
ಉಕ್ರೇನ್ ನಿಂದ ಭಾರತಕ್ಕೆ ಆಗಮಿಸಿದ 2ನೇ ವಿಮಾನ: 250 ವಿದ್ಯಾರ್ಥಿಗಳು ತಾಯ್ನಾಡಿಗೆ
ನವದೆಹಲಿ: 250 ಭಾರತೀಯ ನಾಗರಿಕರನ್ನು ಹೊತ್ತ ಎರಡನೇ ಏರ್ ಇಂಡಿಯಾ ವಿಮಾನ ನವದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ 2.45ಕ್ಕೆ ಬಂದಿಳಿಯಿತು.ಈ ವಿಮಾನ ರನ್ವೇ ಸ್ಪರ್ಶಿಸುತ್ತಿದ್ದಂತೆ ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಸಿಲುಕಿ ಪ್ರಾಣಭಯದಿಂದ ಒದ್ದಾಡಿದ ಭಾರತೀಯ ನಾಗರಿಕರು ಅರೆಕ್ಷಣ ನಿಟ್ಟುಸಿರುಬಿಟ್ಟರು, ನಿರಾಳರಾದರು. ವಿಮಾನದಲ್ಲಿದ್ದ ಎಲ್ಲರ ಮೊಗದಲ್ಲೂ ಮುಗುಳುನಗೆ ಕಾಣುತ್ತಿತ್ತು. ಉಕ್ರೇನ್ ನೆರೆದೇಶ ರೊಮೇನಿಯಾ ರಾಜಧಾನಿ ಬುಚಾರೆಸ್ಟ್ ನಗರದಿಂದ ಕಳೆದ ರಾತ್ರಿ ಈ ವಿಮಾನ ಟೇಕ್ ಆಫ್ ಆಗಿತ್ತು.
ಈ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ಬಂದು ಭಾರತೀಯ ನಾಗರಿಕರಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಾತನಾಡಿದ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಭಾರತೀಯ ನಾಗರಿಕರಿಗೆ ಗುಲಾಬಿ ಹೂ ನೀಡಿ ತಾಯ್ನಾಡಿಗೆ ಆತ್ಮೀಯವಾಗಿ ಸ್ವಾಗತಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಉಕ್ರೇನ್ ಅಧ್ಯಕ್ಷರು ಹಾಗು ರಷ್ಯಾ ಸರ್ಕಾರದ ಜೊತೆ ನಿರಂತರ ಮಾತುಕತೆ ನಡೆಸಿದ್ದು, ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ದೇಶಕ್ಕೆ ಮರಳಿ ಕರೆತರುವ ಬಗ್ಗೆ ಸಂವಾದ ನಡೆದಿದೆ. ಇದಕ್ಕೆ ಅಹರ್ನಿಶಿ ಶ್ರಮಪಟ್ಟ ಏರ್ ಇಂಡಿಯಾ ಸಿಬ್ಬಂದಿಯನ್ನು ಅಭಿನಂದಿಸಿದರು.