40 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನ

ಕ್ರೀಡೆ

ನವದೆಹಲಿ: 2023ರ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ)ಯ ಅಧಿವೇಶನವನ್ನು ಮುಂಬೈನಲ್ಲಿ ಆಯೋಜಿಸುವ ಅವಕಾ ಶವನ್ನು ಭಾರತ ತನ್ನದಾಗಿಸಿಕೊಂಡಿದೆ. ದೇಶದ ಮೊದಲ ವೈಯಕ್ತಿಕ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಅಭಿನವ್‌ ಬಿಂದ್ರಾ, ಐಒಸಿ ಸದಸ್ಯೆ ನೀತಾ ಅಂಬಾನಿ, ಭಾರತೀಯ ಒಲಿಂಪಿಕ್‌ ಅಸೋಸಿಯೇಷನ್‌ ಅಧ್ಯಕ್ಷ ನರೀಂದರ್‌ ಬಾತ್ರಾ ಮತ್ತು ಕ್ರೀಡಾ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಅವರನ್ನು ಒಳಗೊಂಡ ನಿಯೋಗವು ಚೀನಾದಲ್ಲಿ ನಡೆಯುತ್ತಿರುವ 139ನೇ ಐಒಸಿ ಅಧಿವೇಶನದಲ್ಲಿ ಪಾಲ್ಗೊಂಡಿತ್ತು.

ಭಾರತದಲ್ಲಿ ಎರಡನೇ ಬಾರಿಗೆ ಐಒಸಿ ಅಧಿವೇಶನ ಆಯೋಜಿಸುವ ಅವಕಾಶ ಲಭಿಸಿದೆ. 1983ರಲ್ಲಿ ನವದೆಹಲಿಯಲ್ಲಿ ಮೊದಲ ಬಾರಿಗೆ ಐಒಸಿ ಅಧಿವೇಶನ ಆಯೋಜಿಸಲಾಗಿತ್ತು. 40 ವರ್ಷಗಳ ಬಳಿಕ ಒಲಿಂಪಿಕ್‌ ಆಂದೋಲನ ಭಾರತಕ್ಕೆ ಮರಳಿದೆ. 2023ರಲ್ಲಿ ಮುಂಬೈ ನಲ್ಲಿ ಐಒಸಿ ಅಧಿವೇಶನವನ್ನು ಆಯೋಜಿಸುವ ಗೌರವವನ್ನು ಭಾರತಕ್ಕೆ ವಹಿಸಿದ್ದಕ್ಕಾಗಿ ನಾನು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಗೆ ನಿಜವಾಗಿಯೂ ಕೃತಜ್ಞಳಾಗಿದ್ದೇನೆ ಎಂದು ನೀತಾ ಅಂಬಾನಿ ತಿಳಿಸಿದ್ದಾರೆ.

ಇದು ಭಾರತದ ಒಲಿಂಪಿಕ್‌ ಮಹತ್ವಾಕಾಂಕ್ಷೆಗೆ ಮಹತ್ವದ ಬೆಳವಣಿಗೆಯಾಗಲಿದ್ದು, ಭಾರತೀಯ ಕ್ರೀಡೆಗೆ ಹೊಸ ಯುಗದ ಆರಂಭಕ್ಕೆ ನಾಂದಿ ಹಾಡಲಿದೆ. ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಕ್ರೀಡೆಯು ಯಾವಾಗಲೂ ಭರವಸೆ ಮತ್ತು ಸ್ಫೂರ್ತಿಯ ದಾರಿದೀಪವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹರಾಜು ಪ್ರಕ್ರಿಯೆಯ ಯಶಸ್ವಿ ನಂತರ ಮಾತನಾಡಿದ ನರೀಂದರ್‌ ಬಾತ್ರಾ, ನೀತಾ ಅಂಬಾನಿ ಅವರ ದೂರದೃಷ್ಟಿ ಮತ್ತು ನಾಯಕತ್ವಕ್ಕೆ ನನ್ನ ಸಲಾಮ್.‌ ಮುಂದಿನ ವರ್ಷ ಮುಂಬೈನಲ್ಲಿ ನಡೆಯಲಿರುವ ಐಒಸಿ ಅಧಿವೇಶನ ಭಾರತದ ಕ್ರೀಡೆಗೆ ಹೊಸ ಯುಗದ ಆರಂಭವಾಗಲಿದೆ.

ಭಾರತದಲ್ಲಿ ಒಲಿಂಪಿಕ್‌ ಕ್ರೀಡಾಕೂಟವನ್ನು ಆಯೋಜಿಸುವ ದೀರ್ಘಾವಧಿಯ ಗುರಿಯ ಸಾರ್ಥಕತೆ ಲಭಿಸಲಿದೆ ಎಂದು ಅಭಿಪ್ರಾಯಪ ಟ್ಟಿದ್ದಾರೆ. ಐಒಸಿ ಅಧಿವೇಶನವು ಐಒಸಿ ಸದಸ್ಯರ ಸಾಮಾನ್ಯ ಸಭೆಯಾಗಿದೆ. ಇದು ಐಒಸಿಯ ಸರ್ವೋಚ್ಚ ಅಂಗವಾಗಿದೆ. ಇಲ್ಲಿ ಕೈಗೊಳ್ಳುವ ನಿರ್ಧಾರಗಳು ಅಂತಿಮವಾಗಿರುತ್ತವೆ. ವರ್ಷಕ್ಕೊಮ್ಮೆ ಸಾಮಾನ್ಯ ಅಧಿವೇಶನ ನಡೆಸಲಾಗುತ್ತದೆ. ಆದರೆ ಬೃಹತ್‌ ಅಧಿವೇಶನವನ್ನು ಅಧ್ಯಕ್ಷರು ಅಥವಾ ಕನಿಷ್ಠ ಮೂರನೇ ಒಂದು ಭಾಗದಷ್ಟು ಸದಸ್ಯರು ಲಿಖಿತ ಕೋರಿಕೆಯ ಮೇರೆಗೆ ಕರೆಯಬಹುದು.

Leave a Reply

Your email address will not be published.