ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಾಗ್ದಾಳಿ

ರಾಷ್ಟ್ರೀಯ

ಲಕ್ನೋ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ನಡುವೆ ಟ್ವೀಟ್​ ವಾರ್​ ನಡೆದಿದೆ. ಪ್ರತಾಪ್​ ಸಿಂಹ ಅವರ ಹೆದ್ದಾರಿ ಕುರಿತ ಟ್ವೀಟ್ ಒಂದನ್ನು ಉಲ್ಲೇಖಿಸಿ ಅಖಿಲೇಶಧ್​ ಯಾದವ್ ವಾಗ್ದಾಳಿ ನಡೆಸಿದ್ದಾರೆ. ತೇಜಸ್ವಿ ಸೂರ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ಆಗ್ರಾ- ಲಕ್ನೋ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಅದಕ್ಕೆ ಕ್ಯಾಪ್ಶನ್ ನೀಡಿದ್ದ ಅವರು, ‘ಲಕ್ನೋದಿಂದ ಕನೋಜ್​, ಯೋಗಿಜಿಯವರ ಎಕ್ಸ್​ಪ್ರೆಸ್​​ವೇಪ್ರದೇಶ್’ ಎಂದು ಟ್ವೀಟ್ ಮಾಡಿದ್ದರು. ಈ ಮೂಲಕ ಹೆದ್ದಾರಿ ನಿರ್ಮಿಸಿದ ಕ್ರೆಡಿಟ್​ಅನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ನೀಡಿದ್ದರು. ತೇಜಸ್ವಿ ಸೂರ್ಯ ಟ್ವೀಟ್ ಹಂಚಿಕೊಂಡ ಬೆನ್ನಲ್ಲೇ ಅದು ಚರ್ಚೆಗೆ ಕಾರಣವಾಗಿತ್ತು. 302 ಕಿ.ಮೀ ಉದ್ದದ ಈ ಹೆದ್ದಾರಿ ನಿರ್ಮಾಣವಾಗಿದ್ದು ಅಖಿಲೇಶ್ ಯಾದವ್ ಕಾಲದಲ್ಲಿ ಎಂದು ಹಲವರು ಸ್ಪಷ್ಟನೆ ನೀಡಿದ್ದರು. ಇದೀಗ ತೇಜಸ್ವಿ ಸೂರ್ಯ ಟ್ವೀಟ್​ಗೆ ಅಖಿಲೇಶ್ ಯಾದವ್ ಸ್ವತಃ ಪ್ರತಿಕ್ರಿಯಿಸಿ ತಪ್ಪು ಮಾಹಿತಿ ಹಂಚಿಕೊಂಡಿದ್ದಕ್ಕೆ ವ್ಯಂಗ್ಯವಾಗಿ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಖಿಲೇಶ್ ಯಾದವ್ ತಮ್ಮ ಟ್ವಿಟರ್ ಖಾತೆಯಿಂದ ತೇಜಸ್ವಿ ಸೂರ್ಯ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಅವರು ವ್ಯಂಗ್ಯವಾಗಿ ‘ಸೂರ್ಯನ ಕೆಳಗೂ ಕತ್ತಲೆಯಿದೆ’ ಎಂದು ಹೇಳಿದ್ದಾರೆ. ‘ದೀಪದ ಕೆಳಗೆ ಕತ್ತಲಿರುತ್ತದೆ’ ಎನ್ನುವ ಮಾತನ್ನು ಉಲ್ಲೇಖಿಸಿ, ‘ಬಿಜೆಪಿ ನಾಯಕರ ನಿರ್ಲಕ್ಷ್ಯವನ್ನು ನೋಡಿದರೆ, ಅದನ್ನು ‘ಸೂರ್ಯನ ಕೆಳಗೂ ಕತ್ತಲೆಯಿದೆ’ ಎನ್ನಬೇಕಾಗುತ್ತದೆ’ ಎಂದು ತೇಜಸ್ವಿ ಸೂರ್ಯ ಹೆಸರಿನ ಕುರಿತು ಅಖಿಲೇಶ್ ವ್ಯಂಗ್ಯವಾಗಿ ಹೇಳಿದ್ದಾರೆ. ಆಗ್ರಾ- ಲಕ್ನೋ ಹೆದ್ದಾರಿಯನ್ನು ನಿರ್ಮಿಸಿರುವುದು ತಮ್ಮ ಆಡಳಿತಾವಧಿಯಲ್ಲಿ ಎಂದು ಅಖಿಲೇಶ್ ಯಾದವ್ ಸ್ಪಷ್ಟನೆಯನ್ನೂ ನೀಡಿದ್ದಾರೆ. ಆಗ್ರಾ- ಲಕ್ನೋ ಹೆದ್ದಾರಿಯನ್ನು 2016ರಲ್ಲಿ ಅಖಿಲೇಶ್ ಯಾದವ್ ಉದ್ಘಾಟಿಸಿದ್ದರು. 2017ರ ಫೆಬ್ರವರಿಯಿಂದ ಇದು ಸಾರ್ವಜನಿಕರಿಗೆ ಲಭ್ಯವಾಗಿತ್ತು.

 

Leave a Reply

Your email address will not be published.