
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಇಂದಿನಿಂದ ರಾಜ್ಯದಲ್ಲಿ ವರುಣನ ಆರ್ಭಟ
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಕರ್ನಾಟಕ ರಾಜ್ಯದಲ್ಲಿ ಇಂದು ಮತ್ತು ನಾಳೆ (ಮಾರ್ಚ್ 7, 8) ಮಳೆ ಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ದಕ್ಷಿಣ ಒಳನಾಡು, ಕರಾವಳಿಯಲ್ಲಿ ಮಳೆ ಸಾಧ್ಯತೆ ಇದೆ. ಇಂದು (ಮಾರ್ಚ್ 7) ಕೋ ಲಾರ, ಚಿಕ್ಕಮಬಳ್ಳಾಪುರ, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ. ನಾಳೆ (ಮಾರ್ಚ್ 8) ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಗದಗ, ಬೆಳಗಾವಿ, ಧಾರವಾಡ, ಹಾವೇರಿಯಲ್ಲಿ ಮಳೆ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ದಕ್ಷಿಣ ಬಂಗಾಳಕೊಲ್ಲಿಯ ಮಧ್ಯ ಭಾಗಗಳಲ್ಲಿ ವಾಯುಭಾರ ಕುಸಿತವಾಗಿದೆ. ಈ ಬಗ್ಗೆ ಎರಡು ದಿನ ಮುಂಚಿತವಾಗಿ ಮಾಹಿತಿ ನೀಡಿದ್ದ ಹವಾಮಾನ ಇಲಾಖೆ, ವಾಯುಭಾರ ಕುಸಿತದ ಪ್ರಭಾವ ವಾಯುವ್ಯ ದಿಕ್ಕಿನಲ್ಲಿ ಶ್ರೀಲಂಕಾದ ಪೂರ್ವ ಕರಾವಳಿಯ ಉತ್ತರ ತಮಿಳುನಾಡು ಕರಾವಳಿಯ ಕಡೆಗೆ ಸಾಗಲಿದೆ ಎಂದು ಹೇಳಿತ್ತು. ಬಂಗಾಳಕೊಲ್ಲಿಯ ದಕ್ಷಿಣ ಭಾಗದಲ್ಲಿ ತೀವ್ರವಾದ ವಾಯುಭಾರ ಕುಸಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದ್ದು ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಕೂಡ ಎರಡು ದಿನ ಮಳೆಯಾಗಲಿದೆ ಎಂದು ಹೇಳಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸದ್ಯ ಒಣ ಹವೆ ಇದೆ. ಆದರೆ, ಎರಡು ದಿನಗಳ ಕಾಲ ರಾಜ್ಯದ ಹಲವು ಕಡೆ ಗುಡುಗು ಸಹಿತ ಮಳೆ ಆಗಬಹುದು. ಪಶ್ಚಿಮ ಘಟ್ಟದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಇಂದು, ನಾಳೆ ಹಾಗೂ ಮಾರ್ಚ್ 9 ರಂದು ಕೂಡ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.