
ದಾರಿತಪ್ಪಿದ ಸ್ಮಾರ್ಟ್ ಸಿಟಿಯ ಮತ್ತೊಂದು ಮಹತ್ವದ ಯೋಜನೆ: ಸ್ಪೋಟಕ ಸತ್ಯ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ಇತ್ತೀಚೆಗೆ ಒಂದೊಂದಾಗಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು, ಉದ್ಘಾಟನೆ ಗೊಳ್ಳುತ್ತಿವೆ. ಇನ್ನೊಂದೆಡೆ ವೈಫಲ್ಯಗಳ ಪಟ್ಟಿಯಲ್ಲೂ ಸ್ಮಾರ್ಟ್ ಸಿಟಿ ಕಾಮಗಾರಿಗಳು ಸಾಗುತ್ತಿವೆ. ಅವಳಿ ನಗರದಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆಯ ಕಾರ್ಯಕ್ಷಮತೆಯಲ್ಲಿ ನಿಖರತೆ ತರಲು ರೂಪಿಸಲಾದ ಡಿಜಿಟಲ್ ಸ್ವರೂಪದ ವಿನೂತನ ಯೋಜನೆ ನಿರ್ವಹಣೆ ಆಗದೆ ದಾರಿ ತಪ್ಪಿದೆ..ಹೌದು.. ನಗರಗಳು ಸ್ಮಾರ್ಟ್ ಕಾಣಲು ಕೇಂದ್ರ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ಕೋಟಿ ಕೋಟಿ ಹಣವನ್ನ ನೀರಿನಲ್ಲಿ ಹೋಮ ಮಾಡಿದ್ದಾರೆ.ಇದರಿಂದಾಗಿ ಈ ಸ್ಮಾರ್ಟ್ ಸಿಟಿ ಯೋಜನೆ ಸಂಪೂರ್ಣವಾಗಿ ವೈಫಲ್ಯದಿಂದ ಕೂಡಿದೆ.
ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಯ ಪ್ರಗತಿ ಪರಿಶೀಲನೆ, ಉದ್ಘಾಟನೆ, ವಿಸ್ತರಣೆ ಎಲ್ಲವೂ ನಡೆಯುತ್ತದೆ. ಆದರೆ, ಜಾರಿಯಾದ ಬಳಿಕ ಮೇಲ್ವಿಚಾರಣೆ ಬಗ್ಗೆ ಯಾರು ತಲೆ ಕೆಡಿಸಿಕೊಂಡಿಲ್ಲ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿಯ ಅಧಿಕಾರಿಗಳು, ಯೋಜನೆಯ ಬಗ್ಗೆ ಹೆಮ್ಮೆ ಪಡುವ ಜನಪ್ರತಿನಿಗಳು, ಮೇಲ್ವಿಚಾರಣೆಯ ಜವಾಬ್ದಾರಿ ಮರೆತಿರುವುದರಿಂದ ಒಂದು ಸುಧಾರಿತ ವ್ಯವಸ್ಥೆಯ ಸ್ಥಿತಿಯು ಈ ಹಂತಕ್ಕೆ, ಬಂದು ಮುಟ್ಟಿದೆ. ಇದರಿಂದಾಗಿ 43.50 ಕೋಟಿ ರೂಪಾಯಿ ಯೋಜನೆ ಹಳ್ಳ ಹಿಡಿದಿದೆ.. ಇನ್ನೂ ಪ್ರತಿ ಆರ್ಎಫ್ಐಡಿ ಟ್ಯಾಗ 54 ರೂಪಾಯಿ, ರೀಡರ್ ವೆಚ್ಚ 61 ಸಾವಿರ ರೂಪಾಯಿ.
