
ನಟ ರವಿಚಂದ್ರನ್ ತಾಯಿ ನಿಧನ;ಸಂತಾಪ ಸೂಚಿಸಿದ ಚಿತ್ರರಂಗ
ಬೆಂಗಳೂರು: ಕನ್ನಡದ ಹಿರಿಯ ನಟ ರವಿಚಂದ್ರನ್ ಅವರ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ ಅವರು ಇಂದು ನಿಧನರಾಗಿದ್ದಾರೆ. 83 ವರ್ಷದ ವಯಸ್ಸಿನ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಪಟ್ಟಮ್ಮಾಳ್ ವೀರಸ್ವಾಮಿ ಅವರು ಕೊನೆಯುಸಿರು ಎಳೆದಿದ್ದಾರೆ. ರವಿಚಂದ್ರನ್ ತಾಯಿ ನಿಧನಕ್ಕೆ ಚಿತ್ರರಂಗದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಪಟ್ಟಮ್ಮಾಳ್ ವೀರಸ್ವಾಮಿ ಅವರನ್ನು ಫೆ.28ರ ಮುಂಜಾನೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 6.30ರ ಸುಮಾರಿಗೆ ಅವರು ನಿಧನ ಹೊಂದಿದರು. ಬೆಳಗ್ಗೆ 10.30ಕ್ಕೆ ಪಾರ್ಥಿವ ಶರೀರವನ್ನು ರಾಜಾಜಿನಗರದ ನಿವಾಸಕ್ಕೆ ತರಲಾಗುತ್ತದೆ.
ಇಂದು ಸಂಜೆಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ರವಿಚಂದ್ರನ್ ಕುಟುಂಬದವರು ತಿಳಿಸಿದ್ದಾರೆ. ರವಿಚಂದ್ರನ್ ಅವರ ತಾಯಿ ಹಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ರವಿಚಂದ್ರನ್ ಮಾತನಾಡಿದ್ದರು. ‘ಅಮ್ಮನಿಗೆ ಅಲ್ಜಮೈರ್ ಆಗಿದೆ. ಎಲ್ಲರನ್ನೂ ಆಗಾಗ ಮರೆಯುತ್ತಾರೆ. ಆದರೆ ಯಾರನ್ನು ಮರೆತರೂ ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಅವರು ಮರೆತಿಲ್ಲ. ನನ್ನ ಹೆಂಡತಿಯೇ ಅವರನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುವುದು. ಅವಳಿಗೆ ಹ್ಯಾಟ್ಸ್ ಆಫ್ ಹೇಳಬೇಕು. ಎಲ್ಲವನ್ನೂ ಹಾಸಿಗೆಯಲ್ಲೇ ಮಾಡಿಕೊಳ್ಳುವ ಅಮ್ಮನನ್ನು ನಿಭಾಯಿಸುವುದು ಅಷ್ಟು ಸುಲಭ ಅಲ್ಲ. ನನ್ನ ಹೆಂಡತಿ ಒಂದು ದಿನವೂ ಬೇಸರ ಮಾಡಿಕೊಂಡಿಲ್ಲ’ ಎಂದು ರವಿಚಂದ್ರನ್ ಹೇಳಿದ್ದರು.