
ನಟ ದಿಗಂತ್ ಆರೋಗ್ಯದಲ್ಲಿ ಚೇತರಿಕೆ: ವಿಡಿಯೋ ಮೂಲಕ ಧನ್ಯವಾದ ತಿಳಿಸಿದ ದೂದ್ ಪೇಡಾ
ಗೋವಾದಲ್ಲಿ ಸಮ್ಮರ್ ಸಾಲ್ಟ್ ಮಾಡುವಾಗ ಕುತ್ತಿಗೆಗೆ ಗಂಭೀರ ಗಾಯವಾಗಿ ಅಪರೇಷನ್ ಗೆ ಒಳಗಾಗಿದ್ದ ನಟ ದಿಗಂತ್ ಆರೋಗ್ಯ ಸುಧಾರಿಸಿದೆ. ಇದೀಗ ದಿಗಂತ್ ಹಾಗೂ ಐಂದ್ರಿತಾ ರೇ ಸೋಷಿಯಲ್ ಮೀಡಿಯಾ ಮೂಲಕ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.ಜೊತೆಗೆ ಅಪರೇಷನ್ ಬಳಿಕ ಇದೇ ಮೊದಲ ಬಾರಿಗೆ ವಿಡಯೋ ಮೂಲಕ ದಿಗಂತ್ ಅಪಘಾತದ ಸಮಯದಲ್ಲಿ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ತಿಳಿಸಿದ್ದಾರೆ.
ವಿಡಿಯೋ ಮೂಲಕ ಧನ್ಯವಾದ ತಿಳಿಸಿರುವ ದಿಗಂತ್, ‘ಗೋವಾದಲ್ಲಿ ನಡೆದ ಘಟನೆಯಿಂದ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾದೆ. ಈ ನಿಟ್ಟಿನಲ್ಲಿ ಹಲವರಿಗೆ ನಾನು ಧನ್ಯವಾದಗಳನ್ನು ಹೇಳಬೇಕಿದೆ. ಮುಖ್ಯವಾಗಿ ವೆಂಕಟ್ ನಾರಾಯಣ್ ಅವರ ಸಹಾಯವನ್ನು ಜೀವನ ಪರ್ಯಂತ ನಾನು ಮರೆಯುವುದಿಲ್ಲ. ಅಲ್ಲದೇ ಗೋವಾದ ಸಿಎಂ ಪ್ರಮೋದ್ ಸಾವಂತ್ ಅವರಿಗೂ ಧನ್ಯವಾದ. ನನ್ನನ್ನು ಏರ್ಲಿಫ್ಟ್ ಮಾಡಲು ಅವರು ಸಾಕಷ್ಟು ಸಹಾಯ ಮಾಡಿದ್ದಾರೆ‘ ಎಂದಿದ್ದಾರೆ.
ಚಿಕಿತ್ಸೆ ನೀಡಿದ ವೈದ್ಯ ವಿದ್ಯಾಧರ್ಗೆ ದಿಗಂತ್ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ. ಗೋವಾದ ಮತ್ತು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯವರಿಗೆ ವಿಶೇಷ ಧನ್ಯವಾದ ಹೇಳಬೇಕು. ಅದರಲ್ಲೂ ಡಾ. ವಿದ್ಯಾಧರ್ ಅವರಿಗೆ ವಿಶೇಷ ಧನ್ಯವಾದ ಹೇಳುತ್ತೇನೆ. ವಿದ್ಯಾಧರ್ ಅವರು ನನ್ನ ಪಾಲಿಗೆ ದೇವರಂತೆ. ಸಣ್ಣ ಶಸ್ತ್ರಚಿಕಿತ್ಸೆಯನ್ನು ಸೂಕ್ತ ಸಮಯದಲ್ಲಿ ಮಾಡುವ ಮೂಲಕ ನನ್ನನ್ನು ಮತ್ತೆ ಮೊದಲಿನಂತೆ ಮಾಡಿದ್ದಾರೆ. ಇದಲ್ಲದೇ ನನ್ನ ಅಭಿಮಾನಿಗಳು, ನನ್ನ ಕುಟುಂಬದವರು, ಚಿತ್ರರಂಗದ ನನ್ನ ಗೆಳೆಯರು, ನನ್ನ ಸಹಪಾಠಿಗಳು ಎಲ್ಲರೂ ನನ್ನ ಚೇತರಿಕೆಗಾಗಿ ಪ್ರಾರ್ಥಿಸಿದ್ದೀರ. ನಿಮ್ಮ ಪ್ರಾರ್ಥನೆಗಳಿಂದಲೇ ನಾನು ಇಷ್ಟು ಬೇಗ ಚೇತರಿಸಿಕೊಳ್ಳಲು ಸಾಧ್ಯವಾಗಿದೆ. ಇನ್ನೊಂದು ಎರಡು ವಾರದಲ್ಲಿ ಸಂಪೂರ್ಣ ಚೇರಿಸಿಕೊಳ್ಳುತ್ತೇನೆ‘ ಎಂದಿದ್ದಾರೆ.