಾಲ್ಕು ಮಂದಿ ಹೈಕೋರ್ಟ್ ಮೊರೆಹೋಗಿ ತಮ್ಮ ಸ್ವತ್ತನ್ನು 2 ವಾರ ತೆರವು ಮಾಡದಂತೆ ಸಮಯಾವಕಾಶ ಪಡೆದಿದ್ದು, ಆ 4 ಬಿಲ್ಡಿಂಗ್ ಗಳ ಡೆಮಾಲಿಶ್ ಕಾರ್ಯ ನಿಲ್ಲಿಸಲಾಗಿದೆ.
ಆದರೆ ಅಷ್ಟೂ ಬಿಲ್ಡಿಂಗ್ ಗಳಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಅವರು ತೆರವು ಮಾಡುವುದು ಅನಿವಾರ್ಯವಾಗಿದೆ.2ನೇ ದಿನ ಸಚಿವ ರೇವಣ್ಣ ಅವರ ಪುತ್ರರಿಗೆ ಸೇರಿದ 6 ಮಳಿಗೆಗಳನ್ನೂ ತೆರವುಗೊಳಿಸಲಾಗಿದೆ. ಪ್ರಭಾವಿಗಳು ಸೇರಿದಂತೆ ನಿಯಮ ಬಾಹಿರ ವಾಗಿ ಕಟ್ಟಿದ್ದ ಎಲ್ಲಾ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂದು ನಗರಸಭೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಮೇಲ್ಮನವಿ ಸಲ್ಲಿಸಲು ಹೈಕೋರ್ಟ್ ಅವಕಾಶ ನೀಡಿದ್ರೂ, ಪೊಲೀಸ್ ಶಕ್ತಿ ಬಳಸಿ ದೌರ್ಜನ್ಯ ದಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಕೆಲ ಕಟ್ಟಡ ಮಾಲೀಕರು ಆರೋಪಿಸಿದ್ದಾರೆ.
ಕಟ್ಟಡ ತೆರವು ವಿಚಾರದಲ್ಲಿ ಬಿಜೆಪಿಯವರು ಪ್ರತಿಭಟನೆ ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿರುವ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ, ಒಬ್ಬ ವ್ಯಕ್ತಿಯ ಬಾರ್ ಉಳಿಸಲು ಶಾಸಕ ಪ್ರೀತಂ ಗೌಡ ತಮ್ಮ ಬೆಂಬಲಿಗರಿಂದ ಪ್ರತಿಭಟನೆ ಮಾಡಿಸಿದ್ದಾರೆ. ಆದ್ರೆ ಅದು ಜನರಿಗಾಗಿ ಅಲ್ಲ.ನಮ್ಮ ಪಕ್ಷದ ಯಾರೊಬ್ಬರೂ ಕಟ್ಟಡ ಒಡೆಯಬೇಡಿ ಎಂದಿಲ್ಲ ಎಂದು ತಿರುಗೇಟು ನೀಡಿದರು. ಬಿಎಂ ರಸ್ತೆ ಅಗಲೀಕರಣ ಆಗಬೇಕು ಎಂದು ಸ್ವತಃ ರೇವಣ್ಣ ಅವರೇ ಅನುದಾನ ತಂದಿದ್ದಾರೆ ಎಂಬುದನ್ನು ವಿರೋಧಿಗಳು ಅರ್ಥ ಮಾಡಿಕೊಳ್ಳಬೇಕು.
ನನ್ನ ಸ್ವಂತ ಜಾಗ ಅಥವಾ ಜಮೀನು ಹೋದ್ರೂ ಅಭಿವೃದ್ಧಿ ವಿಷಯದಲ್ಲಿ ನಾವು ಹಿಂದೆ-ಮುಂದೆ ನೋಡುವುದಿಲ್ಲ ಎಂದು ಟಾಂಗ್ ನೀಡಿದರು. ನಗರದ ಅಭಿವೃದ್ಧಿ ವಿಚಾರದಲ್ಲಿ ನಾವು ಯಾವುದೇ ರೀತಿಯ ಅಡ್ಡಿಪಡಿಸುವ ಪ್ರಶ್ನೆಯೇ ಇಲ್ಲ. ಸರಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿಯವರು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಒಟ್ಟಿನಲ್ಲಿ ಈ ಕಾರ್ಯಾಚರಣೆಯಿಂದಾಗಿ ಬಿ.ಎಂ.ರಸ್ತೆ ಅಗಲೀಕರಣ ಮಾಡಬೇಕು ಎಂಬ ಕೂಗಿಗೆ ಸ್ಪಂದನೆ ಸಿಕ್ಕಂತಾಗಿದೆ. ಮುಂದೆಯೂ ನಿಯಮ ಬಾಹಿರವಾಗಿ ತಲೆ ಎತ್ತಿರುವ ಕಟ್ಟಡಗಳನ್ನು ತೆರವು ಮಾಡಲಿ ಎಂಬುದು ನಾಗರೀಕರ ಆಗ್ರಹವಾಗಿದೆ.