
ಬೀದಿ ಬದಿಯಲ್ಲಿಯೂ ಸಿಗಲಿದೆ ಉತ್ತಮ ಗುಣಮಟ್ಟದ ಆಹಾರ: BBMPಯಿಂದ ಹೊಸ ಯೋಜನೆ
ಬೆಂಗಳೂರು: ಬೀದಿ ಬದಿಯ ಆಹಾರವನ್ನು ಆನ್ಲೈನ್ ಮೂಲಕ ಮಾರಾಟ ಮಾಡಲು ಬಿಬಿಎಂಪಿ ಮುಂದಾಗಿದೆ. ಇಷ್ಟು ದಿನ ಹೋಟೆಲ್ಗಳ ತಿಂಡಿ ತಿನಿಸುಗಳನ್ನು ಆಯಪ್ ಮೂಲಕ ಡೆಲಿವರಿ ಪಡೆಯುತ್ತಿದ್ದ ಸಿಲಿಕಾನ್ ಸಿಟಿ ಜನರಿಗೆ ಬೀದಿ ಬದಿಯ ಆಹಾರವೂ ಸಿಗುವಂತಹ ಯೋಜನೆ ಇದಾಗಿದೆ. ಅನೇಕ ಜನರಿಗೆ ಬೀದಿ ಬದಿಯಲ್ಲಿ ಸಿಗುವ ಆಹಾರ ತಿನ್ನಲು ಆಸೆಯಿದ್ದರೂ ಅಲ್ಲಿಗೆ ಹೋಗಿ ಆಹಾರ ಸೇವಿಸಲು ಮುಜುಗರ ಇರುತ್ತದೆ. ಅಂತಹವರು ಇನ್ನು ಮುಂದೆ ಸ್ವಿಗ್ಗಿ,
ಜೊಮೊಟೊದಂತಹ ಆಹಾರ ಸರಬರಾಜು ಆಯಪ್ಗಳ ಮೂಲಕ ಬೀದಿ ಬದಿ ಆಹಾರ ಮಾರಾಟಗಾರರಿಂದ ತಮಗೆ ಇಷ್ಟವಾದಂತಹ ಆಹಾರ ತರಿಸಿಕೊಳ್ಳಬಹುದಾಗಿದೆ. ಹೀಗಾಗಿ ಆಹಾರ ಸರಬರಾಜು ಆಯಪ್ಗಳು ಮತ್ತು ಬೀದಿ ಬದಿ ಆಹಾರ ಮಾರಾಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಬಿಬಿಎಂಪಿ ಯೋಜಿಸಿದೆ. ಕೇಂದ್ರ ಸರ್ಕಾರದ ಈ ಯೋಜನೆಯನ್ನು ಬಳಸಿಕೊಂಡು ನಗರದಲ್ಲಿನ ಬೀದಿ ಬದಿಯ ಆಹಾರ ಮಾರಾಟಕ್ಕೆ ಉತ್ತೇಜನ ನೀಡುವ ಉದ್ದೇಶ ಪಾಲಿಕೆಯದ್ದಾಗಿದೆ. ಈ ಹೊಸ ಪ್ರಯೋಗಕ್ಕೆ ಬಿಬಿಎಂಪಿ ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ ಎಂದು ಪಾಲಿಕೆಯ ವಿಶೇಷ ಆಯುಕ್ತ ರಾಮ್ಪ್ರಸಾದ್ ಮನೋಹರ್ ಹೇಳಿದ್ದಾರೆ.