ಅವಳಿ ನಗರದಲ್ಲಿ ಕಸ ವಿಲೇವಾರಿ ವ್ಯವಸ್ಥೆಯ ಮೇಲೆ ನಿಗಾ ವಹಿಸಲು ನ್ಯೂ ಕಾಟನ್ ಮಾರ್ಕೆಟ್ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಇಂಟೆಗ್ರೇಟೆಡ್ ಕಮಾಂಡ್ ಆ್ಯಂಡ ಕಂಟ್ರೋಲ್ ಸೆಂಟರ್ (ಐಸಿಸಿ). ಆರ್ಎಫ್ಐಡಿ ಟ್ಯಾಗ್, ರೀಡರ್, ಟಿಪಿಎ ಹಾಗೂ 5 ವರ್ಷಗಳ ನಿರ್ವಹಣೆ ವೆಚ್ಚ ಎಲ್ಲ ಸೇರಿ 43.50 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಮುಂಬೈ ಮೂಲದ ಎನ್ಇಸಿ ಟಿಮಿಟೆಡ್ ಈ ಯೋಜನೆಯ ಗುತ್ತಿಗೆ ಪಡೆದಿದೆ. ಮುಂದಿನ 5 ವರ್ಷಗಳ ಕಾಲ ಕಾರ್ಯಾಚರಣಿ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಕಾರ್ಯಾಚರಣೆ ಮತ್ತು ನಿರ್ವಹಣೆಯು ಗುತ್ತಿಗೆದಾರರದ್ದೇ ಆಗಿರುವುದರಿಂದ ಪಾಲಿಕೆ ಹಾಗು ಸ್ಮಾರ್ಟ್ ಸಿಟಿ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ.
ಈ ವೈಫಲ್ಯಕ್ಕೆ ಉತ್ತರದಾಯಿತ್ವವನ್ನು ಯಾರು ವಹಿಸಿಕೊಳ್ಳುತ್ತಿಲ್ಲ. ಎಲ್ಲ ವಾರ್ಡ್ಗಳಿಗೆ ಆರ್ಎಸ್ಐಡಿ ಟ್ಯಾಗ್ ಅಳವಡಿಕೆಯನ್ನು 2021 ರ ಜನವರಿಯಲ್ಲಿ ಪೂರ್ಣಗೊಳಿಸಿ ನಿತ್ಯ ರೀಡಿಂಗ್ ತೆಗೆದುಕೊಳ್ಳಲಾಗುತ್ತಿದೆ. ಪ್ರತಿ ಮನೆಯ ಗೋಡೆ ಅಥವಾ ಕಾಂಪೌಂಡ್ಗೆ ಟ್ಯಾಗ್ ಅಳವಡಿಸಲಾಗಿದೆ. ಆಟೋ ಟಿಪ್ಪರ್ ಜತೆ ಕಸ ಸಂಗ್ರಹಕ್ಕೆ ಮನೆ ಮನೆಗೆ ಬರುವ ಪೌರ ಕಾರ್ಮಿಕರಲ್ಲಿ ಒಬ್ಬರು ರೀಡರ್ ಅನ್ನು ಆರ್ಏಫ್ಐಡಿ ಟ್ಯಾಗ್ ಸನಿಹಕ್ಕೆ ಹಿಡಿದು ದಾಖಲಿಸಿಕೊಳ್ಳುತ್ತಾರೆ. ಟ್ಯಾಗ್ ರೀಡರ್ಅನ್ನು ಚಾರ್ಜ್ ಮಾಡುವುದು ಪರ ಕಾರ್ಮಿಕರೇ ಆಗಿದ್ದರೂ, ಆ ಕಾರ್ಯವನ್ನು ಅವರು ಎಷ್ಟರ ಮಟ್ಟಿಗೆ ಸರಿಯಾಗಿ ಮಾಡುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ..ಹುಬ್ಬಳ್ಳಿ-ಧಾರವಾಡದಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳು ನಡೆಯುತ್ತಿವೆ. ಯಾವುದೇ ಒಂದು ಕಾಮಗಾರಿಗಳು ಸಹ ಪೂರ್ಣಗೊಂಡಿಲ್ಲ. ಒಂದೊಂದು ಕಾಮಗಾರಿ ಅಂತ್ಯವಾದ್ರೂ ಇದರಿಂದ ಜನರಿಗೆ ಉಪಯೋಗ ಮಾತ್ರ ಆಗುತ್ತಿಲ್ಲ. ಅಧಿಕಾರಿಗಳ ಬೇಜವಬ್ದಾರಿಯಿಂದ ನೂರಾರು ಕೋಟಿ ರೂಪಾಯಿ ಹಣ ಪೋಲಾಗುತ್ತಿದೆ.